ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ; ಪ್ರಧಾನಿ ಭದ್ರತೆಗೆ 8 ಸಾವಿರಕ್ಕೂ ಹೆಚ್ಚು ಪೊಲೀಸರು

|

Updated on: May 05, 2023 | 10:10 PM

ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್​ ಶೋ ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ; ಪ್ರಧಾನಿ ಭದ್ರತೆಗೆ 8 ಸಾವಿರಕ್ಕೂ ಹೆಚ್ಚು ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರೋಡ್​ ಶೋ ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ನಗರಾದ್ಯಂತ 8 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಎಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳು ಬಂದೋಬಸ್ತ್‌ನಲ್ಲಿ ಭಾಗಿಯಾಗಲಿದ್ದಾರೆ. ಸಂಚಾರಿ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಹತ್ತು ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೋದಿ ರೋಡ್​ ಶೋಗೆ ಭದ್ರತೆ ಒದಗಿಸಲಿದ್ದಾರೆ.

ಪೊಲೀಸರು ನಾಲ್ಕು ಭಾಗವಾಗಿ ಭದ್ರತೆ ಕೈಗೊಂಡಿದ್ದು, ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ರಾಜಭವನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆ ಒದಗಿಸಲಾಗುತ್ತದೆ. ಜಯನಗರ, ಜೆಪಿನಗರದಲ್ಲಿ ಭದ್ರತೆ ಜವಾಬ್ದಾರಿಯನ್ನು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣ ಕಾಂತ್ ನೇತೃತ್ವದ ತಂಡಕ್ಕೆ ವಹಿಸಲಾಗಿದೆ.

ಸುಮಾರು 150 ಕೆಎಸ್ಆರ್​​ಪಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಚಾಮರಾಜಪೇಟೆಯಿಂದ ಮಹಾಲಕ್ಷ್ಮಿ ಲೇಔಟ್ ತನಕ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತ್ರತ್ವದಲ್ಲಿ ಭದ್ರತೆ ಒದಗಿಸಲಾಗಿದೆ. ಮಹಾಲಕ್ಷ್ಮಿ ಪುರದಿಂದ ಮಲ್ಲೇಶ್ವರಂ ನಿಂದ ಸ್ಯಾಂಕಿ ರಸ್ತೆಯ ವರೆಗೆ ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಚುನಾವಣಾ ಪ್ರಚಾರ ತಂತ್ರಗಾರಿಕೆ ರಹಸ್ಯ ಬಿಚ್ಚಿಟ್ಟ ಬಿಎಲ್​ ಸಂತೋಷ್

ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಪ್ರಧಾನಿ ಹಾದಿ ಹೋಗುವ ಮಾರ್ಗ ಮಧ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಚಾಮರಾಜಪೇಟೆ ಕ್ಷೇತ್ರದ ಶಿರಸಿ ಸರ್ಕಲ್​​ನಲ್ಲಿ ಬಾರೀ ಕಟ್ಟೆಚ್ಚರ ವಹಿಸಲಾಗಿದೆ. ನಾಳೆ ಈ ಮಾರ್ಗದಲ್ಲಿ ವಾಹನ ಸವಾರರು ಬರದಂತೆ ಪೊಲೀಸರಿಂದ ಸಲಹೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ಸಮಯದಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು ನಾಳೆ (ಮೇ 6) ಬೆಳಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ಮಾತ್ರ ರೋಡ್​ ಶೋ ನಡೆಯಲಿದೆ. ಭಾನುವಾರ (ಮೇ 7) ಬೆಳಗ್ಗೆ 9ರಿಂದ ಬೆಳಗ್ಗೆ 11.30ರ ವರೆಗೆ ನಡೆಯಲಿದೆ ಎಂದು ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್​ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:08 pm, Fri, 5 May 23