ಕನಕಪುರ ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಕೆಶಿಗೆ ಆಫರ್, ನಿಜ ಎಂದ ಡಿಕೆ ಶಿವಕುಮಾರ್

| Updated By: ರಮೇಶ್ ಬಿ. ಜವಳಗೇರಾ

Updated on: Jan 22, 2023 | 5:17 PM

ಕನಕಪುರ ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಕೆಶಿಗೆ ಆಫರ್ ಬಂದಿದೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿಜ ಎಂದು ಒಪ್ಪಿಕೊಂಡಿದ್ದಾರೆ.

ಕನಕಪುರ ಬಿಟ್ಟು ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಡಿಕೆಶಿಗೆ ಆಫರ್, ನಿಜ ಎಂದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆ ಕೆಲ ರಾಜಕೀಯ ನಾಯಕರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಇನ್ನು ಕೆಲವರು ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರು ಬಾದಾಮಿ ಬಿಟ್ಟು ಈ ಬಾರಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಕನಕಪುರ ಬಿಟ್ಟು ಮದ್ದೂರು (Maddur) ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್​ ನಿಯೋಗ ಒಂದು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಂಬರುವ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರಿನಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದೆ. ಅಲ್ಲದೇ ಇದಕ್ಕೆ ಸಕರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಇನ್ನು ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಚುನಾವಣೆ ಹೊಸ್ತಿಲ್ಲಲ್ಲೇ ಜೆಡಿಎಸ್​ನ ಮತ್ತೊಂದು ವಿಕೆಟ್ ಪತನ, ನಮ್ಮ ನಡೆ ಕಾಂಗ್ರೆಸ್ ಕಡೆ ಎಂದ 2008ರ ಅಭ್ಯರ್ಥಿ

ಉಡುಪಿಯಲ್ಲಿ ಇಂದು(ಜನವರಿ 22) ಮಾತನಾಡಿರುವ ಡಿಕೆ ಶಿವಕುಮಾರ್, ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದ್ದು ನಿಜ. ಮದ್ದೂರಿನಿಂದ ಸ್ಪರ್ಧಿಸುವಂತೆ ಕೇಳಿದ್ದಾರೆ. ಇಲ್ಲ ಎಂದು ಹೇಳಲ್ಲ. ಮಂಡ್ಯ, ಮದ್ದೂರು ಕಾರ್ಯಕರ್ತರು ನನ್ನ ಜತೆ ಮಾತನಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ನಾನು ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಸದ್ಯ ನಾನು ಚರ್ಚೆಗೆ ಅವಕಾಶ ನೀಡಲ್ಲ. ಅಲ್ಲದೇ ಇದೇ ವೇಳೆ ಮಗಳು ಅಥವಾ ಅಳಿಯನ ಸ್ಪರ್ಧೆ ಬಗ್ಗೆ ಮಾತನಾಡಲು ನಿರಾಕರಿಸಿದರು. ಈ ಮೂಲಕ ಮದ್ದೂರಿನಿಂದ ಸ್ಪರ್ಧೆ ಮಾಡುವಂತೆ ಬಂದಿರುವ ಆಹ್ವಾನ ನಿಜ ಎಂದು ಡಿಕೆ ಶಿವಕುಮಾರ್ ಒಪ್ಪಿಕೊಂಡರು. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮದ್ದೂರಿನಿಂದ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆ ಮೂಡಿದೆ.

ಒಕ್ಕಲಿಗರ ಮತಗಳನ್ನು ಸೆಳೆಯಲು ಡಿಕೆಶಿಗೆ ಹೈಕಮಾಂಡ್​ ಟಾಸ್ಕ್​ ಕೊಟ್ಟಿದೆ ಎನ್ನಲಾಗಿದ್ದು, ಈ ಕಾರಣಕ್ಕಾಗಿಯೇ ಡಿಕೆ ಶಿವಕುಮಾರ್ ಒಕ್ಕಲಿಗ ಮತಬೇಟೆಗೆ ತಂತ್ರ ಹೆಣೆಯುತ್ತಿದ್ದಾರೆ. ಒಂದು ವೇಳೆ ಮದ್ದೂರಿನಲ್ಲಿ ಸ್ಪರ್ಧೆ ಮಾಡಿದರೆ ಅತೀ ಹೆಚ್ಚು ಒಕ್ಕಲಿಗ ಮತಗಳು ಇರುವ ಮಂಡ್ಯ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲೂ ಡಿಕೆಶಿ ಪ್ರಭಾವ ಬೀರುವ ಸಾಧ್ಯತೆ ಬಗ್ಗೆ ಲೆಕ್ಕಾಚಾರಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಮದ್ದೂರಿನಲ್ಲಿ ಸ್ಪರ್ಧೆ ಮಾಡುವುದು ಬಿಡುವುದು ಎರಡನೇ ಮಾತು. ಆದ್ರೆ, ಮದ್ದೂರಿನ ಮೇಲೆ ಕಣ್ಣು ಬಿದ್ದಿದಂತೂ ಸತ್ಯ.

ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಅಖಾಡಕ್ಕಿಳಿದ ಸಂಘಟನಾ ಚತುರ, ಕೋಲಾರದಲ್ಲಿ ಬಿಜೆಪಿ ಗೆಲುವಿಗೆ ಸಂತೋಷ್ ‘ಸೂತ್ರ’

ಇತ್ತೀಚೆಗೆ ಒಕ್ಕಲಿಗರ ಸಂಘದ ಕಾರ್ಯಕ್ರಮವೊಂದರಲ್ಲಿ ನನಗೂ ಒಂದು ಅವಕಾಶ ಕೊಡಿ ಎಂದಿದ್ದರು. ದೇವೇಗೌಡರನ್ನು ಪ್ರಧಾನಿ ಮಾಡಿದ್ವಿ, ನಾವೂ ಸಹಕರಿಸಿದ್ದೀವಿ. ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಿದ್ದೀರಿ. ನಿಮ್ಮ‌ ಋಣ ತೀರಿಸಲು ನಮಗೆ ಅವಕಾಶ ಕೊಡಿ’ ಎಂದು ಶಿವಕುಮಾರ್ ಮನವಿ ಮಾಡಿದ್ದರು. ಈ ಮೂಲಕ ಪರೋಕ್ಷವಾಗಿ ಈ ಬಾರಿ ಸಿಎಂ ಆಗುವ ಅವಕಾಶ ಇದ್ದು ಮತಗಳೊಂದಿಗೆ ಸಹರಿಸಿ ಎನ್ನುವ ಅರ್ಥದಲ್ಲಿ ಹೇಳಿದ್ದರು.

ಸಾತನೂರು ಕ್ಷೇತ್ರ ಅಸ್ತಿತ್ವದಲ್ಲಿದ್ದ ಕಾಲದಿಂದಲೂ ಈವರೆಗೆ ಡಿಕೆ ಶಿವಕುಮಾರ್ ಗೆಲ್ಲುತ್ತಾ ಬಂದಿದ್ದಾರೆ. ಸತತ 7 ಬಾರಿ ಗೆಲುವು ಸಾಧಿಸಿದ್ದಾರೆ. 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ಸೋಲು ಎನ್ನುವದೇ ನೋಡಿಲ್ಲ. 2004ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಾಗಿ ಅರ್ಧ ಚನ್ನಪಟ್ಟಣ ಇನ್ನು ಅರ್ಧ ಕನಕಪುರ ಕ್ಷೇತ್ರಗಳಾದವು. ಡಿಕೆ ಶಿವಕುಮಾರ್ ರಾಜಕೀಯ ಕೋಟಿ ಕನಕಪುರದಲ್ಲಿ ಎದುರಾಳಿಗಳೇ ಇಲ್ಲ. ಬಿಜೆಪಿಗೆ ನೆಲೆ ಇಲ್ಲ. ಇನ್ನು ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.

ಆದ್ರೆ, ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ತವರು ಕ್ಷೇತ್ರ ಕನಕಪುರ ಬಿಟ್ಟು ಮಂಡ್ಯದ ಮದ್ದೂರಿನಿಂದ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.

Published On - 5:16 pm, Sun, 22 January 23