ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ ಪ್ರಕರಣ: ಆರೋಪಿಗಳ ವಿರುದ್ಧ ನೋಟಿಸ್ ಜಾರಿ, ರಾಜಾನುಕುಂಟೆಯಲ್ಲಿಂದು ಪ್ರತಿಭಟನೆ
ಹತ್ಯೆ ಸಂಚು ಖಂಡಿಸಿ ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ರಾಜಾನುಕುಂಟೆಯಲ್ಲಿಂದು ಪ್ರತಿಭಟನೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಯಲಹಂಕ ಕ್ಷೇತ್ರದಲ್ಲಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಮುದುಗದಹಳ್ಳಿಯಲ್ಲಿರುವ ಆರೋಪಿ ಗೋಪಾಲಕೃಷ್ಣ ನಿವಾಸ, ಸಿಂಗನಾಯಕನಹಳ್ಳಿಯಲ್ಲಿರುವ ಶಾಸಕ ಎಸ್.ಆರ್.ವಿಶ್ವನಾಥ್ ನಿವಾಸಕ್ಕೂ ಪೊಲೀಸ್ ಭದ್ರತೆ ನೀಡಲಾಗಿದೆ.
ಬೆಂಗಳೂರು: ಶಾಸಕ ವಿಶ್ವನಾಥ್ ಕೊಲೆಯ ಸ್ಕೆಚ್ನ ವಿಡಿಯೋ ಹಾಗೂ ಆಡಿಯೋ ಬಾಂಬ್ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮತ್ತು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಕುಳ್ಳ ದೇವರಾಜ್ ನಡುವೆ ಹತ್ಯೆ ಸ್ಕೆಚ್ ಕುರಿತಂತೆ ನಡೆದ ಮಾತುಕತೆ ಈಗ ದೊಡ್ಡ ಹವಾ ಎಬ್ಬಿಸಿದೆ. ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿದ್ದು ಎಫ್ಐಆರ್ ದಾಖಲಾಗಿದೆ ಹಾಗೂ ಆರೋಪಿಗಳ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಎಫ್ಐಆರ್ ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್ ಕುರಿತಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120b ಮತ್ತು 506ರಡಿ FIR ದಾಖಲು ಮಾಡಲಾಗಿದೆ. ಆದ್ರೆ ಈ ಪ್ರಕರಣದ ದಿಕ್ಕು ತಪ್ಪಿಸುವುದಕ್ಕೆ ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಶಂಕೆ ವ್ಯಕ್ತವಾಗಿದೆ. FIR ಪ್ರತಿಯ ಆರೋಪಿ ಕಾಲಂನಲ್ಲಿ ಪ್ರಮುಖ ಆರೋಪಿಗಳ ಹೆಸರೇ ಇಲ್ಲ. ಶಾಸಕರ ದೂರಿನಲ್ಲಿ ಕುಳ್ಳ ದೇವರಾಜ್ ಹೆಸರು ಉಲ್ಲೇಖವಾಗಿಲ್ಲ. ಕೇವಲ ಗೋಪಾಲಕೃಷ್ಣ & ಅದರ್ಸ್ ಎಂದು ತನಿಖಾಧಿಕಾರಿ ಪಿಎಸ್‌ಐ ಭವಿತಾರಿಂದ ಉಲ್ಲೇಖವಾಗಿದೆ.
10ಕ್ಕೂ ಹೆಚ್ಚು ಜನರಿಗೆ ನೋಟಿಸ್ ಶಾಸಕರ ಹತ್ಯೆಗೆ ಸಂಚು ರೂಪಿಸಿದ 10ಕ್ಕೂ ಹೆಚ್ಚು ಜನರಿಗೆ ಬೆಂಗಳೂರಿನ ರಾಜಾನುಕುಂಟೆ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಗೋಪಾಲಕೃಷ್ಣ, ಕುಳ್ಳ ದೇವರಾಜ್, ಕಾಂತ, ಧರ್ಮ, ಮಂಜ, ಗೋಪಾಲಕೃಷ್ಣ ಸಹಚರರಿಗೆ ನೋಟಿಸ್ ನೀಡಿದ್ದಾರೆ. ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಕುಳ್ಳ ದೇವರಾಜ್ ಸಂಚಿಗೆ ವಿಡಿಯೋ ಎಡಿಟಿಂಗ್, ಸ್ಟಿಂಗ್‌ಗೆ ಸಹಕರಿಸಿ ಬೆಂಬಲ ನೀಡಿದವರಿಗೂ ನೋಟಿಸ್ ನೀಡಲಾಗಿದೆ.
ಹತ್ಯೆ ಸಂಚು ಖಂಡಿಸಿ ರಾಜಾನುಕುಂಟೆಯಲ್ಲಿಂದು ಪ್ರತಿಭಟನೆ ಇನ್ನು ಹತ್ಯೆ ಸಂಚು ಖಂಡಿಸಿ ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ರಾಜಾನುಕುಂಟೆಯಲ್ಲಿಂದು ಪ್ರತಿಭಟನೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಯಲಹಂಕ ಕ್ಷೇತ್ರದಲ್ಲಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಮುದುಗದಹಳ್ಳಿಯಲ್ಲಿರುವ ಆರೋಪಿ ಗೋಪಾಲಕೃಷ್ಣ ನಿವಾಸ, ಸಿಂಗನಾಯಕನಹಳ್ಳಿಯಲ್ಲಿರುವ ಶಾಸಕ ಎಸ್.ಆರ್.ವಿಶ್ವನಾಥ್ ನಿವಾಸಕ್ಕೂ ಪೊಲೀಸ್ ಭದ್ರತೆ ನೀಡಲಾಗಿದೆ.
ಒಬ್ಬ ಶಾಸಕನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆಯಾಗಿ, ಸತ್ಯಾಂಶ ಬಯಲಾಗಬೇಕು ಎಂದು ಟಿವಿ9ಗೆ ಯಲಹಂಕ ಬಿಜೆಪಿ ಶಾಸಕ S.R.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇದರ ಹಿಂದಿನ ಹುನ್ನಾರ ಬಯಲಾಗಬೇಕಿದೆ. ಯಾವ ಪಕ್ಷದ ಶಾಸಕನಿಗೂ ಈ ರೀತಿಯಾಗಿ ಆಗಬಾರದು. ಈ ಪ್ರಕರಣವನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ. ಸಿಎಂ ಬೊಮ್ಮಾಯಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇಂದು ಭೇಟಿಯಾಗುವಂತೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ಭೇಟಿಯಾಗಲು ಹೋಗುತ್ತೇನೆ. ನಾನು ಕೂಡ ಸಿಎಂಗೆ ಕೆಲವೊಂದು ಮಾಹಿತಿ ನೀಡಿದ್ದೇನೆ. ಯಾರೇ ತನಿಖೆ ಮಾಡಿದರೂ ಸರಿ, ನನ್ನ ತಕರಾರು ಇಲ್ಲ. ಸಮಾಧಾನದಿಂದ ಇರುವಂತೆ ಸಿಎಂ ನನಗೆ ತಿಳಿಸಿದ್ದಾರೆ ಎಂದರು.
ಗೋಪಾಲಕೃಷ್ಣ ಆ ವಿಡಿಯೋ ನಕಲಿ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿ ಅವನ ಹೆಸರೇ ಗೋಲ್ಮಾಲ್ ಗೋಪಾಲ. ಆ ವಿಡಿಯೋದಲ್ಲಿ ಶೇ.20ರಷ್ಟು ಸತ್ಯ ಇದೆ ಎಂದು ಹೇಳಿದ್ದಾರೆ. ತನಿಖೆ ನಂತರ ಅಸಲಿಯೋ, ನಕಲಿಯೋ ಎಂದು ಗೊತ್ತಾಗುತ್ತೆ. ನನಗೆ ಯಾವುದೇ ಜಮೀನಿನ ಜಿದ್ದು ಇಲ್ಲ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಅನಿಸುತ್ತಿದೆ. ಜನರು ನನಗೆ ಮತ ನೀಡುತ್ತಿರುವುದರಿಂದ ಹೀಗೆ ಮಾಡ್ತಿದ್ದಾರೆ. ಸುಪಾರಿ ಕೊಟ್ಟು ಹತ್ಯೆ ಮಾಡಿಸಿ ಶಾಸಕನಾಗೋದು ಕನಸಿನ ಮಾತು. ನಾನು ಇಲ್ಲದಿದ್ದರೂ ನಮ್ಮಲ್ಲೇ ಮತ್ತೊಬ್ಬರು ಶಾಸಕರು ಆಗುತ್ತಾರೆ. ತನಿಖೆ ಬಗ್ಗೆ ಸಿಎಂ ನಿರ್ಧಾರಕ್ಕೆ ನಾನು ಬದ್ಧ ಎಂದು ಟಿವಿ9ಗೆ ಯಲಹಂಕ ಬಿಜೆಪಿ ಶಾಸಕ S.R.ವಿಶ್ವನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ ಪ್ರಕರಣ: ಗೋಪಾಲಕೃಷ್ಣ, ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲು
Published On - 7:33 am, Thu, 2 December 21