ಕ್ರಷರ್ ತೆರೆಯಲು ಗ್ರಾಮಸ್ಥರ ಹೋರಾಟ: ಪರಮೇಶ್ವರ್ ಸ್ವಕ್ಷೇತ್ರದಲ್ಲಿ 13 ಗ್ರಾಮಗಳಿಂದ ಮತದಾನ ಬಹಿಷ್ಕಾರ
ಕ್ರಷರ್ ತೆರೆಯಲು 13 ಗ್ರಾಮಗಳ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಹಾಗಾಗಿ ಅಧಿಕಾರಿಗಳ ನಡೆಗೆ ಬೇಸತ್ತು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
ತುಮಕೂರು: ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಅವರ ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 13 ಗ್ರಾಮಗಳಿಂದ ಮತದಾನ ಬಹಿಷ್ಕಾರ (Voting boycott) ಮಾಡಲಾಗಿದೆ. ಕ್ರಷರ್ ತೆರೆಯಲು 13 ಗ್ರಾಮಗಳ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಹಾಗಾಗಿ ಅಧಿಕಾರಿಗಳ ನಡೆಗೆ ಬೇಸತ್ತು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ತುಮಕೂರು ತಾಲೂಕಿನ ವ್ಯಾಪ್ತಿಯ ಬೆಳಧರ ಗ್ರಾಮ ಪಂಚಾಯಿತಿ ಚಿನಿವಾರನಹಳ್ಳಿ, ಜಕ್ಕೆನಹಳ್ಳಿ, ಅನ್ನದಾನಿಪಾಳ್ಯ, ಸೀಗೇಹಳ್ಳ, ಗೌಡನಕಟ್ಟೆ, ಮಲ್ಲಯ್ಯನಪಾಳ್ಯ, ಚನ್ನಮುದ್ದನಹಳ್ಳಿ, ಮಸಣಿಪಾಳ್ಯ, ಹಿರೇಕೊಡತಕಲ್ಲು, ಅಹೋಬಲ ಅಗ್ರಹಾರ, ಮುದ್ದರಾಮಯ್ಯನಪಾಳ್ಯ ಸೇರಿ 13 ಹಳ್ಳಿಗಳ 5,000ಕ್ಕೂ ಹೆಚ್ಚು ನಿವಾಸಿಗಳಿಂದ ಮತದಾನ ಬಹಿಷ್ಕಾರ ಬಗ್ಗೆ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಕ್ರಷರ್‌ಗೆ ಅನುಮತಿ ರದ್ದುಗೊಳಿಸುವವರೆಗೂ ಮತದಾನ ಮಾಡಲ್ಲವೆಂದು 5,000ಕ್ಕೂ ಹೆಚ್ಚು ನಿವಾಸಿಗಳಿಂದ ಪಟ್ಟು ಹಿಡಿಯಲಾಗಿದೆ. 2016ರಲ್ಲಿ ಸುಧಾಕರ್ ಲಾಲ್ ಶಾಸಕರಾಗಿದ್ದಾಗ ಶ್ರೀ ಧನಲಕ್ಷ್ಮೀ ಸ್ಟೋನ್ ಕ್ರಷರ್‌ಗೆ ರಾಜ್ಯಸರ್ಕಾರ ಅನುಮತಿ ನೀಡಿತ್ತು.
ಒಳ ಮೀಸಲಾತಿ ಜಾರಿಗೆ ವಿರೋಧಿಸಿ ಮತದಾನ ಬಹಿಷ್ಕಾರ
ವಿಜಯಪುರ: ಒಳ ಮೀಸಲಾತಿ ಜಾರಿಗೆ ವಿರೋಧಿಸಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ತಾಂಡಾದ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಹಮಾರೋ ತಾಂಡೋ ಹಮಾರಾ ರಾಜ್ ಎಂದು ಪ್ಲೆಕ್ಸ್ ಹಚ್ಚುವ ಮೂಲಕ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ ಮಾಡಿದ್ದಾರೆ. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಒಳ ಮೀಸಲಾತಿಯನ್ನ ಹಿಂಪಡೆಯಬೇಕು ಅಲ್ಲಿಯವರೆಗೂ ನಮ್ಮ ಗ್ರಾಮಕ್ಕೆ ಯಾವುದೇ ರಾಜಕೀಯ ಮುಖಂಡರ ಪ್ರವೇಶ ನಿಷೇಧಿಸಲಾಗಿದೆ. ನೊಂದ ನನ್ನ ಸಮಾಜದ ಜನರಿಗೆ ನ್ಯಾಯ ಸಿಗೋವರೆಗೂ ಯಾವುದೇ ಪಕ್ಷದ ಕಾರ್ಯಕರ್ತರು ಜನರ ಮನೆಗೆ ತೆರಳಿ ಮನವಲಿಸಿ ಮತ ಕೇಳುವ ಅರ್ಹತೆ ಇರವುದಿಲ್ಲ ಎಂದು ತಾಂಡಾದ ಜನರು ಫ್ಲೆಕ್ಸ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ರಾಯಚೂರಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಆದರ್ಶ ಗ್ರಾಮದಲ್ಲೆ ಇಲ್ಲ ಮೂಲಭೂತ ಸೌಕರ್ಯ
ರಾಜ್ಯದ ನಾನಾ ಭಾಗದಲ್ಲೂ ಮತದಾನ ಬಹಿಷ್ಕಾರ
ರಾಜ್ಯದ ನಾನಾ ಭಾಗದಲ್ಲೂ ಜನರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಹಳ್ಳಕ್ಕೆ ತೂಗು ಸೇತುವೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ತೂಗು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಈ ಹಿನ್ನೆಲೆ ಈಗ ಗ್ರಾಮಸ್ಥರು ರಾಜಕಾರಣಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ ಎಂಬ ಫಲಕಗಳನ್ನು ಹಾಕಿದ್ದರು. ಅಲ್ಲದೇ ತೂಗು ಸೇತುವೆ ನಿರ್ಮಿಸಿಕೊಡುವವರೆಗೆ ಮತ ಹಾಕುವುದಿಲ್ಲ ಎಂದು ಬ್ಯಾನರ್ ಹಾಕಿದ್ದರು.
ಕೆಲ ದಿನಗಳ ಹಿಂದೆ ಇದೇ ಜಿಲ್ಲೆಯ ಜೋಯಿಡಾ ತಾಲೂಕಿನ ಗ್ರಾಮ ಪಂಚಾಯ್ತಿ ಹೆಬ್ಬಾಳ ಮತ್ತು ನೇತಾರ್ಗು ಗ್ರಾಮಗಳಿಗೆ ಹೆಬ್ಬಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ, ಕಾಯಂ ಶಿಕ್ಷಕರ ನೇಮಕ, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು.
ಹಾಗೇ ಮೈಸೂರಿನ ನಂಜನಗೂಡು ತಾಲೂಕಿನ ಉಪ್ಪನಹಳ್ಳಿ ಗ್ರಾಮದಲ್ಲಿ ಚರಂಡಿ ಸಮಸ್ಯೆ ಉದ್ಭವಿಸಿದ್ದು, ಚರಂಡಿ ಸಮಸ್ಯೆ ಬಗೆಹರಿಯುವವರೆಗೂ ಮತದಾನ ಮಾಡುವುದಿಲ್ಲ ಎಂದಿದ್ದರು. ಈ ಮೂಲಕ ಮತದಾನವನ್ನೇ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದರು. ಶಿವಮೊಗ್ಗ ಜಿಲ್ಲೆಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರವಾದ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಮೇಗರವಳ್ಳಿ ಸಮೀಪದ ಅಣ್ಣುವಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿ ಮತ್ತು ಹಳ್ಳದ ಕಾಲುಸೇತುವೆ ಹಾಳಾಗಾಗಿದ್ದು, ಇದನ್ನು ಸರಿಪಡಿಸುವವರೆಗು ಮತದಾನ ಮಾಡುವುದಿಲ್ಲವೆಂದು ಬಹಿಷ್ಕರಿಸಿದ್ದರು.
ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ