AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಣಾದಲ್ಲಿ ಗೆದ್ದರೆ ದೊಡ್ಡ ಹುದ್ದೆ: ಅಮಿತ್​ ಶಾ ಕೊಟ್ಟ ಭರವಸೆ ಬಿಚ್ಚಿಟ್ಟ ಸೋಮಣ್ಣ

ವರುಣಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಸೋಮಣ್ಣ ಗೆದ್ದರೇ ಬಿಜೆಪಿ ಕೇಂದ್ರ ನಾಯಕರು ದೊಡ್ಡ ಹುದ್ದೆ ಕೊಡಲು ನಿರ್ಧರಿಸಿದ್ದಾರೆ ಎಂದು ಸ್ವತಃ ವಿ. ಸೋಮಣ್ಣ ಅವರು ಹೇಳಿದ್ದಾರೆ.

ವರುಣಾದಲ್ಲಿ ಗೆದ್ದರೆ ದೊಡ್ಡ ಹುದ್ದೆ: ಅಮಿತ್​ ಶಾ ಕೊಟ್ಟ ಭರವಸೆ ಬಿಚ್ಚಿಟ್ಟ ಸೋಮಣ್ಣ
ಸಚಿವ ವಿ ಸೋಮಣ್ಣ
Follow us
ವಿವೇಕ ಬಿರಾದಾರ
|

Updated on: May 07, 2023 | 12:33 PM

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಟಿಕೆಟ್​ ಹಂಚಿಕೆ ವಿಚಾರವಾಗಿ ಪ್ರಬಲ ಮೂರು ಪಕ್ಷಗಳಲ್ಲಿ ಅನೇಕ ಬೆಳವಣಿಗೆಗಳು ನಡೆದವು. ಪ್ರಮುಖವಾಗಿ ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್​ ಘೋಷಣೆಗೂ ಮುನ್ನ ವಿ. ಸೋಮಣ್ಣ (V Somanna), ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yediyurappa) ಪುತ್ರ ವಿಜಯೇಂದ್ರ (Vijayendra) ವಿಚಾರವಾಗಿ ಅಸಮಾಧಾನಗೊಂಡಿದ್ದರು. ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರೂ ಕೂಡಾ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ತಮ್ಮ ಕೋಪವನ್ನು ತೋಡಿಕೊಂಡಿದ್ದರು. ಇದಾದ ಬಳಿಕ ವಿ ಸೋಮಣ್ಣ ಜೊತೆಗೆ ಮಾತುಕತೆ ನಡೆಸುವುದಾಗಿ ಯಡಿಯೂರಪ್ಪ ತಿಳಿಸಿದರೂ ಮಾತುಕತೆ ನಡೆಸಿರಲಿಲ್ಲ. ಇದರ ಮೂಲಕ ಇಬ್ಬರ ನಡುವಿನ ಮುನಿಸು ದೊಡ್ಡ ರಾಜಕೀಯ ಚರ್ಚೆಗೂ ಕಾರಣವಾಗಿತ್ತು. ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅಮಿತ್ ಶಾ ಭೇಟಿಯ ಬಳಿಕ ಸಮಾಧಾನಗೊಂಡು ತಮ್ಮ ಮಾತಿನ ವರಸೆಯನ್ನು ಸೋಮಣ್ಣ ಅವರು ಬದಲಾಯಿಸಿಕೊಂಡಿದ್ದರು. ಬಳಿಕ ಹೈಕಮಾಂಡ್​​ ಸೋಮಣ್ಣ ಅವರಿಗೆ ಎರಡು ಕ್ಷೇತ್ರದ ಟಿಕೆಟ್​ ನೀಡಿತು. ಅಲ್ಲದೇ ಗೆದ್ದ ಮೇಲೆ ದೊಡ್ಡ ಸ್ಥಾನ ಕೊಡುತ್ತೇವೆ ಅಂತ ಅಮಿತ್​ ಶಾ ಭರವಸೆ ನೀಡಿದ್ದಾರೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಮೈಸೂರಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಅನ್ನೋದು ಕನಸು. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲ್ಲ. ಸಿದ್ದರಾಮಯ್ಯ ಓಲೈಕೆಗಾಗಿ ಎಂ.ಬಿ.ಪಾಟೀಲ್​ ಹೇಳಿಕೆ ನೀಡುತ್ತಿದ್ದಾರೆ. ದುಷ್ಟ ಶಕ್ತಿಯ ನಿಗ್ರಹಕ್ಕೆ ಎಲ್ಲಾ ಶಕ್ತಿಗಳು ಒಂದಾಗುತ್ತವೆ. ಸಾಕು ಅವರು 15 ವರ್ಷ ಅಧಿಕಾರ ಮಾಡಿದ್ದು. ಸೋಮಣ್ಣ ಗೆಲ್ಲಿಸಿ ದೊಡ್ಡ ಸ್ಥಾನ ಕೊಡುತ್ತೇವೆ ಎಂದು ಅಮಿತ್​ ಶಾ ಹೇಳಿದ್ದಾರೆ. ನಾನು ಹರಕೆಯ ಕುರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ: ವಿಷಕಂಠನ ಸನ್ನಿಧಿಯಲ್ಲಿ ಪ್ರಧಾನಿ ಮೋದಿ; ಮೈಸೂರು ಚಾಮರಾಜನಗರ ಮಾರ್ಗದಲ್ಲಿ ಸಂಚಾರ ಬದಲಾವಣೆ

ಇನ್ನು ಲಿಂಗಾಯತರಿಗೆ ಸಿದ್ದರಾಮಯ್ಯ ಕ್ಷಮೆ‌ ಕೇಳಿದ ವಿಚಾರವಾಗಿ ಮಾತನಾಡಿದ ಅವರು ಒಡೆದ ಮೊಸರು ಯಾವತ್ತು ಸರಿಯಾಗುವುದಿಲ್ಲ. ಸದ್ಯ ಸಿದ್ದರಾಮಯ್ಯ ಅವರಿಗೆ ಚುನಾವಣೆ ವೇಳೆ ಅರಿವಾಗಿದೆ. ಚುನಾವಣೆಗಾಗಿ ಅವರು ಬದಲಾಗಿದ್ದಾರೆ. ಚುನಾವಣೆ ನಂತರ ಸಿದ್ದರಾಮಯ್ಯ ಮತ್ತೆ ಅದೇ ರೀತಿ ಆಗುತ್ತಾರೆ ಎಂದರು.

ಸೋಮಣ್ಣ ಮನೆ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಆರೋಪ‌ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಅದೃಷ್ಟದ ರಾಜಕಾರಣಿ. ಅದೃಷ್ಟ ಇದೆ ಅಂತ ಬಂಡೆಗೆ ತಲೆ‌ ಚಚ್ಚಿಕೊಳ್ಳುತ್ತಿದ್ದೀರಿ. ಈಗ ನಿಮಗೆ ಕಾಲ‌ ಬಂದಿದೆ. ಇನ್ನೊಬ್ಬರ ಕೆಲಸವನ್ನು ಗೌರವಿಸಿ. ಅದು ಕಾಮನಸೆನ್ಸ್ ನಾಯಕತ್ವದ ಗುಣ ಲಕ್ಷಣ ಎಂದು ಕಿವಿಮಾತು ಹೇಳಿದರು.

ಭ್ರಷ್ಟಾಚಾರದ ಆರೋಪ ವಿಚಾರವಾಗಿ ಮಾತನಾಡಿದ ಅವರು ನಾನು ಸಿದ್ದರಾಮಯ್ಯ ಜೊತೆ ಕುಳಿತು ಚರ್ಚೆ ಮಾಡಲು ಸಿದ್ದ. ವರುಣಾವನ್ನು ಸಿದ್ದರಾಮಯ್ಯ ಅವರು ಕಡೆಗಣಿಸಿದ್ದಾರೆ. ಸಿದ್ದರಾಮಯ್ಯ ಗೋವಿಂದರಾಜ ನಗರ ಹೋಗಿ ನೋಡಿ ಬರಲಿ. ರಾಜಕಾರಣ ಯಾರು ಬೇಕಾದರೂ ಮಾಡಬಹುದು. ಮತದಾರರಿಗೆ ಜಾತಿ ಭೇದ ಬೇರೆ ಏನು ಬೇಡ, ಅಭಿವೃದ್ಧಿ ಬೇಕು. ವರುಣಾದ ರಸ್ತೆಗಳನ್ನು ನೋಡಿದರೆ ದಿಗಿಲಾಗುತ್ತದೆ. ನಮ್ಮ ನಾಯಕರು ನನಗೆ ಕಳುಹಿಸಿದ್ದಾರೆ. ಗೋವಿಂದರಾಜ ನಗರದಂತೆ ವರುಣಾ ಮಾಡಲು ಕಳುಹಿಸಿದ್ದಾರೆ. ಕ್ಷೇತ್ರದ ಜನರ ಜೊತೆ ಕುಳಿತು ಮಾತನಾಡಿದ್ದೀರಾ? ನಿಮ್ಮದೆ ಆದ ಪಾಳೇಗಾರಿಕೆ ನಿಮ್ಮದೆ ಆದ ಗುತ್ತಿಗೆದಾರರು. ನಾನು ನಿಮ್ಮ ಸ್ನೇಹಿತನೇ, ಆದರೆ ನಾನು ಹೇಡಿ ಅಲ್ಲ ಕಿಲಾಡಿ ಎಂದು ವ್ಯಂಗ್ಯವಾಡಿದರು.

ಮೀಸಲಾತಿ ಕಿತ್ತು ಹಾಕುವ ವಿಚಾರವಾಗಿ ಮಾತನಾಡಿದ ಅವರು ಏಕೆ ಕಿತ್ತು ಹಾಕುತ್ತೀರಾ? ಲಿಂಗಾಯತರು, ಒಕ್ಕಲಿಗರನ್ನು ಮುಟ್ಟಲು ಆಗುತ್ತಾ? ಎಸ್​ಸಿ, ಎಸ್​ಟಿಯನ್ನು ಮುಟ್ಟಲು ಆಗುತ್ತಾ? ಉಡಾಫೆಯಿಂದ ಎಲ್ಲೋ‌ ಇದ್ದು ಬಿಟ್ಟು, ನೀವು ಕೊಟ್ಟಿರುವ ತೊಂದರೆ ಜನ ನೋಡುತ್ತಾರೆ ಎಂದು ಮಾತನಾಡಿದರು.

ಆದರೆ ದುನಿಯಾ ವಿಜಿ, ಲೂಸ್ ಮಾದ, ರಮ್ಯಮ್ಮ ಇವರೆಲ್ಲಾ ಏಕೆ ?

ಶಿವರಾಜ್​​ಕುಮಾರ್ ಅವರ ಕುಟುಂಬದ ಬಗ್ಗೆ ಗೌರವ ಇದೆ. ಆದರೆ ದುನಿಯಾ ವಿಜಿ, ಲೂಸ್ ಮಾದ, ರಮ್ಯಮ್ಮ ಇವರೆಲ್ಲಾ ಏಕೆ? ಸಿದ್ದರಾಮಯ್ಯ ಅವರೇ ನೀವು ವರುಣಾದಲ್ಲಿ ಪ್ರಚಾರಕ್ಕೆ ಬರುವುದಿಲ್ಲ ಅಂದ್ರಿ? ನಿಮಗೆ ಸೋಲಿನ ಭಯ ಅನ್ನುವುದಕ್ಕಿಂತ ನೀವು ವರುಣಾ ಜನರಿಗೆ ಏನು ಮಾಡಿಲ್ಲ. ಅದಕ್ಕಾಗಿ‌ ಎಲ್ಲರನ್ನೂ ಕರೆದು ತರುತ್ತಿದ್ದೀರಾ? ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನನಗೆ ಅವಕಾಶ ಕೊಡಿ. ಸಿದ್ದರಾಮಯ್ಯ ಅವರಿಂದ ವರುಣಾದಲ್ಲಿ ಒಂದು ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ ಎಂದು ವಾಗ್ದಾಳಿ ಮಾಡಿದರು.

ನಿಮ್ಮ ಜೊತೆ ಹೊರಗಿನಿಂದ ಎಷ್ಟು ಜನ ಬಂದಿದ್ದಾರೆ ? ಹಣ ಹಂಚಲು ಯಾರು ಯಾರು ಬಂದಿದ್ದಾರೆ ಎಂಬುದು ನನಗೆ ಗೊತ್ತಿದೆ. ಪಟಾಲಂ‌ ಬಿಟ್ಟು ಕ್ಷೇತ್ರವನ್ನು ನಡೆಸುತ್ತಿದ್ದಿರಿ. ನಾನು ಬೇಡ, ನೀವು ಬೇಡ. ನಿಮ್ಮ ಬೆಂಬಲಿಗರು ಬೇಡ.‌ ನನ್ನ ಬೆಂಬಲಿಗರು ಬೇಡ. ಎಲ್ಲರೂ ಕ್ಷೇತ್ರದಿಂದ ಹೊರಗೆ ಉಳಿಯೋಣ. ಜನ ಆಗ ತೀರ್ಮಾನ ಮಾಡುತ್ತಾರೆ. ಎಲ್ಲಾ ವರ್ಗದ ಜನರಿಗೆ ವಂಚನೆ ಮಾಡಿ ಪೇಪರ್ ಮೆಂಟ್ ಕೊಟ್ಟು ಇಷ್ಟು ವರ್ಷ ರಾಜಕಾರಣ ಮಾಡಿದ್ದೀರಿ ಎಂದು ಆರೋಪ ಮಾಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ