ನೀವೇನು ಅಭಿವೃದ್ಧಿ ಮಾಡಿದ್ದೀರಿ?: ವರುಣಾ ಕ್ಷೇತ್ರದಲ್ಲಿ ಸೋಮಣ್ಣರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಬಿಜೆಪಿ ಹೈಕಮಾಂಡ್ ವರುಣಾ ಕ್ಷೇತ್ರದಲ್ಲಿ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಅದರಂತೆ ಪ್ರಚಾರಕ್ಕೆ ತೆರಳಿಸಿದ ಸೋಮಣ್ಣ ಅವರು ಕೆಲವು ಗ್ರಾಮಸ್ಥರ ತರಾಟೆಗೆ ಕಿವಿ ಕೊಡಬೇಕಾಯಿತು.
ಮೈಸೂರು: ತನ್ನದು ಕೊನೆಯ ಚುನಾವಣೆ ಎಂದು ಘೋಷಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಸೋಲಿಸಿಯೇ ಮನೆಗೆ ಕಳುಹಿಸುವ ಯೋಜನೆ ಹಾಕಿಕೊಂಡಿರುವ ಬಿಜೆಪಿ ಹೈಕಮಾಂಡ್, ವರುಣಾ ಕ್ಷೇತ್ರದಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿಯನ್ನಾಗಿ ವಿ ಸೋಮಣ್ಣ (V Somanna) ಅವರನ್ನು ಕಣಕ್ಕಿಳಿಸಿದೆ. ಅದರಂತೆ ಸಂಸದರು ಮತ್ತು ಬೆಂಬಲಿಗರೊಂದಿಗೆ ಪ್ರಚಾರಕ್ಕೆ ತೆರಳಿಸಿದ ಸೋಮಣ್ಣ ಅವರು ಇಂದು ಕೆಲವು ಗ್ರಾಮಸ್ಥರ ತರಾಟೆಗೆ ಕಿವಿ ಕೊಡಬೇಕಾಯಿತು. ಹೌದು, ವರುಣಾ ಕ್ಷೇತ್ರದ ಲಲಿತಾದ್ರಿಪುರದಲ್ಲಿ ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಲಲಿತಾದ್ರಿಪುರದಲ್ಲಿ ಮತಯಾಚನೆ ನಡೆಸುತ್ತಿದ್ದಾಗ ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದ ಕೆಲವು ಮಂದಿ, ತಾವು ಏನು ಅಭಿವೃದ್ಧಿ ಮಾಡಿದ್ದೀರೆಂದು ಸೋಮಣ್ಣ ಮತ್ತು ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಸೋಮಣ್ಣ ಇದ್ದರು. ಆವಾಗ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ? ಈಗ ಮತ ಕೇಳುವುದಕ್ಕೆ ಬಂದಿದ್ದೀರಾ? ಅಂತ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಹೀಗೆ ಆರಂಭವಾದ ಮಾತು ನಂತರ ಮಾತಿನ ಚಕಮಕಿಗೆ ಕಾರಣವಾಯಿತು.
ಇದನ್ನೂ ಓದಿ: ವರುಣಾ ರಣತಂತ್ರ: ಬಿಎಸ್ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿಯನ್ನ ಭೇಟಿಯಾದ ವಿ ಸೋಮಣ್ಣ
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಭೆ
ಒಂದೆಡೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತಯಾಚನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಸಭೆ ನಡೆಸುತ್ತಿದ್ದಾರೆ. ಮೈಸೂರಿನ ಟಿ.ಕೆ.ಬಡಾವಣೆಯ ನಿವಾಸದಲ್ಲಿ ವರುಣ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸುತ್ತಿರುವ ಸಭೆಯಲ್ಲಿ ಸಿದ್ದರಾಮಯ್ಯ ತಂತ್ರಗಾರಿಕೆ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಪ್ರತಿಯೊಂದು ಪಂಚಾಯತಿಯವರ ಜೊತೆ ಪ್ರತ್ಯೇಕ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ಪ್ರಚಾರಕ್ಕೆ ಅಭಿಮಾನಿಯಿಂದ ವಾಹನ ಗಿಫ್ಟ್
ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರಕ್ಕಾಗಿ ಅಭಿಮಾನಿಯೊಬ್ಬರು ವಾಹನ ಗಿಫ್ಟ್ ಮಾಡಿದ್ದಾರೆ. ಹೈದರಾಬಾದ್ ಮೂಲದ ಶ್ರೀಧರ್ ರಾವ್ ಅವರು ತನ್ನ ನೆಚ್ಚಿನ ನಾಯಕನಿಗಾಗಿ ಆಂಧ್ರಪ್ರದೇಶದ ಪ್ರದೇಶದಿಂದ ತೆರೆದ ಬೊಲೆರೋ ವಾಹನ ಸಿದ್ದಪಡಿಸಿ ತಂದಿದ್ದಾರೆ. ಇದೇ ವಾಹನದಲ್ಲಿ ನಾಳೆಯಿಂದ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಅವರು ಕ್ಷೇತ್ರದಲ್ಲಿ ಪಚಾರ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ