ತಂದೆ ರಾಜ್ಯ ರಾಜಕಾರಣದಲ್ಲಿ ಖ್ಯಾತನಾಮರು, ಅದೇ ಮನೆಯ ಅಕ್ಕ-ತಂಗಿಯರು ಹರಪನಹಳ್ಳಿ ಅಖಾಡದಲ್ಲಿ ಕಾಂಗ್ರೆಸ್​ ಟಿಕೆಟ್​​ಗಾಗಿ ಪೈಪೋಟಿ ನಡೆಸಿದ್ದಾರೆ

|

Updated on: Apr 08, 2023 | 4:49 PM

Harapanahalli Assembly constituency: ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷವು ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಅನ್ನು ಇನ್ನೂ ಘೋಷಣೆ ಮಾಡಿಲ್ಲ. 14 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೋರಾಗಿ ಓಡುತ್ತಿರುವುದು ಅಕ್ಕ ತಂಗಿಯರ ಹೆಸರು. ಜೊತೆಗೆ, ಕೋಟ್ರೇಶ್ ಹೆಸರು.

ತಂದೆ ರಾಜ್ಯ ರಾಜಕಾರಣದಲ್ಲಿ ಖ್ಯಾತನಾಮರು, ಅದೇ ಮನೆಯ ಅಕ್ಕ-ತಂಗಿಯರು ಹರಪನಹಳ್ಳಿ ಅಖಾಡದಲ್ಲಿ ಕಾಂಗ್ರೆಸ್​ ಟಿಕೆಟ್​​ಗಾಗಿ ಪೈಪೋಟಿ ನಡೆಸಿದ್ದಾರೆ
ಎಂಪಿ ಪ್ರಕಾಶ್ ಪುತ್ರಿಯರು ಎಂಪಿ ಲತಾ -ಎಂಪಿ ವೀಣಾ
Follow us on

ಅದೊಂದು ರಾಜ್ಯ ರಾಜಕಾರಣದಲ್ಲಿ ಶಾಶ್ವತವಾಗಿ ಹೆಸರುಳಿಯುವ ಕುಟುಂಬ. ತಂದೆ ರಾಜ್ಯ ರಾಜಕಾರಣದಲ್ಲಿ ಖ್ಯಾತನಾಮರಾಗಿದ್ದರು. ಆನಂತರ ಅವರ ಪುತ್ರ ಸಹ ಶಾಸಕರಾಗಿದ್ದರು. ಪುತ್ರನ ಬಳಿಕ ಆ ಹಿರಿಯ ರಾಜಕಾರಣಿಯ ಇಬ್ಬರು ಪುತ್ರಿಯರೂ ಸಹ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದ್ರೆ ಒಂದೇ ಟಿಕೆಟ್ ಗೆ ಅಕ್ಕ-ತಂಗಿಯರ ನಡುವೆ ಪೈಪೋಟಿ ಶುರುವಾಗಿದೆ. ಇಬ್ಬರೂ ನನಗೇ ಟಿಕೆಟ್ ಎನ್ನುತ್ತಿದ್ದಾರೆ. ಅಕ್ಕ ತಂಗಿಯರ ಈ ಜಗಳದ ನಡುವೆ ಇನ್ನೂ ಒಂದು ಹೆಸರೂ ಸುಳಿದಾಡುತ್ತಿದೆ. ಇಲ್ಲಿದೆ ನೋಡಿ ಅಕ್ಕ ತಂಗಿಯರ ಅಖಾಡ ಸ್ಟೋರಿ. ರಾಜಕೀಯ ಅಂದ್ರೇನೆ ಹಾಗೆ! ಅಲ್ಲಿ ಅಕ್ಕ ತಂಗಿ ಅಣ್ಣ ತಮ್ಮ ಅಪ್ಪ ಮಗ… ರಕ್ತ ಸಂಬಂಧಿಗಳು ಎದುರಾಬದುರಾ ಆಗುವುದು, ಹೋರಾಡುವುದು, ಸೋಲುವುದು, ಗೆಲ್ಲುವುದು ಮಾಮೂಲು-ಮಾಮೂಲು! ಆದ್ರೆ ಇಲ್ಲೊಂದು ಕ್ಷೇತ್ರದಲ್ಲಿ ಅಕ್ಕ-ತಂಗಿಯರೂ ಹೋರಾಟ ಶುರು ಮಾಡಿದ್ದಾರೆ. ಆದ್ರೆ ಇವರದು ಎದುರು ಬದರು ಪೈಪೋಟಿ ಅಲ್ಲ. ಬದಲಿಗೆ ಆ ಒಂದು ಪಕ್ಷದ ಟಿಕೆಟ್ ಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ಸುತ್ತಾಟ, ಪಾದಯಾತ್ರೆ, ಸಂಕಷ್ಟದಲ್ಲಿದ್ದವರಿಗೆ ಸಹಾಯ… ಹೀಗೆ ಭರ್ಜರಿ ಹೋರಾಟ ಶುರುವಾಗಿದೆ. ಇಲ್ಲಿ ಸ್ಥೂಲವಾಗಿ ಚರ್ಚೆಯಾಗುತ್ತಿರುವುದು ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂಪಿ ಪ್ರಕಾಶ್ (MP Prakash)​ ಮತ್ತು ಅವರ ಪುತ್ರಿಯರಾದ (Daughters) ಎಂಪಿ ವೀಣಾ ಮಹಾಂತೇಶ ಹಾಗೂ ಎಂಪಿ ಲತಾ ಮಲ್ಲಿಕಾರ್ಜುನ ಅವರುಗಳು. ದಿವಂಗತ ಎಂಪಿ ಪ್ರಕಾಶ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರೊಬ್ಬ ಸಾಂಸ್ಕೃತಿಕ ರಾಯಭಾರಿ, ಮೌಲ್ಯಾಧಾರಿತ ರಾಜಕಾರಣಿ ಎಂಬ ಮಾತಿತ್ತು. ಇಂತಹ ರಾಜಕಾರಣಿ ವಿವಿಧ ಇಲಾಖೆಗಳ ಸಚಿವರಾಗಿ, ನಂತರ ಉಪ ಮುಖ್ಯಮಂತ್ರಿಯೂ ಆಗಿದ್ದವರು. ಕೊನೆಯ ಚುನಾವಣೆ 2008ರಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಅನಾರೋಗ್ಯಕ್ಕೆ ತುತ್ತಾದರು. ನಂತರ 2013ರಲ್ಲಿ ವಿಜಯನಗರ (Vijayanagara) ಜಿಲ್ಲೆಯ ಹರಪನಹಳ್ಳಿ (Harapanahalli Assembly constituency) ಕ್ಷೇತ್ರದಿಂದ ಎಂಪಿ ಪ್ರಕಾಶ್​ ಅವರ ಪುತ್ರ ಎಂಪಿ ರವೀಂದ್ರ ಗೆದ್ದರು.

ನಂತರದ 2018ರಲ್ಲಿ ಸೋತು ಅನಾರೋಗ್ಯದಿಂದ ರವೀಂದ್ರ ಸಾವನ್ನಪ್ಪಿದರು. ಈಗ ಉಳಿದಿಬ್ಬರು ಸಹೋದರಿಯರೂ ಹರಪನಹಳ್ಳಿ ಟಿಕೆಟ್ ಮೇಲೆ ಕಣ್ಣಿಟ್ಟು ಹೋರಾಟ ಶುರುಮಾಡಿದ್ದಾರೆ. ಅಕ್ಕ ಲತಾ ಮಲ್ಲಿಕಾರ್ಜುನ ನನಗೆ ಟಿಕೆಟ್ ಸಿಗುತ್ತದೆ. ಟಿಕೆಟ್ ಸಿಕ್ಕಿದ ಬಳಿಕವೇ ಮಾತಾಡುವೆ ಎನ್ನುತ್ತಿದ್ದಾರೆ. ಆದರೆ ತಂಗಿ ವೀಣಾ ಮಹಾಂತೇಶ ಮಾತ್ರ ನನ್ನ ಪತಿ ಹಾಗೂ ಪುತ್ರನಿಗೆ ಕೊರೊನಾ ಬಂದರೂ ಅದನ್ನ ಬಿಟ್ಟು ಕ್ಷೇತ್ರದಲ್ಲಿ ದುಡಿದಿದ್ದೇನೆ. ನಾಲ್ಕು ಕಡೆ ಪಾದಯಾತ್ರೆ ಮಾಡಿರುವೆ. 90 ಸಾವಿರ ಮಹಿಳೆಯರಿದ್ದಾರೆ. ಪಕ್ಷದ ವರಿಷ್ಠರು ತಮ್ಮ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡುತ್ತಾರೆ. ಗೆಲುವು ಶತಸಿದ್ದ ಎಂದು ವಿಶ್ವಾಸದಿಂದಿದ್ದಾರೆ.

ತಂದೆಯ ನಂತರ ತಮ್ಮ, ತಮ್ಮನ ನಂತರ ಇದೀಗ ಅಕ್ಕ-ತಂಗಿ ರಾಜಕೀಯ ಅಸ್ತಿತ್ವಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಹರಪನಹಳ್ಳಿಯಲ್ಲಿ ವೀಣಕ್ಕ ಲತಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೇಲಾಗಿ ಇಬ್ಬರನ್ನ ಪ್ರೀತಿಸುವ ಜನ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದನ್ನ ಕಾಯ್ದು ನೋಡುತ್ತಿದ್ದಾರೆ. ನಮ್ಮಕ್ಕ ಟಿಕೆಟ್ ತರುತ್ತಾಳೆ. ತಮ್ಮಕ್ಕ ಟಿಕೆಟ್ ತರಳುತ್ತಾಳೆ ಎಂಬ ಜಿದ್ದಾಜಿದ್ದಿಯೂ ಶುರುವಾಗಿದೆ.

ಹೀಗೆ ಅಕ್ಕ ತಂಗಿಯರ ಆಟದ ನಡುವೆ ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಜೋರಾಗಿ ಪೈಪೋಟಿ ನಡೆದಿರುವಾಗಲೇ ಇನ್ನೊಬ್ಬ ಅಭ್ಯರ್ಥಿಯ ಹೆಸರೂ ಟಿಕೆಟ್ ಗಾಗಿ ಜೋರಾಗಿ ಕೇಳಿ ಬರುತ್ತದೆ. ಅವರೇ… ಕಳೆದ ಎರಡು ಚುನಾವಣೆಯಲ್ಲಿ ಪಕ್ಷೇತರ ಜೊತೆಗೆ ಜೆಡಿಎಸ್ ನಿಂದ ಸ್ಪರ್ಧಿಸಿ 40 ಸಾವಿರ ಮತ ಪಡೆದ ಅರಸೀಕೆರಿ ಕೋಟ್ರೇಶ್. ಮೇಲಾಗಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಲಿಂಗಾಯತ ಸಮಾಜದ ಕೋಟ್ರೇಶ್ ಅವರಿಗೆ ಮಾಜಿ ಸಚಿವ ಪಿಟಿ ಪರಮೇಶ್ವರ ನಾಯ್ಕ ಬೆಂಬಲವೂ ಇದೆ.

ಕಳೆದ ಚುನಾವಣೆ ಫಲಿತಾಂಶ ಹೀಗಿತ್ತು: 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗಾಲಿ ಕುರುಣಾಕರ ರೆಡ್ಡಿ 67,603 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎಂ. ಪಿ. ರವೀಂದ್ರ 57,956 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಅರಸೀಕೆರೆ ಎನ್. ಕೊಟ್ರೇಶ್‌ 22,783 ಮತಗಳನ್ನು ಪಡೆದಿದ್ದರು.

ಈಗಾಗಲೇ ಎರಡು ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷವು ಹರಪನಹಳ್ಳಿ ಕ್ಷೇತ್ರದ ಟಿಕೆಟ್ ಅನ್ನು ಇನ್ನೂ ಘೋಷಣೆ ಮಾಡಿಲ್ಲ. 14 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಜೋರಾಗಿ ಓಡುತ್ತಿರುವುದು ಅಕ್ಕ ತಂಗಿಯರ ಹೆಸರು. ಜೊತೆಗೆ, ಕೋಟ್ರೇಶ್ ಹೆಸರು. ಹೀಗಾಗಿ ಹರಪನಹಳ್ಳಿ ಅಖಾಡ ಈಗ ಭಾರೀ ಚರ್ಚೆಯಲ್ಲಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ