ಮಾಗಡಿ: ಸಿಲಿಕಾನ್ ಸಿಟಿ ಪಕ್ಕದಲ್ಲೇ ಇರುವ, ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ, ಕೆಂಪೇಗೌಡರ ನಾಡು ಮಾಗಡಿಯಲ್ಲಿ(Magadi Assembly Election) ಈ ಬಾರಿ ಚುನಾವಣಾ ಕಾವು ರಂಗುಪಡೆದಿದೆ. ಮೂರು ಪಕ್ಷದ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ಇರುವ ಮಾಗಡಿ ಕ್ಷೇತ್ರದಲ್ಲಿ ರೇಷ್ಮೆ ಹಾಗೂ ರಾಗಿ ಬೆಳೆಯನ್ನ ಹೆಚ್ಚಾಗಿ ಬೆಳೆಯಲಾಗುತ್ತದೆ. ಮಾಗಡಿ ಕೆಂಪೇಗೌಡರ ಹಲವು ಕುರುಗಳು ಇವೆ. ಅಷ್ಟೆ ಅಲ್ಲದೆ ಹಲವು ಕೋಟೆಗಳು ಇವೆ. ಇನ್ನು ಕೆಂಪೇಗೌಡರ ಸಮಾಧಿ ಸ್ಥಳ ಸಹಾ ಕೆಂಪಾಪುರ ಗ್ರಾಮದಲ್ಲಿ ಪತ್ತೆಯಾಗಿದೆ. ಘಟಾನುಘಟಿ ನಾಯಕರು ಸ್ಪರ್ಧೆ ನಡೆಸುತ್ತಿದ್ದು, ಜೆಡಿಎಸ್- ಕಾಂಗ್ರೆಸ್‌ನ ಎದುರಾಳಿಗಳು ಸತತ ಮೂರನೇ ಬಾರಿಗೆ ಕಾದಾಟಕ್ಕೆ ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಗೆಲ್ಲುವವರ ಪಕ್ಷ ಅಧಿಕಾರಕ್ಕೆ ಬಂದರೆ, ಅವರೇ ಮುಂದಿನ ಮಿನಿಸ್ಟರ್ ಎನ್ನಲಾಗುತ್ತಿದೆ. ಇಡೀ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಚನ್ನಪಟ್ಟಣ ಬಿಟ್ಟರೆ, ಮಾಗಡಿಯಿಂದಲೇ ಬಿಜೆಪಿ ಟಫ್ ಫೈಟ್ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರ ತವರೂರಿನಲ್ಲಿ ಕಮಲ ಬಲ ಪಡಿಸಲು ಸಚಿವರು ಅಖಾಡಕ್ಕಿಳಿದಿದ್ದರೆ, ಹಾಲಿ-ಮಾಜಿ ಶಾಸಕರ ಕಾದಾಟ ಹುಬ್ಬೇರುವಂತೆ ಮಾಡಿದೆ. ಇನ್ನು ಕ್ಷೇತ್ರದ ಶಾಸಕರಾಗಿರುವ ಎ.ಮಂಜುನಾಥ್ ಜೆಡಿಎಸ್ ಜಿಲ್ಲಾಧ್ಯಕ್ಷರು ಮಾತ್ರವಲ್ಲದೇ, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪರಮಾಪ್ತರು, ಹೆಚ್‌ಡಿಕೆ ಅವರ ತೋಟದ ಮನೆ ಇರುವುದು ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ, 2 ದಶಕಗಳಿಂದಲೂ ಜೆಡಿಎಸ್ ಭದ್ರಕೋಟೆಯಾಗಿರುವ ಮಾಗಡಿಯಲ್ಲಿ ಕಳೆದ ಚುನಾವಣೆಯಲ್ಲಿ ಎ. ಮಂಜುನಾಥ್ ಅವರನ್ನು ಗೆಲ್ಲಿಸಿಕೊಂಡಿತ್ತು. ಜೆಡಿಎಸ್ ನಲ್ಲಿ ಇದ್ದ ಹೆಚ್ ಸಿ ಬಾಲಕೃಷ್ಣ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ವರ್ಧೆ ಮಾಡಿ ಸೋಲು ಕಂಡಿದ್ದರು.
ಇದನ್ನೂ ಓದಿ: Fact Check: ಬಿಜೆಪಿಗೆ ವೋಟ್ ಇಲ್ಲ ಎಂದ ಅನಿವಾಸಿ ಭಾರತೀಯರು; ವಿಡಿಯೊ ಅಭಿಯಾನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ
ಇನ್ನು ಕಾಂಗ್ರೆಸ್ ನಲ್ಲಿ ಇದ್ದ ಮಂಜುನಾಥ್, ಜೆಡಿಎಸ್ ಗೆ ಬಂದು 2018ರ ಚುನಾವಣೆಯಲ್ಲಿ ಸ್ವರ್ಧೆ ಮಾಡಿ ಹೆಚ್ಚು ಮತಗಳ ಅಂತರದಿಂದ ಗೆದಿದ್ದರು. ಹೀಗಾಗಿ ಕುಮಾರಸ್ವಾಮಿ ಅವರಿಗೂ ಈ ಬಾರಿ ಪ್ರತಿಷ್ಠೆಯಾಗಿರುವ ಈ ಕ್ಷೇತ್ರವನ್ನು ಮತ್ತೊಮ್ಮೆ ಗೆಲ್ಲುವುದು ಅನಿವಾರ್ಯ, ಈಗಾಗಲೇ ಪಂಚರತ್ನ ಯಾತ್ರೆ ನಡೆಸಿ, ಕುಮಾರಸ್ವಾಮಿ ಪಾಂಚಜನ್ಯ ಮೊಳಗಿಸಿದ್ದರೆ, ಮನೆ ಮನೆ ಮಂಜಣ್ಣ ಕಾರ್ಯಕ್ರಮದ ಮೂಲಕ ಮತದಾರರ ಮನ ಗೆಲ್ಲಲ್ಲು ಹಾಲಿ ಶಾಸಕ ಮಂಜುನಾಥ್ ಹರಸಾಹಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ನಾಲ್ಕು ಭಾರಿ ಶಾಸಕರಾಗಿದ್ದಾರೆ. ಮೊದಲ ಬಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದರೆ, ಮೂರು ಬಾರಿಯು ಜೆಡಿಎಸ್ ನಿಂದ ಗೆಲುವು ಸಾಧಿಸಿದ್ದರು. ಈಗ ಕಾಂಗ್ರೆಸ್ ನಿಂದ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಈ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಸದ ಡಿ.ಕೆ.ಸುರೇಶ್ ಸಹ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಜನಾರ್ಶಿವಾದ ಯಾತ್ರೆ, ಪ್ರಜಾ ಧ್ವನಿ, ಕಾಂಗ್ರೆಸ್ ಗ್ಯಾರೆಂಟಿ ಕಾರ್ಯಕ್ರಮಗಳ ಮೂಲಕ ಮತದಾರರನ್ನು ತಲುಪುತ್ತಿರುವ ಹೆಚ್ ಸಿಬಿ ಮಾಗಡಿಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ತವರೂ ಜಿಲ್ಲೆಯಾಗಿರುವ ಕಾರಣಕ್ಕೆ ಮಾಗಡಿಯಲ್ಲಿ ಪಕ್ಷ ಗೆಲ್ಲಿಸಿ ಕೊಳ್ಳಲು ರಾಜ್ಯ ನಾಯಕರು ಸಹ ಟೊಂಕ ಕಟ್ಟಿದ್ದಾರೆ. ಹೊನ್ನು ಮಡಿಲು, ಸೀಮಂತ ಕಾರ್ಯಕ್ರಮ, ಮೂಗುತಿ ವಿತರಣೆ ಮೂಲಕ ಪ್ರಸಾದ್ ಗೌಡ ಈಗಾಗಲೇ ಅಖಾಡ ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ. ಇವರ ಬೆನ್ನಿಗೆ ಸಚಿವ ಅಶ್ವ ನಾರಾಯಣ್ ನಿಂತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಎಲ್ಲ ಅಂಶಗಳಿಂದ ಈ ಬಾರಿ ಮಾಗಡಿ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ