ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯು ಆರ್ ಅಶೋಕ (R AShoka) ಅವರನ್ನು ಕಣಕ್ಕಿಳಿಸಿರುವುದರಿಂದ ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಡಿಕೆ ಸುರೇಶ್ (DK Suresh) ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ವದಂತಿ ಇದೀಗ ದಟ್ಟವಾಗಿದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ರಘುನಾಥ್ ನಾಯ್ಡು ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಬಿ ಫಾರಂ ಅನ್ನು ಈಗಾಗಲೇ ನೀಡಲಾಗಿದೆ. ಆದಾಗ್ಯೂ ಅವರು ಇನ್ನೂ ನಾಮಪತ್ರ ಸಲ್ಲಿಸಿಲ್ಲ. ಈ ಮಧ್ಯೆ, ಅವರಿಗೆ ನೀಡಲಾಗಿದ್ದ ಬಿ ಫಾರಂ ಅನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಪಸ್ ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿದೆ. ಇದು ಕುತೂಹಲ ಹೆಚ್ಚಳಕ್ಕೆ ಕಾರಣವಾಗಿದೆ.
ನಾನು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲು ಬಯಸಿದ್ದೆ. ಆದರೆ ನಾನು ಅದನ್ನು ಮುಂದೂಡಿದ್ದೇನೆ. ಅಶೋಕ ವಿರುದ್ಧ ಸ್ಪರ್ಧಿಸುವಂತೆ ಡಿಕೆ ಸುರೇಶ್ ಅವರಿಗೆ ಮನವಿ ಮಾಡಿದ್ದೇನೆ. ಶಿವಕುಮಾರ್ ಅವರೊಂದಿಗೂ ಮಾತನಾಡಿದ್ದೇನೆ. ಆದರೆ ಅವರು ಸ್ಪರ್ಧಿಸುವಂತೆ ಕೇಳಿದ್ದಾರೆ. ನಿನ್ನೆ ರಾತ್ರಿಯೂ ಸುರೇಶ್ ಜೊತೆ ಮಾತನಾಡಿದ್ದೆ, ಚರ್ಚೆಯ ನಂತರ ತಿಳಿಸುತ್ತೇನೆ ಎಂದು ರಘುನಾಥ್ ನಾಯ್ಡು ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಘುನಾಥ್ ನಾಯ್ಡು, ಒಂದೋ ನಾನು ಇಲ್ಲವೇ ಡಿಕೆ ಸುರೇಶ್ ಅವರು ಬುಧವಾರ ನಾಮಪತ್ರ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪದ್ಮನಾಭ ನಗರದ ಕಾಂಗ್ರೆಸ್ ಬಿ ಫಾರಂ ಎಕ್ಸ್ಕ್ಲೂಸಿವ್ ಮಾಹಿತಿ, ಟಿಕೆಟ್ ಹಂಚಿಕೆಯಲ್ಲಿ ಮತ್ತೆ ಟ್ವಿಸ್ಟ್ ಕಾದಿದ್ಯಾ?
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ವಿಭಿನ್ನ ಕಾರ್ಯತಂತ್ರ ಅನುಸರಿಸುವರುವ ಬಿಜೆಪಿ ಆರ್ ಅಶೋಕ ಹಾಗೂ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಕಾಂಗ್ರೆಸ್ನ ದಿಗ್ಗಜ ನಾಯಕರನ್ನು ಕಟ್ಟಿಹಾಕಲು ಮುಂದಾಗಿದೆ.
ಕನಕಪುರದ ಜನ ಅಭೂತಪೂರ್ವ ಸ್ವಾಗತ ಕೊಟ್ಟಿದ್ದಾರೆ ಎಂದು ಆರ್ ಅಶೋಕ ಹೇಳಿದ್ದಾರೆ. ಕನಕಪುರದ ಜನ ಕೈ ಎತ್ತಿ ಶುಭ ಹಾರೈಸಲೂ ಭಯಪಡುವ ಸ್ಥಿತಿ ಇತ್ತು. ಅಂಥ ಕ್ಷೇತ್ರದಲ್ಲಿ ಗೆದ್ದು ಬಾ ಎಂದು ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಕಳುಹಿಸಿದ್ದಾರೆ. ಕನಕಪುರದ ಜನ ನನ್ನನ್ನು ಮನೆ ಮಗನ ರೀತಿ ಸ್ವಾಗತ ಮಾಡುತ್ತಿದ್ದಾರೆ. ಕನಕಪುರಕ್ಕೆ ಹೊರಗಿನಿಂದ ಜನ ಬಂದಿಲ್ಲ, ಎಲ್ಲರೂ ಸ್ಥಳೀಯರೇ ಎಂದು ರಾಮನಗರ ಜಿಲ್ಲೆ ಕನಕಪುರದಲ್ಲಿ ಆರ್ ಅಶೋಕ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ