ನನ್ನ ನೋಡಿ ಮತ ಹಾಕಿ ಎನ್ನುವವರು ಆ ಪಕ್ಷ ಬಿಟ್ಟು ಬರ್ತಾರಾ? ಜಗದೀಶ್ ಶೆಟ್ಟರ್ ಹೇಳಿಕೆ ಪ್ರಲ್ಹಾದ್ ಜೋಶಿ ಟಾಂಗ್
ನಮ್ಮ ಭಾಗದಲ್ಲಿ ಈಗ ಹೊಸ ರೀತಿಯಲ್ಲಿ ವೋಟ್ ಕೇಳುತ್ತಿದ್ದಾರೆ. ಕಾಂಗ್ರೆಸ್ ನೋಡಿ ಮತ ಹಾಕಬೇಡಿ, ನನ್ನನ್ನು ನೋಡಿ ವೋಟ್ ಹಾಕಿ ಎನ್ನುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದರು.
ಹುಬ್ಬಳ್ಳಿ: ನಮ್ಮ ಭಾಗದಲ್ಲಿ ಈಗ ಹೊಸ ರೀತಿಯಲ್ಲಿ ವೋಟ್ ಕೇಳುತ್ತಿದ್ದಾರೆ. ಕಾಂಗ್ರೆಸ್ ನೋಡಿ ಮತ ಹಾಕಬೇಡಿ, ನನ್ನನ್ನು ನೋಡಿ ವೋಟ್ ಹಾಕಿ ಎನ್ನುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ಪ್ರಸ್ತಾಪಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಾಂಗ್ ನೀಡಿದರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಲಿಂಗಾಯತ (Lingayat) ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ನೋಡಿ ಮತ ಹಾಕಿ ಎನ್ನುವವರು ಆ ಪಕ್ಷ ಬಿಟ್ಟು ಬರ್ತಾರಾ ಎಂದು ಪ್ರಶ್ನಿಸಿದರು. ನಮ್ಮನ್ನು ನೋಡಿ ಮತ ಹಾಕಿ ಎನ್ನುವವರನ್ನು ನಾವು ಒಪ್ಪಿಕೊಳ್ಳಲ್ಲ ಎಂದು ವಾಗ್ದಾಳಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕಿ. ಕಾಶ್ಮೀರದ ಆರ್ಟಿಕಲ್ 370ಗೆ ವಿರೋಧ ಮಾಡಿದವರು ಕಾಂಗ್ರೆಸ್. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಾಪಸ್ ಜಾರಿ ಮಾಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು.
ಲಿಂಗಾಯತ ಮತಗಳ ಬಗ್ಗೆ ಎಚ್ಚರಿಕೆ ವಹಿಸಿದ ಜೋಶಿ
ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಸೆಂಟ್ರಲ್ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ರಣತಂತ್ರ ರೂಪಿಸಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಬತ್ತಳಿಕೆಯಿಂದ ಲಿಂಗಾಯತ ಮತಗಳು ಬೀಳದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಿರುವ ಜೋಶಿ, ಇತ್ತೀಚೆಗೆ ವಿಜಯ್ ಸಂಕೇಶ್ವರ್ ಅವರ ಸಹಕಾರ ಪಡೆದಿದ್ದರು. ಹುಬ್ಬಳ್ಳಿ ಸೇರಿದಂತೆ ರಾಜ್ಯದ ಲಿಂಗಾಯತ ಸಮುದಾಯದಲ್ಲಿ ಪ್ರಮುಖ ಮುಖಂಡರಲ್ಲೊಬ್ಬರಾಗಿ ಪ್ರಭಾವ ಹೊಂದಿರುವ, ಉದ್ಯಮಿಯೂ ಆಗಿರುವ ವಿಜಯ್ ಸಂಕೇಶ್ವರ್ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದ್ದರು.
ಶೆಟ್ಟರ್ ಗೆಲುವಿಗೆ ಶ್ರಮಿಸುವುದಾಗಿ ಶಪಥ
ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಕೂಡ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ್ದರು. ಆ ಮೂಲಕ ಶೆಟ್ಟರ್ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿದ್ದ ಎಲ್ಲರೂ ಶಪಥ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಕಾಂಗ್ರೆಸ್ ಮ್ಯಾನಿಫೆಸ್ಟೋ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ತಮಗೆ ಬಿಜೆಪಿಯಲ್ಲಿ ಆದ ಅಪಮಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ ಆ ಪಕ್ಷ ತೊರೆದಿದ್ದೇನೆ. ಇದೀಗ ಕಾಂಗ್ರೆಸ್ ಸೇರಿದ್ದೇನೆ. ಈ ಹಿಂದೆಯೂ ನೀವು ನನಗೆ ಬೆಂಬಲಿಸಿದ್ದೀರಿ. ಈಗಲೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಳಿಕ ಸಭೆಯಲ್ಲಿದ್ದವರೆಲ್ಲರೂ ಕೈ ಎತ್ತುವ ಮೂಲಕ ಜಗದೀಶ್ ಶೆಟ್ಟರ್‌ಗೆ ಬೆಂಬಲ ಸೂಚಿಸಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ