ಚಿಕ್ಕಮಗಳೂರು: ಭವಾನಿ ರೇವಣ್ಣ (Bhavani Revanna) ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಚರ್ಚೆ ಆಗಿಲ್ಲ. ಕುಟುಂಬ, ಪಕ್ಷದ ನಿರ್ಣಯಕ್ಕೆ ಬದ್ಧವಾಗಿರುತ್ತದೆ. ಹಾಸನದಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇವೆ. ಪಕ್ಷ, ದೊಡ್ಡವರು ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇವೆ. ಭವಾನಿ ಅವರಿಗೆ ಯಾವ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡುತ್ತೇವೆ, ನಿಭಾಯಿಸುತ್ತೇವೆ. ರಾಜ್ಯ ಸುತ್ತಿ ಮಹಿಳಾ ಸಂಘಟನೆ, ಯುವ ಸಂಘಟನೆ ಮಾಡುವ ಶಕ್ತಿ ಪಕ್ಷಕ್ಕಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಹೇಳಿದ್ದಾರೆ.
ಕಡೂರು ತಾಲೂಕು ಯಗಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸಿಗರು ಕಾಂಗ್ರೆಸ್ ಅಲೆಯಲ್ಲಿ ಗೆದ್ದಿಲ್ಲ. ಬಿಜೆಪಿ ವಿರೋಧಿ ಅಲೆಯಿಂದ ಕಾಂಗ್ರೆಸ್ ಗೆದ್ದಿದೆ ಅಷ್ಟೆ. ಚುನಾವಣೆಯಿಂದ ರಾಜ್ಯದಲ್ಲಿ ಅಂತಹ ಯಾವುದೇ ಬದಲಾವಣೆ ಆಗಿಲ್ಲ. ಬಿಜೆಪಿಯ ಮೀಸಲಾತಿ, ಹಿಜಾಬ್ನಂತಹ ನಿರ್ಧಾರದಿಂದ ಗೆದ್ದಿದೆ ಅಷ್ಟೆ. ಈಗ ಏನೇ ಮಾತನಾಡಿದರು ಹತಾಶೆಯ ಮಾತು ಅಂತಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕೋಮುವಾದಿಗಳನ್ನು ದೂರವಿಟ್ಟು ಜನ ಕಾಂಗ್ರೆಸ್ಗೆ ಅಧಿಕಾರ ನೀಡಿದ್ದಾರೆ: ಹೆಚ್ಡಿ ರೇವಣ್ಣ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು, ಅದರ ಹಿಂದೆ ಅವರಿಗೆ ದೊಡ್ಡ ಜಬಾವ್ದಾರಿ ಇದೆ. ಮಹಿಳೆಯರಿಗೆ 2000 ರೂ. ಹಣ, ಫ್ರೀ ಬಸ್, ಯುವಕರಿಗೆ ಸ್ಟೇ ಫಂಡ್, ವಿದ್ಯುತ್ ಫ್ರೀ ಎಲ್ಲಾ ಜಾರಿಗೆ ಬರಲಿ. ನಂಬಿಕೆ ಇಟ್ಟು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ, ಜನ ಕಾಯುತ್ತಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡು ಹೇಗೆ ನಿಭಾಯಿಸುತ್ತಾರೆ ನೋಡೋಣ ಎಂದರು.
ಸರ್ಕಾರ ಬಂದು 48 ಗಂಟೆಯೂ ಕಳೆದಿಲ್ಲ, ಹರಿಪ್ರಸಾದ್ ಈಗಲೇ ಯೂಟರ್ನ್ ಹೊಡೀತಿದ್ದಾರೆ. ಉಚಿತ ವಿದ್ಯುತ್ ಎಪಿಎಲ್ ಕಾರ್ಡ್ನವರಿಗೆ, ಟ್ಯಾಕ್ಸ್ ಕಟ್ಟೋರಿಗೆ ಇಲ್ಲ, ಬಿಪಿಎಲ್ನವರಿಗೆ ಮಾತ್ರ ಅಂತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬರಲಿ ಎಂದು ಹಾರೈಸೋಣ ಎಂದು ಹಾರೈಸಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ