ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕದಲ್ಲಿ ರಾಜಕಾರಣದ ಚದುರಂಗ ಆಟ ರೋಚಕತೆ ಪಡೆಯುತ್ತಿದೆ. ನಿನ್ನೆ (ಜ.23) ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಬಿಜೆಪಿ ಸರ್ಕಾರ ಭ್ರಷ್ಟತೆಯಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದೆ. ಇದರ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದೆ. ಇದಾದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ನಾನು ಭ್ರಷ್ಟಾಚಾರದಲ್ಲಿ ತೊಡಗಿದ್ದರೇ ರಾಜಕೀಯ ನಿವೃತ್ತಿ ಮತ್ತು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದರು. ಕಾಂಗ್ರೆಸ್ನ ಬಸ್ ಯಾತ್ರೆ ನಿನ್ನೆ ಕೋಲಾರ ತಲುಪಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರವಾಗಿದ್ದರಿಂದ ಸಾಕಷ್ಟು ರೋಚಕತೆ ಪಡೆದುಕೊಂಡಿತ್ತು. ಆದರೆ ಯಡಿಯೂರಪ್ಪ ಈ ಬೆಳವಣಿಗೆಗೆ ಮತ್ತೊಂದು ತಿರುವು ನೀಡಿದರು. ‘ಸಿದ್ದರಾಮಯ್ಯ ಕೋಲಾರದ ಮೇಲೆ ಕಣ್ಣು ಇಟ್ಟಿದ್ದಾರೆ, ಅವರಿಗೆ ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಇದೆ’ ಎಂದು ಹೇಳುವ ಮೂಲಕ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದರು. ಮೂರು ರಾಜಕೀಯ ಪಕ್ಷಗಳ ರಾಜಕೀಯ ಕೆಸೆರೆಚಾಟ ಮಾಮೂಲಾಗಿದ್ದರೂ, ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮದೇ ಪಕ್ಷದ ವಿರುದ್ಧ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಇಂದಿನ ರಾಜಕೀಯ ವಿದ್ಯಮಾನಗಳ ತಾಜಾ ಅಪ್ಡೇಟ್ ಇಲ್ಲಿ ಲಭ್ಯ.
ತುಮಕೂರು: ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ಜನತೆಯ ಸಮಸ್ಯೆ, ನೋವು, ದುಖಃ ಅರಿತು ಅವರಿಗೆ ಪರಿಹಾರ ಕೊಡಲು ಯಾತ್ರೆ ಹಮ್ಮಿಕೊಂಡಿದ್ದೇವೆ. ಎಲ್ಲಾ ವಿಚಾರದಲ್ಲಿ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಬಿಜೆಪಿ ಅವರು ಎಲ್ಲರ ಬದುಕಲ್ಲಿ ಬದಲಾವಣೆ ಮಾಡುತ್ತೇವೆ ಅಂತಾ 600 ಭರವಸೆ ಕೊಟ್ಟಿದ್ದರು. ನಿಮಗೆ ಅಚ್ಚೇದಿನ್ ಬಂದಿದ್ಯಾ, ಅಕೌಂಟ್ಗೆ ಹಣ ಬಂದಿದ್ಯಾ, ನಿಮ್ಮ ದುಡಿಮೆ ಡಬಲ್ ಆಗಿದ್ಯಾ? ಏನೂ ಇಲ್ಲಾ. ಹೀಗೆ ಕೇಳಿಕೊಂಡು ಹೋದರೇ ರಾತ್ರಿ ಆಗುತ್ತೆ. ಇನ್ನು 45 ದಿನ ಈ ಸರ್ಕಾರ ಇರುತ್ತದೆ. 45 ದಿನ ಆದಮೇಲೆ ನಮ್ಮ ಸರ್ಕಾರ ಬರುತ್ತದೆ ಎಂದರು. ಗುಬ್ಬಿಯ ಶ್ರೀನಿವಾಸ್, ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ಶಕ್ತಿ ತುಂಬಿ ಹೋಗಿದ್ದಾರೆ. ಅವರ ತೀರ್ಮಾನ ಏನು ಅಂತಾ ನಿಮಗೆ ಗೊತ್ತಿದೆ ಹೇಳಬೇಕಿಲ್ಲಾ. ಶಿವಲಿಂಗೇಗೌಡರ ತೀರ್ಮಾನವೂ ನಿಮಗೆ ಗೊತ್ತಿದೆ. ಎಲ್ಲರೂ ನಾಯಕರು, ಜನರ ಪ್ರತಿನಿಧಿಯಾಗಿದ್ದಂಥವರು. ಮುಂದೆ ಕುಮಾರಸ್ವಾಮಿ ಅಧಿಕಾರಕ್ಕೆ ಬರಲ್ಲಾ, ನಮ್ಮ ದಾರಿ ನಾವು ನೋಡ್ಕೋಬೇಕು ಅಂತಾ ಬಂದಿದ್ದಾರೆ. ಎಂದರು. ರಾಹುಲ್ ಗಾಂಧಿ ಅವರು 3500 ಕಿಮಿ ನಡೆದಿದ್ದಾರೆ. ಯಾರಿಗೋಸ್ಕರ ನಡೆದರು? ರಾಜ್ಯದ ಜನರಲ್ಲಿ ಸಾಮರಸ್ಯ ಉಂಟು ಮಾಡಲು, ಬೆಲೆ ಏರಿಕೆಯನ್ನ ನಿಯಂತ್ರಣ ಮಾಡಲು, ಬಿಜೆಪಿ, ದಳದವರು ಏನಾದರು ಒಂದು ಹೋರಾಟ ಮಾಡಿದ್ದಾರಾ? ಕಾಂಗ್ರೆಸ್ ಅಧಿಕಾರ ಇದ್ದಾಗ ಅನೇಕ ಕಾರ್ಯಕ್ರಮ ಬಡವರಿಗಾಗಿ ಕೊಟ್ಟಿದ್ದೇವೆ. ಉಳುವವನಿಗೆ ಭೂಮಿ, ಜಮೀನು, ಸೈಟು ಯಾರಾದ್ರು ಕೊಟ್ಟಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ತುಮಕೂರಿನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಬಿಜೆಪಿಗೆ ಸುಳ್ಳೇ ಅವರ ಮನೆ ದೇವರು. ನಿಮ್ಮ ಜಿಲ್ಲೆಯ ಮಂತ್ರಿ ಮಾಧುಸ್ವಾಮಿ ಅವರು ಆಗಾಗ ನಿಜ ಹೇಳುತ್ತಾ ಇರುತ್ತಾರೆ. ಸರ್ಕಾರ ನಡೆಸೋಕೆ ಆಗುತ್ತಿಲ್ಲ ಅಂತಾ ನೋವಿನಿಂದ ಹೇಳುತ್ತಾರೆ. ಸರ್ಕಾರ ನಡೆಸೋಕೆ ಆಗುತ್ತಿಲ್ಲ ಅಂದರೆ ಮತ್ಯಾಕೆ ಇದ್ದೀರಿ ಸಿಎಂ ಬಸವರಾಜ ಬೊಮ್ಮಾಯಿಯವರೇ? ದಯವಿಟ್ಟು ಬಿಟ್ಟು ಹೋಗಿ. ಎಂದರು. ನಿಮ್ಮ ಜಿಲ್ಲೆಯ ಇನ್ನೊಬ್ಬ ಮಂತ್ರಿ, ಶಿಕ್ಷಣ ಮಂತ್ರಿ. ಅದೇನ್ ಶಿಕ್ಷಣ ಪಡೆದಿದ್ದಾನೋ ಅವನಿಗೆ ಗೊತ್ತಿಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಪ್ಪ ಅಂದರೆ, ಶಾಲೆಗೆ ಕೇಸರಿ ಬಣ್ಣ ಬಳಿತೀನಿ ಅಂತಾ ಹೊರಟಿದ್ದಾನೆ.. ಬೇಕಿದ್ರೆ ನಿನ್ನ ಮುಖಕ್ಕೆ ಬಳಿಕೊಳಪ್ಪ ಕೇಸರಿ ಬಣ್ಣ. ಈ ಅಯೋಗ್ಯ ಶಿಕ್ಷಣ ಮಂತ್ರಿಗೆ ಸ್ವಲ್ಪ ಕೂಡ ಜ್ಞಾನ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಸರ್ಕಾರಿ ಶಾಲೆಯನ್ನ ಕಟ್ಟಿಸುವಾಗ ಕೇವಲ ಒಂದು ಧರ್ಮದವರು ಕೊಟ್ಟ ತೆರಿಗೆಯಿಂದ ಕಟ್ಟಿಸಿಲ್ಲ. ಎಲ್ಲಾ ಧರ್ಮದವರು ಕೊಟ್ಟಿರೋ ತೆರಿಗೆಯಿಂದ ಶಾಲೆ ಕಟ್ಟಿಸಿದ್ದಾರೆ. ಯಾವ ಅವಧಿಯಲ್ಲಿಯೂ ಶಿಕ್ಷಣ ಇಲಾಖೆಯಲ್ಲಿ ನಡೆಯದಷ್ಟು ಭ್ರಷ್ಟಾಚಾರ ಈ ಬಾರಿ ನಡೆದಿದೆ. ನಿನ್ನೆಯಷ್ಟೇ ಕೆಲ ಮಂತ್ರಿಗಳು ನಮ್ಮ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಸಚಿವ ಸುಧಾಕರ್ ಹಾಗೂ ಅಶ್ವತ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೊ ಯಾತ್ರೆ ಕಾಶ್ಮೀರ ತಲುಪಿದೆ. ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದಾರೆ.
ಆದರೆ ಹೆಚ್. ಡಿ ದೇವೇಗೌಡರು ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ದೇವೇಗೌಡ, ನಾನು ಈ ಕಾರ್ಯಕ್ರಮಕ್ಕೆ ಹಾಜರಾಗಲು ಆಗುತ್ತಿಲ್ಲ. ರಾಹುಲ್ ಗಾಂಧಿ ಅವರಿಗೆ ಶುಭಾಷಯ ಕೋರುತ್ತೇನೆ. ದೇಶದ ಒಗ್ಗೂಡಿವಿಕೆಗೆ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದ ದಿನದಂದು ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ಅತ್ಯಂತ ಸೂಕ್ತವಾಗಿದೆ. 3,500 ಕಿಲೋಮೀಟರ್ ರಾಹುಲ್ ಗಾಂಧಿ ಯಾತ್ರೆ ನಡೆಸಿದ್ದಾರೆ. ನನ್ನ ಶುಭಾಶಯಗಳನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿ ಎಂದು ಪತ್ರದ ಮೂಲಕ ಅಭಿನಂದನೆ ತಿಳಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೊ ಯಾತ್ರೆ ಕಾಶ್ಮೀರ ತಲುಪಿದೆ. ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದಾರೆ.
ಆದರೆ ಹೆಚ್. ಡಿ ದೇವೇಗೌಡರು ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ದೇವೇಗೌಡ, ನಾನು ಈ ಕಾರ್ಯಕ್ರಮಕ್ಕೆ ಹಾಜರಾಗಲು ಆಗುತ್ತಿಲ್ಲ. ರಾಹುಲ್ ಗಾಂಧಿ ಅವರಿಗೆ ಶುಭಾಷಯ ಕೋರುತ್ತೇನೆ. ದೇಶದ ಒಗ್ಗೂಡಿವಿಕೆಗೆ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮರಾದ ದಿನದಂದು ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ಅತ್ಯಂತ ಸೂಕ್ತವಾಗಿದೆ. 3,500 ಕಿಲೋಮೀಟರ್ ರಾಹುಲ್ ಗಾಂಧಿ ಯಾತ್ರೆ ನಡೆಸಿದ್ದಾರೆ. ನನ್ನ ಶುಭಾಶಯಗಳನ್ನು ರಾಹುಲ್ ಗಾಂಧಿ ಅವರಿಗೆ ತಿಳಿಸಿ ಎಂದು ಪತ್ರದ ಮೂಲಕ ಅಭಿನಂದನೆ ತಿಳಸಿದ್ದಾರೆ.
ಹಾಸನ: ಇನ್ನು 90 ದಿನಗಳಲ್ಲಿ ವಿಧಾನಸಭಾ ಚುನಾವಣೆ ಮುಗಿದಿರುತ್ತೆ. ಹಾಸನದ ಜೆಡಿಎಸ್ ಅಭ್ಯರ್ಥಿಯಾಗಿ ನನ್ನ ಮಾಡಲು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹಾಸನ ತಾಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ಭವಾನಿ ರೇವಣ್ಣ ಹೇಳಿದ್ದಾರೆ. ಕಕ್ಕೇನಹಳ್ಳಿ ಅಣ್ಣಪ್ಪಸ್ವಾಮಿ ದೇವಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಭಗವಂತನ ಆಶೀರ್ವಾದ ಬೇಕು ಎಂದರು.
ಹಾಸನ: ಅರಸೀಕೆರೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಗೊಂದಲದ ಗೂಡಾಗಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಬ್ರವರಿ 3 ರಂದು ಕಾರ್ಯಕರ್ತರ ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ ಭಾಗಿಯಾಗಲಿದ್ದಾರೆ. ಹಾಗೇ ಹಾಸನ ಜಿಲ್ಲಾ ಜನಪ್ರತಿನಿಧಿಗಳು, ಮುಖಂಡರಿಗೆ ಸಭೆಗೆ ಆಹ್ವಾನಿಸಲಾಗಿದೆ. ಸಭೆಗೆ ಅರಸಿಕೆರೆ ಶಾಸಕ ಶಿವಲಿಂಗೇಗೌಡರಿಗೂ ಜಿಲ್ಲಾಧ್ಯಕ್ಷ ಲಿಂಗೇಶ್ ಆಹ್ವಾನ ರವಾನಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಿವಲಿಂಗೇಗೌಡ
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಜೆಡಿಎಸ್‌ನಲ್ಲಿದ್ದು ಇಲ್ಲದಂತಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕ್ಷೇತ್ರದಲ್ಲಿ ಗುಸು ಗುಸು ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆ ಕಾರ್ಯಕರ್ತರ ಸಭೆಯಲ್ಲಿ ಅರಸಿಕೆರೆ ಶಾಸಕ ಶಿವಲಿಂಗೇಗೌಡ ಮುಂದಿನ ರಾಜಕೀಯ ನಿರ್ಧಾರವಾಗಲಿದೆ
ಬೆಂಗಳೂರು: ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಕೂಪ ಕೂತಿದೆ. ಸುಧಾಕರ್ ಅವರ ಪ್ರತಿಯೊಂದು ಹಗರಣವನ್ನೂ ಬಿಚ್ಚಿಟ್ಟಿದ್ದೀವಲ್ಲ ನಾವು. ಪ್ರತಿಯೊಂದು ಆಸ್ಪತ್ರೆ ಬೆಡ್ನಲ್ಲೂ ಹಗರಣ ಆಗಿದೆ. ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಸಚಿವ ಸುಧಾಕರ್ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದಲಿತರು, ಮಠಮಾನ್ಯಗಳ ಕೋಟ್ಯಂತರ ದುಡ್ಡನ್ನೂ ಹೊಡೆದಿದ್ದೀರಲ್ಲ. ನಾನೂ ಗಂಜಲ-ಗಿಂಜಲ ತಂದು ಕ್ಲೀನ್ ಮಾಡುತ್ತೇನೆ. ಈ ದುಷ್ಟ ಬಿಜೆಪಿ ಸರ್ಕಾರವನ್ನು ರಾಜ್ಯದ ಜನರು ಓಡಿಸಲಿದ್ದಾರೆ. ಬಿಜೆಪಿಯವರ ಸರ್ವೆಯಲ್ಲೇ 60-70 ಸ್ಥಾನ ದಾಟುತ್ತಿಲ್ಲ. ಬಿಜೆಪಿಯಲ್ಲೇ 32 ಗುಂಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ಯಾಚಪ್ ಮಾಡಲು ನಿಮ್ಮ ಸಚಿವರಿಗೆ ಹೇಳಿ ಎಂದು ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೊಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪ ಏನಾದರು ಮಾತಾಡಲಿ, ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇನೆ ಅಂತ ಹೇಳಿದ್ದಾರೆ. ನನಗೆ ಇಚ್ಚೆ ಇದೆ ಹೈಕಮಾಂಡ್ ಹೇಳಿದರೆ ನಿಲ್ಲುತ್ತೇನೆ ಅಂತ ಹೇಳಿದ್ದಾರೆ. ಒಬ್ಬ ನಾಯಕನು ಆಸೆಯೂ ವ್ಯಕ್ತಪಡಿಸಬಾರದಾ? ಮೊದಲು ಯಡಿಯೂರಪ್ಪ, ಅವರ ಮಗನ ಭವಿಷ್ಯ ತೀರ್ಮಾನ ಮಾಡಿಕೊಳ್ಳಲಿ. ಅಮೇಲೆ ನಮ್ಮ ಪಾರ್ಟಿ ಬಗ್ಗೆ ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ: ಚುನಾವಣೆ ಸಮೀಸುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ರಾಜಕೀಯ ಕಾವು ತಾರಕಕ್ಕೇರುತ್ತಿದೆ. ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಕ್ಷ ತೊರೆಯುವ ವದಂತಿ ಬಳಿಕವು ಹಲವು ಚರ್ಚೆ ನಡೆಯುತ್ತಿದೆ. ಶಿವಲಿಂಗೇಗೌಡರು ಮಾತಾಡಿದ್ದಾರೆ ಎನ್ನಲಾದ ಸ್ಪೋಟಕ ಆಡಿಯೋ ಒಂದು ವೈರಲ್ ಆಗಿದೆ. ಆಡಿಯೋದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಪತಿಗೆ ಶಾಸಕರು ಧಮ್ಕಿ ಹಾಕಿದ್ದಾರೆಂದು ಆರೋಪ ಕೇಳಿಬಂದಿದೆ.
ಜಕ್ಕನಹಳ್ಳಿ ಗ್ರಾ.ಪಂ ಸದಸ್ಯೆ ಸೌಮ್ಯ ಪತಿ ವಾಸು ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದ್ದಾರೆನ್ನಲಾದ 5 ನಿಮಿಷಗಳ ಆಡಿಯೋ ವೈರಲ್ ಆಗಿದ್ದು, ವಾಸುಗೆ ಕೊಟ್ಟ ಹಣ ವಾಪಸ್ ಕೊಡು, ಇಲ್ಲ ಚುನಾವಣೆಯಲ್ಲಿ ನನ್ನ ಪರವಾಗಿ ಇರು ಎಂದು ಧಮ್ಕಿ ಹಾಕಿದ್ದಾರಂತೆ. ನಿನಗೆ 50 ಸಾವಿರ ರೂ. ಕೊಟ್ಟಿದ್ದು ನೀನು ನನ್ನ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಲಿ ಅಂತ. ನೀನು ನನ್ನ ಜೊತೆ ಇರದಿದ್ದರೆ ಕೊಟ್ಟ ಹಣ ವಾಪಸ್ ಕೊಡು. ನಾನೇನು ನಿಮ್ಮತ್ರ ಹಣ ಕೇಳಿದ್ನ? ನೀವೇ ಕೊಟ್ರಿ ವಾಪಸ್ ಕೊಡೋಕೆ ಹಣ ಇಲ್ಲ. ಹಣ ಕೊಡಿದಿದ್ದರೆ ಅದೇನು ಮಾಡುತ್ತಿರೋ ಮಾಡಿ ಎಂದು ವಾಸು ಸವಾಲು ಹಾಕಿದ್ದಾರೆ.
ಮೈಸೂರು: ಸಿದ್ದರಾಮಯ್ಯ ಹಳೇ ಸಿನಿಮಾ ಇದ್ದಂತೆ, ಮೋದಿ ಹೊಸ ಸಿನಿಮಾ. ನಿಮಗೆ ಒಂದು ಸರಿಯಾದ ಕ್ಷೇತ್ರ ಇಲ್ಲ. ಇಲ್ಲಿಂದ ಅಲ್ಲಿಗೆ ಓಡಿ ಹೋಗುತ್ತೀರಿ, ಅಲ್ಲಿಂದ ಇಲ್ಲಿಗೆ ಬರುತ್ತೀರಿ. ಪ್ರಾಣಿ ಬಲಿ ಕೊಡುವಾಗ ಕಿರುಚುವ ಪರಿಸ್ಥಿತಿ ಸಿದ್ದರಾಮಯ್ಯರದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯಸಭಾ ಸದಸ್ಯ ಜಗ್ಗೇಶ್ ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಹುಣಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಡಿದ ಅವರು ಸಿದ್ದರಾಮಯ್ಯ ಅವರಿಗೆ ಅಲ್ಲೂ ಜಾಗ ಇಲ್ಲ, ಇಲ್ಲೂ ಜಾಗ ಇಲ್ಲ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ರೀತಿ ಆಡುತ್ತಿದ್ದಾರೆ ಎಂದು ಕಾಲೆಳೆದರು.
ಈಗ ಹುಣಸೂರು ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗ್ರಾಮಗಳಿಗೆ ಕುಡಿಯುವ ನೀರು ಬಂದಿದ್ದು ಮೋದಿಯಿಂದ. ದರಿದ್ರ ಪಾಕಿಸ್ತಾನ ದೇಶ ಮಗ್ಗಲು ಮುಳ್ಳಾಗಿದೆ. ಮತ್ತೊಂದು ಕಡೆ ಚೀನಾ ಇದೆ, ಎಲ್ಲವನ್ನೂ ಮೋದಿ ನಿಭಾಯಿಸುತ್ತಿದ್ದಾರೆ. ಇಲ್ಲಿ ಮಾತನಾಡುವ ಸಿದ್ದರಾಮಯ್ಯ ಬಾರ್ಡರ್ಗೆ ಹೋಗಿ ಮಾತನಾಡಲಿ ಎಂದು ಹೇಳಿದ್ದಾರೆ.
ಬೆಳಗಾವಿ: ಕೇಂದ್ರ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ಇದೇ ತಿಂಗಳು (ಜ.28) ಬೆಳಗಾವಿಗೆ ಆಗಮಿಸಲಿದ್ದಾರೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಜಿಲ್ಲೆಯ ಖಾಸಗಿ ಹೊಟೇಲ್ನಲ್ಲಿ ಸಂಜೆ ಬಿಜೆಪಿಯ ಪದಾಧಿಕಾರಿಗಳು, ಮುಖಂಡರ ಜೊತೆಗೆ ಸಭೆ ನಡೆಸಿ ಜಿಲ್ಲಾ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಮುಲಾಮು ಹಚ್ಚಲಿದ್ದಾರೆ.
ಹಾವೇರಿ: ಜಿಲ್ಲೆಯ ರಾಜಕೀಯ ಆಣೆ ಪ್ರಮಾಣಕ್ಕೆ ತಿರುಗಿದೆ. ಹಾವೇರಿ ಹಾಲಿ ಶಾಸಕ ನೇಹರು ಓಲೇಕರ್ಗೆ ಮಾಜಿ ಶಾಸಕ ರುದ್ರಪ್ಪ ಲಮಾಣಿ ಸವಾಲ್ ಎಸೆದಿದ್ದಾರೆ. G+ ಒನ್ ಮನೆ ಕಟ್ಟಿಸುವ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿ ನಡೆದಿದೆ. G+ ಓನ್ 1100 ಮನೆಗಳನ್ನು 5 ವರ್ಷದ ಹಿಂದೆ ಮಂಜೂರು ಮಾಡಿದ್ದೇನೆ. 5 ವರ್ಷದಿಂದ ಇದುವರೆಗೂ ಯೋಜನೆ ಪೂರ್ಣ ಮಾಡದೆ, ಶಾಸಕ ಓಲೆಕರ್ ಫಲಾನುಭವಿಗಳನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆಂದು ಮಾಜಿ ಶಾಸಕ ರುದ್ರಪ್ಪ ಲಮಾಣಿ ಆರೋಪ ಮಾಡಿದ್ದಾರೆ.
ರುದ್ರಪ್ಪ ಲಮಾಣಿ ಆರೋಪಕ್ಕೆ ತಿರುಗೇಟು ನೀಡಿರುವ ನೇಹರು ಓಲೇಕರ್ ರುದ್ರಪ್ಪ ಲಮಾಣಿ ಬಡವರಿಂದ ತಲಾ 25 ಸಾವಿರ ಲಂಚ ಪಡೆದಿದ್ದಾರೆ. ಮನೆ ಇದ್ದವರು, ಅರ್ಹ ಇಲ್ಲದವರ ಹೆಸರು ಕೂಡ ಪಟ್ಟಿಯಲ್ಲಿ ಸೇರಿಸಲಾಗಿದೆ. ಓರ್ವ ಮಂತ್ರಿ ಆಗಿದ್ದವನು ಇಂತ ಭ್ರಷ್ಟಾಚಾರದ ಕೆಲಸ ಮಾಡಬಾರದಾಗಿತ್ತು ಎಂದು ಆರೋಪ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ರುದ್ರಪ್ಪ ಲಮಾಣಿ ತಿರುಗೇಟು 5 ಕೋಟಿ ಹಣ ಮಂಜೂರು ಮಾಡಿ, ಜಿಲ್ಲಾಧಿಕಾರಿ ಹಾಗೂ ನಗರಸಭೆಯಿಂದ ಕ್ಲೀಯರ್ ಆಗಿದೆ. ಆದರೂ ಕೂಡ ಕಳೆದ 5 ವರ್ಷದಿಂದ ಒಂದೇ ಒಂದು ಮನೆಯನ್ನು ಫಲಾನುಭವಿಗೆ ಕೊಟ್ಟಿಲ್ಲ. ನಾನು ಲಂಚ ಪಡೆದಿಲ್ಲ ಅಂತ ಹಾವೇರಿಯ ಹುಕ್ಕೇರಿ ಮಠದ ಗದ್ದುಗೆ ಮುಟ್ಟಿ ಪ್ರಮಾಣ ಮಾಡುತ್ತೇನೆ. ಹಾವೇರಿ ಜನರ ಆರಾಧ್ಯ ದೈವ ಶಿವಲಿಂಗ ಸ್ವಾಮಿ ಗದ್ದುಗೆ ಮುಟ್ಟಿ ಪ್ರಮಾಣ ಮಾಡೋಣ. ನಾನು ಜನರ ಹಣ ಪಡೆದಿದ್ದೇನೆ ಅಂತ ಓಲೆಕರ ಹೇಳಲಿ. ನಾನು ತಪ್ಪು ಮಾಡಿದ್ರೆ ಆ ದೇವರು ನನಗೆ ಶೀಕ್ಷೆ ಕೊಡಲಿ. ಒಂದು ವೇಳೆ ಸುಳ್ಳು ಆರೋಪ ಮಾಡಿದರೆ ನಿಮಗೆ ದೇವರು ಶೀಕ್ಷೆ ಕೊಡುತ್ತಾನೆ. ಮೊದಲು ದೇವರ ಹತ್ತಿರ ನಮ್ಮಿಬ್ಬರ ಪರೀಕ್ಷೆ ಮಾಡಿಕೊಳ್ಳೋಣ ಆಮೇಲೆ ಜನತಾ ಪರೀಕ್ಷೆಗೆ ಹೋಗೋಣ ಎಂದು ಶಾಸಕ ನೇಹರು ಓಲೇಕರ್ಗೆ ಮಾಜಿ ಶಾಸಕ ರುದ್ರಪ್ಪ ಲಮಾಣಿ ಚಾಲೆಂಜ್ ಆಗಿದ್ದಾರೆ.
ದೊಡ್ಡಬಳ್ಳಾಪುರ: ಇಂದು (ಜ.24) ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಪ್ರವೇಶಿಸಲಿದೆ. ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ಪ್ರಜಾದ್ವನಿ ಬೃಹತ್ ಸಮಾವೇಶ ನಡೆಯಲಿದೆ. ತುಮಕೂರಿನಲ್ಲಿ ಪ್ರಜಾಧ್ವನಿಯಾತ್ರೆ ಮುಗಿಸಿ ದೊಡ್ಡಬಳ್ಳಾಪುರ ಕ್ಕೆ ಪ್ರವೇಶಿಸಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಜಿಲ್ಲೆಯ ನಾಲ್ಕು ತಾಲೂಕುಗಳಿಂದ 50 ಸಾವಿರಕ್ಕೂ ಹೆಚ್ಚು ಜನ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿ ಗೆಲವಿನ ನಿರೀಕ್ಷಯಲ್ಲಿದ್ದರೂ ಸ್ಥಳಿಯ ಬಣ ರಾಜಕೀಯ ಮತ್ತು ದಲಿತ ಹಾಗೂ ಕುರುಬ ಸಮಾಜದ ಬಂಡಾಯ ಮಾತ್ರ ಸಿದ್ದರಾಮಯ್ಯ ತೆಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಸ್ಥಳೀಯ ರಾಜಕೀಯವೇನು, ಜಾತಿ ಲೆಕ್ಕಾಚಾರವೇನು ಇಲ್ಲಿದೆ ಮಾಹಿತಿ
-ಕುರುಬ ಸಮುದಾಯದ ಕೆಲವರು ಸಿದ್ದರಾಮಯ್ಯ ವಿರುದ್ದವಾಗಿದ್ದರೇ, ದಲಿತ ಸಮುದಾಯದ ಒಂದು ಗುಂಪು ಹಾಗೂ ಅಲ್ಪಸಂಖ್ಯಾತರ ಒಂದು ಗುಂಪು ಸಿದ್ದರಾಮಯ್ಯ ಹಾಗೂ ಕಾಂಗ್ರೇಸ್ ವಿರುದ್ದ ತಿರುಗಿ ಬಿದ್ದಿವೆ. ಜೊತೆಗೆ ಕೋಲಾರ ಜಿಲ್ಲಾ ಕಾಂಗ್ರೇಸ್ನಲ್ಲಿ ಬಣ ರಾಜಕೀಯ ಶಮನವಾಗುವ ಲಕ್ಷಣ ಕಂಡು ಬರುತ್ತಿಲ್ಲ. ವೇದಿಕೆ ಹಾಗೂ ಹೊರಗೆ ಎಷ್ಟೇ ಗುಂಪುಗಾರಿಕೆ ಶಮನವಾಗಿದೆ ಎಂದು ಹೇಳಿದರು ಒಳಗೆ ಬಣ ರಾಜಕೀಯ ಬೇಯುತ್ತಲೇ ಇದೆ.
-ಮುಸ್ಲಿಂ ಮತಗಳು, ಹಾಗೂ ಎಸ್ಸಿ ಎಸ್ಟಿ ಮತಗಳು, ಹಾಗೂ ಕುರುಬ ಸಮುದಾಯದ ಶೇ 70 ರಷ್ಟು ಮತಗಳು ಬಂದರೆ ಸಿದ್ದರಾಮಯ್ಯ ಗೆಲುವು ನಿಶ್ಚಿತ ಅನ್ನೋದು ಲೆಕ್ಕಾಚಾರ.
ರಾಯಚೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಂಚರತ್ನಯಾತ್ರೆ ನಡೆಯುತ್ತಿದ್ದು ಇಂದು (ಜ.24) ರಾಯಚೂರು ಜಿಲ್ಲೆ ಪ್ರವೇಶಿಸಿದೆ. ಇಂದಿನಿಂದ 5 ದಿನ ರಾಯಚೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಲಿಂಗಸುಗೂರು ತಾಲೂಕಿನ ಮೇಗಳಪೇಟೆ ಗ್ರಾಮ ಮೇಗಳಪೇಟೆಯಲ್ಲಿ ಪಂಚರತ್ನ ಯಾತ್ರೆ ಸ್ವಾಗತಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಯಾತ್ರೆ ಲಿಂಗಸಗೂರು ತಾಲೂಕಿನ ಮೇಗಳಪೇಟೆಯಲ್ಲಿ ಭರ್ಜರಿ ಸ್ವಾಗತ ಪಡೆದು, 11 ಗಂಟೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಬಳಿಕ 11:30 ಕ್ಕೆ ಪುರಸಭೆ ಆವರಣದ ಹಿಂಭಾಗದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಸಭೆ ಬಳಿಕ ಪಂಚರತ್ನ ಯಾತ್ರೆ ಲಿಂಗಸಗೂರಿಗೆ ಹೊರಡಲಿದೆ. ಲಿಂಗಸಗೂರು ಪಟ್ಟಣದಲ್ಲಿ ಮಧ್ಯಾಹ್ನ 3 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಬಳಿಕ ಯರಡೋಣ್ ಕ್ರಾಸ್ ಮೂಲಕ ಹಟ್ಟಿ ಪಟ್ಟಣ ಪ್ರವೇಶ ಪಡೆಯಲಿದೆ. ಸಂತೇಬಜಾರ ಆವರಣದಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಬಳಿಕ ಗುರುಗುಂಟಾ ಗ್ರಾಮದಲ್ಲಿಂದು ಇಂದು ಯಾತ್ರೆ ಅಂತ್ಯವಾಗಲಿದೆ.
ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಜ.24) ಕಲಬುರಗಿ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಗ್ಗೆ 10.25ಕ್ಕೆ ಕಲಬುರಗಿ ಏರ್ಪೋರ್ಟ್ಗೆ ಆಗಮಿಸುವ ಸಿಎಂ ಬೊಮ್ಮಾಯಿ, ಬಳಿಕ ರಕ್ಷಣಾ ಸಚಿವರ ವಿಡಿಯೋಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಕಲಬುರಗಿಯಿಂದ ರಸ್ತೆ ಮಾರ್ಗವಾಗಿ ಅಫಜಲಪುರ ತಾಲೂಕಿನ ಗಾಣಗಾಪುರಕ್ಕೆ ಮಧ್ಯಾಹ್ನ 12ಕ್ಕೆ ತಲುಪಲಿದ್ದಾರೆ. ಅಲ್ಲಿ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ದತ್ತನ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಗಾಣಗಾಪುರದಲ್ಲಿ ನಡೆಯುವ ಕೋಲಿ ಸಮಾಜದ ಮುಖಂಡ ದಿ.ವಿಠಲ್ ಹೇರೂರ ಅವರ ಸ್ಮರಣಾರ್ಥ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಮೆ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಗಾಣಗಾಪುರದಿಂದ ಕಲಬುರಗಿಗೆ ತೆರಳುವ ಸಿಎಂ ಬೊಮ್ಮಾಯಿ, ಮಧ್ಯಾಹ್ನ 3.35ಕ್ಕೆ ಕಲಬುರಗಿಯಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ತುಮಕೂರು: ಇಂದು (ಜ.24) ತುಮಕೂರು ನಗರದ ಅಮಾನಿಕೆರೆಯ ಗಾಜಿಮನೆಯಲ್ಲಿ ಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬೃಹತ್ ಸಮಾವೇಶ ನಡೆಯಲಿದೆ. ಪ್ರಜಾಧ್ವನಿ ಯಾತ್ರೆ ಬೆಳಗ್ಗೆ 10:30ಕ್ಕೆ ತುಮಕೂರು ನಗರಕ್ಕೆ ಆಗಮಿಸುತ್ತದೆ. ಈ ಸಮಾವೇಶ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ನೇತೃತ್ವದಲ್ಲಿ ನಡೆಯಲಿದೆ. ಬಳಿಕ ಟೌನ್ಹಾಲ್ನಿಂದ ಅಮಾನಿಕೆರೆವರೆಗೂ ಮೆರವಣಿಗೆ ನಡೆಯಲಿದೆ. ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ. ಸಮಾವೇಶದಲ್ಲಿ 25 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ.
Published On - 10:00 am, Tue, 24 January 23