ಮಂಡ್ಯ: ಪ್ರಸಕ್ತ ಚುನಾವಣೆಯಲ್ಲಿ (Karnataka Assembly Elections 2023) ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ (Congress) ಉಚಿತ ಘೋಷಣೆಗಳ ಮೊರೆಹೋಗಿದ್ದು, ಮತದಾರರಿಗೆ ಹಣದ ಆಸೆಗಳನ್ನು ತೋರಿಸುತ್ತಿದೆ. ಇದನ್ನು ಟೀಕಿಸಿರುವ ಮಂಡ್ಯ ಸಂಸದೆ ಸುಮಲತಾ (Sumalatha Ambareesh) ಅವರು, ಜನರಿಗೆ ಸ್ವಾವಲಂಭಿ ಜೀವನ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದಿದ್ದಾರೆ. ಮದ್ದೂರು ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಸಿದವನಿಗೆ ಮೀನು ಕೊಟ್ಟರೆ ಆ ಒಂದು ದಿನಕ್ಕೆ ಊಟ ಮಾಡುತ್ತಾರೆ. ಆದರೆ ಆ ಹಸಿದ ವ್ಯಕ್ತಿಗೆ ಮೀನು ಹಿಡಿಯುವುದನ್ನು ಕಲಿಸಿ ಕೊಟ್ಟರೆ ತನ್ನ ಇಡೀ ಜೀವನವನ್ನು ಸ್ವಾಭಿಮಾನದಿಂದ ಕಟ್ಟಿಕೊಳ್ಳುತ್ತಾನೆ ಎಂಸದರು.
ಸ್ವಾವಲಂಬಿ ಜೀವನ ಮಾಡಲು ದಾರಿ ಮಾಡಿಕೊಡಬೇಕು. ಅದು ಬಿಟ್ಟು ಎರಡು ಸಾವಿರ ಫ್ರೀ ಕೊಡುವುದು ಅಂದರೆ ಏನರ್ಥ ಎಂದು ಪ್ರಶ್ನಿಸಿದ ಸುಮಲತಾ, ಈ ದುಡ್ಡು ಎಲ್ಲಿಂದ ತರುತ್ತಾರೋ ಗೊತ್ತಿಲ್ಲ. ಆಮೇಲೆ ನೀವು ರಸ್ತೆ ಸರಿ ಇಲ್ಲ, ನೀರು ಬರುತ್ತಿಲ್ಲ ಅಂದರೆ ಅವರು (ಕಾಂಗ್ರೆಸ್) ಎರಡು ಸಾವಿರ ಕೊಟ್ಟಿದ್ದೇವೆ ಅಲ್ವಾ ಅಂತಾರೆ, ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡುತ್ತೇವೆ ಅಂತಾರೆ. ಈ ಹಿಂದೆ ನೀರಿಗಾಗಿ ಬಹಳ ದೂರ ದೂರ ಹೋಗಬೇಕಿತ್ತು. ಆದರೆ ಈಗ ಜಲ ಜೀವನ್ ಮಿಷನ್‌ನಿಂದ ಮೋದಿ ಮನೆ ಮನೆಗೂ ನೀರು ಕೊಟ್ಟಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ನೋಡಿದ್ದೇವೆ, ಜೆಡಿಎಸ್ ಪಕ್ಷ ನೋಡಿದ್ದೇವೆ. ಈ ಬಾರಿ ಬಿಜೆಪಿಗೆ ಬೆಂಬಲ ಕೊಡಿ ಎಂದು ಮನವಿ ಮಾಡಿಕೊಂಡರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬುಡಕ್ಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದೆ. ಹೆಣ್ಣು ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಿದ್ದು ಕೂಡ ಇದೇ ಮೋದಿ ಸರಕಾರ. ಆಶಾ ಕಾರ್ಯಕರ್ತರಿಗೆ 6 ಸಾವಿರ ಇತ್ತು. ಅದನ್ನು ಕೋವಿಡ್ ಸಂದರ್ಭದಲ್ಲಿ ಶೇ 50ರಷ್ಟು ಹೆಚ್ಚಳ ಮಾಡಿದ್ದಾರೆ. ಗರ್ಭಿಣಿ ಹೆಂಗಸರಿಗೆ ಉಚಿತ ಸ್ಕ್ಯಾನ್, ತಾಯಿ -ಮಗು ಆರೋಗ್ಯ ಪರೀಕ್ಷೆ, ಮಗುವಿನ ತಾಯಿ ಅರೋಗ್ಯ ಏರುಪೇರು ಆಗದಂತೆ ಪೌಷ್ಟಿಕ ಆಹಾರ ಇತ್ಯಾದಿಗಳನ್ನು ನೀಡಲಾಗುತ್ತಿದೆ ಎಂದರು.
ಮದ್ದೂರಿಗೆ ಬಂದಾಗ ಸಂಸದೆ ಅನ್ನೋದಕ್ಕಿಂತ ಇಲ್ಲಿನ ಸೊಸೆ ಅಂತ ಅನಿಸುತ್ತದೆ. ಮತದಾರರು ಅಂತಲ್ಲ, ಇದು ನನ್ನ ಸಂಬಂಧ, ಅಧಿಕಾರ, ಆತ್ಮೀಯತೆ. ಇಲ್ಲಿ ಹತ್ತಾರು ವರ್ಷಗಳಿಂದ ಎರಡೇ ಎರಡು ಪಕ್ಷಕ್ಕೆ ಗೆಲ್ಲಿಸಿ ಏನು ಪಡೆದಿದ್ದೇವೆ. ಅದಕ್ಕಿಂತ ಮೊದಲು ವೈಯಕ್ತಿಕ ನನಗೆ ಅನುಭವ ಹೇಳುತ್ತೇನೆ. ನನಗಾಗಿರುವ ನೋವು ಅಷ್ಟಾಗಿ ಹೇಳಿಲ್ಲ. ನಾಲ್ಕು ವರ್ಷಗಳ ಹಿಂದೆ ಅಂಬರೀಶ್ ಅವರು ಕಾಲ ಆದ ನಂತರ ನಡೆದ ವಿಷಯ ನಿಮಗೆಲ್ಲಾ ಗೊತ್ತಿದೆ. ಅಂಬರೀಶ್ ಕಾಲವಾಗಿ ಎರಡು ತಿಂಗಳು ಆಗಿರಲಿಲ್ಲ. ನಮಗೆ ಅವಮಾನಗಳಾದವು ಎಂದರು.
ಗುರು ಎಂಬ ಸೈನಿಕ ಹುತಾತ್ಮನಾದಾಗ ನಾನು ಇಲ್ಲಿ ಬಂದಿದ್ದೆ. ಆಗ ನಾನು ಚುನಾವಣೆಗೆ ನಿಂತಿರಲಿಲ್ಲ. ಆಗ ಆ ಹುತಾತ್ಮ ಸೈನಿಕನಿಗೆ ಅಂತಿಮ ಸಂಸ್ಕಾರ ಮಾಡಲೂ ಸರಕಾರ ಮುಂದೆ ಬರಲಿಲ್ಲ. ಆಗ ಯಾರ ಸರ್ಕಾರ ಇತ್ತು ಗೊತ್ತಲ್ಲ, ಆಗ ನೆರವಿಗೆ ಬಂದಿದ್ದು ಅಂಬರೀಶ್ ಕುಟುಂಬ. ಹುತಾತ್ಮ ಸೈನಿಕರ ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಾಗ ಕೊಟ್ಟಿದ್ದೇವೆ. ನಾನು ಸಂಸದೆಯಾದ ನಂತರ ನಾನು ಕಾಮಗಾರಿಗಳ ಗುದ್ದಲಿ ಪೂಜೆ ಮಾಡುವುದಕ್ಕೂ, ಹೆಸರಿಡಲು ಮುಂದಾದಾಗ ಬಹಳ ಕಾಟ ಕೊಟ್ಟಿದ್ದಾರೆ. ಅಲ್ಲಿ ಮಹಿಳೆಯರಿಗೆ ಗೌರವ ಇಲ್ಲ. ಬರೀ ಒಂದೇ ಒಂದು ಕುಟುಂಬ ಬೆಳೆಸುವುದನ್ನು ಬಿಡಬೇಕು ಎನ್ನುವ ಮೂಲಕ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಮುಲತಾ, ಈ ಬಾರಿ ಬಿಜೆಪಿಗೆ ವೋಟು ಹಾಕಬೇಕು ಎಂದು ಮನವಿ ಮಾಡಿಕೊಂಡರು.
ವಿಧಾನಸಭೆ ಚುಣಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Tue, 25 April 23