ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಪುನೀತ್ ಆಸ್ಪತ್ರೆ ಮುಂದಿಟ್ಟು ಪ್ರತಾಪ್ ಸಿಂಹ ಕಿಡಿ: ಶಿವರಾಜ್ ಕುಮಾರ್ ಹೇಳಿದ್ದಿಷ್ಟು
ಸಿದ್ದರಾಮಯ್ಯನವರ ಪರವಾಗಿ ವಿ ಸೋಮಣ್ಣ ವಿರುದ್ಧ ನಟ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಇದಕ್ಕೆ ಸ್ವತಃ ಹ್ಯಾಟ್ರಿಕ್ ಹೀರೋ ಶಿವಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್((Shiva Rajkumar) ಅವರು ನಿನ್ನೆ(ಮೇ 04) ಮಾಜಿ ಸಿಎಂ ಸಿದ್ದರಾಮಯ್ಯ( (Siddaramaiah) ಪರವಾಗಿ ವರುಣಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದು, ಇದಕ್ಕೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಅದರಲ್ಲೂ ಮುಖ್ಯವಾಗಿ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha) ಅವರು ಶಿವರಾಜ್ ಕುಮಾರ್ ಅವರ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಇದೀಗ ಇದಕ್ಕೆ ಸ್ವತಃ ಶಿವರಾಜ್ ಕುಮಾರ್ ಅವರು ಶಿವಮೊಗ್ಗದಲ್ಲಿ ಇಂದು(ಮೇ 05) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ವಿ.ಸೋಮಣ್ಣ, ಪ್ರತಾಪಸಿಂಹ ನಮಗೆ ಒಳ್ಳೆಯ ಆಪ್ತರು. ಅವರ ಬಗ್ಗೆ ನಮಗೆ ಗೌರವ ಇದೆ. ಸೋಮಣ್ಣ ವರುಣಾದಲ್ಲಿ(Varuna) ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಕರೆದರೆ ಅವರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯವರು ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಪ್ರಚಾರದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದರು.
ಪ್ರತಾಪ್ ಸಿಂಹ ಟ್ವೀಟ್ಗೆ ನಟ ಪ್ರಕಾಶ್ ರಾಜ್ ಕಿಡಿ
ಇನ್ನು ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ ಕುಮಾರ್ ಪ್ರಚಾರ ಕುರಿತು ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ಅವರು ಪುನೀತ್ ರಾಜ್‌ಕುಮಾರ್ ಹೆಸರು ಪ್ರಸ್ತಾಪಿಸಿದ್ದರು. ಈ ವಿಚಾರಕ್ಕೆ ಅಸಮಾಧಾನಗೊಂಡ ನಟ ಪ್ರಕಾಶ್ ರಾಜ್ ಸಂಸದರನ್ನು ಟ್ಯಾಗ್ ಮಾಡಿ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ನಿಮ್ಮ ಹೊಲಸು ರಾಜಕಾರಣಕ್ಕೆ ..ನಮ್ಮೆಲ್ಲರ “ಅಪ್ಪು” ಅವರನ್ನ ಯಾಕ್ ಎಳೀತೀರ್ರಿ ಪ್ರತಾಪ್ ಸಿಂಹ ಅವರೆ .. ಛಿ ಛೀ .. ಇದು ತುಂಬಾ ದೊಡ್ಡ ತಪ್ಪು .. ಮಾಡ್ಬೇಡಿ ” ಎಂದಿದ್ದಾರೆ. ಪ್ರತಾಪ್ ಸಿಂಹ ಅವರ ಹಿಂದಿನ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಶಿವರಾಜ್ ಕುಮಾರ್ ನಡೆಗೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಕೂಡಾ ವಾಗ್ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ್ದರೂ ತಮ್ಮ ಎದುರಾಳಿ ಪರ ಶಿವರಾಜ್ ಕುಮಾರ್ ಪ್ರಚಾರ ಮಾಡಿರುವುದು ಬೇಸರ ಉಂಟುಮಾಡಿದೆ ಎಂದಿದ್ದರು. ಇದೀಗ ಶಿವರಾಜ್ ಕುಮಾರ್ ಎಲ್ಲವುದಕ್ಕೂ ಸ್ಪಷ್ಟನೆ ಕೊಟ್ಟಿದ್ದು, ಸೋಮಣ್ಣ ಸಹ ಶಿವರಾಜ್ ಕುಮಾರ್ ಅವರನ್ನು ಪ್ರಚಾರಕ್ಕೆ ಕರೆಯುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Fri, 5 May 23