ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಇಂದು 5ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೌಢ್ಯತೆ ವಿರುದ್ಧ ಸಮರ ಸಾರಿ ಮಾನವ ಬಂಧುತ್ವ ವೇದಿಕೆ ಸ್ಥಾಪಿಸಿ ರಾಜ್ಯಾದ್ಯಂತ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತ ಬಂದಿರುವ ಸತೀಶ್ ಜಾರಕಿಹೊಳಿ ಅಪರೂಪದ ರಾಜಕಾರಣಿ. ಸಿದ್ದರಾಮಯ್ಯ ಕಟ್ಟಾ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ರಾಜಕೀಯ ಜೀವನವೇ ವಿಭಿನ್ನ.
1992ರ ಗೋಕಾಕ್ ನಗರಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ಲಿಸಿ ಗೋಕಾಕ್ ನಗರಸಭೆಯಲ್ಲಿ ಪ್ರಭುತ್ವ ಸಾಧಿಸುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. 1992 ರಿಂದ 1994ರವರೆಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 1993ರಿಂದ 1995ರವರೆಗೆ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಬಳಿಕ ಜನತಾದಳ ಸೇರ್ಪಡೆಯಾದ ಸತೀಶ್ ಜಾರಕಿಹೊಳಿ 1998ರಲ್ಲಿ ಪ್ರಥಮ ಬಾರಿ ಬೆಳಗಾವಿ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೊದಲ ಬಾರಿ ವಿಧಾನ ಪರಿಷತ್ ಸದಸ್ಯರಾದರು.
2004ರಲ್ಲಿ ಎರಡನೇ ಬಾರಿಗೆ ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿ ಪುನರಾಯ್ಕೆಯಾದ ಸತೀಶ್ ಜಾರಕಿಹೊಳಿಯವರು 2004-05ರ ಅವಧಿಯಲ್ಲಿ ಧರ್ಮಸಿಂಗ್ ಸರ್ಕಾರದಲ್ಲಿ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ಸತೀಶ್ ಜಾರಕಿಹೊಳಿ ಅವರು 2005ರಲ್ಲಿ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಐತಿಹಾಸಿಕ ಅಹಿಂದ ಸಮಾವೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಸಿದ್ದರಾಮಯ್ಯ ಜೊತೆ ಜನತಾದಳದಿಂದ ಹೊರಬಂದು ಸಿದ್ದರಾಮಯ್ಯವರು ಕಟ್ಟಿದ್ದ ಎಬಿಪಿಆರ್‌ಪಿ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಬಳಿಕ 2006ರಲ್ಲಿ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸತೀಶ್ ಜಾರಕಿಹೊಳಿ 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆ ಬಳಿಕ ಯಮಕನಮರಡಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. 2008, 2013, 2018 ಹಾಗೂ 2023ರಲ್ಲಿ ಸತತವಾಗಿ 4 ಬಾರಿ ಯಮಕನಮರಡಿ ಕ್ಷೇತ್ರದಿಂದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018ರ ಚುನಾವಣೆಯಲ್ಲಿ ರಾಹುಕಾಲದಲ್ಲಿ ಚುನಾವಣೆ ನಾಮಪತ್ರ ಸಲ್ಲಿಸಿ, ಕ್ಷೇತ್ರದಲ್ಲಿ ಪ್ರಚಾರ ನಡೆಸದೇ ವಿಜಯ ಸಾಧಿಸಿದ್ದರು.
2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಹಾಗೂ ಸಣ್ಣ ಕೈಗಾರಿಕೆ ಸಚಿವರಾಗಿ ಸೇವೆ, 2018 ರಿಂದ 2019 ರವರೆಗೆ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಎಐಸಿಸಿ ಕಾರ್ಯದರ್ಶಿಯಾಗಿ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಸೇವೆ ಸಲ್ಲಿಸಿರುವ ಸತೀಶ್ ಜಾರಕಿಹೊಳಿ ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ.
2019ರಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲನುಭವಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಸೇರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸತೀಶ್ ಜಾರಕಿಹೊಳಿಯವರು 2020ರಲ್ಲಿ ಹೊಸ ಕಾರು ಕೊಂಡುಕೊಂಡಿದ್ದರು. ಈ ವೇಳೆ ಮೂಡನಂಬಿಕೆ ವಿರುದ್ಧವಾಗಿ ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಹೊಸ ಫಾರ್ಚೂನರ್ ಕಾರು ಪೂಜೆ ಮಾಡಿಸಿದ್ದರು. ಅಲ್ಲದೇ ತಮ್ಮ ಕಾರಿಗೆ 2023 ಸಂಖ್ಯೆಯ ನೋಂದಣಿ ಮಾಡಿಸಿ ನಂಬರ್ ಪ್ಲೇಟ್ ಅಳವಡಿಸಿದ್ದರು. ಇದಕ್ಕೆ ಕಾರಣವೂ ಇದೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಇದೇ ಸಂಖ್ಯೆಯ ನಂಬರ್ ಪ್ಲೇಟ್ ಅಳವಡಿಸಿದ್ದಾರಂತೆ. ಅಂದಿನಿಂದಲೂ ಸತೀಶ್ ಜಾರಕಿಹೊಳಿ 2023 ನೋಂದಣಿ ಸಂಖ್ಯೆಯ ಫಾರ್ಚೂನರ್ ಕಾರಿನಲ್ಲೇ ಪ್ರಯಾಣಿಸುತ್ತಿದ್ದಾರೆ. ಇದೀಗ 2020ರಲ್ಲಿ ಸತೀಶ್ ಜಾರಕಿಹೊಳಿ ನುಡಿದ ಭವಿಷ್ಯದ ಬಗ್ಗೆಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಮಶಾನದಲ್ಲಿ ಸಂಕಲ್ಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಸತೀಶ್ ಜಾರಕಿಹೊಳಿ ಇಂದು ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ