ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಬರೀ ಡ್ರಾಮ ಅಷ್ಟೆ, ಸಿದ್ದು ನಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಬಿ.ಎಸ್.ಯಡಿಯೂರಪ್ಪ
Karnataka Election 2023: ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ವಿಚಾರದಲ್ಲಿ ವ್ಯಾಪಾಕ ಚರ್ಚೆ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಅವರು ಕೋಲಾದಿಂದ ಸ್ಪರ್ಧಿಸುವ ಬಗ್ಗೆ ಹೇಳಿದ್ದಾರೆ. ಆದರೆ ಸಿದ್ದು ಮೈಸೂರಿನಿಂದ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ ಎಂದು ಬಿಎಸ್ವೈ ಹೇಳಿದ್ದಾರೆ.
ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಸಿದ್ದರಾಮಯ್ಯ (Siddaramaiah) ಅವರು ಕ್ಷೇತ್ರ ಆಯ್ಕೆ ವಿಚಾರದಲ್ಲಿ ಕದಡಿದ ಮನಸ್ಥಿತಿಯನ್ನು ಹೊಂದಿದ್ದಾರೆ. ಕೋಲಾರ, ಬಾದಮಿ ಸೇರಿದಂತೆ ಅನೇಕ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ವಿರೋಧಿ ಪಕ್ಷಗಳು ಸಿದ್ದು ಸೋಲಿಸಲು ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರನ್ನು ಮನೆಗೆ ಕಳುಹಿಸುವ ಯೋಜನೆ ರೂಪಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಒಪ್ಪಿದರೆ ಕೋಲಾರದಿಂದಲೇ (Kolar) ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುತ್ತಿಲ್ಲ, ಅವರ ಕಣ್ಣು ಮೈಸೂರಿನ ಮೇಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು ಹೊಸ ಬಾಂಬ್ ಸಿಡಿಸಿದ್ದು, ಇದು ಕರ್ನಾಟಕ ರಾಜಕೀಯದಲ್ಲಿ ಮತ್ತೆ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಕುತೂಹಲ ಕೆರಳಿಸಿದಂತಾಗಿದೆ.
ಹೌದು, ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಯಾವ ಕಾರಣಕ್ಕೂ ಕೋಲಾರದಿಂದ ಸಿದ್ದರಾಮಯ್ಯ ನಿಲ್ಲುವುದಿಲ್ಲ ಎಂಬ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಆದರೆ ನಾನು ಭವಿಷ್ಯ ಹೇಳುತ್ತಿಲ್ಲ, ಅವರು ಕೋಲಾರದಿಂದ ನಿಲ್ಲುವುದಿಲ್ಲ. ಡ್ರಾಮಾ ಮಾಡುತ್ತಿದ್ದಾರೆ, ಕೋಲಾರದಲ್ಲಿ ನಿಂತುಕೊಂಡರೆ ಅವರು ಮನೆಗೆ ಹೋಗುವುದು ನಿಶ್ಚಿತ ಎಂದು ಅರಿತು ಮೈಸೂರಿಗೆ ಬರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kolar Politics: ಕೋಲಾರದಲ್ಲಿ ಸಿದ್ದರಾಮಯ್ಯ ಹಣಿಯಲು ಬಿಜೆಪಿ, ಜೆಡಿಎಸ್ ಸಜ್ಜು; ಪ್ರತಿತಂತ್ರ ಹೆಣೆದ ಸಿದ್ದು
ಕೋಲಾರದಲ್ಲಿ ಸೋಲು ಎದುರಾಗುವ ಖಾತ್ರಿ ಸಿದ್ದರಾಮಯ್ಯ ಅವರಿಗಿದ್ದು, ಮೈಸೂರಿನಲ್ಲಿ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ. ಆದರೆ ಅವರು ಸುಮ್ಮನೆ ರಾಜಕೀಯ ಡೋಂಬರಾಟ, ನಾಟಕ ಮಾಡುತ್ತಿದ್ದಾರೆ ಅಷ್ಟೆ. ನನ್ನ ಪ್ರಕಾರ ಅವರು ಕೋಲಾರದಲ್ಲಿ ನಿಲ್ಲುವುದಿಲ್ಲ ಮೈಸೂರಿಗೆ ಹೋಗಬಹುದು. ಆದಾದ ಬಳಿಕ ಮುಂದಿನ ಸ್ಟ್ಯಾಟರ್ಜಿ ಮಾಡಬೇಕು ಮಾಡುತ್ತೇವೆ. ಸಿದ್ದರಾಮಯ್ಯ ಎರಡು ಕಡೆಯಾದರೂ ಸ್ಪರ್ಧೆ ಮಾಡಲಿ ಅಥವಾ ಮೂರು ಕಡೆಯಾದರೂ ಸ್ಪರ್ಧೆ ಮಾಡಲಿ. ಆದರೆ ಅವರು ಮನೆಗೆ ಹೋಗುವುದು ಅಂತು ನಿಶ್ಚಿತ ಎಂದು ಯಡಿಯೂರಪ್ಪ ಹೇಳಿದ್ದಾರೆ.
ನಿಮ್ಮ ಪ್ರೀತಿ, ಅಭಿಮಾನವನ್ನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ನಾನು ಕೋಲಾರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದು, ಹೈಕಮಾಂಡ್ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸಲು ಸಿದ್ಧ. ನನ್ನ ಸ್ಪರ್ಧೆಗೆ ಹೈಕಮಾಂಡ್ ತೀರ್ಮಾನ ಕೂಡ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಅಹಿಂದ ಮತಗಳ ಮೇಲೆ ವಿಶ್ವಾಸವಿಟ್ಟು ಕೋಲಾರ ಕ್ಷೇತ್ರ ಘೋಷಣೆ ಮಾಡಿದ್ರ ಮಾಜಿ ಸಿಎಂ ಸಿದ್ಧರಾಮಯ್ಯ ಎನ್ನುವ ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ.
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಬಾದಾಮಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಇಲ್ಲದಿದ್ದರೆ ಅವರ ಮನೆ ಮುಂದೆ ಧರಣಿ ಕೂಡುತ್ತೇವೆ. ಹೇಗಾದ್ರು ಮಾಡಿ ವಾಪಸ್ ಬಾದಾಮಿ ಕ್ಷೇತ್ರಕ್ಕೆ ಕರೆ ತರುತ್ತೇವೆ ಎಂದು ಕಾರ್ಯಕರ್ತರು ಹೇಳಿದ್ದರು. ಬಿಎಸ್ವೈ ಹೇಳಿದಂತೆ ಸಿದ್ದರಾಮಯ್ಯ ಅವರು ಮೈಸೂರು ಕಡೆ ಮುಖಮಾಡಿದ್ದರೆ ಒಂದು ಬಾರಿ ಗೆಲುವು ಮತ್ತು ಒಂದು ಬಾರಿ ಸೋಲು ಅನುಭವಿಸಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಮಗನ ರಾಜಕೀಯದ ಭವಿಷ್ಯ ಹಿನ್ನಲೆ ವರುಣಾ ಕ್ಷೇತ್ರಕ್ಕೆ ಸಿದ್ದು ಕಾಲಿಡುವುದು ಅನುಮಾನ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Mon, 23 January 23