Karnataka CM Race Highlights: ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ನಡುವೆ ಭಾರೀ ಪೈಪೋಟಿ
Karnataka Government Formation Live Updates: 136 ಸ್ಥಾನದಿಂದ ಕಾಂಗ್ರೆಸ್ ಗೆದ್ದು ಬೀಗಿದ್ದು ಸಿಎಂ ಆಯ್ಕೆ ಕಗ್ಗಂಟಾಗಿಯೇ ಮುಂದುವರೆದಿದೆ. ಸದ್ಯ ಡಿಕೆಶಿ-ಸಿದ್ದು ದೆಹಲಿಯತ್ತ ಹೊರಟಿದ್ದು ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ. ಕ್ಷಣ ಕ್ಷಣದ ಅಪ್ಡೇಟ್ಸ್ಗಳನ್ನು ಇಲ್ಲಿ ಪಡೆಯಿರಿ.
Karnataka Government Formation Live News Updates Today: ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಬಹುಮತದಿಂದ ಗೆದ್ದಿದೆ. ಸದ್ಯ ಕರ್ನಾಟಕ ಸಿಎಂ ಗಾದಿಗೇರಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. CLP ಸಭೆ ನಡೆಸಿ ಶಾಂಗ್ರಿಲಾ ಹೋಟೆಲ್ನಲ್ಲಿ ಶಾಸಕರ ಬೆಂಬಲದ ಬಳಿಕ ಈಗ ಹೈಕಮಾಂಡ್ ಮೊರೆ ಹೋಗಲಾಗಿದೆ. ಸಿದ್ದರಾಮಯ್ಯ ನಿನ್ನೆ ದೆಹಲಿಗೆ ತೆರಳಿ ಒಂದು ಸುತ್ತಿನ ಮಾತುಕಥೆ ನಡೆಸಿದ್ದು ಇಂದು ಡಿಕೆ ಶಿವಕುಮಾರ್ ಹೆದಲಿಗೆ ಹಾರಲಿದ್ದಾರೆ. ಇಂದು ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಹೈಕಮಾಂಡ್ ಸಭೆ ನಡೆಸಿ ಸಿಎಂ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಪಟ್ಟಕ್ಕಾಗಿ ತಮ್ಮದೇ ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹಾಗಾದ್ರೆ ಮುಂದಿನ ಸಿಎಂ ಯಾರಾಗ್ತಾರೆ? ಸಿದ್ದು-ಡಿಕೆಶಿಯಲ್ಲಿ ಹೈಕಮಾಂಡ್‌ಗೆ ಯಾರ ಮೇಲೆ ಒಲವಿದೆ. ರಾಜಕೀಯ ವಲಯದ ಕ್ಷಣ ಕ್ಷಣದ ಮಾಹಿತಿ ಪಡೆಯಲು ಟಿವಿ9 ಡಿಜಿಟಲ್ ಲೈವ್ ವೀಕ್ಷಿಸಿ.
LIVE NEWS & UPDATES
-
Karnataka CM Race Live: ವೀರಶೈವ ಸಮುದಾಯದವರನ್ನೇ ಸಿಎಂ ಮಾಡಲಿ: ಶ್ರೀಶೈಲ ಮಠದ ಶ್ರೀ
ವೀರಶೈವ ಸಮುದಾಯದವರನ್ನೇ ಸಿಎಂ ಮಾಡಲಿ ಅನ್ನೋದು ಅಪೇಕ್ಷೆ ಇದೆ ಎಂದು ಶ್ರೀಶೈಲ ಮಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯಶ್ರೀ ಹೇಳಿದ್ದಾರೆ. ಎಲ್ಲೂರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವವರಿಗೆ ಸಿಎಂ ಸ್ಥಾನ ನೀಡಲಿ. ವೀರಶೈವ ಸಮುದಾಯದ 35ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಿದ್ದಾರೆ. ವೀರಶೈವ ಸಮುದಾಯಕ್ಕೆ ಸೂಕ್ತ ಸ್ಥಾನಮಾನವನ್ನು ಕಲ್ಪಿಸಿಕೊಡಬೇಕು. ಡಿಸಿಎಂ ಸ್ಥಾನ ಸೇರಿ ಸಂಪುಟದಲ್ಲಿ ಸಮುದಾಯಕ್ಕೆ ಹೆಚ್ಚು ಆದ್ಯತೆ ನೀಡಲಿ. ಸಾಧ್ಯ ಅಸಾಧ್ಯತೆಗಳ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈವರೆಗೆ ಹೈಕಮಾಂಡ್ ಜೊತೆ ಮಾತಾಡಿಲ್ಲ, ಅಗತ್ಯ ಬಿದ್ದರೆ ಮಾತಾಡುತ್ತೇವೆ. ಸ್ವಾಮೀಜಿಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.
-
Karnataka CM Race Live: ಸುರ್ಜೇವಾಲ ನಿವಾಸದಿಂದ ತೆರಳಿದ ಸಿದ್ದರಾಮಯ್ಯ
ದೆಹಲಿ: ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಮಾತುಕತೆ ನಡೆಸಿ ತೆರಳಿಸಿದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ, ಖರ್ಗೆ, ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
-
Karnataka CM Race Live: ಬಿಕೆ ಹರಿಪ್ರಸಾದ್ಗೆ ಸಚಿವ ಸ್ಥಾನ ನೀಡುವಂತೆ ಮುಸ್ಲಿಂ ಒಕ್ಕೂಟ ಮನವಿ
ಬೆಂಗಳೂರು: ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವಸ್ಥಾನ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆಯಲಾಗಿದೆ.
Karnataka CM Race Live: ಸಿಎಂ ಪಟ್ಟ ನೀಡದಿದ್ದರೆ ಶಾಸಕನಾಗಿ ಮುಂದುರಿಯುತ್ತೇನೆ: ಡಿಕೆಶಿ ಖಡಕ್ ಸೂಚನೆ
ಮಲ್ಲಿಕಾರ್ಜುನ ಖರ್ಗೆ ಭೇಟಿ ವೇಳೆ ಸಿಎಂ ಸ್ಥಾನಕ್ಕಾಗಿ ಆಗ್ರಹಿಸಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದಂತೆ ಉತ್ತಮವಾಗಿ ನಿರ್ವಹಿಸುತ್ತೇನೆ. ಸಿಎಂ ಸ್ಥಾನ ನೀಡದಿದ್ದರೆ ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ. ಸರ್ಕಾರದ ಭಾಗವಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿರುವುದಾಗಿ ತಿಳಿಸಿದ್ದಾರೆ.
Karnataka CM Race Live: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ವೈಎಸ್ವಿ ದತ್ತ
ಕಡೂಡು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ವೈಎಸ್ವಿ ದತ್ತಾ ಅವರು ಇದೀಗ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಪತ್ರ ಬರೆದು ತಿಳಿಸಿದ್ದಾರೆ.
Karnataka CM Race Live: ಸಿಎಂ ಸ್ಥಾನಕ್ಕಾಗಿ ಸಿದ್ದು ಡಿಕೆಶಿ ಪಟ್ಟು
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನಕ್ಕೆ ಪಟ್ಟುಬಿಡುತ್ತಿಲ್ಲ. ನವದೆಹಲಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಅಂತಿಮ ಸುತ್ತಿನ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ.
Karnataka CM Race Live: ಸಮ್ಮಿಶ್ರ ಸರ್ಕಾರ ಪತನವನ್ನೇ ಟ್ರಂಪ್ ಕಾರ್ಡ್ ಮಾಡಿದ ಡಿಕೆಶಿ
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಂಪೂರ್ಣ ರಾಜಕೀಯ ಕಾರಣ ನೀಡಿದ್ದಾರೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಂದಾಗಿನಿಂದ ಈವರೆಗಿನ ರಾಜಕೀಯ ಬೆಳವಣಿಗೆ ವಿವರಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ವಿರುದ್ಧ ಸಮ್ಮಿಶ್ರ ಸರ್ಕಾರ ಪತನವನ್ನೇ ಟ್ರಂಪ್ ಕಾರ್ಡ್ ಮಾಡಿದ್ದಾರೆ. ಚಾಮುಂಡೇಶ್ವರಿ ಬೈಎಲೆಕ್ಷನ್‌ನಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನು ಕಾರಣ. ವಿಧಾನಸಭೆ, ಲೋಕಸಭಾ ಎಲೆಕ್ಷನ್‌ನಲ್ಲಿ ಸೋಲಿನ ಬಳಿಕ ಪಕ್ಷ ಕಟ್ಟಿದ್ದೇನೆ, ದಲಿತರೆಲ್ಲರೂ ಸಿದ್ದರಾಮಯ್ಯ ಹಿಂದೆ ಇದಾರಾ ಎಂಬುದು ನಿಮಗೆ ತಿಳಿದಿಲ್ವಾ? ಈ ಬಾರಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ನಮ್ಮ ಕೈ ಹಿಡಿದಿವೆ. ಇದನ್ನು ಪರಿಗಣಿಸಿ ಈ ಬಾರಿ ನನಗೆ ಅವಕಾಶ ನೀಡಲೇಬೇಕೆಂದು ಮನವಿ ಮಾಡಿದ್ದಾರೆ.
Karnataka CM Race Live: ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪೈಪೋಟಿ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಸಿಎಂ ಪಟ್ಟದ ಪೈಪೋಟಿ ಇದೀಗ ಜಾತಿ ಹೋರಾಟದ ಸ್ವರೂಪ ಪಡೆಯುತ್ತಿದೆ. ಇಂದು ಕುರುಬ ಸಮುದಾಯದ ಮುಖಂಡರಿಂದ ಸಿದ್ದರಾಮಯ್ಯ ಪರ ಮೀಟಿಂಗ್ ನಡೆದಿದೆ. ಇದೀಗ ಒಕ್ಕಲಿಗ ಸಮುದಾಯ ಸಭೆ ಸೇರಲು ನಿರ್ಧರಿಸಿದ್ದಾರೆ. ಇಂದು ಡಿಕೆಶಿವಕುಮಾರ್ ಪರ ಪಾದಯಾತ್ರೆ ಮಾಡಲು ನಿರ್ಧರಿಸಿದ್ದ ಒಕ್ಕಲಿಗ ನಾಯಕರು ಮುಖಂಡರು ಡಿಕೆಶಿವಕುಮಾರ್ ಸೂಚನೆ ಮೇರೆಗೆ ಪಾದಯಾತ್ರೆ ರದ್ದುಪಡಿಸಿದ್ದರು. ಇದೀಗ ಸಿದ್ದರಾಮಯ್ಯ ಸಿಎಂ ನೇಮಕಕ್ಕೆ ಕುರುಬ ಸಮುದಾಯದವರು ಒತ್ತಡ ಹೇರುತ್ತಿರವ ಹಿನ್ನೆಲೆ ಒಕ್ಕಲಿಗ ನಾಯಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನಾಳೆಯೊಳಗೆ ತೀರ್ಮಾನ ಆಗದಿದ್ದರೆ ಡಿಕೆಶಿವಕುಮಾರ್ ಪರ ಒಕ್ಕಲಿಗರ ರ್ಯಾಲಿ ಮಾಡಲು ಮತ್ತೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
Karnataka CM Race Live: ವಿಜಯಾನಂದ ಕಾಶಪ್ಪನವರ್ಗೆ ಸಚಿವ ಸ್ಥಾನ ನೀಡುವಂತೆ ಡಿಮ್ಯಾಂಡ್
ಬೆಂಗಳೂರು: ಬಾಗಲಕೋಟೆ ಜಿಲ್ಲೆ ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ ಮಾಡಿದ್ದಾರೆ.
Karnataka CM Race Live: ಎಐಸಿಸಿ ಕಚೇರಿಗೆ ಆಗಮಿಸಿದ ಸಿದ್ದರಾಮಯ್ಯ
ದೆಹಲಿ: ಸಿಎಂ ಸ್ಥಾನದ ಕುರಿತು ಚರ್ಚಿಸಲು ವರಿಷ್ಠರ ಕರೆ ಹಿನ್ನೆಲೆ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಆಗಮಿಸಿದ್ದಾರೆ. ITC ಹೋಟೆಲ್ನಿಂದ ರಾಜಾಜಿ ಮಾರ್ಗ್ 10ರಲ್ಲಿರುವ ಖರ್ಗೆ ನಿವಾಸ ಖರ್ಗೆ ನಿವಾಸಕ್ಕೆ ಆಗಮಿಸಿದ್ದಾರೆ. ಶಾಸಕರಾದ ಜಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್, ಕೆ.ಜೆ.ಜಾರ್ಜ್, ಪುತ್ರ ಡಾ.ಯತಿಂದ್ರ ಜೊತೆಗಿದ್ದಾರೆ.
Karnataka CM Race Live: ಗುಜರಾತ್ ಮಾದರಿಯೇ ಬಿಜೆಪಿ ಸೋಲಿಗೆ ಕಾರಣ: ಎಂಪಿ ರೇಣುಕಾಚಾರ್ಯ
ದಾವಣಗೆರೆ: ಬಿಜೆಪಿ ತಪ್ಪು ನಿರ್ಧಾರ, ಗುಜರಾತ್ ಮಾದರಿಯೇ ಸೋಲಿಗೆ ಕಾರಣ, ಮೀಸಲಾತಿ ಪರಿಷ್ಕರಣೆಯಿಂದ ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು ಎಂದು ಟಿವಿ9ಗೆ ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳು ನಮ್ಮನ್ನು ಹಾಳುಮಾಡಿದವು. ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಲ್ಲಿ ಜಾತಿ ಸಮೀಕರಣ ಆಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಮುದಾಯಕ್ಕೆ ಮಲ್ಲಿಕಾರ್ಜುನ ಖರ್ಗೆ, ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ, ವಾಲ್ಮೀಕಿ ಸಮಾಜಕ್ಕೆ ಸತೀಶ್ ಜಾರಕಿಹೊಳಿ ಇದ್ದಾರೆ. ಭಾರತೀಯ ಜನತಾ ಪಕ್ಷದಲ್ಲಿ ಇಂತಹ ಪ್ಲ್ಯಾನ್ ಮಾಡಲೇ ಇಲ್ಲ. ಅನ್ನಭಾಗ್ಯ ಅಕ್ಕಿ 5 ಕೆಜಿಗೆ ಸೀಮಿತಗೊಳಿಸಿದ್ದರಿಂದ ಬಿಜೆಪಿ ಸೋತಿದೆ. ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯಿತು ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪರನ್ನು ಹಿಂದೆ ಸರಿಸಿದ್ದೇ ದೊಡ್ಡ ತಪ್ಪು ಎಂದಿದ್ದಾರೆ.
Karnataka CM Race Live: ವೈಎಸ್ವಿ ದತ್ತಾರಿಂದ ಪ್ರಾಯಶ್ಚಿತ್ತ ಪಾದಯಾತ್ರೆ
ಚಿಕ್ಕಮಗಳೂರು: ಕಡೂರು ಕ್ಷೇತ್ರದಲ್ಲಿ ಸೋತ ಜೆಡಿಎಸ್ನ ವೈಎಸ್ವಿ ದತ್ತಾ ಅವರು ಪ್ರಾಯಶ್ಚಿತ್ತ ಪಾದಯಾತ್ರೆ ನಡೆಸಲಿದ್ದಾರೆ. ಜೂನ್ 24ರಿಂದ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಪಾದಯಾತ್ರೆ ಆರಂಭಿಸಿ ಕ್ಷಮೆಯಾಚನೆ ಮಾಡುವುದಾಗಿ ಪ್ರಜ್ವಲ್ ರೇವಣ್ಣ ನೇತೃತ್ವದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ. ನಾನು ಮಾಡಿರುವ ತಪ್ಪುಗಳಿಗಾಗಿ ಮತದಾರರು ಸೋಲಿನ ಶಿಕ್ಷೆ ನೀಡಿದ್ದಾರೆ ಎಂದಿದ್ದಾರೆ.
Karnataka CM Race Live: ಸಿದ್ದರಾಮಯ್ಯಗೆ ಎಐಸಿಸಿ ಕಚೇರಿಯಿಂದ ಬುಲಾವ್
ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಹೈಕಮಾಂಡ್, ಇದೀಗ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದೆ. ಸಂಜೆ 6 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಬರುವಂತೆ ಸೂಚನೆ ನೀಡಲಾಗಿದೆ. ಇವರ ಜೊತೆಗಿನ ಮಾತುಕತೆ ನಂತರ ಡಿಕೆ ಶಿವಕುಮಾರ್ ಅವರನ್ನು ಕರೆದು ಮಾತನಾಡಿಸಲಿದ್ದಾರೆ.
Karnataka CM Race Live: ಆತ್ಮಾವಲೋಕನ ಸಭೆಯಲ್ಲಿ ಕೊಪ್ಪಳ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುಳಾ ಕರಡಿ ಕಣ್ಣೀರು
ಆತ್ಮಾವಲೋಕನ ಸಭೆಯಲ್ಲಿ ಕೊಪ್ಪಳ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುಳಾ ಕರಡಿ ಕಣ್ಣೀರು ಹಾಕಿದರು. ಚುನಾವಣೆಯಲ್ಲಿ ಸೋಲು ಹಿನ್ನೆಲೆ ನಡೆದಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಮಾವನವರು 40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಕುಟುಂಬಕ್ಕಾಗಿ ಸಂಗಣ್ಣ ಒಂದು ದಿನವೂ ಸಮಯ ನೀಡಿಲ್ಲ. ಮಾವನವರ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಇದು ನನ್ನ ಸೋಲಲ್ಲ, ನನ್ನ ಗೆಲುವಿನ ಹಾದಿ ಇಂದಿನಿಂದ ಶುರುವಾಗಿದೆ. ಪ್ರತಿಯೊಬ್ಬರೂ ನನಗೆ ಚುನಾವಣೆಯಲ್ಲಿ ಸಹಕಾರ ನೀಡಿದ್ದಾರೆ ಎಂದರು.
Karnataka CM Race Live: ಮೊದಲು ಎಐಸಿಸಿ ಅಧ್ಯಕ್ಷರನ್ನ ನಾನು ಭೇಟಿ ಆಗುತ್ತೇನೆ: ಡಿಕೆಶಿ
ದೆಹಲಿ: ಮೊದಲು ಎಐಸಿಸಿ ಅಧ್ಯಕ್ಷರನ್ನ ನಾನು ಭೇಟಿ ಆಗುತ್ತೇನೆ. ಎಲ್ಲಾ ನಾಯಕರನ್ನು ಭೇಟಿಯಾಗುತ್ತೇನೆ. ಕಾಂಗ್ರೆಸ್ ಪಕ್ಷ ನನ್ನ ತಾಯಿ ಇದ್ದ ಹಾಗೆ, ಹೈಕಮಾಂಡ್ ಇದೆ, 135 ಶಾಸಕರು ಇದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ.
Karnataka CM Race Live: ಸಿದ್ದರಾಮಯ್ಯರನ್ನೇ ಸಿಎಂ ಮಾಡುವಂತೆ ಬೆಂಬಲಿಗರ ಒತ್ತಾಯ
ಸಿದ್ದರಾಮಯ್ಯರನ್ನೇ ಸಿಎಂ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯರ ಶ್ರಮವೂ ಇದೆ ಎಂದು ಅಭಿಮಾನಿಗಳು ಪ್ರತಿಪಾದಿಸುತ್ತಿದ್ದಾರೆ. ಪ್ರಚಾರದ ವೇಳೆ ಹೆಲಿಕಾಪ್ಟರ್ನಲ್ಲೇ ಸಿದ್ದರಾಮಯ್ಯ ಭೋಜನ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಮಾಡಲಾಗಿದೆ.
Karnataka CM Race Live: ಡಿಕೆಶಿ ಸಿಎಂ ಮಾಡುವಂತೆ ಖರ್ಗೆಗೆ ಪತ್ರ ಬರೆದ ಆಪ್ತ
ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿಕೆಶಿ ಆಪ್ತ ಜಿ.ಸಿ.ರಾಜು ಪತ್ರ ಬರೆದಿದ್ದಾರೆ. ಇ-ಮೇಲ್ ಮೂಲಕ ಎಐಸಿಸಿ ಅಧ್ಯಕ್ಷ ಖರ್ಗೆಗೆ ಪತ್ರ ರವಾನಿಸಿದ್ದಾರೆ. ಬೆವರು ಸುರಿಸಿ ಪಕ್ಷವನ್ನು ಕಟ್ಟಿದವರಿಗೆ ಅವಕಾಶ ಮಾಡಿಕೊಡಬೇಕು. ಯಾವುದೇ ಕಷ್ಟಪಡದವರು ಪದೇಪದೆ ಅಧಿಕಾರ ಬೇಕೆಂದು ಹೇಳಿದರೆ ನಿಷ್ಠಾವಂತ ಕಾರ್ಯಕರ್ತರು ಯಾಕೆ ಕಷ್ಟ ಪಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಿ.ಕೆ.ಶಿವಕುಮಾರ್ ಊಟ, ನಿದ್ದೆ ಬಿಟ್ಟು ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
Karnataka CM Race Live: ಕಾಂಗ್ರೆಸ್ನವರದ್ದು ಚೈನಾ ಬಜಾರ್ ಗ್ಯಾರಂಟಿ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಕಾಂಗ್ರೆಸ್ನವರದ್ದು ಚೈನಾ ಬಜಾರ್ ಗ್ಯಾರಂಟಿ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಸರ್ಕಾರ ರಚನೆಗೂ ಮುನ್ನವೇ ಗ್ಯಾರಂಟಿ ಬಗ್ಗೆ ಅಪಸ್ವರ ಶುರುವಾಗಿದೆ. ಹಲವೆಡೆ 200 ಯುನಿಟ್ ವಿದ್ಯುತ್ ಬಿಲ್ ಕಟ್ಟಲ್ಲ ಅಂತಿದ್ದಾರೆ. ತೆರಿಗೆ ಕಟ್ಟುವವರಿಗೆ ಗ್ಯಾರಂಟಿ ಅನ್ವಯ ಆಗಲ್ಲ ಅಂತಾ ಡಾ.ಜಿ.ಪರಮೇಶ್ವರ್ ಹಾಗೂ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಡೆಲ್ಲಿ ಮಾಲ್ ಹಾಗೇ, ಅದು ಯಾವುದೇ ಉಪಯೋಗಕ್ಕೆ ಬರಲ್ಲ. ಕಾಂಗ್ರೆಸ್ನದ್ದು ಸುಳ್ಳು ಭರವಸೆ ಅಂತ ಸ್ಪಷ್ಟವಾಗಿದೆ ಎಂದರು.
Karnataka CM Race Live: ಸಂಸದ ಡಿಕೆ ಸುರೇಶ್ ನಿವಾಸದಿಂದ ತೆರಳಿದ ಡಿಕೆಶಿ
ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿರುವ ಸಂಸದ ಡಿ.ಕೆ.ಸುರೇಶ್ ಅವರ ನಿವಾಸದಿಂದ ತೆರಳಿದ್ದಾರೆ. 10ಕ್ಕೂ ಹೆಚ್ಚು ಶಾಸಕರ ಜೊತೆ ಕೆಪಿಸಿಸಿ ಅಧ್ಯಕ್ಷ ಮಾತುಕತೆ ನಡೆಸಿ ತೆರಳಿದ್ದಾರೆ. ಹೈಕಮಾಂಡ್ ಭೇಟಿಗೂ ಮುನ್ನ ಶಾಸಕರ ಸಭೆ ನಡೆಸಿದ್ದಾರೆ. ಸದ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರೆಗಾಗಿ ಕಾಯುತ್ತಿದ್ದಾರೆ.
Karnataka CM Race Live: ಸಿಎಂ ಆಯ್ಕೆ ವಿಚಾರವಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ: ಸಲೀಂ ಅಹ್ಮದ್
ಸಿಎಂ ವಿಚಾರವಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ 24 ಗಂಟೆಯಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ದೆಹಲಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಕಳೆದ 3 ವರ್ಷದಿಂದ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಶ್ರಮಿಸಿದ್ದಾರೆ. ಇವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ಚರ್ಚೆ ನಡೆದಿದೆ. ಸಿಎಂ ಆಯ್ಕೆ ವಿಚಾರ ಸುಸೂತ್ರವಾಗಿ ಬಗೆಹರಿಯಲಿದೆ ಎಂದರು.
Karnataka CM Race Live: ಪಕ್ಷವನ್ನು ತನ್ನ ಹತೋಟಿಗೆ ತರಲು ಬಿಎಲ್ ಸಂತೋಷ್ ಯತ್ನ: ಶೆಟ್ಟರ್ ಆರೋಪ
ಬಿಎಲ್ ಸಂತೋಷ್ ಅವರು ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದಲ್ಲದೆ, ನನ್ನನ್ನು ಟಾರ್ಗೆಟ್ ಮಾಡಿದ್ದರು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ನಮ್ಮ ಕಡೆ ಬಂದವರನ್ನು ಶೆಟ್ಟರ್ ಸೋಲಿಸಿ ಅಂತ ಪ್ರಚಾರ ಮಾಡಿದರು. ನನ್ನನ್ನು ಟಾರ್ಗೆಟ್ ಮಾಡಿ ಬಿಜೆಪಿಯವರು ಸೋಲಿಸಿದರು. ಬಿಜೆಪಿಯ ಇವತ್ತಿನ ಪರಿಸ್ಥಿತಿಗೆ ಕೆಲವರ ದುರಹಂಕಾರವೇ ಕಾರಣ. ಅನೇಕರಿಗೆ ದುರಹಂಕಾರ ಬಂದಿದೆ, ಹೀಗಾಗಿ ಪಕ್ಷಕ್ಕೆ ಈ ಗತಿ ಬಂದಿದೆ ಎಂದರು.
Karnataka CM Race Live: ಕಡೂರು ಕ್ಷೇತ್ರದಲ್ಲಿ YSV ದತ್ತಾ ಸೋಲು, ಪ್ರಜ್ವಲ್ಗೆ ಟೆಂಕ್ಶನ್
ಚಿಕ್ಕಮಗಳೂರು: ಕಡೂರು ಕ್ಷೇತ್ರದಲ್ಲಿ ವೈಎಸ್ವಿ ದತ್ತಾ ಸೋಲು ಅನುಭವಿಸಿದ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ಅವರು ಕಡೂರು ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದಿದ್ದಾರೆ. ದತ್ತಾ ನಿವಾಸದಲ್ಲಿ ಈ ಸಭೆ ನಡೆಸಿದ್ದು, ಈಗಿಂದ ಈಗಲೇ ಲೋಕಸಭಾ ಚುನಾವಣಾ ತಯಾರಿಕೆಗೆ ಕರೆ ನೀಡಿದ್ದಾರೆ. ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಪ್ರಜ್ವಲ್ ರಾಜಕೀಯ ದೃಷ್ಟಿಯಿಂದ ಕಡೂರು ಕ್ಷೇತ್ರ ಮಹತ್ವದ್ದಾಗಿದೆ.
Karnataka CM Race Live: ಉಚಿತ ಭಾಗ್ಯಗಳಿಗೆ ಷರತ್ತು ವಿಧಿಸುವುದು ಸರಿಯಲ್ಲ: ಅಶ್ವತ್ಥನಾರಾಯಣ
ತಾನು ಜನರಿಗೆ ನೀಡಿದ ಗ್ಯಾರಂಟಿಗಳಿಗೆ ಇದೀಗ ಷರತ್ತು ವಿಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ, ಎಲ್ಲರಿಗೂ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಈಗ ಕೊಟ್ಟ ಭರವಸೆಗಳಿಗೆ ಷರತ್ತು ಅನ್ವಯ ಅಂತ ಹೇಳುತ್ತಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಬೇಕು ಎಂದು ಆಗ್ರಹಿಸಿದರು. ಸ್ಪಷ್ಟತೆಯಿಂದ ಎಲ್ಲರಿಗೂ ಮಾತು ಕೊಟ್ಟಿದ್ದಾರೆ. 200 ಯುನಿಟ್ ಕರೆಂಟ್ ಫ್ರೀ, 2000 ರೂ. ಫ್ರೀ, ನಿರುದ್ಯೋಗ ಭತ್ಯೆ ಅಂತ ಹೇಳಿದ್ದು ಎಲ್ಲರಿಗೂ ಕೊಡಲಿ. ಎಂದರು. ಹಳ್ಳಿಗಳಲ್ಲಿ ಕರೆಂಟ್ ಬಿಲ್ ಕಟ್ಟಲು ನಿರಾಕರಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹೇಳಿರುವುದನ್ನು ಜನ ಪಾಲಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರೆಂಟ್ ಬಿಲ್ ಕಟ್ಟುವಂತಿಲ್ಲ ಅಂತ ಹೇಳಿದ್ದರು, ಅದಕ್ಕೆ ಕಟ್ಟುತ್ತಿಲ್ಲ. ನಾವು ಇದನ್ನು ಅಸ್ತ್ರ ಮಾಡಿಕೊಂಡಿಲ್ಲ ಎಂದರು.
Karnataka CM Race Live: ಖರ್ಗೆ ನಿವಾಸದಲ್ಲಿನ ಸಭೆ ಅಂತ್ಯ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆಯುತ್ತಿದ್ದ ಸಭೆ ಅಂತ್ಯಗೊಂಡಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ನಾಯಕರ ಮಾತುಕತೆ ನಡೆದಿದೆ. ರಾಹುಲ್ ಗಾಂಧಿ, ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಅವರು ಸಭೆ ಮುಗಿಸಿ ತೆರಳಿದ್ದಾರೆ.
Karnataka CM Race Live: ಸೋಲಿಗೆ ಕಾರಣ ಕಂಡುಕೊಂಡ ಬಿಜೆಪಿ
ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಹಿನ್ನೆಲೆ ಸೋಲಿಗೆ ಒಂದೊಂದೇ ಕಾರಣ ಹುಡುಕುವಲ್ಲಿ ಬಿಜೆಪಿ ಮಗ್ನವಾಗಿದೆ. ಸೋಲಿಗೆ ಕೆಲವು ನಿಖರ ಕಾರಣಗಳನ್ನು ಹುಡುಕಿರುವ ಬಿಜೆಪಿಗೆ ಪ್ರಮುಖ ಕಾರಣವಾಗಿ ತಿಳಿದುಬಂದಿದ್ದೇನೆಂದರೆ, ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕಾತಿಯಲ್ಲಿನ ಬದಲಾವಣೆ. ಇದುವೇ ಸೋಲಿಗೆ ಪ್ರಧಾನ ಕಾರಣ ಎಂಬ ಮಾಹಿತಿ ಪಡೆದಿದೆ. ಅಯಾಯ ಜಿಲ್ಲೆಗಳ ಸಚಿವರನ್ನು ಬಿಟ್ಟು ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿ ಮಾಡಿ ಪ್ರಯೋಗ ಮಾಡಿದ್ದ ಬಿಜೆಪಿಗೆ ಚುನಾವಣೆಯಲ್ಲಿ ಬಿಸಿ ತುಪ್ಪುವಾಯಿತು. ಅಲ್ಲದೆ, ಉಸ್ತುವಾರಿ ಸಚಿವರು ಜಿಲ್ಲೆಗಳಿಂದ ನಿಖರ ಮಾಹಿತಿ ತೆಗೆಯುವಲ್ಲಿ ವಿಫಲರಾಗಿದ್ದಲ್ಲದೆ, ತಮ್ಮ ಸ್ವಂತ ಜಿಲ್ಲೆ ಅಲ್ಲ ಎಂಬ ಕಾರಣಕ್ಕೆ ಆಸಕ್ತಿ ತೋರಿಸದೇ ಇದ್ದಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದು ತಿಳಿದುಬಂದಿದೆ.
Karnataka CM Race Live: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು: ಸಿದ್ದೇಗೌಡ
ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು, ಆಗುತ್ತಾರೆ ಎಂದು ಟಿವಿ9ಗೆ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿದ್ದಾರೆ. ಸಿದ್ದರಾಮಯ್ಯ ವರುಣದಲ್ಲಿ ಗೆಲ್ಲುತ್ತಾರೆ ಅಂತಾ ಹೇಳಿದ್ದೆ. ಗೆದ್ದಿದ್ದಾರೆ. ಸಿಎಂ ಆಗಿ ಊರಜಾತ್ರೆಯಲ್ಲಿ ವೀರ ಕುಣಿತ ಮಾಡುತ್ತಾರೆ. ಸಿದ್ದರಾಮಯ್ಯ ಹಿಡಿದ ಕೆಲಸ ಮಾಡುವವರೆಗೆ ಬಿಡುವುದಿಲ್ಲ. ಮುಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಅವರೇ ಮುಂದೆ ನಿಂತು ಸಿಎಂ ಮಾಡುತ್ತಾರೆ. ಈ ಬಾರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ ಎಂದರು.
Karnataka CM Race Live: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ
ದೆಹಲಿಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆನಿವಾಸದಲ್ಲಿ ಸಭೆ ನಡೆಯಲಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಭಾಗಿಯಾಗಲಿದ್ದಾರೆ. ಕರ್ನಾಟಕದ ಇಬ್ಬರು ಉಸ್ತುವಾರಿಗಳಾದ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭಾಗಿ ಆಗಲಿದ್ದಾರೆ.
Karnataka CM Race Live: ಕಾಂಗ್ರೆಸ್‌ಗೆ ಜನರ ಹಿತ ಬೇಕಾಗಿಲ್ಲ, ಅಧಿಕಾರ ಮಾತ್ರ ಬೇಕು: ಕಟೀಲ್
ಹೊಸಕೋಟೆಯನ್ನ ಮಿನಿ ಬಿಹಾರ ಮಾಡ್ತಿದ್ದಾರೆ: ಕಟೀಲ್
ದಾವಣಗೆರೆ: ಹೊಸಕೋಟೆಯನ್ನ ಮಿನಿ ಬಿಹಾರ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ಗೂಂಡಾ ಸಾಮ್ರಾಜ್ಯ ಮಾಡುತ್ತಿದ್ದಾರೆ. ಒಂದು ತಾಲಿಬಾನ್ ಪಡೆ ಎದ್ದು ನಿಂತಿರುವುದನ್ನು ನೋಡಿದಾಗ ಕಾಂಗ್ರೆಸ್ ಮನಸ್ಥಿತಿ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇವತ್ತು ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆ ನಾನು ಮೊದಲೇ ಹೇಳಿದ್ದೇನೆ. ಯಾರು ಮುಖ್ಯಮಂತ್ರಿ ಯಾಗಬೇಕು ಅನ್ನೋ ಕಿತ್ತಾಟ ಅವರನ್ನ ಸಮಾಧಾನ ಮಾಡುವುದೆ ದೊಡ್ಡ ಕೆಲಸ. ರಾಜ್ಯದಲ್ಲಿ ಅರಾಜಕತೆ ಈಗಾಗಲೇ ಪ್ರಾರಂಭವಾಗಿದೆ. ಇವರಿಗೆ ಜನರ ಹಿತ ಬೇಕಾಗಿಲ್ಲ ಕೇವಲ ಅಧಿಕಾರ ಮಾತ್ರ ಬೇಕು. ಅಂಬೇಡ್ಕರ್ ರಂತಹ ಶ್ರೇಷ್ಟ ವ್ಯಕ್ತಿಯ ವಿಗ್ರಹಕ್ಕೆ ಬೆಂಕಿ ಹಚ್ಚಿದ್ದಾರೆ. ಇವರ ಮಾನಸಿಕತೆ ಇದರಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ದಲಿತ ವಿರೋಧಿ ಕಾಂಗ್ರೆಸ್ ದಲಿತರನ್ನ ದಮನ ಮಾಡಬೇಕು. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಯಾಗಿದೆ, ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು ಎಂದರು.
Karnataka CM Race Live: ಸಿದ್ದರಾಮಯ್ಯ ಸಿಎಂ ಆಗಲೆಂದು ಅಭಿಮಾನಿಯಿಂದ ದೀರ್ಘ ದಂಡ ನಮಸ್ಕಾರ
ಸಿದ್ದರಾಮಯ್ಯ ಸಿಎಂ ಆಗಲೆಂದು ಅಭಿಮಾನಿ 35 ಕಿಮೀ ದೀರ್ಘ ದಂಡ ನಮಸ್ಕಾರ ಮಾಡಿದ್ದಾರೆ. ಮನ್ನಿಕಟ್ಟಿ ಗ್ರಾಮದಿಂದ ಕೂಡಲಸಂಗಮದವರೆಗೆ ಸುರೇಶ್ ವಾಲಿಕಾರ ಎಂಬ ಅಭಿಮಾನಿ ದೀರ್ಘ ದಂಡ ನಮಸ್ಕಾರ ಮಾಡಿದ್ದಾರೆ. ಬಾಗಲಕೋಟೆ ತಾಲೂಕಿನ ಮನ್ನಿಕಟ್ಟಿ ಗ್ರಾಮದ ನಿವಾಸಿ ದೀರ್ಘ ದಂಡ ಹಾಕಿ ಕೂಡಲಸಂಗಮದ ಸಂಗಮನಾಥನಿಗೆ ಪೂಜೆ ಸಲ್ಲಿಸಿದ್ದಾರೆ.
Karnataka CM Race Live: ಮುಂದೆ ಸೋಮಣ್ಣಗೆ ಒಳ್ಳೆಯ ಅವಕಾಶ ಸಿಗುತ್ತೆ -ವಿ.ಸೋಮಣ್ಣ
ಪಕ್ಷದ ಇಚ್ಛೆಯಿಂದ ಸೋಮಣ್ಣ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಚಾಮರಾಜನಗರ, ವರುಣದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಮುಂದೆ ಸೋಮಣ್ಣಗೆ ಒಳ್ಳೆಯ ಅವಕಾಶ ಸಿಗುತ್ತೆ ಎಂದು ಬೆಂಗಳೂರಿನಲ್ಲಿ ಹಂಗಾಮಿ ಮುಖ್ಯಮಂತ್ರಿ ಬೊಮ್ಮಾಯಿ ಸೋವಣ್ಣ ಪರವಾಗಿ ಮಾತನಾಡಿದರು. ನಮ್ಮ ವರಿಷ್ಠರು ಕೂಡ ವಿ.ಸೋಮಣ್ಣ ಜೊತೆ ಮಾತಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆಯಲು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಬಿಜೆಪಿ ಶಾಸಕಾಂಗ ಸಭೆ ಕರೆಯಬಹುದು. ಬಿಜೆಪಿ ರಾಜ್ಯ ಘಟಕ ಅಧ್ಯಕ್ಷರ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎಂದರು.
Karnataka CM Race Live: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು, ಆಗುತ್ತಾರೆ -ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೇಬೇಕು, ಆಗುತ್ತಾರೆ ಎಂದು ಟಿವಿ9ಗೆ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ವರುಣದಲ್ಲಿ ಗೆಲ್ಲುತ್ತಾರೆ ಅಂತಾ ಹೇಳಿದ್ದೆ. ಈಗ ವರುಣದಲ್ಲಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಸಿಎಂ ಆಗಿ ಊರಜಾತ್ರೆಯಲ್ಲಿ ವೀರ ಕುಣಿತ ಮಾಡುತ್ತಾರೆ. ಸಿದ್ದರಾಮಯ್ಯ ಹಿಡಿದ ಕೆಲಸ ಮಾಡುವವರೆಗೆ ಬಿಡುವುದಿಲ್ಲ. ಮುಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ಅವರೇ ಮುಂದೆ ನಿಂತು ಸಿಎಂ ಮಾಡುತ್ತಾರೆ. ಈ ಬಾರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
Karnataka CM Race Live: ಕೆ.ಎನ್ ರಾಜಣ್ಣ ಸಚಿವರಾದರೆ ಮಾತ್ರ ಕಾಲಿಗೆ ಚಪ್ಪಲಿ ಹಾಕುವೆ, ಅಭಿಮಾನಿಯಿಂದ ಶಪಥ
ಕಲ್ಪತರು ನಾಡು ತುಮಕೂರಿನಲ್ಲಿ ಅಭಿಮಾನಿ ಪರಾಕಾಷ್ಠೆ ಮೆರೆದಿದ್ದಾನೆ. ತುಮಕೂರಿನ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್ ರಾಜಣ್ಣ ಸಚಿವರಾದರೆ ಮಾತ್ರ ಕಾಲಿಗೆ ಚಪ್ಪಲಿ ಹಾಕುವೆ ಎಂದು ಶಪಧ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಕಾಲಿಗೆ ಚಪ್ಪಲಿ ಹಾಕದೆ ಮಧುಗಿರಿ ತಾಲೂಕಿನ ಕೋಟಗಾರ್ಲಹಳ್ಳಿಯ ಗ್ರಾ.ಪಂ ಸದಸ್ಯ ವೀರಸಿಂಹ ಎಂಬುವವರು ಓಡಾಡಿಕೊಂಡಿದ್ದಾರೆ. ಸಚಿವ ಸ್ಥಾನ ಸಿಗದಿದ್ದರೆ ಕಾಲಿಗೆ ಚಪ್ಪಲಿ ಧರಿಸದೆ ಮುಂದುವರಿಯುವೆ ಎಂದಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಮನೆಯ ದೇವರ ಮುಂದೆ ವೀರಸಿಂಹ ಪ್ರಮಾಣ ಮಾಡಿದ್ದರು.
Karnataka CM Race Live: ಜೆಡಿಎಸ್ ಪಕ್ಷಕ್ಕೆ ಕಡಿಮೆ ಸ್ಥಾನ ಬರೋಕೆ ಕಾರಣವೇನೆಂದು ತಿಳಿಸಿದ ಹೆಚ್ಡಿ ರೇವಣ್ಣ
ಚುನಾವಣಾ ಫಲಿತಾಂಶದ ಬಳಿಕ ಮೊದಲ ಮಾಧ್ಯಮಗೋಷ್ಠಿ ಕರೆದ ಜೆಡಿಎಸ್ ಶಾಸಕ ರೇವಣ್ಣ, ಜಿಲ್ಲೆಯಲ್ಲಿ ನಮ್ಮ ಪಕ್ಷದ ನಾಲ್ವರು ಗೆದ್ದಿದ್ದೇವೆ, ಮೂವರು ಸೋತಿದ್ದಾರೆ. ನಮಗೆ ಮತ ನೀಡಿದ ಎಲ್ಲರಿಗು ಧನ್ಯವಾದ. ಈ ಚುನಾವಣೆ ಫಲಿತಾಂಶ ವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುತ್ತೇವೆ ಎಂದರು.
Karnataka CM Race Live: ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದ ಮಾಜಿ ಸಚಿವ ರಮಾನಾಥ್ ರೈ
ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಸೋತರೂ ಪಕ್ಷದ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುತ್ತೇನೆ. ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟು ರಾಜ್ಯದ ಜನ ಮತ ಕೊಟ್ಟಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಸಣ್ಣ ಹಿನ್ನಡೆ ಆಗಿದೆ ಎಂದು ಮಂಗಳೂರು ನಗರದಲ್ಲಿ ಮಾಜಿ ಸಚಿವ ರಮಾನಾಥ್ ರೈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಯಾವತ್ತೂ ಸರ್ಕಾರ ರಚಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುತ್ತೆ. ಸಿಎಂ ಪ್ರಮಾಣ ವಚನದ ಬಳಿಕ ಗ್ಯಾರಂಟಿ ಅನುಷ್ಠಾನ ಆಗಲಿದೆ. ನನ್ನ ಸೋಲಿನ ಅವಲೋಕನ ಮಾಡಿದ್ದೇನೆ. ಮುಂದೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ. ಮುಖ್ಯಮಂತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
Karnataka CM Race Live: ಸೋತ ಬಳಿಕ ವಿಚಿತ್ರವಾಗಿ ವರ್ತಿಸುತ್ತಿರುವ ರೇಣುಕಾಚಾರ್ಯ
ಸೋತ ಮೇಲೆ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ವಿಚಿತ್ರವಾಗಿ ವರ್ತಿಸುತ್ತಿದ್ದಾರಂತೆ. ಸೋತ ದಿನವೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಎಂದು ಘೋಷಣೆ ಮಾಡಿದ್ದರು. ಬಳಿಕ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈಗ ದಿನ ಬೆಳಗಾದ್ರೆ ಕ್ಷೇತ್ರದಲ್ಲಿ ತಾವು ಆರಂಭಿಸಿದ ಕಾಮಗಾರಿ ವೀಕ್ಷಣೆ ಆರಂಭಿಸಿದ್ದಾರೆ. 14 ಕೋಟಿ ಮೆಚ್ಚದ ಹಿರೇಕಲ್ಮಠ ಕೆರೆಯ ಪುಟ್ ಪಾತ್, ಸರ್ಕಾರಿ ಪದವಿ ಕಾಲೇಜ್ ಗೇಟ್, ತುಂಗಭದ್ರ ಶುದ್ಧ ಕುಡಿಯುವ ನೀರಿನ ಘಟಕ, ಪ್ರವಾಸಿ ಮಂದಿರ ಹೀಗೆ ಹತ್ತು ಹಲವಾರು ಕಾಮಗಾರಿಗಳನ್ನ ಬೆಂಬಲಿಗರಿಗೆ ತೊರಿಸುತ್ತ ಸುತ್ತಾಡುತ್ತಿದ್ದಾರೆ.
Karnataka CM Race Live: ಪಕ್ಷದ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ -ಪ್ರಹ್ಲಾದ್ ಜೋಶಿ
ಈ ಚುನಾವಣೆ ಬಿಜೆಪಿ ಪಾಲಿಗೆ ನಿರಾಶದಾಯಕ ಫಲಿತಾಂಶ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೇಸರ ಹೊರ ಹಾಕಿದ್ದಾರೆ. ಪಕ್ಷದ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ಪಕ್ಷದ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ಪಕ್ಷದ ಸೋಲಿಗೆ ಬಿ.ಎಲ್.ಸಂತೋಷ್ ಕಾರಣ ಎಂಬ ಆರೋಪವಿದೆ. ಸೋಲಿನ ಹೊಣೆ ರಾಜ್ಯ ಬಿಜೆಪಿ ಘಟಕದ್ದು. ಎಲ್ಲಿ ಏನು ತಪ್ಪಾಗಿದೆ ಅಂತ ನಾವು ವಿಮರ್ಶೆ ಮಾಡುತ್ತೇವೆ. ವಿಧಾನಸಭೆ ಚುನಾವಣೆ ಬೇರೆ, ಲೋಕಸಭೆ ಚುನಾವಣೆ ಬೇರೆ. ಬೇರೆ ಬೇರೆ ವಿಚಾರಗಳಲ್ಲಿ ಈ 2 ಚುನಾವಣೆಗಳು ನಡೆಯುತ್ತವೆ. ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ 330ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ ಎಂದರು.
Karnataka CM Race Live: ಸತೀಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವಂತೆ ಆಸೀಫ್ ಸೇಠ್ ಒತ್ತಾಯ
ಸತೀಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬೆಳಗಾವಿ ಉತ್ತರ ಕ್ಷೇತ್ರದ ‘ಕೈ’ ಶಾಸಕ ಆಸೀಫ್ ಸೇಠ್ ಒತ್ತಾಯಿಸಿದ್ದಾರೆ. ಉ-ಕ ಭಾಗದಲ್ಲಿ ಸತೀಶ್ ನಾಯಕತ್ವ ಇದೆ. ಜಮೀರ್ಗೆ ಡಿಸಿಎಂ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಆದರೆ ಸತೀಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.
Karnataka CM Race Live: ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು
ಜಗದೀಶ್ ಶೆಟ್ಟರ್ ನಿವಾಸಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಡಾ ಜಿ ಪರಮೇಶ್ವರ ಹಾಗೂ ದಿನೇಶ್ ಗುಂಡೂರಾವ್ ಅವರು ಸದಾಶಿವನಗರದಲ್ಲಿರುವ ಶೆಟ್ಟರ್ ನಿವಾಸಕ್ಕೆ ಆಗಮಿಸಿ ಸೋತರು ಪಕ್ಷಕ್ಕೆ ನೀಡಿದ ಕೊಡುಗೆ ಸ್ಮರಿಸಿ ಧನ್ಯವಾದ ತಿಳಿಸಿದ್ದಾರೆ.
Karnataka CM Race Live: ರಾಮಲಿಂಗಾರೆಡ್ಡಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಅಭಿಮಾನಿಗಳ ಒತ್ತಾಯ
ರೆಡ್ಡಿ ಸಮುದಾಯದ ರಾಮಲಿಂಗಾರೆಡ್ಡಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಕರ್ನಾಟಕ ರೆಡ್ಡಿ ಜನಸಂಘದ ನಿರ್ದೇಶಕ ರಾಮಚಂದ್ರರೆಡ್ಡಿ ಆಗ್ರಹಿಸಿದ್ದಾರೆ. ರಾಮಲಿಂಗಾರೆಡ್ಡಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಇದೆ. ಸಿದ್ದರಾಮಯ್ಯ, ಡಿಕೆಶಿಗಿಂತಲೂ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಬಿಎಸ್ವೈ ಇದ್ದಾಗ ರೆಡ್ಡಿ ಸಮಾಜದ ಮೂವರನ್ನು ಮಂತ್ರಿ ಮಾಡ್ತಿದ್ದರು. ಕಳೆದ ಬಾರಿ ಒಬ್ಬರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬಿಜೆಪಿ ಅನುಭವಿಸಿದೆ. ಹೀಗಾಗಿ ರಾಮಲಿಂಗಾರೆಡ್ಡಿಯನ್ನು ಉಪಮುಖ್ಯಮಂತ್ರಿ ಮಾಡಲೇಬೇಕು. ಇಬ್ಬರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ರಾಮಚಂದ್ರರೆಡ್ಡಿ ಆಗ್ರಹಿಸಿದ್ದಾರೆ. ಈಗಾಗಲೇ ಎಐಸಿಸಿಗೆ ನಾವು ಪತ್ರ ಬರೆದು ಆಗ್ರಹ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಒಪ್ಪದಿದ್ರೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ರೆಡ್ಡಿ ಸಮುದಾಯದಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ.
Karnataka CM Race Live: ಶಕ್ತಿ ದೇವತೆ ಕೋಲಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಅಭಿಮಾನಿಗಳು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಮಾಡುವಂತೆ ಬೇಡಿ ಶಕ್ತಿ ದೇವತೆ ಕೋಲಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. 101 ತೆಂಗಿನಕಾಯಿ ಹೊಡೆದು ಡಿಕೆ ಶಿವಕುಮಾರ್ ಅಭಿಮಾನಿಗಳು ಹರಕೆ ಹೊತ್ತುಕೊಂಡಿದ್ದಾರೆ. ಕೋಲಾರ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಹರಕೆ ಕಟ್ಟಿಕೊಳ್ಳಲಾಗಿದೆ. ಡಿಕೆಶಿ ಹುಟ್ಟು ಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹರಕೆ ಕಟ್ಟಿಕೊಂಡಿದ್ದಾರೆ.
Karnataka CM Race Live: ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ -ಕೆ.ಎನ್.ರಾಜಣ್ಣ
ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ತುಮಕೂರಿನಲ್ಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದಾರೆ. ಮೇ 18ರಂದು ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಬಹುದು. ಹೈಕಮಾಂಡ್ ಒಲವು ಕೂಡ ಸಿದ್ದರಾಮಯ್ಯ ಪರವಾಗಿಯೇ ಇದೆ. ಡಿ.ಕೆ.ಶಿವಕುಮಾರ್ ಕೂಡ ಸಹಕಾರ ಕೊಡುತ್ತಾರೆಂಬ ವಿಶ್ವಾಸವಿದೆ. ಸಿಎಂ ವಿಚಾರ ಇಂದು ಫೈನಲ್ ಆಗಲೇಬೇಕು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಬಹುದು. ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಮೊದಲ ಸಂಪುಟದಲ್ಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ. ನಾನು ಸಚಿವ ಆಗಲೇಬೇಕು, ಸಹಕಾರ ಸಚಿವ ಸ್ಥಾನವೇ ಬೇಕು ಎಂದು ತುಮಕೂರಿನಲ್ಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ರು.
Karnataka CM Race Live: ಸುಸೂತ್ರವಾಗಿ ಮುಖ್ಯಮಂತ್ರಿ ಆಯ್ಕೆ ಆಗಲಿದೆ -ಡಾ. ಜಿ ಪರಮೇಶ್ವರ್
ಸುಸೂತ್ರವಾಗಿ ಮುಖ್ಯಮಂತ್ರಿ ಆಯ್ಕೆ ಆಗಲಿದೆ. ನಮ್ಮ ವರಿಷ್ಠರು ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಸೋನಿಯಾ, ರಾಹುಲ್, ಖರ್ಗೆ ಚರ್ಚೆ ಮಾಡಿ ನಿರ್ಧರಿಸುತ್ತಾರೆ. ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ CM ಸ್ಥಾನ ಕೊಡುವುದು ಪದ್ಧತಿ. ಸಿದ್ದರಾಮಯ್ಯ ಸಿಎಲ್ಪಿ ನಾಯಕರಾಗಿ ಕೆಲಸ ಮಾಡಿದ್ದಾರೆ. ಸಾಮೂಹಿಕ ನಾಯಕತ್ವ ಚುನಾವಣೆಗೆ ಹೋಗಿದ್ದೆವು ಎಂದು ಬೆಂಗಳೂರಿನಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.
Karnataka CM Race Live: ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದ ಗೊರವಪ್ಪ
ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಗೊರವಯ್ಯನವರು ಓರ್ವ ಕಾಂಗ್ರೆಸ್ ಮುಖಂಡನ ಕೈ ಹಿಡಿದು, ನಾವು ಹೇಳಿದ ಕಾರಣಿಕ ನಿಜವಾಗಿದೆ. ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ ಎಂದು ಕಾರಣಿಕ ನುಡಿದಿತ್ತು. ಈಗ ಕಾಂಗ್ರೆಸ್ 120 ಸ್ಥಾನಕ್ಕಿಂತ ಅಧಿಕ ಅಧಿಕಾರಕ್ಕೆ ಬುರವ ಮೂಲಕ ಮೈಲಾರಲಿಂಗನ ಕಾರಣಿಕ ನಿಜವಾಗಿದೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
Karnataka CM Race Live: ತನ್ನ ಶ್ರಮಕ್ಕೆ ಕೂಲಿ ನೀಡುವಂತೆ ಡಿಕೆ ಶಿವಕುಮಾರ್ ಕೇಳುತ್ತಿದ್ದಾರೆ -ಡಿಕೆ ಸುರೇಶ್
ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬುದು ನನ್ನ ಆಸೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ಕಾಂಗ್ರೆಸ್ ಜವಾದ್ದಾರಿ ನೀಡಿದ್ರು. ಸೋನಿಯಾ ಗಾಂಧಿಯವರು ನಮಗೆ ಪಕ್ಷದ ಜವಾಬ್ದಾರಿ ನೀಡಿದ್ರು. ನಿಮ್ಮ ಮೇಲೆ ನಂಬಿಕೆ, ವಿಶ್ವಾಸವಿದೆ ಎಂದು ಹೇಳಿದ್ದರು. ಕೊಟ್ಟ ಜವಾಬ್ದಾರಿಯನ್ನು ಡಿಕೆಶಿ ನೆರವೇರಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು 135 ಸ್ಥಾನವನ್ನು ಗೆಲ್ಲಿಸಿ ನೀಡಿದ್ದಾರೆ. ಹಿಂಸೆ, ಕಿರುಕುಳ, ಅವಮಾನ, ನಿಂದನೆಗಳನ್ನು ಎದುರಿಸಿದ್ದಾರೆ. ಎಲ್ಲಾ ಸವಾಲುಗಳನ್ನು ಎದರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ತನ್ನ ಶ್ರಮಕ್ಕೆ ಕೂಲಿ ನೀಡುವಂತೆ ಡಿ.ಕೆ.ಶಿವಕುಮಾರ್ ಕೇಳುತ್ತಿದ್ದಾರೆ. ಮುಂದಿನ ನಿರ್ಧಾರ ಹೈಕಮಾಂಡ್ ಬಿಟ್ಟಿದ್ದು ಎಂದರು.
Karnataka CM Race Live: ನಮ್ಮ ಸರ್ಕಾರದ ಯೋಜನೆಗಳು 95% ಹಳ್ಳಿಗಳಿಗೆ ತಲುಪಿವೆ -ಶೋಭಾ ಕರದ್ಲಾಂಜೆ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. ನಮ್ಮ ಸರ್ಕಾರದ ಯೋಜನೆಗಳು 95% ಹಳ್ಳಿಗಳಿಗೆ ತಲುಪಿವೆ. ಮುಂದೆ ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಕಾಂಗ್ರೆಸ್ ಪಕ್ಷ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲಿ. ಮುಖ್ಯಮಂತ್ರಿ ಆಯ್ಕೆ ಅವರ ಪಕ್ಷದ ಆಂತರಿಕ ವಿಚಾರ. ಏನೇನು ಭರವಸೆ ಕೊಟ್ಟಿದ್ರೋ ನಮಗೆ ಗೊತ್ತಿಲ್ಲ. ಅವರ ಆಂತರಿಕ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ತಾರೆ. ಬೇರೆ ಬೇರೆ ಕಾರಣಕ್ಕೆ ಖಾಲಿ ಹುದ್ದೆ ತುಂಬಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಖಾಲಿ ಹುದ್ದೆ ತುಂಬಲು ಪ್ರಯತ್ನ ಮಾಡುತ್ತಿದೆ. ಉದ್ಯೋಗ ಮೇಳದ ಮೂಲಕ ಉದ್ಯೋಗ ಕೊಡುವ ಕೆಲಸ ಆಗುತ್ತಿದೆ ಎಂದರು.
Karnataka CM Race Live: ಅಭಿಮಾನಿಗಳು, ಬೆಂಬಲಿಗರ ಕಣ್ಣೀರು ನೋಡಿ ಭಾವುಕರಾದ ಶ್ರೀರಾಮುಲು
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲನುಭವಿಸಿರುವ ಶ್ರೀರಾಮುಲು ಅವರು ಅಭಿಮಾನಿಗಳನ್ನು ಸಮಾಧಾನ ಮಾಡುವ ವೇಳೆ ಭಾವುಕರಾದ್ರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲಿನ ನಂತರ ಮಾಜಿ ಸಚಿವ ಶ್ರೀರಾಮುಲು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಮೋಕಾ ಗ್ರಾಮಕ್ಕೆ ಭೇಟಿ ನೀಡಿದ್ದು ಅಭಿಮಾನಿಗಳು, ಬೆಂಬಲಿಗರ ಕಣ್ಣೀರು ಹಾಕಿದರು. ಆಗ ಅವರನ್ನು ಸಮಾಧಾನಪಡಿಸುವ ವೇಳೆ ಶ್ರೀರಾಮುಲು ಭಾವುಕರಾಗಿದ್ದಾರೆ.
Karnataka CM Race Live: ಜಮೀರ್ ಅಹ್ಮದ್ ಖಾನ್ಗೆ ಡಿಸಿಎಂ ಮಾಡಲು ಒತ್ತಾಯಿಸಿ ಪ್ರತಿಭಟನೆ
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಮುಸ್ಲಿಂ ಸಮಾಜದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಜಮೀರ್ ಅಹ್ಮದ್ ಖಾನ್, ಶಿವರಾಜ ತಂಗಡಗಿ ಭಾವಚಿತ್ರ ಹಿಡಿದು ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಜಮೀರ್ ಅಹ್ಮದ್ ಗೆ ಡಿಸಿಎಂ ಸ್ಥಾನ ನೀಡುವ ಮೂಲಕ ಮುಸ್ಲಿಂ ಸಮಾಜಕ್ಕೆ ನ್ಯಾಯ ಒದಗಿರಿ. ಮೂರು ಬಾರಿ ಶಾಸಕರಾಗಿರುವ ತಂಗಡಗಿಗೆ ಮಂತ್ರಿ ಸ್ಥಾನ ನೀಡಿ ಎಂದು ಆಗ್ರಹಿಸಿದ್ದಾರೆ.
Karnataka CM Race Live: ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಪಟ್ಟು
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಡಿಕೆ ಶಿವಕುಮಾರ್ ಬಿಗಿ ಪಟ್ಟು ಮುಂದುವರಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ಒಂದು ಅವಕಾಶ ಕೊಟ್ಟಿದ್ದಿರಾ. ನನಗೆ ಈ ಬಾರಿ ಅವಕಾಶ ನೀಡಿ ಎಂದಿದ್ದಾರೆ. ನಿನ್ನೆ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಿಕೆಶಿ ಪರವಾಗಿ ಡಿಕೆ ಸುರೇಶ್ ಮಾತುಕತೆ ನಡೆಸಿದ್ದು ಪಕ್ಷ ಕಟ್ಟಿ ಸಂಘಟನೆ ಮಾಡಿದ್ದು ನಾವು. ಚುನಾವಣೆ ಎದುರಿಸಿದ್ದು ನಾವು . ಕಷ್ಟ ಸಹಿಸಿದ್ದು ನಾವು. ಹೀಗಿದ್ದಾಗ ನಮಗೆ ಅವಕಾಶ ಕೊಡಿ ಎಂದು ಡಿಕೆ ಶಿವಕುಮಾರ್ ಬಣ ಒತ್ತಾಯಿಸಿದೆ.
Karnataka CM Race Live: ಪಕ್ಷದ ಸೋಲನ್ನು ನಾವು ಸ್ವೀಕಾರ ಮಾಡಿದ್ದೇವೆ -ಶೋಭಾ ಕರಂದ್ಲಾಜೆ
ಪಕ್ಷದ ಸೋಲನ್ನು ನಾವು ಸ್ವೀಕಾರ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಮುಂದಿನ ದಿನಗಳಲ್ಲಿ ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಆಡಳಿತ ಪಕ್ಷದ ತಪ್ಪುಗಳನ್ನು ಸರಿಮಾಡುವ ಕೆಲಸ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Karnataka CM Race Live: ಡಿಕೆಶಿ ಜೊತೆ ದೆಹಲಿತ್ತ ತೆರಳಿದ ಶಾಸಕ ಹ್ಯಾರಿಸ್ ಮತ್ತು ಬಾಲಕೃಷ್ಣ
ನಮ್ಮ ನಾಯಕರ ಜೊತೆ ದೆಹಲಿಗೆ ತೆರಳುತ್ತಿದ್ದೇನೆ. ರಾಜ್ಯದಲ್ಲಿ ಶ್ರಮಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಶ್ರಮಪಟ್ಟಿದ್ದಕ್ಕೆ ಕೂಲಿಯನ್ನು ಕೇಳ್ತಿದ್ದೇವೆ. ನಾನು, ಡಿಕೆಶಿ ಒಂದೇ ಜಿಲ್ಲೆಯವರು, ಹಾಗಾಗಿ ಅವರ ಪರ ಒಲವು. ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ನಮ್ಮ ಕ್ಷೇತ್ರದ ಜನರಿಗೂ ಸಚಿವರಾಗಲಿ ಅನ್ನೋ ಆಸೆ ಇದೆ. ನನಗೂ ಸಚಿವ ಸ್ಥಾನಬೇಕು ಅನ್ನೋ ಆಸೆಯಿದೆ ಎಂದು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಶಾಸಕ ಬಾಲಕೃಷ್ಣ ಹೇಳಿದರು.
Karnataka CM Race Live: ಸಿದ್ದರಾಮಯ್ಯ-ಡಿಕೆಶಿ ಜಟಾಪಟಿಯಲ್ಲಿ ಮೂರನೇಯವ್ರಿಗೆ ಲಾಭ?
ಸಿದ್ದರಾಮಯ್ಯ-ಡಿಕೆಶಿ ಕಿತ್ತಾಟ ತಾರಕಕ್ಕೇರಿದ್ರೆ 3ನೇ ವ್ಯಕ್ತಿ ಆಯ್ಕೆ? ಆಗುವ ಸಾಧ್ಯತೆ ಇದೆ. ಈಗಾಗಲೇ ಹಿರಿಯ ನಾಯಕರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಸರ್ಕಾರವನ್ನು ನಿಭಾಯಿಸಬಲ್ಲ ಹಿರಿಯರ ಆಯ್ಕೆ ಸಾಧ್ಯತೆ. ಆದ್ರೆ 3ನೇ ವ್ಯಕ್ತಿ ಆಯ್ಕೆಯಿಂದ ಜನಾದೇಶಕ್ಕೆ ವಿರೋಧ. ಸಮುದಾಯಗಳು ಸಿಟ್ಟಾಗಬಹುದು ಎಂಬ ಆತಂಕವೂ ಇದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ನಿಂದ ಅಳೆದು ತೂಗಿ ನಿರ್ಧಾರ ಕೈಗೊಳ್ಳಲಾಗುತ್ತೆ.
Karnataka CM Race Live: ಕಾಂಗ್ರೆಸ್ ಪಕ್ಷ ನನಗೆ ತಾಯಿ, ದೇವಸ್ಥಾನ ಇದ್ದಂತೆ -ಡಿಕೆ ಶಿವಕುಮಾರ್
ಎಐಸಿಸಿ ಪ್ರಧಾನ ಕಾರ್ಯದರ್ಶಿ ದೆಹಲಿಗೆ ಬರಲು ಹೇಳಿದ್ದಾರೆ. ಒಬ್ಬನೇ ದೆಹಲಿಗೆ ಬರುವಂತೆ ನಾಯಕರು ಹೇಳಿದ್ದಾರೆ ಎಂದು ದೆಹಲಿಗೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾನೊಬ್ಬನೇ ದೆಹಲಿಗೆ ಹೊರಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷವೇ ನಮಗೆ ಶಕ್ತಿ. ರಾಜ್ಯದ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಪಡಬೇಕಿದೆ. ಕಾಂಗ್ರೆಸ್ ಪಕ್ಷ ನನಗೆ ತಾಯಿ, ದೇವಸ್ಥಾನ ಇದ್ದಂತೆ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.
Karnataka CM Race Live: ವಿದೇಶದಲ್ಲೂ ಕೊತ್ತೂರು ಮಂಜುನಾಥ್ ಹವಾ
ಕರ್ನಾಟಕ ವಿಧಾನಸಭೆ ಚುಣಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 135 ಸ್ಥಾನಗಲ್ಲಿ ಗೆದ್ದು ಪ್ರಚಂಡ ಬಹುಮತ ಸಾಧಿಸಿದೆ. ಅದರಲ್ಲೂ ಮುಖ್ಯವಾಗಿ ಅಚ್ಚರಿ ಎಂಬಂತೆ ಕೋಲಾರದಿಂದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಅವರ ಅಭಿಮಾನಿಗಳು ವಿದೇಶದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಅಮೇರಿಕಾ, ಲಂಡನ್ ಹಾಗೂ ಕೆನಾಡದಲ್ಲಿ ಕೊತ್ತೂರು ಮಂಜುನಾಥ್ ಭಾವಚಿತ್ರ ಹಿಡಿದು ಕೇಕ್ ಕತ್ತರಿಸಿ ಶುಭಾಶಯ ತಿಳಿಸಿದ್ದಾರೆ.
ಅಮೇರಿಕಾ, ಲಂಡನ್, ಕೆನಾಡದಲ್ಲೂ ಕೊತ್ತೂರು ಮಂಜುನಾಥ್ ಗೆಲುವಿನ ಸಂಭ್ರಮ ಹೇಗಿದೆ ನೋಡಿ@INCKarnataka @KothurManjunath #karnatakaelections2023 #kolar https://t.co/XwoWZIeppu
— TV9 Kannada (@tv9kannada) May 16, 2023
Karnataka CM Race Live: ದೆಹಲಿಗೆ ತೆರಳಲಿರುವ ಡಿ.ಕೆ.ಶಿವಕುಮಾರ್
ಇಂದು ಕೆಂಪೇಗೌಡ ಏರ್ಪೋರ್ಟ್ನಿಂದ ದೆಹಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳಲಿದ್ದಾರೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಯಾಗಲಿದ್ದಾರೆ.
Published On - May 16,2023 9:18 AM