ಬಳ್ಳಾರಿಯಲ್ಲಿ ಸಚಿವನನ್ನೇ ಸೋಲಿಸಿದ ಕೈ ಶಾಸಕನಿಗೆ ಸ್ಕೆಚ್: ಸೋಲಿನ ಹತಾಶೆಯಿಂದ ಮಚ್ಚು ಬೀಸಲು ಯತ್ನ, ಶಾಸಕ ಜಸ್ಟ್ ಮಿಸ್!
ಅವರಿಬ್ಬರು ಬಿಜೆಪಿಯ ಕಟ್ಟಾ ಕಾರ್ಯಕರ್ತರು. ತಮ್ಮ ನಾಯಕ ಗೆದ್ರೆ ಸಿಎಂ ಆಗ್ತಾನೆ. ಡಿಸಿಎಂ ಆಗ್ತಾನೆ ಎಂದು ಕನಸ್ಸು ಕಂಡವರು. ಆದ್ರೆ, ಅವರ ನೆಚ್ಚಿನ ನಾಯಕ ಶಿಷ್ಯನ ವಿರುದ್ದವೇ ಹೀನಾಯವಾಗಿ ಸೋಲುಂಡಿದ್ದಾರೆ. ಸೋಲಿನ ಹತಾಶೆಯಲ್ಲಿದ್ದ ಅವರಿಬ್ಬರು ಕೈಯಲ್ಲಿ ಮಚ್ಚು ಹಿಡಿದು ಕಾಂಗ್ರೆಸ್ ಶಾಸಕನನ್ನೆ ಹತ್ಯೆ ಮಾಡಲು ಸ್ಕೇಚ್ ಹಾಕಿದ್ರು. ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಶಾಸಕ ಮೆರವಣಿಗೆಯಲ್ಲಿದ್ದಾಗಲೇ ಮಚ್ಚು ಬೀಸಲು ಬಂದವರಿಂದ ಕೈ ಶಾಸಕ ಜಸ್ಟ್ ಮಿಸ್ ಆಗಿದ್ದಾರೆ. ಅಷ್ಟಕ್ಕೂ ಸಚಿವರನ್ನ ಸೋಲಿಸಿದ ಶಾಸಕನಿಗೆ ಸ್ಕೇಚ್ ಹಾಕಿದವರ್ಯಾರು? ಇಲ್ಲಿದೆ ನೋಡಿ.
ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮುಗಿದಿದೆ. ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್(Congress) ಪಕ್ಷ ಅಧಿಕಾರದ ಗದ್ದುಗೆಗೆ ಏರಿದೆ. ಸಿದ್ದರಾಮಯ್ಯ ಶಿವಕುಮಾರ್ ಸಿಎಂ ಕುರ್ಚಿಗಾಗಿ ಫೈಟ್ ನಡೆಸುತ್ತಿದ್ದಾರೆ. ಆದ್ರೆ, ರಾಜಕೀಯ ಗುರುವಿನ ವಿರುದ್ದ ಶಿಷ್ಯ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೆ ಕೈ ಶಾಸಕನ ಹತ್ಯೆಗೆ ಸಂಚು ರೆಡಿಯಾಗಿತ್ತಾ? ಎಂಬ ಪ್ರಶ್ನೆ ಮೂಡಿದೆ. ಹೌದು ಸಚಿವ ಶ್ರೀರಾಮುಲು (Sriramulu) ರನ್ನ ಸೋಲಿಸಿದ ಶಾಸಕ ಸಂಭ್ರಮದಲ್ಲಿದ್ದಾಗಲೇ ಕಾಂಗ್ರೆಸ್ ಶಾಸಕನಿಗೆ ಸ್ಕೇಚ್ ರೆಡಿಯಾಗಿತ್ತು ನೋಡಿ. ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಶಾಸಕ ಮೆರವಣಿಗೆಯಲ್ಲಿದ್ದಾಗಲೇ ಮಚ್ಚು ಬೀಸಲು ಬಂದವರಿಂದ ಕೈ ಶಾಸಕ ಜಸ್ಟ್ ಮಿಸ್ ಆಗಿದ್ದಾರೆ.
ಹೌದು ಗಣಿ ನಾಡು ಬಳ್ಳಾರಿ, ಸೇಡು, ದ್ವೇಷ, ಹಣದ ಹೊಳೆಯಲ್ಲೆ ನಡೆಯುವ ರಾಜಕಾರಣ. ಬಳ್ಳಾರಿಯ ರಾಜಕಾರಣವೇ ಹಂಗೆ ಆಂಧ್ರಪ್ರದೇಶದ ರಕ್ತ ರಾಜಕಾರಣ, ರಾಯಲಸೀಮಾದ ಫ್ರಾಂಕ್ಷನಿಸಂ ನೆರಳು ಬಳ್ಳಾರಿಯ ರಾಜಕಾರಣದಲ್ಲಿದೆ. ಜಿದ್ದು, ಪೈಪೋಟಿ, ಸೇಡಿಗೆ ಸೇಡು ಅಂತಾನೇ ಕಣಕ್ಕೆ ಇಳಿಯುವ ರಣಕಲಿಗಳು ಗೆಲುವಿಗಾಗಿ ಏನಾದರೂ ಮಾಡುತ್ತಾರೆ. ಅದೇ ರೀತಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಈ ಭಾರಿಯ ಚುನಾವಣೆ ತೀವ್ರ ಪ್ರತಿಷ್ಠೆ ಪೈಪೋಟಿಗೆ ಕಾರಣವಾಗಿತ್ತು. ರಾಜಕೀಯ ಗುರುವಿನ ವಿರುದ್ದ ಶಿಷ್ಯ ಸ್ಪರ್ಧೆ ಮಾಡಿದ್ದು, ಸಾಕಷ್ಟು ಕುತೂಹಲದ ಹಣಾಹಣಿಗೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ, ಸಚಿವ ಶ್ರೀರಾಮುಲು ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ ನಾಗೇಂದ್ರ ಅವರು ಭರ್ಜರಿ ಗೆಲುವು ಸಾಧಿಸಿ ಗ್ರಾಮೀಣ ಕ್ಷೇತ್ರದಿಂದ ಸತತವಾಗಿ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ಗೆಲುವಿನ ನಂತರ ಸಂಭ್ರಮದಲ್ಲಿದ್ದಾಗಲೇ ಶಾಸಕನಿಗೆ ಸ್ಕೇಚ್ ಹಾಕಿದ್ರಾ? ಹೌದು ಬೈಕ್ನಲ್ಲಿ ಮಚ್ಚಿನೊಂದಿಗೆ ಆಗಮಿಸಿದ ಅವರಿಬ್ಬರಿಂದ ಕಾಂಗ್ರೆಸ್ ಶಾಸಕ ನಾಗೇಂದ್ರ ಜಸ್ಟ್ ಮಿಸ್ ಆಗಿದ್ದಾರೆ.
ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆ ಕುಟುಂಬ ಹತ್ಯೆಗೆ ಸಂಚು ಆರೋಪ: ಬಿಜೆಪಿ ಅಭ್ಯರ್ಥಿ ವಿರುದ್ಧ FIR ದಾಖಲು
ಶಾಸಕ ನಾಗೇಂದ್ರಗೆ ಮಚ್ಚು ತೋರಿಸಿ, ಜೀವ ಬೆದರಿಕೆಯೊಡ್ಡುವ ಮುನ್ನ ನಡೆದಿದ್ದು ಮಾತ್ರ ಸೇಡಿನ ರಾಜಕಾರಣ. ಹೌದು, ಬಳ್ಳಾರಿ ಗ್ರಾಮೀಣ ಕ್ಷೇತ್ರ ಸಚಿವ ಶ್ರೀರಾಮುಲು ಸ್ವಕ್ಷೇತ್ರ. ಹಿಂದೆ ನಾಲ್ಕು ಭಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಶ್ರೀರಾಮುಲು ಗೆಲುವು ಸಾಧಿಸಿದ್ದರು. ಆದ್ರೆ, ಕಳೆದಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ದಿಸಿದ್ದ ಶ್ರೀರಾಮುಲು ಈ ಬಾರಿ ಮತ್ತೆ ಗ್ರಾಮೀಣ ಕ್ಷೇತ್ರ ಆಯ್ಕೆ ಮಾಡಿಕೊಂಡು ಕಾಂಗ್ರೆಸ್ ಶಾಸಕ ನಾಗೇಂದ್ರ ವಿರುದ್ದ ತೊಡೆತಟ್ಟಿಯೇ ಕಣಕ್ಕೆ ಇಳಿದಿದ್ರು. ಚುನಾವಣೆ ಪ್ರಚಾರದ ವೇಳೆ ಸಚಿವ ಶ್ರೀರಾಮುಲು, ಶಾಸಕ ನಾಗೇಂದ್ರ ಪರಸ್ಪರ ಸವಾಲು, ಪ್ರತಿ ಸವಾಲು ಹಾಕುತ್ತಾನೇ ಪ್ರಚಾರ ಮಾಡಿದ್ರು. ಒಬ್ಬರ ವಿರುದ್ದ ಮತ್ತೊಬ್ಬರು ತೆಲುಗು ಫಿಲ್ಮಂ ಸ್ಟೈಲ್ನಲ್ಲೆ ಪ್ರಚಾರ ಮಾಡಿ ತೊಡೆತಟ್ಟಿದ್ರು. ಇದ್ರಿಂದ ಚುನಾವಣಾ ರಣಕಣ ರಂಗೇರಿತ್ತು.
ಶಾಸಕನ ಮೇಲೆ ಮಚ್ಚಿನಿಂದ ಅಟ್ಯಾಕ್
ಬಳ್ಳಾರಿಯ ದೇವಿನಗರದ ವಿಷ್ಣು ವೆಂಕಟೇಶ ಮತ್ತು ಬಸನವಕುಂಟೆ ಪ್ರದೇಶದ ರಮೇಶ ಮೊನ್ನೆ ಎಂಬುವವರು ಶಾಸಕ ನಾಗೇಂದ್ರ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಲು ಯತ್ನ ಮಾಡಿದ್ದಾರೆ. ಗೆಲುವಿನ ನಂತರ ವಿಜಯೋತ್ಸವದೊಂದಿಗೆ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬರತ್ತಿದ್ದ ಶಾಸಕ ನಾಗೇಂದ್ರ ವಿರುದ್ದ ಬೈಕ್ನಲ್ಲಿ ಆಗಮಿಸಿದ ಇವರಿಬ್ಬರು ಮಚ್ಚು ತೋರಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಸೋಲಿನ ಹತಾಶೆಯಿಂದ ಮದ್ಯಾಹ್ನದಿಂದಲೇ ಎಣ್ಣೆ ಹಾಕಿದ್ದ ಇವರಿಬ್ಬರು ಶಾಸಕ ನಾಗೇಂದ್ರಗೆ ಸ್ಕೇಚ್ ಹಾಕಿ ಬೆದರಿಕೆಯೊಡ್ಡಿದ್ದರು. ಈ ವೇಳೆ ಮಚ್ಚು ನೋಡುತ್ತಿದ್ದಂತೆ ಶಾಸಕರ ಭದ್ರತೆಯಿದ್ದ ಬೌನ್ಸ್ರ್ಸ್ಗಳು ಬಿಜೆಪಿ ಕಾರ್ಯಕರ್ತರಿಬ್ಬರಿಗೂ ಹಿಗ್ಗಾಮುಗ್ಗಾ ಒದೆ ನೀಡಿದ್ದಾರೆ.
ಮಚ್ಚು ಬೀಸಲು ಬಂದವರನ್ನ ಬಿಟ್ಟು ಕಳುಹಿಸಿದ ಶಾಸಕ; ಕೈ ಶಾಸಕನಿಗೆ ಜೀವ ಬೆದರಿಕೆ ಹಾಕಿದವರು ಕಂಬಿಪಾಲು!
ಬಳ್ಳಾರಿಯ ದೇವಿನಗರದ ವಿಷ್ಣು ವೆಂಕಟೇಶ & ಬಸನವಕುಂಟೆ ಪ್ರದೇಶದ ರಮೇಶ ಬಿಜೆಪಿ ಕಾರ್ಯಕರ್ತರು. ಬಳ್ಳಾರಿ ನಗರ ಶಾಸಕರಾಗಿದ್ದ ಜಿ ಸೋಮಶೇಖರೆಡ್ಡಿ ಬೆಂಬಲಿಗನಾದ ರಮೇಶ. ಮಾಜಿ ಶಾಸಕ ಸುರೇಶಬಾಬು ಬೆಂಬಲಿಗನಾದ ವಿಷ್ಣು ವೆಂಕಟೇಶ ಇಬ್ಬರು ಬಿಜೆಪಿಯ ಸೋಲಿನಿಂದ ಹತಾಶರಾಗಿ ಶಾಸಕ ನಾಗೇಂದ್ರಗೆ ಬೆದರಿಕೆಯೊಡ್ಡಿದ್ದಾರೆ. ಭರ್ಜರಿ ಗೆಲುವಿನಲ್ಲಿದ್ದ ಕಾಂಗ್ರೆಸ್ ಶಾಸಕ ನಾಗೇಂದ್ರ ಮೆರವಣಿಗೆಯಲ್ಲಿ ಬರುತ್ತಿದ್ದಂತೆ ಬಳ್ಳಾರಿಯ ಎಸ್ ಪಿ ಸರ್ಕಲ್ ಬಳಿಗೆ ಬೈಕ್ನಲ್ಲಿ ಬಂದ ವಿಷ್ಣು ವೆಂಕಟೇಶ, ರಮೇಶ ಇಬ್ಬರು ಶಾಸಕ ನಾಗೇಂದ್ರ ಬಳಿ ಮಾತನಾಡುವ ನೆಪದಲ್ಲಿ ಮಚ್ಚಿನೊಂದಿಗೆ ಎದುರಾಗಿದ್ದಾರೆ. ಈ ವೇಳೆ ಇಬ್ಬರ ಬಳಿ ಮಾರಾಕಾಸ್ತ್ರಗಳು ಕಾಣುತ್ತಿದ್ದಂತೆ ಶಾಸಕ ನಾಗೇಂದ್ರ ಜೊತೆಗಿದ್ದ ಬೌನ್ಸ್ರ್ಸ್ಗಳು ಇಬ್ಬರನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಒದೆ ನೀಡಿದ್ದಾರೆ.
ಇದನ್ನೂ ಓದಿ:RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್ ಗೋಪಾಲ್ ವರ್ಮಾ ಹೇಳಿಕೆ
ಆಗ ಮಧ್ಯ ಪ್ರವೇಶಿಸಿದ ಶಾಸಕ ನಾಗೇಂದ್ರ ಮಚ್ಚು ತಗೆದುಕೊಂಡು ಬಂದವರನ್ನ ಹಿಡಿದು ವಿಚಾರಣೆ ನಡೆಸಿ, ಬೆಂಬಲಿಗರು ಹಲ್ಲೆ ಮಾಡದಂತೆ ತಿಳಿ ಹೇಳಿ ಬಿಡಿಸಿ ಕಳುಹಿಸಿದ್ದಾರೆ. ಆದ್ರೆ, ನಿಷೇದಾಜ್ಞೆ ದಿನದಂದು ಮಾರಾಕಾಸ್ತ್ರಗಳೊಂದಿಗೆ ಶಾಸಕ ನಾಗೇಂದ್ರಗೆ ಜೀವಬೆದರಿಕೆಯೊಡ್ಡಿದ ಹಿನ್ನಲೆಯಲ್ಲಿ ಇಬ್ಬರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಇಬ್ಬರು ಸೋಲಿನ ಹತಾಶೆಯಿಂದ ಬೆದರಿಕೆಯೊಡ್ಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಶಾಸಕ ನಾಗೇಂದ್ರಗೆ ಜೀವ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ಐಪಿಸಿ 504 ಮತ್ತು 506 ಸೆಕ್ಷನ್ ಅಡಿಯಲ್ಲಿ ಜೀವ ಬೆದರಿಕೆ ಪ್ರಕರಣವನ್ನ ದಾಖಲಿಸಿ ಆರೋಪಿಗಳನ್ನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕೈ ಶಾಸಕನಿಗೆ ಸ್ಕೆಚ್; ಜೀವ ಬೆದರಿಕೆ ಬೆನ್ನಲ್ಲೆ ಬಿಗಿ ಭದ್ರತೆ
ಜಿಲ್ಲೆಯ ಐವರು ನೂತನ ಶಾಸಕರಿಗೆ ಪೊಲೀಸ ಇಲಾಖೆ ಮತಷ್ಟು ಬಿಗಿ ಭದ್ರತೆ ನೀಡಿದೆ. ಎಸ್ಕಾರ್ಟ್ನೊಂದಿಗೆ ಗನ್ ಮ್ಯಾನ್ ನೀಡಲು ನಿರ್ಧರಿಸಿದೆ. ಶಾಸಕರಿಗೆ ಬೆದರಿಕೆ ಕುರಿತು ಮನವಿ ಮೇರೆಗೆ ಇನ್ನಷ್ಟು ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಬಳ್ಳಾರಿ ರಾಜಕಾರಣ ಹಗೆತನ. ದ್ವೇಷ. ಹಣ ಬಲದ ರಾಜಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಕಾಂಗ್ರೆಸ್ ಶಾಸಕ ನಾಗೇಂದ್ರ ಗೆಲುವು ಇದೀಗ ವಿರೋಧಿಗಳಿಗೆ ಸಹಿಸಲಾಗಿಲ್ಲ. ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ ಅನ್ನೋದಕ್ಕೆ ಈ ಘಟನೆ ಇದೀಗ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸುತ್ತಾ. ಆಂಧ್ರದ ರಕ್ತ ರಾಜಕಾರಣ ಬಳ್ಳಾರಿಯಲ್ಲೂ ಮರುಕಳಿಸದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದಕ್ಕೆಲ್ಲಾ ಕಡಿವಾಣ ಹಾಕಲೇಬೇಕಾಗಿದೆ.
ವಿರೇಶ್ ದಾನಿ ಟಿವಿ9 ಬಳ್ಳಾರಿ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Tue, 16 May 23