ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ಸಿದ್ದೇಶ್ವರ ಶ್ರೀಗಳ ವಿಲ್​​​ ಪತ್ರ ನೀಡಲಿರುವ ವಿಜಯಪುರ ಬಿಜೆಪಿ ಘಟಕ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.29) ಕರ್ನಾಟಕಕ್ಕೆ ಆಗಮಿಸಿದ್ದಾರೆ. ರಾಜ್ಯ ಪ್ರವಾಸದ ವೇಳಾಪಟ್ಟಿ ಪ್ರಕಾರ ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ. ಈ ವಿಶೇಷ ಉಡುಗೊರೆ ನೀಡಲು ಬಿಜೆಪಿ ನಾಯಕರು ಸಿದ್ದರಾಗಿದ್ದಾರೆ

ವಿಜಯಪುರ: ಕರ್ನಾಟಕದ ಜ್ಞಾನಜ್ಯೋತಿ, ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಜ್ಞಾನಯೋಗಾಶ್ರಮದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಶ್ರೀಗಳು (Siddheshwar Shree) ಬೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಮಾನಸಿಕವಾಗಿ ಅವರ ಹಿತ ನುಡಿಗಳು ನಮ್ಮ ಮಧ್ಯೆ ಇರುತ್ತವೆ. ಶ್ರೀಗಳು ಕಳೆದ ವರ್ಷ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆ ವಿಜಯಪುರ (Vijyapura) ಜಿಲ್ಲಾ ಬಿಜೆಪಿ ಘಟಕ ಪ್ರಧಾನಿ ಮೋದಿಯವರಿಗೆ ವಿಶೇಷ ಉಡುಗೊರೆ ನೀಡಲು ಸಿದ್ದವಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.29) ಕರ್ನಾಟಕಕ್ಕೆ ಆಗಮಿಸಿದ್ದಾರೆ. ರಾಜ್ಯ ಪ್ರವಾಸದ ವೇಳಾಪಟ್ಟಿ ಪ್ರಕಾರ ವಿಜಯಪುರಕ್ಕೆ ಭೇಟಿ ನೀಡಲಿದ್ದಾರೆ.

ಈ ವೇಳೆ ಬಿಜೆಪಿ ನಾಯಕರು ಪ್ರಧಾನಿ ಮೋದಿಯವರಿಗೆ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರ, ಮತ್ತು ಅವರು ಬರೆದಿದ್ದ “ಅಂತಿಮ ಅಭಿವಂದನ ಪತ್ರ” ವಿಲ್​ ಪ್ರತಿಯನ್ನು ನೀಡಲಿದ್ದಾರೆ. ಈ ಹಿಂದೆ ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಿದ್ದೇಶ್ವರ ಶ್ರೀಗಳು ಪ್ರಶಂಸನೆಯ ಮಾತುಗಳನ್ನು ಆಡಿದ್ದರು. ಹೀಗಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಲ್ ಪ್ರತಿ ಭಾವಚಿತ್ರ ನೀಡಲಾಗುತ್ತಿದೆ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೈ-ತೆನೆ ಕೋಟೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಕಮಲ ಕಲಿಗಳ 10 ತಂತ್ರ: ಏ.30 ರಂದು ಕೋಲಾರಕ್ಕೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ಮೋದಿ ವಿಜಯಪುರ ಪ್ರವಾಸ ವೇಳಾಪಟ್ಟಿ

ಮಧ್ಯಾಹ್ನ 12.50ಕ್ಕೆ ವಿಜಯಪುರ ಹೆಲಿಪ್ಯಾಡ್​ ತಲುಪಲಿರುವ ಅವರು, 12.55ಕ್ಕೆ ವಿಜಯಪುರ ಹೆಲಿಪ್ಯಾಡ್​ನಿಂದ ರಸ್ತೆ ಮೂಲಕ​ ಪ್ರಯಾಣ ಬೆಳಸಿ, 1 ಗಂಟೆಗೆ ಸಮಾವೇಶ ಸ್ಥಳವನ್ನು ತಲುಪಲಿದ್ದಾರೆ. 1 ಗಂಟೆಯಿಂದ 1.40ರವರೆಗೂ ಸಮಾವೇಶದಲ್ಲಿ ಪಾಲ್ಗೊಂಡು, 1.45ಕ್ಕೆ ಸಮಾವೇಶ ಸ್ಥಳದಿಂದ ಹೊರಡುತ್ತಾರೆ.

ವಿಜಯಪುರದಲ್ಲಿ ಪ್ರಧಾನಿ ಮೋದಿ ಭೋಜನ

ವಿಜಯಪುರದಲ್ಲೇ ಮಧ್ಯಾಹ್ನಾ ಊಟ ಮಾಡಲಿರುವ ಪ್ರಧಾನಿ ಮೋದಿಯವರಿಗೆ ವಿಶೇಷ ಭೋಜನ ತಯಾರಿಸಲಾಗಿದೆ. ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಫುಲ್ಕ, ದಾಲ್, ಎಣ್ಣೆಗಾಯಿ, ಶೇಂಗಾ ಚಟ್ನಿ, ಕೊಲ್ಹಾರ ಗಟ್ಟಿ ಮೊಸರು, ಶೇಂಗಾ ಹೋಳಿಗೆ, ಅನ್ನ, ರಸಂ, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಸೇರಿದಂತೆ ಇತರೆ ಖಾದ್ಯ ಸೇವಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ