ರಾಮನಗರ: ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಪುತ್ರ ನಿಖಿಲ್ ಗಾಗಿ ವಿಧಾನಸಭಾ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ(Ramangara) ಕ್ಷೇತ್ರದಿಂದ ಪುತ್ರ ನಿಖಿಲ್(Nikhil Kumaraswamy) ಸ್ಪರ್ಧಿಸಲಿದ್ದಾನೆ ಎಂದು ಸ್ವತಃ ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಇಂದು(ಡಿಸೆಂಬರ್ 17) ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲಿದ್ದಾನೆ. ನಿಮ್ಮೆಲ್ಲರ ಆಶೀರ್ವಾದ ಪುತ್ರ ನಿಖಿಲ್ ಕುಮಾರಸ್ವಾಮಿ ಮೇಲೆ ಇರಲಿ ಎಂದು ಘೋಷಿಸಿ ಭಾವುಕರಾದರು. ಇನ್ನು ನಿಖಿಲ್ ಅಭ್ಯರ್ಥಿಯಾಗುತ್ತಾರೆಂದು ಘೋಷಿಸುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಮುಂದಿನ ಚುನಾವಣೆಯಲ್ಲಿ ನೀವೆಲ್ಲಾ ಸೇರಿ ಅವರಿಗೆ ಬೆಂಬಲ ನೀಡಬೇಕು. ನನ್ನ ಬಗ್ಗೆ ಕೆಲವು ಅಪಪ್ರಚಾರಗಳನ್ನು ಮಾಡುತ್ತಿದ್ದರು. ಹಾಗಾಗಿ ಇವತ್ತೇ ಫೈನಲ್ ಮಾಡಬೇಕೆಂದು ಇಲ್ಲಿ ಬಂದು ಹೇಳಿದ್ದೇನೆ. ನಾನು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನು ದೇವರ ಮುಂದೆ ನಿಂತಾಗ ಕೂಡ ನನ್ನ ಗಂಡ ನನ್ನ ಮಗನಿಗೆ ಒಳ್ಳೆಯದಾಗಲಿ ಅಂತಾನೆ ಕೇಳುವುದು ಎಂದು ಹೇಳುತ್ತ ಕಣ್ಣೀರಿಟ್ಟರು.
ಅನಿತಾ ಕುಮಾರಸ್ವಾಮಿ ಮುಂದಿನ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ವತಃ ಎಚ್ಡಿ ಕುಮಾರಸ್ವಾಮಿ ಈ ಹಿಂದೆಯೇ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಮನಗರ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿಸಿತ್ತು. ಒಂದು ಕಡೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಸಾಧ್ಯತೆಗಳು ಹೆಚ್ಚಿವೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಪಕ್ಷದಿಂದ ಯಾವುದೇ ಖಚಿತ ಮಾಹಿತಿ ಸಿಕ್ಕಿರಲಿಲ್ಲ, ಇದೀಗ ಸ್ವತಃ ಶಾಸಕಿ, ತಾಯಿ ಅನಿತಾ ಕುಮಾರಸ್ವಾಮಿ ಅವರಿಂದ ಮಗನಿಗೆ ಪಟ್ಟಾಭಿಷೇಕವಾಗಿದೆ. ಈ ಮೂಲಕ ನಿಖಿಲ್ ಸ್ಪರ್ಧಿಸುವ ಬಗ್ಗೆ ಅನಿತಾ ಕುಮಾರಸ್ವಾಮಿ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:02 pm, Sat, 17 December 22