ಜಗದೀಶ್ ಶೆಟ್ಟರ ಮನೆಗೆ ಪರಮೇಶ್ವರ್, ದಿನೇಶ್ ಗುಂಡೂರಾವ್ ಭೇಟಿ: ಸೌಹಾರ್ದ ಭೇಟಿ ಎಂದ ಮಾಜಿ ಸಿಎಂ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸದಾಶಿವನಗರ ನಿವಾಸಕ್ಕೆ ಇಂದು (ಮೇ.16) ಹೈಕಮಾಂಡ್ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ್ದಾರೆ. ಈ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರ ಸದಾಶಿವನಗರ ನಿವಾಸಕ್ಕೆ ಇಂದು (ಮೇ.16) ಹೈಕಮಾಂಡ್ ಸೂಚನೆ ಮೇರೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parmeshwara), ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ (Dinesh Gundurao) ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ (Congress) ನಾಯಕ ಜಗದೀಶ್ ಶೆಟ್ಟರ್ ಸೌಹಾರ್ದಯುತವಾಗಿ ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದರು. ಕಾಂಗ್ರೆಸ್ ಸೇರಿದ ಮೇಲೆ 15 ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.
ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಿಂಗಾಯತರನ್ನು (Lingayat) ಅವಮಾನಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಅಂತಾ ಹೇಳಬೇಕಲ್ವಾ? ಬಿಎಸ್ ಯಡಿಯೂರಪ್ಪ ಕಣ್ಣೀರು ಹಾಕಿದರು. ನನಗೆ ಟಿಕೆಟ್ ಕೊಡದೆ ಅವಮಾನಿಸಿದ್ದರು. ಇದೆಲ್ಲವೂ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಯಿತು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಅಧಿಕಾರಕ್ಕಾಗಿ ಸಹಜವಾಗಿ ಗಲಾಟೆ ನಡೆಯುತ್ತೆ
ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿರುವ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನಿಸುತ್ತೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಸಹಜವಾಗಿ ಗಲಾಟೆ ನಡೆಯುತ್ತೆ. ಪೂರ್ಣ ಬಹುಮತ ಬಂದಿದೆ, ಉತ್ತಮ ಆಡಳಿತ ಕೊಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಒಳ್ಳೆ ನಾಯಕರು. ಯಾವುದೇ ಗೊಂದಲವಿಲ್ಲದೆ ನಾಯಕರು ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಕೆಲವು ನಿಖರ ಕಾರಣಗಳನ್ನು ಹುಡುಕಿದ ಬಿಜೆಪಿ: ಅವು ಇಲ್ಲಿವೆ
ಆದಷ್ಟು ಬೇಗ ಸಿಎಂ ಯಾರು ಆಗುತ್ತಾರೆ ಅಂತ ಬಗೆ ಹರಿಯಬೇಕು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ಅರ್ಹರು ಇದ್ದಾರೆ. ಪಾರ್ಟಿ ದೃಷ್ಟಿಯಿಂದ ಇಬ್ಬರು ಕುಳಿತು ಮಾತಾಡಿ ಅವರೇ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು. ಇದು ಪಾರ್ಟಿ ಹಾಗೂ ದೇಶಕ್ಕೆ ಒಳ್ಳೆಯದು ಎಂದು ಸಲಹೆ ನೀಡಿದರು.
ಇನ್ನು ಬಿಎಲ್ ಸಂತೋಷ್ ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ನನ್ನನ್ನು ಟಾರ್ಗೆಟ್ ಮಾಡಿದ್ದರು. ನಮ್ಮ ಕಡೆ ಬಂದವರನ್ನು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಿ ಅಂತ ಪ್ರಚಾರ ಮಾಡಿದರು. ನನ್ನನ್ನು ಟಾರ್ಗೆಟ್ ಮಾಡಿ ಬಿಜೆಪಿಯವರು ಸೋಲಿಸಿದರು. ಬಿಜೆಪಿಯ ಇವತ್ತಿನ ಪರಿಸ್ಥಿತಿಗೆ ಕೆಲವರ ದುರಹಂಕಾರವೆ ಕಾರಣ. ಅನೇಕರಿಗೆ ದುರಹಂಕಾರ ಬಂದಿದೆ, ಹೀಗಾಗಿ ಪಕ್ಷಕ್ಕೆ ಈ ಗತಿ ಬಂದಿದೆ ಎಂದು ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ ಮಾಡಿದರು.
ಲಿಂಗಾಯತರು ಕಾಂಗ್ರೆಸ್ ಕಡೆ ಬಂದಿದ್ದಾರೆ. ಇನ್ಮುಂದೆಯೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮುಂದುವರಿಯುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರ್ಯಾಯ ಶಕ್ತಿ ರಚನೆ ಆಗುತ್ತಿದೆ. ಅದರ ಮುಂದಾಳತ್ವ ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.
ನಿಮಗೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ
ಇನ್ನು ದಿನೇಶ್ ಗುಂಡೂರಾವ್ ಮತ್ತು ಡಾ. ಜಿ ಪರಮೇಶ್ವರ ಭೇಟಿ ವೇಳೆ ಮಹತ್ವದ ಮಹತ್ವ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ಗೆ ಬಂದ ಮೇಲೆ ಸಕ್ರಿಯರಾಗಿ ಕೆಲಸ ಮಾಡಿದ್ದೀರಿ. 136 ಸ್ಥಾನ ಬರುವಲ್ಲಿ ನಿಮ್ಮ ಪಾತ್ರನು ಇದೆ. ಮುಂದಿನ ಲೋಕಸಭಾ ಎಲೆಕ್ಷನ್ ಹಿನ್ನೆಲೆ ಸಹಕಾರ ಮುಂದುವರೆಯಲಿ. ನಿಮಗೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ ನೀಡುವ ಇಚ್ಛೆ ಹೈಕಮಾಂಡ್ಗೆ ಇದೆ. ಇನ್ಮುಂದೆ ಕಾಂಗ್ರೆಸ್ ಗುರಿ ಲೋಕಸಭಾ ಚುನಾವಣೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಇಬ್ಬರು ನಾಯಕರು ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ