ದಾವಣಗೆರೆ: ದಾವಣಗೆರೆಯ (Davangere) ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಸಿಂಗ್ ನಗರದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಿದ್ದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಯನ್ನು ಪೊಲೀಸರು (Police) ಜಪ್ತಿ ಮಾಡಿದ್ದಾರೆ. ಅಡುಗೆ ಸಲಕರಣೆಗಳ ಮೇಲೆ ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರವಿದ್ದ ಅಡುಗೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಡಜ್ಜಿ ಹನಮಂತಪ್ಪ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಬಳ್ಳಾರಿ: ರಕ್ಷಣಾ ಸಿಬ್ಬಂದಿಗಾಗಿ ಮಾರಾಟಕ್ಕಿರುವ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿಮ್ಸ್ ಹಿಂಭಾಗದಲ್ಲಿನ ವಿದ್ಯಾನಗರದ ನಿವಾಸಿ ಈಶ್ವರ ರವಿಚಂದ್ರ ಮನೆ ಮೇಲೆ, ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ರಕ್ಷಣಾ ಸಿಬ್ಬಂದಿಗಾಗಿ ಮಾರಾಟಕ್ಕಿದ್ದ ದುಬಾರಿ ಬೆಲೆಯ ಒಟ್ಟು 4.01ಲಕ್ಷ ರೂ. ಮೌಲ್ಯದ 142 ಮದ್ಯದ ಬಾಟಲ್ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಅಬಕಾರಿ ನಿರೀಕ್ಷ ಕರಾದ ಜ್ಯೋತಿಬಾಯಿ, ಉಪನಿರೀಕ್ಷಕ ರುದ್ರೇಗೌಡ, ಗೌಡಪ್ಪ, ಪೇದೆಗಳಾದ ಖಾಜಾ ಹುಸೇನ್ ಪೀರನ್, ಸದ್ದಾಂ ಹುಸೇನ್, ವಾಹನ ಚಾಲಕಿ ಗಾಯತ್ರಿ ಇದ್ದರು.
ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಹೆಲ್ಮೆಟ್, ಕ್ರೀಡಾ ಕಿಟ್ ಪತ್ತೆ: ಕಾಂಗ್ರೆಸ್ ನಾಯಕನಿಗೆ ಸೇರಿದ ದಾಖಲೆ ಇಲ್ಲದ ಹಣ ಜಪ್ತಿ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಮದರಿ ಬಳಿಯ ಬಾಲಾಜಿ ಸಕ್ಕರೆ ಕಾರ್ಖಾನೆ ಗೋದಾಮಿನಲ್ಲಿ ಪರವಾನಿಗೆ ಪಡೆಯದೆ ಸಂಗ್ರಹಿಸಿಟ್ಟಿದ್ದ ರಾಶಿ ರಾಶಿ ಟೀ-ಶರ್ಟ್ ಹಾಗೂ ಹಾಗೂ ಗೋಡೆ ಗಡಿಯಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯಎಸ್ ಆರ್ ಪಾಟೀಲ್ ಭಾವಚಿತ್ರ ಇರುವ ಗೋಡೆ ಗಡಿಯಾರಗಳು ಮತ್ತು ಎಸ್.ಆರ್.ಪಿ ಭಾವಚಿತ್ರವಿರುವ ಟಿ-ಶರ್ಟ್ಗಳು ಪತ್ತೆಯಾಗಿವೆ. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಎಸ್ಪಿ ಹೆಚ್.ಡಿ ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಂದಾಜು ಎರಡೂವರೆ ಕೋಟಿ ರೂಪಾಯಿ ಮೌಲ್ಯದ 36,800 ಗೋಡೆ ಗಡಿಯಾರ, 50,000 ಟೀ-ಶರ್ಟ್ ಪತ್ತೆಯಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Wed, 29 March 23