ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಮಾಜಿ ಸಿಎಂ ಸಿದ್ದರಾಮಯ್ಯ(Siddarmaiah) ಅವರನ್ನು ಕಟ್ಟಿಹಾಕಲು ಬಿಜೆಪಿ ಹೈಕಮಾಂಡ್ ಮಹಾ ಪ್ಲಾನ್ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸಚಿವ ವಿ ಸೋಮಣ್ಣ(V Somanna) ಅವರನ್ನು ಕಣಕ್ಕಿಳಿಸಿದೆ. ಇನ್ನು ತಮ್ಮ ವಿರುದ್ಧ ವಿರುದ್ಧ ಸೋಮಣ್ಣ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, ಯಾರೇ ಬಂದರೂ ಸ್ವಾಗತ. ಯಾರು ಬೇಕಾದ್ರು ಸ್ಪರ್ಧಿಸಬಹುದು. ನನ್ನ ವಿರುದ್ಧ ಸೋಮಣ್ಣ ಸ್ಪರ್ಧೆ ಹಿಂದಿನ ಉದ್ದೇಶ ಏನೂ ಗೊತ್ತಿಲ್ಲ. ವಿ.ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ನಾನು ಮಾತಾಡಲ್ಲ. ಸೋಮಣ್ಣ 2 ಕಡೆ ಸ್ಪರ್ಧೆ ಮಾಡುತ್ತಾರೆ ಅಂದ್ರೆ ಬೇಡ ಎನ್ನಲಾ? ಸೋಮಣ್ಣ 1 ಕಡೆ ಸ್ಪರ್ಧಿಸಬೇಡಿ ಎನ್ನಲಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇನ್ನು ತಮ್ಮ ತಂದೆ ವಿರುದ್ಧ ಸೋಮಣ್ಣ ಸ್ಪರ್ಧೆ ಬಗ್ಗೆ ಯತೀಂದ್ರ ಸಿದ್ದರಾಮಯ್ಯ(yathindra Siddarmaiah) ಮಾತನಾಡಿದ್ದು, ವರುಣದಿಂದ ಯಾರೇ ಸ್ಪರ್ಧೆ ಮಾಡಿದರು ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ಸಿದ್ದರಾಮಯ್ಯನವರ ಪರ ಇದ್ದಾರೆ. ಹೈ ಕಮಾಂಡ್ ಬಲವಂತವಾಗಿ ಇಲ್ಲಿ ಸೋಮಣ್ಣ ಅವರನ್ನು ನಿಲ್ಲಿಸಿದೆ. ಒಲ್ಲದ ಮನಸಿನಿಂದ ವಿ ಸೋಮಣ್ಣ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ನಾನು ಸಿದ್ದರಾಮಯ್ಯ ವಿರುದ್ದ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದರು. ಹೈ ಕಮಾಂಡ್ ಒತ್ತಾಯಕ್ಕೆ ಮಣಿದು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಹು ಕೇತು ಶನಿ ಒಂದಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ, ಎಲ್ಲರೂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಾರಿಯೂ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ.ಸಿದ್ದರಾಮಯ್ಯ ವಿರೋಧಿ ಶಕ್ತಿಗಳು ಒಂದಾಗುತ್ತಾರೆ. ಹಣದ ಹೊಳೆ ಹರಿಸುತ್ತಾರೆ. ಅನೈತಿಕವಾಗಿ ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲೂ ಅದೇ ಮಾಡಿದ್ದರು. ಈ ಬಾರಿಯೂ ಅದೇ ಮಾಡುತ್ತಾರೆ. ಆದರೆ ಈ ಬಾರಿ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು.
ಇನ್ನು ಎರಡು ಕ್ಷೇತ್ರದಲ್ಲಿ ಅಶೋಕ್ ಸೋಮಣ್ಣಗೆ ಟಿಕೆಟ್ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಟಿಕೆಟ್ ಕೇಳಿದಾಗ ಬಿಜೆಪಿ ವ್ಯಂಗ್ಯವಾಗಿ ಮಾತನಾಡಿದ್ದರು. ಸಿದ್ದರಾಮಯ್ಯಗೆ ಭಯ ಎಂದು ಬಿಜೆಪಿ ನಾಯಕರ ವ್ಯಂಗ್ಯವಾಡಿದ್ದರು. ಈಗ ಬಿಜೆಪಿ ಅವರು ಎರಡು ಟಿಕೆಟ್ ನೀಡಿದ್ದಾರೆ. ತಾವು ಹೇಳಿದ ಮಾತಿಗೆ ವಿರೋಧವಾಗಿ ನಡೆದುಕೊಂಡಿದ್ದಾರೆ. ಜಾತಿ ಆಧಾರದ ಮೇಲೆ ಮತ ಬರುತ್ತೇ ಎಂದು ಸೋಮಣ್ಣಗೆ ಟಿಕೆಟ್ ಕೊಟ್ಟಿದ್ದಾರೆ. ಆದರೆ ವರುಣಾ ಜನ ಜಾತಿ ಆಧಾರದ ಮೇಲೆ ಮತ ನೀಡುವುದಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಲಿದೆ. ಹೀಗಾಗಿ ಹೈ ಕಮಾಂಡ್ ಒಪ್ಪಿದರೆ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿಸಿದರು.
ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಲೈವ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ