ವಿಜಯನಗರ: ವಿಜಯನಗರ (Vijayanagar) ಜಿಲ್ಲೆ ಹರಪನಹಳ್ಳಿ (Harappanhalli) ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗ (Mailaralinga) ದೇಗುಲದಲ್ಲಿ ಪ್ರತಿ ವರ್ಷ ಕಾರಣಿಕ ವಿಧಿವಿಧಾನ ನಡೆಯುತ್ತದೆ. ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ಶೂನ್ಯವನ್ನು ದಿಟ್ಟಿಸಿ ನೋಡುತ್ತಾ, ಕಾರಣಿಕ ನುಡಿಯುತ್ತಾರೆ. ಈ ಕಾರಣಿಕ ಸತ್ಯವಾಗಿವೆ ಎನ್ನುವುದು ಜನರ ನಂಬಿಕೆ. ಅದರಂತೆ ಈ ವರ್ಷ ನುಡಿದ ಗೊರವಪ್ಪ, ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಕಾರಣಿಕ ನುಡಿದಿದ್ದರು. ಇದಕ್ಕೆ ಜನರು ತಮ್ಮ ತಮ್ಮ ಭಾವನೆಗೆ ತಕ್ಕಂತೆ ಅರ್ಥವನ್ನು ಕಂಡುಕೊಳ್ಳುತ್ತಾರೆ. ಆದರೆ ರಾಜಕೀಯ ವಿಶ್ಲೇಷಕರು ಇದಕ್ಕೆ ಬೇರೆ ವಿಶ್ಲೇಷಣೆ ಕೊಟ್ಟಿದ್ದು, ಅದು ನಿಜವಾಗಿದೆ. ಈ ಹಿನ್ನೆಲೆ ಮೈಲಾರಲಿಂಗನ ಕಾರಣಿಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಹೌದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಾಧ್ಯತೆ ಎನ್ನುವುದು ಮೈಲಾರ ಕಾರ್ಣಿಕದ ರಾಜಕೀಯವಾಗಿ ವಿಶ್ಲೇಷಣೆಯಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ಇದನ್ನು ತಿಳಿಸಿದ್ದಾನೆ ಎಂದು ರಾಜಕೀಯವಾಗಿ ಈ ಕಾರಣಿಕದ ನುಡಿಯನ್ನು ವಿಶ್ಲೇಷಿಸಲಾಗಿತ್ತು. ಹೀಗಾಗಿ ಮೂರು ಪಕ್ಷದಲ್ಲಿ ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿ ಯಾರು? ಎನ್ನುವುದೇ ಕುತೂಹಲ ಮೂಡಿಸಿತ್ತು.
ಇದನ್ನೂ ಓದಿ: ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್’; ಗೊರವಯ್ಯ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕ ವಾಣಿ ಅರ್ಥವೇನು? ಇಲ್ಲಿದೆ ವಿಶ್ಲೇಷಣೆ
ಇದೀಗ, ಬಿಜೆಪಿ 66 ಸ್ಥಾನ ಪಡೆಯುವ ಮೂಲಕ ಪರಾಭವಗೊಂಡಿದ್ದು, ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯಗಳಿಸಿದೆ. ಈ ಮೂಲಕ ಮೈಲಾರ ಲಿಂಗನ ಕಾರಣಿಕ ನಿಜವಾಗಿದೆ ಎಂದು ಕಾಂಗ್ರೆಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕಂಬಳಿ ಬೀಸಿತಲೇ ಪರಾಕ್ ಎಂಬ ಸಾಲಿಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂಬ ಅರ್ಥವನ್ನು ಅಭಿಮಾನಿಗಳು ಕಲ್ಪಿಸುತ್ತಿದ್ದು, ಸಿಎಂ ಯಾರಾಗುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.
ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಗೊರವಯ್ಯನವರು ಓರ್ವ ಕಾಂಗ್ರೆಸ್ ಮುಖಂಡನ ಕೈ ಹಿಡಿದು, ನಾವು ಹೇಳಿದ ಕಾರಣಿಕ ನಿಜವಾಗಿದೆ. ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ ಎಂದು ಕಾರಣಿಕ ನುಡಿದಿತ್ತು. ಈಗ ಕಾಂಗ್ರೆಸ್ 120 ಸ್ಥಾನಕ್ಕಿಂತ ಅಧಿಕ ಅಧಿಕಾರಕ್ಕೆ ಬುರವ ಮೂಲಕ ಮೈಲಾರಲಿಂಗನ ಕಾರಣಿಕ ನಿಜವಾಗಿದೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Tue, 16 May 23