ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು (vote-from-home) ಚುನಾವಣಾ ಆಯೋಗ (Election Commission) ನೀಡಿರುವ ಅವಕಾಶ ಬಹುತೇಕ ಯಶಸ್ವಿಯಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಮೇ 4ರ ವರೆಗೆ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರ ಪೈಕಿ ಶೇ 92ರಷ್ಟು ಮಂದಿ ಮತದಾನ ಮಾಡಿದ್ದಾರೆ. ಒಟ್ಟು 80,250 ಮಂದಿ ಮನೆಯಿಂದಲೇ ಮತದಾನ ಮಾಡುವ ಆಯ್ಕೆಯನ್ನು ಆರಿಸಿಕೊಂಡಿದ್ದರು ಎಂದು ಆಯೋಗ ಹೇಳಿದೆ.
80 ವರ್ಷ ಮೇಲ್ಪಟ್ಟ 80,250 ಮಂದಿ ಹಾಗೂ 19,279 ಅಂಗವಿಕಲರು ಮನೆಯಿಂದಲೇ ಮತದಾನ ಆಯ್ಕೆ ಮಾಡಿಕೊಂಡಿದ್ದರು.
ಏಪ್ರಿಲ್ 29ರಿಂದ ಮನೆಯಿಂದಲೇ ಮತದಾನ ಆರಂಭವಾಗಿದ್ದು, ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರ ಮನೆಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತ ಪಡೆದುಕೊಂಡು ವಾಪಸಾಗುತ್ತಿದ್ದಾರೆ. 80 ವರ್ಷ ಮೇಲ್ಪಟ್ಟ 80,250 ಮಂದಿ ಪೈಕಿ ಈವರೆಗೆ 73,743 ಮಂದಿ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 91.89ರಷ್ಟು ಜನ ಮತದಾನ ಮಾಡಿದಂತಾಗಿದೆ.
ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದ 19,279 ಅಂಗವಿಕಲರ ಪೈಕಿ 17,943 ಮಂದಿ ಮೇ 4ರ ವರೆಗೆ ಮತ ಚಲಾಯಿಸಿದ್ದಾರೆ. ಇದರೊಂದಿಗೆ ಶೇ 93.7ರಷ್ಟು ಮತದಾನವಾದಂತಾಗಿದೆ.
ಒಟ್ಟಾರೆಯಾಗಿ ಶೇ 92.12ರಷ್ಟು ಮತದಾನವಾದಂತಾಗಿದೆ. ಮನೆಯಿಂದಲೇ ಮತದಾನ ಇಂದು (ಮೇ 6) ಸಂಜೆಗೆ ಕೊನೆಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ: Vote From Home: ರಾಯಚೂರು; ಮತ ಚಲಾಯಿಸಿ ಅರ್ಧ ಗಂಟೆಯಲ್ಲೇ ಮೃತಪಟ್ಟ 82ರ ವೃದ್ಧೆ
ಮನೆಯಿಂದಲೇ ಮತದಾನದ ಮೂಲಕ ಪಡೆಯಲಾಗಿರುವ ಮತಗಳನ್ನು ಸ್ಟ್ರಾಂಗ್ ರೂಮ್ಗಳಲ್ಲಿ ಭದ್ರವಾಗಿ ಇರಿಸಲಾಗಿದ್ದು, ಮೇ 13ರಂದು ಮತ ಎಣಿಕೆ ದಿನ ತೆರೆಯಲಾಗುವುದು ಎಂದು ಆಯೋಗ ಹೇಳಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ಅಯೋಗದ ಸಿಬ್ಬಂದಿ ಅವರ ಮನೆ ಬಾಗಿಲಿಗೆ ತೆರಳಿ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಈಗಾಗಲೇ ಮೀಸಲಿಟ್ಟಿರುವ ಸ್ಟ್ರಾಂಗ್ ರೂಮ್ಗೆ ಶಿಪ್ಟ್ ಮಾಡಲಾಗುತ್ತದೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುತ್ತದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ