ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Election)ಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಮತಬೇಟೆಯಲ್ಲಿ ನಿರತರಾಗಿದ್ದಾರೆ. ಈ ಹೊತ್ತಿನಲ್ಲಿ ಜಿಲ್ಲೆಯ ಕೊರಟಗೆರೆ(Koratagere)ವಿಧಾನಸಭಾ ಕ್ಷೇತ್ರದಲ್ಲಿ ಕಲ್ಲೆಸೆತ ಪ್ರಕರಣ ಕಾನೂನು ಸುವ್ಯವಸ್ಥೆಯನ್ನ ಭಂಗವುಂಟು ಮಾಡಿದಂತಾಗಿದೆ. ಹೌದು, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಕೊರಟಗೆರೆ ಕ್ಷೇತ್ರದಲ್ಲಿ ನಿನ್ನೆ(ಏ.28) ಪ್ರಚಾರ ನಿರತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ(G Parameshwara) ಮೇಲೆ ಕಿಡಿಗೇಡಿ ಕಲ್ಲೆಸೆದಿದ್ದು, ಗಾಯಗೊಂಡಿದ್ದಾರೆ. ಮುಂಜಾನೆಯಿಂದಲೂ ಕ್ಷೇತ್ರದಲ್ಲಿ ತಮ್ಮ ಅಪಾರ ಕಾರ್ಯಕರ್ತರೊಟ್ಟಿಗೆ ಪ್ರಚಾರ ನಡೆಸುತ್ತಿದ್ದ ಪರಮೇಶ್ವರ್, ಮಧ್ಯಾಹ್ನದ ವೇಳೆಗೆ ಕೊರಟಗೆರೆ ತಾಲ್ಲೂಕಿನ ಭೈರೇನಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಜೆಸಿಬಿ ಮೂಲಕ ಹೂ ಸುರಿಯಲು, ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಲು ಅಣಿಯಾಗಿದ್ದ ಕಾರ್ಯಕರ್ತರು, ಪರಮೇಶ್ವರ್ ಆಗಮಿಸಿದ ಕೂಡಲೇ ಅವರನ್ನ ಹೆಗಲ ಮೇಲೆ ಎತ್ತಿ ಕುಣಿಸಿದ್ದಾರೆ. ಹೂ ಸುರಿಯೋ ವೇಳೆಗೆ ದಿಢೀರನೇ ಕಲ್ಲೊಂದು ಪರಮೇಶ್ವರ್ ತಲೆಗೆ ತಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಪರಮೇಶ್ವರ್ ಅವರನ್ನ ಕೆಳಗಿಳಿಸಿದ ಕಾರ್ಯಕರ್ತರು, ಹತ್ತಿರದ ಅಕ್ಕಿರಾಂಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ತುಮಕೂರಿನ ಸಿದ್ದಾರ್ಥನಗರದ ತಮ್ಮ ನಿವಾಸಕ್ಕೆ ರವಾನಿಸಿ ವೈದ್ಯರ ತಂಡ ಚಿಕಿತ್ಸೆ ನೀಡಿದೆ.
ಪರಮೇಶ್ವರ್ ನಿವಾಸಕ್ಕೆ ಕಾರ್ಯಕರ್ತರ, ಅಭಿಮಾನಿಗಳ ದಂಡು
ಇನ್ನು ಕಲ್ಲೆಸೆತ ವಿಚಾರ ತಿಳಿಯುತ್ತಿದ್ದಂತೆ ಸಿದ್ದಾರ್ಥನಗರದ ಪರಮೇಶ್ವರ್ ನಿವಾಸಕ್ಕೆ ಕಾರ್ಯಕರ್ತರ, ಅಭಿಮಾನಿಗಳ ದಂಡೇ ಹರಿದುಬಂದಿದೆ. ಬೆಂಗಳೂರಿನಲ್ಲಿದ್ದ ಪರಮೇಶ್ವರ್ ಪತ್ನಿ ಕನ್ನಿಕಾ, ತಂಗನಹಳ್ಳಿಮಠದಶ್ರೀಗಳು, ಖಾರದಮಠದಶ್ರೀಗಳು ದೌಡಾಯಿಸಿ ಪರಮೇಶ್ವರ್ ಅವರ ಆರೋಗ್ಯ ವಿಚಾರಿಸಿದರು. ಎಸ್ಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಇನ್ನು ಘಟನೆಯನ್ನ ಖಂಡಿಸಿದ ಪರಮೇಶ್ವರ್ ಬೆಂಬಲಿಗರು ಪೊಲೀಸರ ವಿರುದ್ದ ಧಿಕ್ಕಾರ ಕೂಗಿ, ತಪ್ಪಿತಸ್ಥರನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ಘಟನೆ ಖಂಡಿಸಿದ್ದು, ಚುನಾವಣೆಗಳಲ್ಲಿ ಕಲ್ಲು ಎಸೆಯುವುದು, ಹೆದರಿಸುವುದು ಸರಿಯಲ್ಲ. ಒಬ್ಬ ಅಭ್ಯರ್ಥಿಗೆ ಕಲ್ಲು ಎಸೆಯುವುದು ಭಾಷಣಕ್ಕೆ ಅಡ್ಡಿ ಪಡಿಸುವುದನ್ನ ನಾನು ಖಂಡಿಸುತ್ತೇನೆ. ಹೀಗೆ ನಡೆದುಕೊಂಡರೇ ಅವರಿಗೆ ಮತದಾರರು ಒಲಿಯುವುದಿಲ್ಲ. ಪರಮೇಶ್ವರ್ ಬಾರಿ ಬಹುಮತದಿಂದ ಗೆಲ್ಲಿಸುತ್ತಾರೆ ಎಂದಿದ್ದಾರೆ. ಸದ್ಯ ಪರಮೇಶ್ವರ್ ಅವರ ಆರೋಗ್ಯ ಸ್ಥಿರವಾಗಿದ್ದು, ಕಲ್ಲೇಟಿನಿಂದ ತಲೆಯಲ್ಲಿ ಒಂದೂವರೆ ಇಂಚಿನಷ್ಟು ಆಳ ಗಾಯವಾಗಿದೆ ಎನ್ನಲಾಗಿದೆ. ನ್ಯೂರೋ ಸರ್ಜನ್ಗಳು ಚಿಕಿತ್ಸೆ ನೀಡಿದ್ದು, ಇಂದು ಸಹ ಮತ್ತೊಮ್ಮೆ ತಪಾಸಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆಯೂ ಕಲ್ಲುತೂರಾಟ
ಇದೇ ತಿಂಗಳ 19 ರಂದು ಡಾ.ಜಿ.ಪರಮೇಶ್ವರ್ ನಾಮಪತ್ರ ಸಲ್ಲಿಸಿದ್ದ ದಿನವೂ, ತಹಶೀಲ್ದಾರ್ ಕಚೇರಿ ಎದುರು ಕಲ್ಲೆಸೆತ ಪ್ರಕರಣ ನಡೆದಿತ್ತು. ಅಂದು ಸಹ ಕಿಡಿಗೇಡಿಯೋರ್ವ ಬೀಸಿದ್ದ ಕಲ್ಲು ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಬಿದ್ದು ಆಕೆಯ ತಲೆಗೆ ಗಾಯವಾಗಿತ್ತು. ಇದೀಗ ಪ್ರಚಾರ ನಿರತ ಪರಮೇಶ್ವರ್ ಮೇಲೆ ಕಲ್ಲು ಬೀಸಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಚುನಾವಣಾ ಹೊಸ್ತಿಲಲ್ಲಿ ಈ ರೀತಿಯ ಕಲ್ಲೆಸೆತ ಪ್ರಕರಣ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದ್ದು, ಸದ್ಯ ಕೊರಟಗೆರೆ ಪೊಲೀಸರು ತನಿಖೆ ಮುಂದುವರೆಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.
ವರದಿ: ಮಹೇಶ್ ಟಿವಿ9 ತುಮಕೂರು
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ