Virajpet Assembly Election Results 2023: ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವಿನ ನಗೆ ಕಂಡಿದೆ. ಬಿಜೆಪಿ ಅಭ್ಯರ್ಥಿ ಹಾಗು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಕಾಂಗ್ರೆಸ್ನ ಎ.ಎಸ್. ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ. ಸತತ 3 ಚುನಾವಣೆಗಳಿಂದಲೂ ಗೆಲ್ಲುತ್ತಾ ಬಂದಿದ್ದ ಬೋಪಯ್ಯಗೆ ಮುಖಭಂಗವಾಗಿದೆ. ಈ ಕ್ಷೇತ್ರದಲ್ಲಿ ನಿರೀಕ್ಷಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ನಡೆದಿದೆ.
ಜನಸಂಘದ ಮುಖಂಡನಾಗಿ ಬಳಿಕ ಕಾಂಗ್ರೆಸ್ಗೆ ಹೋಗಿ ಕಟ್ಟರ್ ಆರೆಸ್ಸೆಸ್ ವಿರೋಧಿಯಾಗಿ ಗುರುತಿಸಿಕೊಂಡು, ತಮ್ಮ ಪ್ರಖರ ಹೇಳಿಕೆಗಳಿಂದ ಬಿಜೆಪಿಗರಿಗೆ ತಲೆನೋವಾಗಿದ್ದ ಎ.ಕೆ. ಸುಬ್ಬಯ್ಯ ಅವರ ಮಗ ಎಎಸ್ ಪೊನ್ನಣ್ಣ ಈಗ ವಿರಾಜಪೇಟೆಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ. ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ ನಿಲ್ಲಿಸಲಾಗಿದ್ದರೂ ಕಾಂಗ್ರೆಸ್ ಗೆಲುವಿಗೆ ಹಿನ್ನಡೆಯಾಗಲಿಲ್ಲ. ಜೆಡಿಎಸ್ ಅಭ್ಯರ್ಥಿ ಮಂಜೂರ್ ಅಲಿ ಗಳಿಸಿದ ಮತಗಳ ಸಂಖ್ಯೆ ಒಂದು ಸಾವಿರದ ಆಸುಪಾಸಿನಲ್ಲಿದೆ.
2008ರವರೆಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿತ್ತು. 2008ರಿಂದ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕ್ಷೇತ್ರ ಬಿಜೆಪಿಗೆ ಭದ್ರಕೋಟೆಯಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯ ಪ್ರತಾಪ್ ಸಿಂಹಗೆ ಈ ಕ್ಷೇತ್ರದಿಂದ ಒಳ್ಳೆಯ ಲೀಡ್ ಸಿಕ್ಕಿತ್ತು. ಬಿಜೆಪಿ ಇಲ್ಲಿ ಸತತ 4 ಬಾರಿ ಗೆದ್ದಿತ್ತು. ಕೆ.ಜಿ. ಬೋಪಯ್ಯ ಹ್ಯಾಟ್ರಿಕ್ ಭಾರಿಸಿದ್ದರು. ಇದಕ್ಕೂ ಮುಂಚಿನ 6 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ 5 ಬಾರಿ ಗೆದ್ದಿತ್ತು. 1990ಕ್ಕೆ ಮುನ್ನ ಇಲ್ಲಿ ಕಾಂಗ್ರೆಸ್ನ ಹವಾ ಹೆಚ್ಚಿತ್ತು. ಬಳಿಕ ಕೇಸರಿ ಪಾಳಯ ಬಲಯುತವಾಗಿ ಬೆಳೆದಿತ್ತು. ಈಗ ಕೈ ಪಾಳಯ ಮತ್ತೆ ಇಲ್ಲಿ ಚಿಗುರಿದೆ.
ಇದೇ ವೇಳೆ ಕೊಡಗಿನಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ. ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳು ಕೈ ಪಾಲಾಗಿವೆ. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.
ಇದನ್ನೂ ಓದಿ: BSY Reaction: ಮನೆಮನೆಗೆ ಹೋಗಿ ಕೊಟ್ಟ ಗ್ಯಾರಂಟಿ ಈಡೇರಿಸಿ: ಕಾಂಗ್ರೆಸ್ಗೆ ಯಡಿಯೂರಪ್ಪ ಒತ್ತಾಯ
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಗೆ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ