ಮುಕ್ಕಾಲು ಭಾಗ ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಡುಗಡೆ ಮಾಡಬೇಕಿದ್ದ ರೇಟ್ ಬೋರ್ಡ್ ಇಂದು ಬಿಡುಗಡೆ: ಈಶ್ವರಪ್ಪ
ಬಿಜೆಪಿ ಭ್ರಷ್ಟಾಚಾರ ರೇಟ್ ಬಿಡುಗಡೆ ಮಾಡಿದ ಕಾಂಗ್ರೆಸ್ ವಿರುದ್ಧ ಗುಡುಗಿದ ಕೆಎಸ್ ಈಶ್ವರಪ್ಪ, ಮುಕ್ಕಾಲು ಭಾಗ ಕಾಂಗ್ರೆಸ್ ಸರ್ಕಾರ ಇದ್ದಾಗ ರೆಡಿಯಾದ ರೇಟ್ ಬೋರ್ಡ್ ಈಗ ಬಿಡುಗಡೆ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.
ಗದಗ: ಬಿಜೆಪಿ ಭ್ರಷ್ಟಾಚಾರ ರೇಟ್ ಬಿಡುಗಡೆ ಮಾಡಿದ ಕಾಂಗ್ರೆಸ್ ವಿರುದ್ಧ ಗುಡುಗಿದ ಕೆಎಸ್ ಈಶ್ವರಪ್ಪ (KS Eshwarappa) ಮುಕ್ಕಾಲು ಭಾಗ ಕಾಂಗ್ರೆಸ್ (Congress) ಸರ್ಕಾರ ಇದ್ದಾಗ ರೆಡಿಯಾದ ರೇಟ್ ಬೋರ್ಡ್ ಈಗ ಬಿಡುಗಡೆ ಮಾಡಿದ್ದಾರೆ ಎಂದು ಟಾಂಗ್ ನೀಡಿದರು. ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ರೆಡಿಯಾಗಿದ್ದ ಬೋರ್ಡ್ ಬಿಡುಗಡೆ ಆಗಿರಲಿಲ್ಲ. ಅದು ಇಂದು ಬಿಡುಗಡೆ ಮಾಡಿದ್ದಾರೆ ಅಂತ ತಿರುಗೇಟು ನೀಡಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ನಾವು ಹೇಳಿಲ್ಲ, ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣನವರ ಹೇಳಿದ್ದಾರೆ. 800 ಎಕರೆ ಭೂಮಿಯನ್ನು ತಲಾ ಒಂದು ಎಕರೆಗೆ 10 ಕೋಟಿಯಂತ ಒಟ್ಟು 8 ಸಾವಿರ ಕೋಟಿ ಅವ್ಯವಹಾರ ಸಿದ್ದರಾಮಯ್ಯ ಅವಧಿಯಲ್ಲಿ ಆಗಿದೆ ಅಂತ ವರದಿ ಕೊಟ್ಟಿದ್ದಾರೆ. ಇದಕ್ಕಿಂತ ಸಾಕ್ಷಿ ಆಧಾರ ಬೇಕಾ ಅಂತ ಈಶ್ವರಪ್ಪ ಪ್ರಶ್ನಿಸಿದರು.
ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್ ನಾಯಕರು ಒಂದು ಸಾಕ್ಷಿ ಕೊಟ್ಟಿಲ್ಲ. ಕೇಂದ್ರಕ್ಕೆ ಪತ್ರ ಬರೆದ್ದೇನೆ ಅಂತಾರೆ. ಪತ್ರಕ್ಕೆ ಬೆಲೆ ಇದೆಯಾ ಅಂತ ಕಿಡಿಕಾರಿದ ಈಶ್ವರಪ್ಪ, ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಡಿಕೆ ಶಿವಕುಮಾರ್ ತಿಹಾರ ಜೈಲಿನಿಂದ ಬಂದವರು. ಅವರು ಬೇಲ್ನಲ್ಲಿದ್ದಾರೆ. ಕೋಟಿಗಟ್ಟಲೆ ಹಣ ಅವರ ಮನೆಯಲ್ಲಿ ಸಿಕ್ಕಿದ್ದು ಇಡೀ ದೇಶ ನೋಡಿದೆ. ಬಂಡಲ್ ಗಟ್ಟಲೇ ದಾಖಲೆ ಸಿಕ್ಕಿದೆ. ನಾಚಿಕೆ, ಮಾನ ಮರ್ಯಾದೇ ಇಲ್ಲದ ಕಾಂಗ್ರೆಸ್ನವರು ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ, ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಆನೆ ಗಾತ್ರದ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ ಖರ್ಗೆ ಮಾತನಾಡುತ್ತಾರೆ: ಕೆಎಸ್ ಈಶ್ವರಪ್ಪ
ರಾಜ್ಯದ ಜನ ಯಾವತ್ತೂ ಕಾಂಗ್ರೆಸ್ ನಂಬಲ್ಲ. ಭ್ರಷ್ಟ ಪಕ್ಷ ಅಂದರೆ ಕಾಂಗ್ರೆಸ್, ಭ್ರಷ್ಟಾಚಾರಿಗಳು ಅಂದರೆ ಕಾಂಗ್ರೆಸ್. ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ವಿಪಕ್ಷದಲ್ಲೂ ಕೂರಿಸಲ್ಲ ಎಂದು ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದರು.
ತನ್ನ ಮೇಲಿನ ಹಲ್ಲೆ ಘಟನೆ ಮೆಲುಕು ಹಾಕಿದ ಈಶ್ವರಪ್ಪ
ಈ ಹಿಂದೆ ಹುಲಕೋಟಿಗೆ ಪ್ರಚಾರಕ್ಕೆ ಬಂದಾಗ ಹೊಡೆತ ತಿಂದು ಹೋಗಿದ್ದೆ ಎಂದು ಈಶ್ವರಪ್ಪ ಹೇಳಿದರು. ಅಂದು ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ. ಧಾರವಾಡದ ಚೆಂದ್ರಕಾಂತ ಬೆಲ್ಲದ್ ಅವರು ಅಭ್ಯರ್ಥಿ. ಅಲ್ಲಿ ಹೋಗಲು ಅವಕಾಶವಿಲ್ಲ ಅಂದಿದ್ದರು, ಅಲ್ಲೆನಿದ್ದರೂ ಸರ್ವಾಧಿಕಾರ. ಹುಲಕೋಟಿಯಲ್ಲಿ ಬಿಜೆಪಿಗೆ ಅವಕಾಶವಿಲ್ಲ ಎಂದಿದ್ದರು. ಈ ಗ್ರಾಮದಲ್ಲಿ ಅಂದು 10-15 ಬಿಜೆಪಿ ಕಾರ್ಗಳು ಪುಡಿ ಪುಡಿ ಮಾಡಲಾಗಿತ್ತು. ಆಗಿನ ಕಾಲದಲ್ಲಿ ಬಿಜೆಪಿಗೆ ಶಕ್ತಿ ಇರಲಿಲ್ಲ. ಈಗ ಜನ ಬಿಜೆಪಿ ಪರವಾಗಿದ್ದಾರೆ. ನಮ್ಮ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಗೆದ್ದೇ ಗೆಲ್ಲುತ್ತಾರೆ ಎಂದರು.
ಈಗ ನಮ್ಮ ಎದುರಿಗೆ ನಿಲ್ಲುವವರಿಗೆ ಭಯ ಅಂತ ಪರೋಕ್ಷವಾಗಿ ಕಾಂಗ್ರೆಸ್ನ ಎಚ್ ಕೆ ಪಾಟೀಲ್ ಅವರಿಗೆ ಟಾಂಗ್ ಕೊಟ್ಟ ಈಶ್ವರಪ್ಪ, ಆವಾಗ ನಮ್ಮ ಜೊತೆ ಜನ ಇರಲಿಲ್ಲ. ಈಗ ನಮ್ಮ ಜೊತೆ ಜನ ಇದ್ದಾರೆ. ಹೀಗಾಗಿ ಈಗ ಕಾಂಗ್ರೆಸ್ನವರಿಗೆ ಭಯ ಆವರಿಸಿದೆ. ಯಾಕಪ್ಪ ಬಿಜೆಪಿ ಅವರು ಹಿಂಗ್ ನುಗ್ಗುತ್ತಾರೆ ಅಂತಾರೆ ಎಂದರು.
ಹೆಚ್ ಕೆ ಪಾಟೀಲ್ ಹುಟ್ಟೂರಲ್ಲಿ ಈಶ್ವರಪ್ಪ ಅವರು ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಪರ ಮತಯಾಚನೆ ನಡೆಸಿದರು. ಈ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ಬಿಜೆಪಿ ಪರ, ಭಾರತ ಮಾತೆಯ ಪರ, ಮೋದಿ ಪರ ಘೋಷಣೆಗಳನ್ನು ಕೂಗಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:29 pm, Fri, 5 May 23