ಮನೆಯಿಂದ ಮತ ಚಲಾಯಿಸಿದ 103 ವರ್ಷದ ಅಜ್ಜನಿಗೆ ಕೇಂದ್ರ ಚುನಾವಣಾ ಆಯೋಗದಿಂದ ಶಹಬ್ಬಾಶ್ ಗಿರಿ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಬೆಳಗಾವಿಯಲ್ಲಿ 103 ವರ್ಷದ ವೃದ್ಧರೊಬ್ಬರು ಮನೆಯಿಂದಲೇ ಮತದಾನ ಮಾಡಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ (Voting) ಅವಕಾಶ ನೀಡಲಾಗಿದೆ. ಅದರಂತೆ ಶಿವಮೊಗ್ಗದಲ್ಲಿ 103 ವರ್ಷದ ವೃದ್ಧರೊಬ್ಬರು ಮನೆಯಿಂದಲೇ ಮತದಾನ ಮಾಡಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರದ 103 ವರ್ಷದ ಮಹಾದೇವ ಮಹಾಲಿಂಗ ಮಲಿ ಎಂಬವರು ಮತ ಚಲಾವಣೆ ಮಾಡಿದ್ದರು. ಈ ವಿಚಾರವಾಗಿ ಮಹಾದೇವ ಅವರಿಗೆ ದೂರವಾಣಿ ಕರೆ ಮಾಡಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್, ಧನ್ಯವಾದಗಳನ್ನ ತಿಳಿಸಿದ್ದಾರೆ.
ಮಹಾಲಿಂಗ ಅವರು ಮತದಾನದ ಮೂಲಕ ಪ್ರಜಾಪ್ರಭುತ್ವದ ಸಮರ್ಪಣಾ ಮನೋಭಾವ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಒಳಗೊಳ್ಳುವಂಥ, ಪ್ರತಿಯೊಬ್ಬರಿಗೂ ಲಭ್ಯವಾಗುವಂಥ ಚುನಾವಣಾ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂಬುದನ್ನು ಈ ಮೂಲಕ ದೃಢಪಡಿಸುತ್ತೇವೆ ಎಂದು ಆಯುಕ್ತ ರಾಜೀವ್ ಕುಮಾರ್ ಹೇಳಿದರು.
ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದವರಿಗಾಗಿ ಮನೆಗೆ ಮತಗಟ್ಟೆ ಕೊಂಡೊಯ್ಯವುದಕ್ಕೆ ಬದ್ಧವಾಗಿದೆ. 80 ವರ್ಷ ಮೇಲ್ಪಟ್ಟಿರುವವರು ಹಾಗೂ ಶೇ.40 ರಷ್ಟು ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗೆ ಇದೇ ಮೊದಲ ಬಾರಿ ಮನೆಯಿಂದಲೇ ಮತದಾನ ಮಾಡುವ ಐಚ್ಛಿಕ ಅವಕಾಶವನ್ನು ಒದಗಿಸಲಾಗಿರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನ ಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟಿರುವ 7362 ಕ್ಕೂ ಅಧಿಕ ಜನರು ಹಾಗೂ 1708 ವಿಕಲಚೇತನರು ಮನೆಯಿಂದಲೇ ಮತದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Vote From Home: 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ, ಹೇಗಿದೆ ಬ್ಯಾಲೆಟ್ ಪೇಪರ್ ವೋಟಿಂಗ್?
ಏಪ್ರಿಲ್ 29 ರಿಂದ ಆರಂಭಗೊಂಡಿರುವ ಮತದಾನ ಪ್ರಕ್ರಿಯೆಯಲ್ಲಿ ಇದುವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 6975 ಹಿರಿಯರು ಮತ್ತು 1661 ವಿಕಲಚೇತನರು ಮನೆಯಿಂದಲೇ ತಮ್ಮ ಮತವನ್ನು ಚಲಾಯಿಸಿರುತ್ತಾರೆ ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜೀವ್ ಕುಮಾರ್ ತಿಳಿಸಿದರು.
ಆಯೋಗಕ್ಕೆ ಕೃತಜ್ಞತೆ ಸಲ್ಲಿಸಿದ ಶತಾಯುಷಿ
ಸ್ವತಃ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರೇ ದೂರವಾಣಿ ಕರೆ ಮಾಡಿದಾಗ ಅತ್ಯಂತ ಸಂತೋಷದಿಂದ ಅವರೊಡನೆ ಮಾತನಾಡಿದ ಮಹದೇವ ಮಾಳಿ ಅವರು ತಮ್ಮಂತಹ ಹಿರಿಯರಿಗೆ ಇದೇ ಪ್ರಥಮ ಬಾರಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದ ಚುನಾವಣಾ ಆಯೋಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಹಿಂದೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಇಲ್ಲದಿರುವಾಗ ಗಾಲಿಕುರ್ಚಿಯಲ್ಲಿ ಮತಗಟ್ಟಿಗೆ ತೆರಳಿ ಮತದಾನ ಮಾಡಿರುವುದನ್ನು ನೆನಪಿಸಿಕೊಂಡರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಏಪ್ರಿಲ್ 29 ರಿಂದ ಮೇ 6 ರವರೆಗೆ ಬ್ಯಾಲೇಟ್ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಲಾಗಿದ್ದು, 80 ವರ್ಷ ಮೇಲ್ಪಟ್ಟ ವೃದ್ಧರು ವಿಕಲಚೇತನರಿಗೆ ಹಾಗೂ ಚುನಾವಣೆಯ ಕರ್ತವ್ಯದಲ್ಲಿ ಭಾಗಿಯಾಗುವ ಪೊಲೀಸ್, ಚುನಾವಣೆ ಸಿಬ್ಬಂದಿ ಮಾತ್ರ ಮತದಾನ ಮಾಡಬಹುದಾಗಿದೆ. ಇನ್ನುಳಿದವರು ಮೇ 10ರಂದೇ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು.
80 ವರ್ಷ ಮೇಲ್ಪಟ್ಟ ವೃದ್ಧರಿಗೆ ಚುನಾವಣಾ ಅಯೋಗದ ಸಿಬ್ಬಂದಿ ಅವರ ಮನೆ ಬಾಗಿಲಿನಲ್ಲಿಯೇ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೌಪ್ಯ ಮತ ಚಾಲಯಿಸುವಾಗ ಸ್ಥಳದಲ್ಲಿ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಇರಲಿದ್ದಾರೆ. ಅಲ್ಲದೇ ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಇನ್ನು ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಈಗಾಗಲೇ ಮೀಸಲಿಟ್ಟಿರುವ ಸ್ಟ್ರಾಂಗ್ ರೂಮ್ ಗೆ ಶಿಪ್ಟ್ ಮಾಡಲಾಗುತ್ತದೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Tue, 2 May 23