Karnataka Assembly Election 2023: ಎಂಎಲ್​ಸಿ ಲಕ್ಷ್ಮಣ ಸವದಿ ಕಾಂಗ್ರೆಸ್​ ಸೇರುವುದು ಪಕ್ಕಾ: ಡಿಕೆ ಶಿವಕುಮಾರ್​

|

Updated on: Apr 14, 2023 | 1:31 PM

ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ​ ಕಾಂಗ್ರೆಸ್​ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿದ್ದಾರೆ.

Karnataka Assembly Election 2023: ಎಂಎಲ್​ಸಿ ಲಕ್ಷ್ಮಣ ಸವದಿ ಕಾಂಗ್ರೆಸ್​ ಸೇರುವುದು ಪಕ್ಕಾ: ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​, ಲಕ್ಷ್ಮಣ ಸವದಿ, ರಣದೀಪ್ ಸಿಂಗ್ ಸುರ್ಜೇವಾಲ
Follow us on

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ​ಕಾಂಗ್ರೆಸ್​ ಪಕ್ಷ (Congress) ಸೇರ್ಪಡೆಯಾಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಲಕ್ಷ್ಮಣ ಸವದಿಯವರನ್ನು ಕಾಂಗ್ರೆಸ್ ನಾಯಕರೆಲ್ಲರೂ ಸ್ವಾಗತಿಸುತ್ತೇವೆ. ಲಕ್ಷ್ಮಣ ಸವದಿ ಜೊತೆ ನಾವು ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಸಂಜೆ 4 ಗಂಟೆಗೆ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿ ಕೊಟ್ಟ ಮಾತಿನಂತೆ ನಡೆಯದಿದ್ದಾಗ ಪಕ್ಷ ತ್ಯಜಿಸುತ್ತಿದ್ದೇನೆ

ಬಿಜೆಪಿ ಕೊಟ್ಟ ಮಾತಿನಂತೆ ನಡೆಯದಿದ್ದಾಗ ಪಕ್ಷ ತ್ಯಜಿಸುತ್ತಿದ್ದೇನೆ. ವಿಧಾನಪರಿಷತ್​ನ ಬಿಜೆಪಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಟಿಕೆಟ್​ ನೀಡುವಂತೆ ಕೇಳಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಅಥಣಿ ಕ್ಷೇತ್ರಕ್ಕೆ ಯೋಜನೆ ರೂಪಿಸುತ್ತೇನೆ. ಅಥಣಿ ಕ್ಷೇತ್ರದ ನೀರಾವರಿ ಯೋಜನೆ ಪೂರ್ಣಗೊಳಿಸಲು ಮನವಿ ಮಾಡಿದ್ದೇನೆ ಎಂದು ಮಾಜಿ  ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನನ್ನ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರ ಅನುಮತಿ ಪಡೆದಿದ್ದೇನೆ. ಇಂದು ಸಂಜೆ 4 ಗಂಟೆಗೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ. ಇಂದು ಸಂಜೆ 4.30ಕ್ಕೆ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ನಾನು ಬೆಳಗಾವಿ ಜಿಲ್ಲೆಗೆ ಸೀಮಿತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನ ಮಾಡುವೆ. ರಾಜ್ಯದ ಇತರೆ ಭಾಗಗಳಲ್ಲಿ ನನ್ನನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಮ್ಮತಿ ಸೂಚಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನ: ಲಕ್ಷ್ಮಣ ಸವದಿ ಬಳಿಕ ಪಕ್ಷ ಬಿಡಲು ಮುಂದಾದ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ

ಕಳೆದ 20 ವರ್ಷಗಳಿಂದ ಬಿಜೆಪಿ ಶಿಸ್ತಿನ ಸಿಪಾಯಿಯಾಗಿ ದುಡಿದಿದ್ದೇನೆ. 2018ರ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಸೋತಿದ್ದೆ. ಬದಲಾದ ಸನ್ನಿವೇಶದಲ್ಲಿ ಮಹೇಶ್ ಕುಮಟಳ್ಳಿ ಬಿಜೆಪಿ ಸೇರಿದರು. ಆಪರೇಷನ್​ ಕಮಲದಿಂದ ಮಹೇಶ್ ಕುಮಟಳ್ಳಿ ಬಿಜೆಪಿ ಸೇರಿದ್ದರು. ಉಪ ಚುನಾವಣೆಯಲ್ಲಿ ಮಹೇಶ್​ ಕುಮಟಳ್ಳಿ ಅವರಿಗೆ ಬಿಜೆಪಿಯವರು ಟಿಕೆಟ್​ ಕೊಟ್ಟರು. ಈ ವೇಳೆ ಮಹೇಶ್ ಕುಮಟಳ್ಳಿ ಗೆಲ್ಲಿಸುವಂತೆ ವರಿಷ್ಠರು ಸೂಚಿಸಿದ್ದರು ಎಂದು ತಿಳಿಸಿದರು.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್​ ನೀಡುವುದಾಗಿ ಹೇಳಿದ್ದರು. ಚುನಾವಣೆಯಲ್ಲಿ ಸೋತಿದ್ದ ನನ್ನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದರು. ನಾನು ಡಿಸಿಎಂ ಹುದ್ದೆ ಕೇಳಿರಲಿಲ್ಲ ಕೊಟ್ಟರು, ಮತ್ತೆ ತೆಗೆದಿದ್ದು ಯಾಕೆ? ಡಿಸಿಎಂ ಹುದ್ದೆಯಿಂದ ತೆಗೆದಿದ್ದರಿಂದ ನನಗೆ ಅವಮಾನ ಆಗಲಿಲ್ಲವೇ? ಕಾಂಗ್ರೆಸ್ ಸೇರಲು ನಾನು ಯಾವುದೇ ಷರತ್ತುಗಳನ್ನು ವಿಧಿಸಲಿಲ್ಲ. ನನಗೆ ಪುತ್ರ ವ್ಯಾಮೋಹವಿಲ್ಲ, ಅವನು ಸ್ಪರ್ಧಿಸುವುದಾಗಿ ಹೇಳಿಲ್ಲ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 13ರಿಂದ 14 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ

ಬೆಳಗಾವಿ ಜಿಲ್ಲೆಯಲ್ಲಿ 13ರಿಂದ 14 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್​ ಲಕ್ಷ್ಮಣ ಸವದಿ ಅವರಿಗೆ ಕೊಡುತ್ತೇವೆ. ಲಕ್ಷ್ಮಣ ಸವದಿ ಕಾಂಗ್ರೆಸ್​ಗೆ ಬಂದಿರುವುದು ನನಗೆ ಸಂತಸವಾಗಿದೆ. ಎಂಎಲ್​ಸಿ ಲಕ್ಷ್ಮಣ ಸವದಿ ನನ್ನ ಸಂಬಂಧಿಕರು, ಹೀಗಾಗಿ ಖುಷಿಯಾಗಿದೆ. ಕಾಂಗ್ರೆಸ್ ಸೇರುವ ಮುನ್ನ ಮೊದಲಿಗೆ ನನ್ನ ಜೊತೆ ಚರ್ಚಿಸಿದ್ದರು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Fri, 14 April 23