ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಹಿನ್ನಲೆ, ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು
ಕೋಲಾರದಲ್ಲಿ ಸಿದ್ದು ಸ್ಪರ್ಧೆ ಖಚಿತವಾದ ಬೆನ್ನಲ್ಲೆ ದಲಿತ ಸಿಎಂ ಕೂಗು ಜೋರಾಗಿದ್ದು ಸಿದ್ದು ಸೋಲಿಸಿ, ದಲಿತ ಸಿಎಂ ಹಾದಿ ಸುಗಮ ಗೊಳಿಸಿ ಎಂಬ ಅಭಿಯಾನವೊಂದು ಶುರುವಾಗಿದೆ.
ಕೋಲಾರ: ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸ್ಪರ್ಧೆ ಘೋಷಣೆಯಾಗುತ್ತಿದ್ದಂತೆ, ದಲಿತ ಸಿಎಂ ಕೂಗು ಕೂಡ ಮತ್ತೆ ಮುನ್ನೆಲೆಗೆ ಬಂದಿದೆ. ನಗರದಲ್ಲಿ ದಲಿತ ಮುಖಂಡರು ಮತದಾರರ ಜಾಗೃತಿ ಅಭಿಯಾನದ ಮೂಲಕ ಸಿದ್ದರಾಮಯ್ಯ ವಿರುದ್ದ ಪ್ರಚೋದನೆ ಮಾಡುತ್ತಿದ್ದು, ದಲಿತ ನಾಯಕರನ್ನ ಸೋಲಿಸಿದ ಸಿದ್ದರಾಮಯ್ಯ ಅವರನ್ನ ಸೋಲಿಸಿ ದಲಿತ ಮುಖ್ಯಮಂತ್ರಿ ಹಾದಿ ಸುಗಮಗೊಳಿಸಿ, ಸಿದ್ದರಾಮಯ್ಯರನ್ನ ಸೋಲಿಸುವ ಮೂಲಕ ಕೋಲಾರದಲ್ಲಿ ದಲಿತರ ಸ್ವಾಭಿಮಾನ ಮೆರೆಯೋಣ ಎಂದು ಮನವಿ ಮಾಡುವ ಮೂಲಕ ಕರ ಪತ್ರಗಳನ್ನ ಕೂಡ ಹಂಚುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ದಲಿತ ನಾಯಕರಾಗಿದ್ದ ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಶ್ರೀನಿವಾಸ ಪ್ರಸಾದ್ ದ್ರುವನಾರಾಯಣ, ಕೆ.ಹೆಚ್.ಮುನಿಯಪ್ಪ ರನ್ನ ಬದಿಗೊತ್ತಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸುತ್ತಿದ್ದಾರೆ.
ಇನ್ನು ಕೋಲಾರ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದ ಯಾವುದೇ ಮೂಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೂ ಸಹ ಅಲ್ಲಲ್ಲಿ ಹೀಗೆ ಜಾಗೃತಿ ಅಭಿಯಾನ ಹಾಗೂ ದಲಿತ ಸಿಎಂ ಕೂಗು ಕೇಳಿ ಬರುತ್ತದೆ. ಅಲ್ಲದೆ ದಲಿತ ಸಮುದಾಯ ಕಾಂಗ್ರೆಸ್ನ್ನು ಈವೆರೆಗೂ ಬೆಂಬಲಿಸಿಕೊಂಡು ಬಂದಿದ್ದು, ಇದುವರೆಗೂ ನಮ್ಮ ಸಮುದಾಯದವರನ್ನ ಸಿಎಂ ಮಾಡಿಲ್ಲ. ಇನ್ನು ಸಿದ್ದರಾಮಯ್ಯ ಸಿಎಂ ಆಗಲು ದಲಿತರಿಗೆ ಸಿಎಂ ಸ್ಥಾನ ಕೈ ತಪ್ಪುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಸೋತರೆ ಕಾಂಗ್ರೇಸ್‌ನಲ್ಲಿ ದಲಿತರು ಸಿಎಂ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಭಿತ್ತಿ ಪತ್ರಗಳನ್ನ ಹಂಚುವ ಮೂಲಕ ಸಿದ್ದರಾಮಯ್ಯರನ್ನ ಸೋಲಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ಕೋಲಾರದಲ್ಲಿ ಸಿದ್ದರಾಮಯ್ಯ ಬದಲಾಗಿ ಸ್ಥಳೀಯರಿಗೆ ಆಧ್ಯತೆ ಕೊಡಬೇಕು, ಇಲ್ಲೂ ಸಹ ಗಂಡಸರಿದ್ದಾರೆ ಹಾಗಾಗಿ ಇಲ್ಲಿಯವರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಕೋಲಾರದಲ್ಲಿ JDS ಅಭ್ಯರ್ಥಿ ಗೆಲ್ಲೋದು ಪಕ್ಕಾ, ಬರೆದಿಟ್ಟುಕೊಳ್ಳಿ ಎಂದ H.D.ಕುಮಾರಸ್ವಾಮಿ
ಒಟ್ಟಿನಲ್ಲಿ ವಿರೋಧ ಪಕ್ಷಗಳ ಕುತಂತ್ರವೋ, ಇಲ್ಲಾ ಸಿದ್ದರಾಮಯ್ಯ ವಿರುದ್ದದ ಅಲೆಯೋ, ಕೋಲಾರದಲ್ಲಿ ಸಿದ್ದು ದಲಿತ ವಿರೋಧಿ ಅಲೆಯೊಂದು ಸಖತ್ ಸದ್ದು ಮಾಡುತ್ತಿದೆ. ಆ ಮೂಲಕ ಸಿದ್ದು ಅಹಿಂದ ಕೋಟೆ ಛಿದ್ರ ಗೊಳಿಸುವುದು ಇದರ ಹುನ್ನಾರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾದ್ರೆ ಅಂತಿಮವಾಗಿ ಇದು ಎಲ್ಲಿ ಹೋಗಿ ನಿಲ್ಲುತ್ತೆ ಎನ್ನುವುದು ಕಾದುನೋಡಬೇಕಾಗಿದೆ.
ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Mon, 23 January 23