ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸ್ಫೂರ್ತಿ; ಬೆಳಗಾವಿಯ ಶತಾಯುಷಿ ಅಜ್ಜನನ್ನು ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಕಾರಣ ಇಲ್ಲಿದೆ

|

Updated on: May 03, 2023 | 4:28 PM

ಬೆಳಗಾವಿಯಲ್ಲಿ 103 ವರ್ಷದ ವೃದ್ಧ ಮಹಾದೇವ ಮಹಾಲಿಂಗ ಮಾಳಿ ಮನೆಯಿಂದಲೇ ಮತದಾನ ಮಾಡಿದ್ದು ಚುನಾವಣಾ ಆಯೋಗದ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸ್ಫೂರ್ತಿ; ಬೆಳಗಾವಿಯ ಶತಾಯುಷಿ ಅಜ್ಜನನ್ನು ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಕಾರಣ ಇಲ್ಲಿದೆ
ಚುನಾವಣಾ ಅಧಿಕಾರಿಗಳ ಜತೆ ಮಹಾದೇವ ಮಹಾಲಿಂಗ ಮಾಳಿ
Follow us on

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದ್ದು (Vote From Home) ಆ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ರಾಜ್ಯದ ಹಲವೆಡೆ ಈಗಾಗಲೇ ವೃದ್ಧರು, ಅಂಗವಿಕಲರ ಮನೆಗೆ ತೆರಳಿರುವ ಚುನಾವಣಾ ಆಯೋಗದ ಸಿಬ್ಬಂದಿ ಮತದಾನ ಮಾಡಲು ನೆರವಾಗಿದ್ದಾರೆ. ಈ ಮಧ್ಯೆ, ಬೆಳಗಾವಿಯಲ್ಲಿ  (Belagavi) 103 ವರ್ಷದ ವೃದ್ಧ ಮಹಾದೇವ ಮಹಾಲಿಂಗ ಮಾಳಿ ಮನೆಯಿಂದಲೇ ಮತದಾನ ಮಾಡಿದ್ದು ಚುನಾವಣಾ ಆಯೋಗದ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವೆಡೆಗಿನ ತಮ್ಮ ಬದ್ಧತೆಯಿಂದ ಮಹಾದೇವ ಮಹಾಲಿಂಗ ಮಾಳಿ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಚರಿಸುವ ಕರ್ನಾಟಕದ ಸಂಸ್ಕೃತಿಗೆ ಅನುಗುಣವಾಗಿ ಮೂಡಿಬಂದಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ 103 ವರ್ಷದ ಮಹಾದೇವ ಮಹಾಲಿಂಗ ಮಾಳಿ ಇತ್ತೀಚೆಗೆ ಮತ ಚಲಾಯಿಸಿದ್ದರು. ಈ ವಿಚಾರವಾಗಿ ಮಹಾದೇವ ಅವರಿಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ದೂರವಾಣಿ ಕರೆ ಮಾಡಿ ಧನ್ಯವಾದ ಹೇಳಿದ್ದರು.

ಇದನ್ನೂ ಓದಿ: ಮನೆಯಿಂದ ಮತ ಚಲಾಯಿಸಿದ 103 ವರ್ಷದ ಅಜ್ಜನಿಗೆ ಕೇಂದ್ರ ಚುನಾವಣಾ ಆಯೋಗದಿಂದ ಶಹಬ್ಬಾಶ್ ​ಗಿರಿ

ಮಹಾಲಿಂಗ ಅವರು ಮತದಾನದ ಮೂಲಕ ಪ್ರಜಾಪ್ರಭುತ್ವದ ಸಮರ್ಪಣಾ ಮನೋಭಾವ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಒಳಗೊಳ್ಳುವಂಥ, ಪ್ರತಿಯೊಬ್ಬರಿಗೂ ಲಭ್ಯವಾಗುವಂಥ ಚುನಾವಣಾ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂಬುದನ್ನು ಈ ಮೂಲಕ ದೃಢಪಡಿಸುತ್ತೇವೆ ಎಂದು ಆಯುಕ್ತ ರಾಜೀವ್ ಕುಮಾರ್ ಹೇಳಿದ್ದರು.

ರಾಜ್ಯದಲ್ಲಿ ಇದೇ ಮೊದಲ ಬಾರಿ ವೋಟ್ ಫ್ರಂ ಹೋಮ್

ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ಅಯೋಗದ ಸಿಬ್ಬಂದಿ ಅವರ ಮನೆ ಬಾಗಿಲಿಗೆ ತೆರಳಿ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಈಗಾಗಲೇ ಮೀಸಲಿಟ್ಟಿರುವ ಸ್ಟ್ರಾಂಗ್ ರೂಮ್​​ಗೆ ಶಿಪ್ಟ್ ಮಾಡಲಾಗುತ್ತದೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುತ್ತದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:21 pm, Wed, 3 May 23