ಇನ್ನೇನು ಚುನಾವಣೆಗೆ (Karnataka Assembly Elections 2023) ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷದಲ್ಲಿ ಅಬ್ಬರದ ಪ್ರಚಾರ ಅರ್ಭಟ ಸಮಾವೇಶ ಮೆರವಣಿಗೆಗಳು ನಡೆಯುತ್ತಿವೆ. ಆದರೆ ಈ ಅಬ್ಬರದ ಪ್ರಚಾರದ ಮಧ್ಯೆ ಒಬ್ಬ ಇಂಜಿನಿಯರ್ ವಿಭಿನ್ನವಾಗಿ ಪ್ರಚಾರ ನಡೆಯುತ್ತಿದ್ದು, ಹಣವಂತರು- ಅಬ್ಬರದ ಪ್ರಚಾರದ ಮಧ್ಯೆ ಟೆಕ್ಕಿ (Techie) ಸರಳ ರೀತಿಯಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಬದಲಾವಣೆಗಾಗಿ ನನ್ನ ಮತ ಎಂಬ ಧ್ಯೇಯದೊಂದಿಗೆ ಬ್ಯಾನರ್ ಟ್ರಾಲಿ ಹಿಡಿದು ಮತ ಕೇಳುತ್ತಿದ್ದಾರೆ. ಕೈಯಲ್ಲಿ ಒಂದು ಟ್ರಾಲಿ, ಟ್ರಾಲಿಗೆ ಬ್ಯಾನರ್. ಬ್ಯಾನರ್ ನಲ್ಲಿ ಬದಲಾವಣೆಗಾಗಿ ನನ್ನ ಮತ, ಭ್ರಷ್ಟರಲ್ಲದ, ಕೋಮುವಾದಿಯಲ್ಲದ, ಪ್ರಬುದ್ಧ ಜನಪರ, ಸುಸಂಸ್ಕೃತ ವ್ಯಕ್ತಿತ್ವವುಳ್ಳವರು ಬೇಕಾಗಿದ್ದಾರೆ ಎಂಬ ಬರಹಗಳೊಂದಿಗೆ ಮನೆ ಮನೆಗೂ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ ನಡೆಸುತ್ತಿರುವ ಟೆಕ್ಕಿ. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯಲ್ಲಿ. ಈಗ ಚುನಾವಣಾಮಯ ವಾತಾವರಣ. ಕೂತಲ್ಲಿ ನಿಂತಲ್ಲಿ ಚುನಾವಣೆಯದ್ದೇ ಮಾತು. ಎಲ್ಲ ಕಡೆ ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಯಾತ್ರೆ, ಸಮಾವೇಶಗಳ ಮೂಲಕ ಅಬ್ಬರದ ಪ್ರಚಾರ ಶುರು ಮಾಡಿವೆ. ಆದರೆ ಈ ಮಧ್ಯೆ ಬಾಗಲಕೋಟೆ ಕ್ಷೇತ್ರದಲ್ಲಿ (Bagalkot Assembly Constituency) ನಾಗರಾಜ ಕಲಕುಟ್ಕರ್ (Nagaraj Kalangutkar) ಎಂಬ ಇಂಜಿನಿಯರ್ ಒಬ್ಬರು ಮಾತ್ರ ವಿಭಿನ್ನ ರೀತಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಯಾವುದೇ ಅಬ್ಬರ ಆಡಂಬವರವಿಲ್ಲದೆ ಕೇವಲ ಒಂದು ಟ್ರಾಲಿ, ಟ್ರಾಲಿಗೆ ತಮ್ಮ ಭಾವಚಿತ್ರದ ಬ್ಯಾನರ್, ಅದರಲ್ಲಿ ಭ್ರಷ್ಟರಲ್ಲದ, ಕೋಮುವಾದಿಯಲ್ಲದ, ಪ್ರಬುದ್ದ, ಜನಪರ ಸುಸಂಸ್ಕೃತ ವ್ಯಕ್ತಿಗಳು ಬೇಕಾಗಿದ್ದಾರೆ ಎಂದು ಪ್ರಚಾರ ಶುರು ಮಾಡಿದ್ದಾರೆ. ಟ್ರಾಲಿ ಹಿಡಿದು ಏಕಾಂಗಿಯಾಗಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತಮ್ಮ ಪರ ಮತಯಾಚನೆ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ತಮ್ಮ ಮತ ನನಗೆ ನೀಡಿ ಎಂದು ಮತ ಕೇಳುತ್ತಿದ್ದಾರೆ ಪಕ್ಷೇತರ ಅಭ್ಯರ್ಥಿಯಾಗಿರುವ (Independent Candidate) ನಾಗರಾಜ ಕಲಕುಟ್ಕರ್.
ಎಲ್ಲ ಪಕ್ಷದಲ್ಲೂ ಈಗ ಬಿರುಸಿನ ಪ್ರಚಾರ ನಡೆಯುತ್ತಿದೆ. ಹಣದ ಹೊಳೆ ಹರಿಸುತ್ತಾ ಜನರ ಮತವನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಈ ಮಧ್ಯೆ ಇಂಜಿನಿಯರ್ ಈ ಪ್ರಚಾರ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. ಅಂದಹಾಗೆ ಸ್ವತಂತ್ರಯ ಅಭ್ಯರ್ಥಿ ನಾಗರಾಜ ಕಲಕುಟ್ಕರ್ ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ವಿವಿಧ ಕಡೆ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಕೈ ತುಂಬ ಲಕ್ಷ ಲಕ್ಷ ಪಗಾರ ಇದ್ದರೂ ಅದೆಲ್ಲವನ್ನೂ ಬಿಟ್ಟು ಚುನಾವಣೆಗೆ ಇಳಿದಿದ್ದಾರೆ. ಎಲ್ಲೂ ಕೂಡ ಸಮಾವೇಶ, ಸಭೆ ನಡೆಸದೆ ಮನೆ ಮನೆಗೆ ತೆರಳಿ ತಮ್ಮ ಭರವಸೆಗಳ ಬಗ್ಗೆ ಹೇಳುತ್ತಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರ ಮನವೊಲಿಕೆ ಮಾಡುತ್ತಿದ್ದಾರೆ. ತನ್ನ ಭಾವಚಿತ್ರ ಟ್ರಾಲಿ ಹಿಡಿದು ಸಾಗುತ್ತಾ ಭ್ರಷ್ಟರಲ್ಲದ, ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಯಾವುದೇ ಕಾರ್ಯಕರ್ತರನ್ನಾಗಲಿ ಸೇರಿಸದೆ ಏಕಾಂಗಿಯಾಗಿ ಪ್ರಚಾರ ಕೈಗೊಂಡಿದ್ದು, ಸರಳ ರೀತಿಯಲ್ಲಿ ಮತ ಕೇಳುತ್ತಿದ್ದಾರೆ. ಇನ್ನು ಇವರ ಹೋರಾಟಕ್ಕೆ ಪ್ರಜ್ಞಾವಂತ ನಾಗರಿಕರು ಬೆಂಬಲ ನೀಡುತ್ತಿದ್ದು, ಇಂತಹ ಸಜ್ಜನ ವಿದ್ಯಾವಂತರಿಗೆ ಜನರು ಪ್ರೋತ್ಸಾಹಿಸಬೇಕೆಂದು ಸ್ಥಳೀಯರು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಪ್ರಮುಖ ಪಕ್ಷಗಳ ಅಬ್ಬರದ ಮಧ್ಯೆ ಇಂಜಿನಿಯರ್ ಸರಳ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದು,ಇವರಿಗೆ ಜನ ಯಾವ ರೀತಿ ಸಹಕಾರ ನೀಡುತ್ತಾರೋ ಚುನಾವಣೆಯೇ ಉತ್ತರಿಸಬೇಕು.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ