ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಗ್ನಿ ಪರೀಕ್ಷೆ ಎದುರಿಸುವುದಕ್ಕೆ ಚಿನ್ನದ ನಾಡಿನತ್ತ ಮುಖ ಮಾಡಿದ್ದಾರೆ. ಅಳೆದು ತೂಗಿ ಕೋಲಾರ (Kolar) ಕಣದಿಂದ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ. ಆದ್ರೆ, ಸಿದ್ದು ಪ್ರಜಾಧ್ಭನಿ ಸಮಾವೇಶದಲ್ಲಿ ಕ್ಷೇತ್ರ ಆಯ್ಕೆಯ ವಿಚಾರವನ್ನ ತುಂಬಾ ಗಟ್ಟಿಯಾಗಿ ಹೇಳದೇ ಹೈಕಮಾಂಡ್ ತೀರ್ಮಾನ ಎಂದಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಚುನಾವಣೆಯ ಕೊನೆ ಕ್ಷಣದಲ್ಲಿ ಕೋಲಾರ ಬಿಟ್ಟು ವರುಣಾದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದರು. ಇದೀಗ ಇದೇ ಮಾತನ್ನು ಆರೋಗ್ಯ ಸಚಿವ ಸುಧಾಕರ್ (Dr K Sudhakar) ಹೇಳಿದ್ದಾರೆ.
ಇಂದು (ಜನವರಿ 25) ಕೋಲಾರದಲ್ಲಿ ಮಾತನಾಡಿರುವ ಸುಧಾಕರ್, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಬಹಳ ಕಷ್ಟ. ಕೋಲಾರದಲ್ಲಿ ಕೆಲವು ನಾಯಕರು ಸೋಲುತ್ತಿದ್ದಾರೆ. ಸಿದ್ದರಾಮಯ್ಯರನ್ನು ಇಟ್ಟುಕೊಂಡು ಗೆಲ್ಲಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ. ಬಹುಶಃ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲ್ಲ ಎಂದರು.
ಕೊನೆಗೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಬೌಲಿಂಗ್ ಕೋಲಾರದ ಕಡೆ ಹಾಕಿ, ರನ್ ವರಣಾ ಕಡೆ ಓಡುತ್ತಾರೆ ಎಂದು ಹೇಳಿದರು.
ಈಗ ಸುಧಾಕರ್ ಹೇಳಿದ್ದ ಮಾತುಗಳನ್ನು ಇತ್ತೀಚೆಗೆ ಅಷ್ಟೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ. ಡ್ರಾಮಾ ಮಾಡುತ್ತಿದ್ದಾರೆ. ಕೋಲಾರದಲ್ಲಿ ನಿಂತುಕೊಂಡರೆ ಅವರು ಮನೆಗೆ ಹೋಗುವುದು ನಿಶ್ಚಿತ ಎಂದು ಅರಿತು ಮೈಸೂರಿಗೆ ಬರಲು ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದರು.
ಕೋಲಾರದಲ್ಲಿ ಸೋಲು ಎದುರಾಗುವ ಖಾತ್ರಿ ಸಿದ್ದರಾಮಯ್ಯ ಅವರಿಗಿದ್ದು, ಮೈಸೂರಿನಲ್ಲಿ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ. ಆದರೆ ಅವರು ಸುಮ್ಮನೆ ರಾಜಕೀಯ ಡೋಂಬರಾಟ, ನಾಟಕ ಮಾಡುತ್ತಿದ್ದಾರೆ ಅಷ್ಟೆ. ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ ಮೈಸೂರಿಗೆ ಹೋಗಬಹುದು. ಆದಾದ ಬಳಿಕ ಮುಂದಿನ ಸ್ಟ್ಯಾಟರ್ಜಿ ಮಾಡಬೇಕು ಮಾಡುತ್ತೇವೆ. ಸಿದ್ದರಾಮಯ್ಯ ಎರಡು ಕಡೆಯಾದರೂ ಸ್ಪರ್ಧೆ ಮಾಡಲಿ ಅಥವಾ ಮೂರು ಕಡೆಯಾದರೂ ಸ್ಪರ್ಧೆ ಮಾಡಲಿ. ಆದರೆ ಅವರು ಮನೆಗೆ ಹೋಗುವುದು ಅಂತು ನಿಶ್ಚಿತ ಎಂದು ಹೇಳಿದ್ದರು.