ರಾಯಚೂರು: ಟ್ವೀಟ್​ ಮೂಲಕ ಶಿವಣ್ಣಗೆ ಟಾಂಗ್​, ಸ್ಪಷ್ಟನೆ ನೀಡಿದ ಪ್ರತಾಪ್​​ ಸಿಂಹ್

ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ನಟ ಶಿವರಾಜ್​​ಕುಮಾರ್​ ಪ್ರಚಾರಕ್ಕೆ ಸಂಬಂಧಿಸಿದಂತೆ, ಟ್ವೀಟ್ ವಿಚಾರವಾಗಿ ಸಂಸದ ಪ್ರತಾಪ್​​ ಸಿಂಹ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ರಾಯಚೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramiah) ಪರ ನಟ ಶಿವರಾಜ್​​ಕುಮಾರ್​ (Shivarajkumar) ಪ್ರಚಾರಕ್ಕೆ ಸಂಬಂಧಿಸಿದಂತೆ, ಟ್ವೀಟ್ ವಿಚಾರವಾಗಿ ಸಂಸದ ಪ್ರತಾಪ್​​ ಸಿಂಹ (Pratap Simha) ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. ಅವರು (ಶಿವರಾಜ್​ಕುಮಾರ್​) ಏನು ಮಾತನಾಡಿದ್ದಾರೆ ಅನ್ನೋದನ್ನ ಕೇಳಿದ್ದೇನೆ. ನಾನು ಶಿವಣ್ಣನ ಅಭಿಮಾನಿ. ನಾನು ಅವರ ಮನ ಮೆಚ್ಚಿದ ಹುಡುಗಿ, ರಥ ಸಪ್ತಮಿ ಸಿನಿಮಾಗಳನ್ನು ನೋಡ್ಕೊಂಡು ಬಂದಿದ್ದೀನಿ. ಶಿವಣ್ಣ ಭೇಟಿಯಾದಾಗಲೆಲ್ಲ ನಮಸ್ಕಾರ ಮಾಡುತ್ತೇನೆ. ಅವರ ಇಡೀ ಕುಟುಂಬವನ್ನು ನಾವು ರಾಜಕೀಯದ ಹೊರತಾಗಿ ನೋಡುತ್ತೇವೆ ಎಂದು ಹೇಳಿದರು.

ರಾಯಚೂರು ತಾಲೂಕಿನ ಯಾಪಲದಿನ್ನಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜಕುಮಾರ್ ಕುಟುಂಬದ ಬಗ್ಗೆ ಅಪಾರವಾದ ಗೌರವಿದೆ. ನಾವು ರಾಜಕೀಯದ ಹೊರತಾಗಿ ನಮ್ಮ ರಾಜ್ಯದ ಅಸ್ಮೀತೆಯ ಮಟ್ಟದಲ್ಲಿ ಅಣ್ಣಾವರ ಕುಟುಂಬವನ್ನ ನೋಡುತ್ತೇವೆ. ಅಣ್ಣಾವರ ಕುಟುಂಬ ಅಂದರೇ ಆ ರೀತಿ ಗೌರವ ಕೊಡುತ್ತೇವೆ. ಹೀಗಾಗಿ ಆ ಅರ್ಥದಲ್ಲಿ ಟ್ವೀಟ್ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು.

ಸೋಮಣ್ಣ ಅವರು ಅಲ್ಲಿ ನಿಂತಿರೋದು ಗೊತ್ತಿಲ್ಲ ಅಂದಿದ್ದಾರೆ. ಶಿವಣ್ಣಗೆ ಧನ್ಯವಾದ ಹೇಳುತ್ತೇನೆ. ಶಿವಣ್ಣ ನಾವು ಯಾವತ್ತು ನಿಮ್ಮ ಅಭಿಮಾನಿಗಳೆ, ನಮ್ಮ ಗೌರವ ಪ್ರೀತಿ ಹೀಗೆ ಇರತ್ತೆ. ನೀವು ನಮ್ಮ ಮೇಲೆ ಅದೇ ರೀತಿ ಒಳ್ಳೆ ರೀತಿ ಸ್ಪಂದಿಸಿದ್ದೀರಿ ಧನ್ಯವಾದ ಎಂದು ಹೇಳಿದರು.

ಏನಿದು ಶಿವಣ್ಣ vs ಪ್ರತಾಪ್​​ ಸಿಂಹ

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ತೆರಳಿರುವ ನಟ ಶಿವರಾಜ್‌ ಕುಮಾರ್‌ ಅವರ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಂಸದರ ಟ್ವೀಟ್​ನಲ್ಲಿ “ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ… ” ಎಂದಿದ್ದಾರೆ.  ಈ ಮೂಲಕ ನಟ ಶಿವರಾಜ್‌ ಕುಮಾರ್‌ಗೆ ಟಾಂಗ್‌ ನೀಡಿದ್ದರು.

ಪುನಿತ ರಾಜಕುಮಾರ್ ಆಸ್ಪತ್ರೆ​​

ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಚಿವ ಸೋಮಣ್ಣ ಅವರು ತಮ್ಮ ಕ್ಷೇತ್ರದಲ್ಲಿ ನಿರ್ಮಿಸಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಟ ಪುನೀತ್‌ ರಾಜ್‌ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಿದ್ದರು. ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಸೋಮಣ್ಣ ಅವರ ಕಾರ್ಯವನ್ನು ಶ್ಲಾಘಿಸಿದ್ದರು. ಸದ್ಯ ಸಚಿವ ಸೋಮಣ್ಣ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಅವರು ವಿರೋಧಿ ಅಭ್ಯರ್ಥಿಯಾದ ಸಿದ್ದರಾಮಯ್ಯ ಅವರ ಪರ ಪ್ರಚಾರದಲ್ಲಿ ಶಿವರಾಜ್‌ ಕುಮಾರ್‌ ಭಾಗಿಯಾಗಿರುವುದು ಪ್ರತಾಪ್‌ ಸಿಂಹ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿವಣ್ಣ ಹೇಳಿದ್ದೇನು

ವಿ.ಸೋಮಣ್ಣ, ಪ್ರತಾಪಸಿಂಹ ನಮಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ನಮಗೆ ಗೌರವ ಇದೆ. ಸೋಮಣ್ಣ ವರುಣಾದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಕರೆದರೆ ಅವರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯವರು ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Fri, 5 May 23