ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಮತ್ತು ಸಂಸದ ಡಿವಿ ಸದಾನಂದ ಗೌಡ (DV Sadananda Gowda) ಅವರ ಬ್ಯಾನರ್ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಪುತ್ತೂರು ಬಸ್ ನಿಲ್ದಾಣದ ಬಳಿಯಲ್ಲಿ ರಾತ್ರೋರಾತ್ರಿ ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಪುತ್ತೂರು ನಗರಸಭಾ ಆಯುಕ್ತ ಮಧು ಮನೋಹರ್ ಹಾಗೂ ಇತರರು ಪೊಲೀಸರಿಗೆ ದೂರು ನೀಡಿದ್ದರು. ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆದಿದ್ದ ಪೋಲೀಸರು ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಲಾಗಿದೆ. ಆರೋಪಿಗಳಿಗೆ ರಕ್ತ ಒಸರುವಷ್ಟು ಪೊಲೀಸರು ಥಳಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಆರೋಪಿಗಳು ಗಾಯಗೊಂಡಿರುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತರ ವಿರುದ್ಧವೇ ನಿರ್ಗಮಿತ ಶಾಸಕ ಸಂಜೀವ ಮಠಂದೂರು ಹಾಗೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ಹರಿದಾಡಿತ್ತು. ಇದಕ್ಕೂ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆ: ನಳಿನ್ ಕುಮಾರ್ ಕಟೀಲ್ ಸ್ಥಾನಕ್ಕೆ ಯಾರು? ಇಲ್ಲಿವೆ ಕೆಲವು ಹೆಸರುಗಳು
ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಒಡಕು ಮೂಡಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಆರಂಭವಾಗಿದ್ದ ಅಸಮಾಧಾನ ನಂತರ ಭುಗಿಲೆದ್ದಿತ್ತು. ಪರಿಣಾಮವಾಗಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪರಿಣಾಮ ಬಿಜೆಪಿ ಅಭ್ಯರ್ಥಿಗೆ ಸೋಲಾಗಿರುವುದು ಮಾತ್ರವಲ್ಲದೆ, ಪಕ್ಷವು ಮೂರನೇ ಸ್ಥಾನಕ್ಕೆ ಕುಸಿಯುವಂತಾಗಿದೆ. ಇದರೊಂದಿಗೆ ರಾಜ್ಯದಲ್ಲಿಯೂ ಬಿಜೆಪಿ ಹೀನಾಯ ಸೋಲು ಅನುಭವಿಸಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ