ಒಂದು ಪೈಸೆ ಲಂಚ ತೆಗೆದುಕೊಂಡಿದ್ದರೆ ತೋರಿಸಿ, ರಾಜಕೀಯ ನಿವೃತ್ತಿ ಪಡೆದು ಸನ್ಯಾಸತ್ವ ಸ್ವೀಕರಿಸುವೆ: ಸಿದ್ಧರಾಮಯ್ಯ ಸವಾಲು
ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ಸ್ವೀಕರಿಸಿದ್ದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಕೋಲಾರ: ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ಸ್ವೀಕರಿಸಿದ್ದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದರು. ಕೋಲಾರ ಹೊರವಲಯದ ಟಮಕ ಬಳಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ, ನೊಂದಿದ್ದಾರೆ. ಅನೇಕ ಕಷ್ಟಗಳನ್ನು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಈಗ ಲಂಚ ಕೊಡದಿದ್ದರೆ ಯಾವುದೇ ಕೆಲಸ ಆಗಲ್ಲ. ಬಿಜೆಪಿಯಂತಹ ಭ್ರಷ್ಡ ಸರ್ಕಾರ ರಾಜ್ಯದಲ್ಲಿ ಯಾವತ್ತೂ ಬಂದಿರಲಿಲ್ಲ. ಮೋದಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದರು. 40% ಕಮಿಷನ್ ಬಗ್ಗೆಯೂ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಕಾಗೇರಿಯಂತಹ ಸ್ಪೀಕರ್ರನ್ನು ನಾನು ಯಾವತ್ತೂ ನೋಡಿಯೇ ಇಲ್ಲ. ವಿಧಾನಸೌಧದ ಗೋಡೆಯೂ ಲಂಚ ಲಂಚ ಅಂತಾ ಪಿಸುಗುಡುತ್ತಿದೆ. ಮಸಾಲೆ ದೋಸೆ, ಉಪ್ಪಿಟ್ಟಿಗೆ ಇಷ್ಟು ಅನ್ನೋ ರೀತಿ ಬೋರ್ಡ್ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧೆ ಮಾಡ್ತೇನೆ
ಇನ್ನು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಾನು ಈಗಾಗಲೇ ಹೇಳಿರುವಂತೆ ಕೋಲಾರದಿಂದ ಸ್ಪರ್ಧಿಸುತ್ತೇನೆ. ಪಕ್ಷದ ಹೈಕಮಾಂಡ್ ಸೂಚಿಸಿದರೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಬರೀ ಡ್ರಾಮ ಅಷ್ಟೆ, ಸಿದ್ದು ನಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಬಿಎಸ್ವೈ
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಕಾಣ್ತಾ ಇದೆ
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಕಾಣ್ತಾ ಇದೆ. ಅದಕ್ಕಾಗಿ ಬಿಜೆಪಿಯವರು ಹೆದರಿಕೊಂಡು ವಾರಕ್ಕೊಂದು ಸಲ ಮೋದಿಯವರನ್ನು ಕರಸ್ತಿದ್ದಾರೆ. ಮೋದಿ ಮತ್ತೆ ನಮಗೆ ಅಧಿಕಾರ ಕೊಡಸ್ತಾರೆ ಅನ್ನೋ ಭರವಸೆಯಲ್ಲಿದ್ದಾರೆ. ಅವರಿಗೆ ಬೇರೆ ಬಂಡವಾಳ ಇಲ್ಲ. ನೂರು ಸಾರಿ ಮೋದಿ ಅಮಿತ್ ಶಾ ಬಂದು ಕ್ಯಾಂಪೇನ್ ಮಾಡಿದರೂ ಕೂಡ ಸೂರ್ಯ ಇರುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಾವು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ರೆಸ್ಪಾನ್ಸ್ ಕಾರ್ಯಕರ್ತರಿಂದ ಬರ್ತಿದೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ನೊಂದಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ JDS ಅಭ್ಯರ್ಥಿ ಗೆಲ್ಲೋದು ಪಕ್ಕಾ, ಬರೆದಿಟ್ಟುಕೊಳ್ಳಿ ಎಂದ H.D.ಕುಮಾರಸ್ವಾಮಿ
ಬಿಜೆಪಿಯಷ್ಟು ಭ್ರಷ್ಟ ಸರ್ಕಾರ ಯಾವತ್ತೂ ಬಂದಿರಲಿಲ್ಲ
ಅನೇಕ ಕಷ್ಟಗಳನ್ನು ಅನುಭವಿಸಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಯಾವುದೇ ಕೆಲಸ ಆಗಬೇಕಾದರೂ ಲಂಚ ಕೊಡದೇ ಕೆಲಸ ಆಗಲ್ಲ. ರಾಜ್ಯದ ಇತಿಹಾಸದಲ್ಲಿ ಬಿಜೆಪಿಯಷ್ಟು ಭ್ರಷ್ಟ ಸರ್ಕಾರ ಯಾವತ್ತೂ ಬಂದಿರಲಿಲ್ಲ. ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು ಕೆಂಪಣ್ಣ ಪತ್ರ ಬರೆದಿದ್ದಾರೆ. ಪ್ರತಿ ಪ್ರೊಜೆಕ್ಟ್ಗಳಲ್ಲಿ ಗುತ್ತಿಗೆಯಲ್ಲಿ 40% ಕಮಿಷನ್ ಕೊಡಬೇಕಾಗಿದೆ. ಏನಾದರೂ ಮಾಡಿ ಇದನ್ನು ನಿಲ್ಲಿಸಿ ಅಂತ ಪ್ರಧಾನಿಯವರಿಗೆ ಪತ್ರ ಬರೆದು ಬೇಡಿಕೊಂಡಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.