ಮೈಸೂರು: ಜಿ.ಟಿ.ದೇವೇಗೌಡ (GT Devegowda) ನಮಗೆ ಮುಖ್ಯ ಅಲ್ಲ. ನನ್ನ ಮೇಲೆ ಗೌರವ ಇದ್ದರೆ ಜಿಟಿಡಿಗೆ ಒಂದು ಮತ ಹಾಕಬೇಡಿ. ಈ ಬಾರಿ ಎಲ್ಲರೂ ಒಗ್ಗಟ್ಟಾಗಿ ಅವರನ್ನು ಸೋಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ನನಗೆ ರಾಜಕೀಯವಾಗಿ ಜನ್ಮ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನರು ಸೋಲಿಸಿದರು. ಇಂದಿನಿಂದ ನಾವೆಲ್ಲಾ ಒಂದೇ ತಾಯಿ ಮಕ್ಕಳು ಎಂದರು. ಬಿಜೆಪಿಯವರ ಮನೆ ಹಾಳಾಗ ಒಂದು ಮನೆ ಸಹ ಕೊಡಲಿಲ್ಲ. ಜೆಡಿಎಸ್, ಬಿಜೆಪಿ ಯಾರೇ ಬಂದರೂ ಭ್ರಷ್ಟಾಚಾರ ನಿಲ್ಲುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಮಾತ್ರ ಭ್ರಷ್ಟಾಚಾರ ನಿಯಂತ್ರಣವಾಗುತ್ತದೆ. ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದು ನನಗೆ ಆಸೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಮಾಹಿತಿ ನೀಡಿದ ಸಿದ್ಧರಾಮಯ್ಯ ಗ್ಯಾರಂಟಿ ಕಾರ್ಡ್ ಭರವಸೆ ಈಡೇರಿಸದೇ ಇದ್ದರೆ, ರಾಜ್ಯದ ಜನರ ಕ್ಷಮೆ ಕೋರಿ ಸರ್ಕಾರ ವಿಸರ್ಜನೆ ಮಾಡುತ್ತೇವೆ. ನನಗೆ ಒಂದೇ ಒಂದು ಆಸೆ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ. ನನಗೆ ವರುಣದಿಂದ ಟಿಕೆಟ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಇದ್ದವನನ್ನು ತಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ಅವನು ಬೇಡ ಬೇಡ ಅಂದರು ತಂದು ನಿಲ್ಲಿಸಿದ್ದಾರೆ. ಪಾಪ ಯಾರಾದರೂ ಬರಲಿ ವರುಣ ಜನ ತಾನೇ ಆಶೀರ್ವಾದ ಮಾಡೋದು. ನೂರಕ್ಕೆ ನೂರು ವರುಣ ಜನ ಆಶೀರ್ವಾದ ಮಾಡುತ್ತಾರೆ. ಇದು ನನ್ನ ಅಂತಿಮ ಚುನಾವಣೆ ಎಂದರು.
ಇದನ್ನೂ ಓದಿ: ಹಾಸನ ಜೆಡಿಎಸ್ ಟಿಕೆಟ್ ತಿಕ್ಕಾಟಕ್ಕೆ ಹೊಸ ಸೂತ್ರ: ಭವಾನಿ ರೇವಣ್ಣಗೆ ಬೇರೆ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಚರ್ಚೆ
ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ, ಜೆಡಿಎಸ್ ಟಾರ್ಗೆಟ್ ಮಾಡಿದೆ. ರಾಜ್ಯದ ಜನರ ಆಶೀರ್ವಾದ ಇರುವವರೆಗೂ ನನ್ನ ಮುಗಿಸಲು ಅಸಾಧ್ಯ. ಪಕ್ಷದಲ್ಲಿ ಗುಂಪುಗಾರಿಕೆ ಇದೆ, ಅದೆಲ್ಲವೂ ಮರೆತು ಕೆಲಸ ಮಾಡಬೇಕು. ಸಿದ್ದರಾಮಯ್ಯ ನೋಡಿ ನೀವೆಲ್ಲ ಕೆಲಸ ಮಾಡಿ ಪಕ್ಷ ಗೆಲ್ಲಿಸಬೇಕು. ರಾಜ್ಯದಲ್ಲಿ 200 ಪರ್ಸೆಂಟ್ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ. ರಾಜ್ಯವನ್ನು ಬಿಜೆಪಿ ಸರ್ಕಾರ ಸಂಪೂರ್ಣ ಹಾಳುಮಾಡಿದೆ. ಕರ್ನಾಟಕದ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಕಡೆಗಣಿಸಿದೆ. ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಇದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಹುಮತದ ಸರ್ಕಾರ ಬರಬೇಕು, ಹಿಂದೂ ಧರ್ಮ ಉಳಿಯಬೇಕು: ಕಟೀಲು ದೇವಸ್ಥಾನದ ಅರ್ಚಕರ ಮಾತಿಗೆ ಮುಗುಳ್ನಕ್ಕ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ ಸಿದ್ದರಾಮಯ್ಯ, ಹೆಚ್ಡಿಕೆ ಎಷ್ಟೇ ಪಂಚರತ್ನ ಯಾತ್ರೆ ಮಾಡಿದರೂ ಅಧಿಕಾರಕ್ಕೆ ಬರಲ್ಲ. ಹೆಚ್ಡಿಕೆ ಅವಕಾಶವಾದಿ ರಾಜಕಾರಣ ಮಾಡುತ್ತಾರೆ. ಜೆಡಿಎಸ್ ಸ್ವಂತಶಕ್ತಿಯಿಂದ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ನವರಿಗೆ ಬಿಜೆಪಿ, ಕಾಂಗ್ರೆಸ್ಗೆ ಸಿಗಬಾರದು ಅನ್ನೋ ಉದ್ದೇಶವಿದೆ. ಅತಂತ್ರ ಬಂದರೆ ತಮ್ಮ ಬೇಳೆ ಬೇಯಿಸುಕೊಳ್ಳುವ ಕೆಲಸ ಮಾಡುತ್ತೆ. ಅಮೆರಿಕಕ್ಕೆ ಹೋಗಬೇಡ ಎಂದು ಹೆಚ್ಡಿಕೆಗೆ ಹೇಳಿದರೂ ಕೇಳಲಿಲ್ಲ. 1 ವರ್ಷ 2 ತಿಂಗಳಿಗೆ ಸಿಎಂ ಸ್ಥಾನ ಕಳೆದುಕೊಂಡರು ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:20 pm, Thu, 13 April 23