ಮೋದಿ ಜನಪ್ರಿಯತೆ ಲಾಭ ಪಡೆಯಲು ಬಿಜೆಪಿ ತಂತ್ರ: ಕರ್ನಾಟಕದಲ್ಲಿ 20 ರ‍್ಯಾಲಿ ನಡೆಸಲಿರುವ ಪ್ರಧಾನಿ
ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆ ಬಳಿಕ ರಾಜಕೀಯ ಪಕ್ಷಗಳು ರ್ಯಾಲಿ, ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗುತ್ತಿವೆ. ಇನ್ನು ಬಿಜೆಪಿ ಸಹ ತಮ್ಮ ಪಕ್ಷದ ಸ್ಟಾರ್ ಐಕಾನ್ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಕದನ ಕಣ ರಂಗೇರಿದೆ. ರಾಜಕೀಯ ನಾಯಕರು ಚುನಾವಣಾ ಅಖಾಡದಲ್ಲಿ ಮತದಾರರ ಓಲೈಕೆ ಕಸರತ್ತು ನಡೆಸಿದ್ದಾರೆ. ಆಡಳಿತರೂಢ ಬಿಜೆಪಿ ಈ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಹಂಬಲದಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಈಗಾಗಲೇ ವಿಜಯ್ ಸಂಕಲ್ಪ ಯಾತ್ರೆ ಸೇರಿದಂತೆ ಮತದಾರರನ್ನು ಸೆಳೆಯಲು ಬಿಜೆಪಿ ನಾನಾ ಕಾರ್ಯಕ್ರಮಗಳನ್ನು ಮಾಡಿವೆ. ಇದೀಗ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಬಿಜೆಪಿ ತಂತ್ರ ರೂಪಿಸಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಮುಂದಾಗಿದೆ. ಈಗಾಗಲೇ ನರೇಂದ್ರ ಮೋದಿ ಅವರು ಮಂಡ್ಯ, ಮೈಸೂರು, ಕಲಬುರಗಿ, ಧಾರವಾಡ, ತುಮಕೂರು, ಬೆಂಗಳೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಹೆಸರಲ್ಲಿ ಒಂದು ಸುತ್ತಿನ ಪ್ರಚಾರ ಮಾಡಿದ್ದಾರೆ. ಇದೀಗ ಮೋದಿ ನೇರವಾಗಿಯೇ ಚುನಾವಣಾ ಅಖಾಡಕ್ಕಿಳಿಯಲಿದ್ದು, ಈ ಸಂಬಂಧ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ರ‍್ಯಾಲಿ ನಡೆಸಲಿದ್ದಾರೆ ಎಂದು ಕರ್ನಾಟಕ ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ, ಏ.8ಕ್ಕೆ ಅಂತಿಮ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಕೆಲವು ಸಮೀಕ್ಷೆಗಳ ಪ್ರಕಾರ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುತ್ತಿದ್ದರೆ, ಇನ್ನು ಕೆಲ ಸಮೀಕ್ಷೆಗಳು ಕಾಂಗ್ರೆಸ್ ಈ ಬಾರಿ ಬಹುಮತದ ಸಮೀಪಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ತಾನು ಅಧಿಕಾರದಲ್ಲಿರುವ ಏಕೈಕ ರಾಜ್ಯವನ್ನು ಉಳಿಸಿಕೊಳ್ಳಲು ಬಿಜೆಪಿ ಎಲ್ಲಾ ಕಸರತ್ತು ನಡೆಸಿದೆ. ಇದರಿಂದ ಸಾಧ್ಯವಾದಷ್ಟು ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮತ ಗಳಿಕೆಗೆ ಬಳಸಿಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಭಾಗವಹಿಸುವ ರ್ಯಾಲಿ ಹಾಗೂ ಪಕ್ಷದ ಚುನಾವಣಾ ರಣತಂತ್ರ ಹೆಣೆಯಲು ತಂಡ ರೂಪಿಸಲಾಗಿದೆ.
ರಾಜ್ಯದಲ್ಲಿನ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪಗಳ ಸರಮಾಲೆಯನ್ನೇ ಮಾಡಿ ಜನರಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ಮೋದಿ ಮ್ಯಾಜಿಕ್ ಬಳಸಿಕೊಳ್ಳುವುದೇ ಪಕ್ಷದ ಮುಂದಿರುವ ಪ್ರಮುಖ ಅಸ್ತ್ರ ಎಂದು ಮನಗಂಡಿರುವ ಬಿಜೆಪಿ ನಾಯಕರು, ರಾಜ್ಯದ 6 ವಿಭಾಗಗಳ ಪೈಕಿ ಪ್ರತಿಯೊಂದರಲ್ಲೂ ಮೋದಿ ನೇತೃತ್ವದ ಕನಿಷ್ಠ 3 ರ‍್ಯಾಲಿಗಳನ್ನು ಆಯೋಜಿಸಲು ಯೋಜಿಸಿದ್ದಾರೆ. 40 ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಒಂದು ರ‍್ಯಾಲಿ ಮಾಡಲು ಪ್ಲಾನ್ ಸಿದ್ಧವಾಗಿದೆ. ಇನ್ನು ಬಹಿರಂಗ ಪ್ರಚಾರಕ್ಕೆ ಅಂತ್ಯಕ್ಕೆ ಮೊದಲಿನ ಮೂರು ದಿನಗಳನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲೇ ಠಿಕಾಣಿ ಹೂಡಲಿದ್ದಾರೆ ಎಂದು ತಿಳಿದುಬಂದಿದೆ. ಮೇ 6ರಿಂದ 8ರ ವರೆಗೆ ಮೋದಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.
ನರೇಂದ್ರ ಮೋದಿ ಮಾತ್ರವಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಹಲವು ಕೇಂದ್ರ ಸಚಿವರು ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಲಿದ್ದಾರೆ. ಯಡಿಯೂರಪ್ಪ ಅವರು ಕನಿಷ್ಠ 50 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ನಮ್ಮ ಗುರಿ 140 ಸೀಟು. ಈ ಸಂಖ್ಯೆಯನ್ನು ತಲುಪಲು ಎಲ್ಲಾ ಕಾರ್ಯ ತಂತ್ರಗಳನ್ನು ರೂಪಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ನರೇಂದ್ರ ಮೋದಿ ಅವರ ವರ್ಚಸ್ಸು ಬಳಸಿಕೊಳ್ಳಲು ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಫಲಿತಾಂಶದ ಬಳಿಕ ತಿಳಿಯಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ರಾಜಕೀಯದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Tue, 4 April 23