ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ (Congress) ಪಕ್ಷವು ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಹೆಸರಿಸಿರುವ 166 ಮಂದಿ ಪೈಕಿ ನಮ್ಮ ಸಮುದಾಯದ ಕೇವಲ 11 ಮಂದಿಗೆ ಮಾತ್ರ ಟಿಕೆಟ್ ಘೋಷಿಸಲಾಗಿದೆ. ರಾಜ್ಯದ ಕಾಂಗ್ರೆಸ್ ನಾಯಕರು ನಮ್ಮನ್ನು ವಂಚಿಸಿದ್ದಾರೆ ಎಂದು ಸುನ್ನಿ ಉಲೆಮಾ ಬೋರ್ಡ್ನ (Sunni Ulama Board) ಕೆಲವು ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ನೀಡಿಕೆಯಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ, ಬಿಜೆಪಿಯನ್ನು ಹೇಗಾದರೂ ಅಧಿಕಾರದಿಂದ ಹೊರಗಿಡಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಇದೀಗ, ಮುಸ್ಲಿಂ ಮುಖಂಡರ ಒಂದು ಗುಂಪಿನಿಂದ ಬಂಡಾಯ ಎದುರಿಸುತ್ತಿದೆ.
ಮುಸ್ಲಿಂ ಮುಖಂಡರಿಗೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಭರವಸೆಗಳನ್ನು ನೀಡಿದ್ದರೂ ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಕನಿಷ್ಠ 25-30 ಟಿಕೆಟ್ ನೀಡಬೇಕು. ಪಕ್ಷವು ಮುಸ್ಲಿಂ ಅಭ್ಯರ್ಥಿಯನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕರ್ನಾಟಕ ಸುನ್ನಿ ಉಲೆಮಾ ಬೋರ್ಡ್ನ ಸದಸ್ಯ ಮೊಹಮ್ಮದ್ ಖಾರಿ ಜುಲ್ಫಿಕರ್ ನೂರಿ ಹೇಳಿರುವುದಾಗಿ ‘ಇಂಡಿಯಾ ಟುಡೆ’ ವರದಿ ಮಾಡಿದೆ.
ಇದುವರೆಗೆ ಕಾಂಗ್ರೆಸ್ 166 ಮಂದಿಯ ಹೆಸರುಗಳನ್ನು ಪ್ರಕಟಿಸಿದ್ದು ಅದರಲ್ಲಿ 11 ಮುಸ್ಲಿಂ ಅಭ್ಯರ್ಥಿಗಳಷ್ಟೇ ಇದ್ದಾರೆ. ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಟಿಕೆಟ್ ನೀಡುವುದಲ್ಲ, ಇತರೆಡೆಗಳಲ್ಲಿಯೂ ನೀಡಬೇಕೆಂದು ನಾವು ಬಯಸುತ್ತೇವೆ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಾದಿ ಆಗ್ರಹಿಸಿದ್ದಾರೆ.
ಕರ್ನಾಟಕ ಸುನ್ನಿ ಉಲೆಮಾ ಮಂಡಳಿಯು ಕಾಂಗ್ರೆಸ್ 20 ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಮತ್ತು ಚುನಾವಣೆಯಲ್ಲಿ ಗೆಲ್ಲಲು ಪಕ್ಷವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದೆ.
ಆಡಳಿತಾರೂಢ ಬಿಜೆಪಿ ಸರ್ಕಾರವು 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಎರಡು ಪ್ರಬಲ ಸಮುದಾಯಗಳಿಗೆ ಹಂಚಿಕೆ ಮಾಡಿದ ನಂತರ ಯಾವುದೇ ಜಾತ್ಯತೀತ ಪಕ್ಷಗಳು ನ್ಯಾಯಾಲಯದ ಮೊರೆ ಹೋಗಲಿಲ್ಲ ಎಂದು ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಜಾತ್ಯತೀತ ಪಕ್ಷಗಳು ಮುಸ್ಲಿಮರ ಜತೆ ನಿಲ್ಲಬೇಕಿತ್ತು. ನ್ಯಾಯಾಲಯದ ಮೊರೆ ಹೋಗಬೇಕಿತ್ತು ಎಂದು ಸುನ್ನಿ ಉಲೆಮಾ ಮಂಡಳಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ