ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರ ಪ್ರಭುಗಳನ್ನು ಒಲಸಿಕೊಳ್ಳಲು ರಾಜಕೀಯ ಪಕ್ಷಗಳು ಕಸರತ್ತು ಮಾಡುತ್ತಿವೆ. ಜೆಡಿಎಸ್ನಿಂದ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕದ ಭಾಗವಾದ ರಾಯಚೂರಲ್ಲಿ ಸಮಾವೇಶ ಮತ್ತು ರೋಡ್ ಶೋಗಳನ್ನು ಮಾಡುವ ಮೂಲಕ ಜನರನ್ನು ತಲುಪುತ್ತಿದೆ. ಮತ್ತೊಂದಡೆ ಹಾಸನದಿಂದ ಸ್ಪರ್ಧಿಸೋಕೆ ಭವಾನಿ ರೇವಣ್ಣ ಇಚ್ಚಿಸಿದ್ದರೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಟಿಕೇಟ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರು ಕೂಡ ಪ್ರಜಾಧ್ವನಿ ಹೆಸರಿನ ಮೂಲಕ ಬಸ್ ಯಾತ್ರೆ ಮಾಡುತ್ತಿದ್ದು ಮತದಾರರಿಗೆ ಉಚಿತ ಯೋಜನೆಗಳ ಭರವಸೆ ಉಚಿತವಾಗಿ ನೀಡುತ್ತಿದ್ದು, ಭರವಸೆ ಈಡೇರಿಸದಿದ್ದರೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ರಾಜ್ಯ ಕಾಂಗ್ರೆಸ್ನ ಮುಕುಟ ನಾಯಕರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಭವಾನಿ ರೇವಣ್ಣ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡುವುದಾಗಿ ಘೋಷಿಸಿದ್ದು ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ಬಿಜೆಪಿ ನಾಯಕರು ಕೇಂದ್ರದತ್ತ ಮುಖ ಮಾಡಿದ್ದು, ಪ್ರಚಾರ ಸಂಬಂಧ ಹೈಕಮಾಂಡ್ ನಾಯಕರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು (ಜ.28) ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣಗೆ ಸಂಬಂಧಿಸಿದ ಇಂದಿನ ಅಪ್ಡೇಟ್ಗಳು ಇಲ್ಲಿದೆ.
ಬೆಳಗಾವಿ: ಖಾಸಗಿ ಹೋಟೆಲ್ ಜಿಲ್ಲಾ ಬಿಜೆಪಿ ಮುಖಂಡರ ಜೊತೆ ಅಮಿತ್ ಶಾ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ಪಿ.ರಾಜೀವ್, ದುರ್ಯೋಧನ ಐಹೊಳೆ, ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಮಹಾಂತೇಶ್ ದೊಡ್ಡಗೌಡರ್, ಮಾಜಿ ಶಾಸಕ ಸಂಜಯ್ ಪಾಟೀಲ್, ಮಾಜಿ ಸಚಿವ ಶಶಿಕಾಂತ್ ನಾಯಕ್, ಮಾಜಿ ಎಂಎಲ್ಸಿ ಕವಟಗಿಮಠ
ಮಾಜಿ ಶಾಸಕರಾದ ಅರವಿಂದ ಪಾಟೀಲ್, ಜಗದೀಶ್ ಮೆಟಗುಡ್ಡ ಆಗಮಿಸಿದ್ದಾರೆ.
ಬೆಳಗಾವಿ: ಇಂದು ಸಿಎಂ ಬಸವರಾಜ ಬೊಮ್ಮಾಯಿಯವರ ಜನ್ಮದಿನ ಇದೆ. ಚಪ್ಪಾಳೆ ಹೊಡೆಯುವ ಮೂಲಕ ಅವರನ್ನು ಶುಭಾಶಯ ತಿಳಿಸಿ. ಕಾರ್ಯಕ್ರಮಕ್ಕೆ ಬರಲು ವಿಳಂಬವಾದರೂ ಎಲ್ಲರೂ ಸೇರಿದ್ದೀರಿ. ಸವದತ್ತಿ ಯಲ್ಲಮ್ಮ ದೇವಿಯನ್ನು ಸ್ಮರಿಸಿ ಭಾಷಣ ಆರಂಭಿಸುತ್ತೇನೆ. ಕಿತ್ತೂರು ಚೆನ್ನಮ್ಮ ಅವರಿಗೂ ನಮನ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.
ಕೋಲಾರ: ಜಿಲ್ಲೆಯಲ್ಲಿ ಆಣೆ ಪ್ರಮಾಣ ರಾಜಕೀಯ ಮುಂದುವರೆದಿದೆ. ಇತ್ತ ಜಾಗೃತರಾದ ಮತದಾರರು ಮತ್ತು ರೈತರು, ಸಚಿವರಂತೆ ಮತದಾರರಿಂದಲೂ ಆಣೆ ಪ್ರಮಾಣ ಮಾಡುತ್ತಿದ್ದಾರೆ. ಕೋಲಾರ ಅಭಿವೃದ್ದಿ ಮಾಡುವವರಿಗೆ ಮಾತ್ರ ಮತ ಮಾಡುತ್ತೇವೆ. ಸಮಗ್ರ ಅಭಿವೃದ್ದಿ, ನಿಷ್ಠಾವಂತ ಅಭ್ಯರ್ಥಿಗಳಿಗೆ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ನಿರ್ಧಾರದ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಜನರು ವೋಟು ಕೊಡ್ತಾರೆ ನಾವು ಗೆಲ್ಲುತ್ತೇವೆ ಅಂತಾ ಅವರೇ ಹೇಳಿದ್ದಾರೆ. ಒಂದು ಮನೆಯವರಿಗೆ ಇಷ್ಟೇ ಟಿಕೆಟ್ ಅಂತಾ ಸಂವಿಧಾನದಲ್ಲಿ ಹೇಳಿಲ್ಲ. ಸಂವಿಧಾನದ ಲಾಭವನ್ನು ದೇವೇಗೌಡರ ಕುಟುಂಬ ಪಡೆದುಕೊಳ್ಳುತ್ತಿದೆ. ಜನ ಗೆಲ್ಲಿಸುವವರೆಗೆ ಕುಟುಂಬ ರಾಜಕಾರಣ ವಿಸ್ತರಣೆ ಮಾಡ್ತಾ ಹೋಗ್ತಾರೆ ಎಂದು ಹೇಳಿದರು.
ಬೆಳಗಾವಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದನ್ನು ಯಾರಿಂದಲೂ ತಡೆಯಲಾಗಲ್ಲ. ರಾಜ್ಯದಲ್ಲಿ ಬಿಜೆಪಿಗೆ 140 ಸೀಟ್ ತರಲು ಶ್ರಮಿಸೋಣ ಎಂದು ಬಿಎಸ್‌ವೈ ಹೇಳಿದರು. ಕೊಟ್ಟ ಕುದುರೆಯನ್ನು ಏರದವರು ವೀರನೂ ಅಲ್ಲ, ಧೀರನೂ ಅಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಯಾವುದೇ ಕ್ಷೇತ್ರವನ್ನು ಕಡೆಗಣಿಸಿಲ್ಲ ಎಂದರು.
ಬೆಳಗಾವಿ: ಬೆಳಗಾವಿ ಭಾಗಕ್ಕೆ ವಂದೇ ಮಾತರಂ ರೈಲು ಯೋಜನೆ ಮತ್ತು ಕೆಲವೇ ದಿನಗಳಲ್ಲಿ ಮಹದಾಯಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಮಾಜಿ ಸಿಎಂ ಸಿಎಂ ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣ ಬಿಜೆಪಿ ವಿಜಯಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಜನಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಭಿವೃದ್ಧಿ ಆಗುತ್ತಿದೆ ಎಂದರು.
ಮಂಡ್ಯ: ಜಿಲ್ಲೆಯಲ್ಲಿ ಗೋಬ್ಯಾಕ್ ಅಶೋಕ್ ಅಭಿಯಾನ ಷಡ್ಯಂತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಧಾಕರ್ ಇದು ವಿಪಕ್ಷಗಳು ನಡೆಸಿರುವ ಕುತಂತ್ರ ಎಂದು ಹೇಳಿದರು. ಅಶೋಕ್ ಮಂಡ್ಯ ಜಿಲ್ಲೆ ಉಸ್ತುವಾರಿಯಾಗಿದ್ದಕ್ಕೆ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅವರು ಯಾವ ಜಿಲ್ಲೆಗೆ ಉಸ್ತುವಾರಿಯಾಗ್ತಾರೆ ಅಲ್ಲಿ ಬಿಜೆಪಿಗೆ ಲಾಭ ಆಗುತ್ತೆ. ಅಶೋಕ್ ನೇತೃತ್ವದಲ್ಲಿ ಮಂಡ್ಯದಲ್ಲಿ ನಾಲ್ಕೇದರಲ್ಲಿ ಗೆಲುವಾಗಿದೆ. ಈ ಬಾರಿ ಬಿಜೆಪಿ 4ರಿಂದ 5 ಸೀಟ್ ಗೆಲ್ಲುತ್ತೆ ಎಂದು ಅಶೋಕ್ ಪರ ಬ್ಯಾಟ್ ಬೀಸಿದರು.
ಹುಬ್ಬಳ್ಳಿ: ಕುಂದಗೋಳದಿಂದ ಬೆಳಗಾವಿಯತ್ತ ಹೊರಟ ಶಾ. ಒಂದೇ ಹೆಲಿಕಾಪ್ಟರ್ನಲ್ಲಿ ಶಾ, ಬಿಎಸ್‌ವೈ, ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಪ್ರಯಾಣ ಮಾಡಿದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕಾರ್ನಲ್ಲಿ ತೆರಳಿದರು.
ಧಾರವಾಡ: ಜಿಲ್ಲೆಯ ಕುಂದಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದು, ಗೋಡೆ ಬರಹ ಮೂಲಕ ಅಭಿಯಾನದಲ್ಲಿ ಭಾಗಿಯಾದರು. ಅಮಿತ್ ಶಾಗೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸಾಥ್ ನೀಡಿದರು.
ಹುಬ್ಬಳ್ಳಿ: ಕುಂದಗೋಳದಲ್ಲಿ ರೋಡ್ ಶೋ ಬಳಿಕ ಅಮಿತ್ ಶಾ ಮಾತನಾಡಿ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ದೆಹಲಿ ನಾಯಕರು ಎಟಿಎಮ್ ಮಾಡಿಕೊಂಡಿದ್ದರು. ಜೆಡಿಎಸ್ ಕಾಂಗ್ರೆಸ್ ಈ ರಾಜ್ಯವನ್ನು ಲೂಟಿ ಹೊಡೆದಿವೆ. ದೇಶದಲ್ಲಿ ಭಯೋತ್ಪಾದನೆ ಮಟ್ಟಹಾಕಿದ್ದೇವೆ. ಕಾಶ್ಮೀರದಲ್ಲಿ 371 ತೆಗೆದುಹಾಕಿದ್ದು ಮೋದಿ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.
ಧಾರವಾಡ: ಜಿಲ್ಲೆಯ ಕುಂದಗೋಳದಲ್ಲಿ ರೋಡ್ಶೋ ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ರಾಜ್ಯದಲ್ಲಿ ಬಹುಮತದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಗುರಿ ಇದೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಗೆ ಬೆಂಬಲ ನೀಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಲಬುರಗಿ: ಪ್ರಜಾಧ್ವನಿ ಯಾತ್ರೆ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ. ಹಾಗಾಗಿ ಮೋದಿ, ಅಮಿತ್ ಶಾರನ್ನು ವಾರಕ್ಕೊಮ್ಮೆ ಕರೆಸುತ್ತಿದ್ದಾರೆ. ಬಿಜೆಪಿಯವರು ಭ್ರಷ್ಟರು, ಜನವಿರೋಧಿ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಹೀಗಾಗಿ ಬಿಜೆಪಿಯವರಿಗೆ ಆತಂಕ ಶುರುವಾಗಿದೆ ಎಂದು ಹೇಳಿದರು.
ಮೈಸೂರು: ಭವಾನಿ ರೇವಣ್ಣ ಬಿಜೆಪಿಗೆ ಬಂದರೆ ಹೃದಯಪೂರ್ವಕ ಸ್ವಾಗತಿಸುತ್ತೇವೆ ಎಂದು ಟಿವಿ9ಗೆ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದರು. ನಮ್ಮ ಪಕ್ಷದಲ್ಲಿ ಯಾರ ಮನೆಯನ್ನೂ ಕಾಯಬೇಕಿಲ್ಲ. ಯಾರ ಮುಂದೆ ಬಸ್ಕಿ ಹೊಡೆಯಬೇಕಿಲ್ಲ, ಗೇಟ್ ಕಾಯಬೇಕಿಲ್ಲ. ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ ಎಂದರು.
ಹಾಸನ: ಭವಾನಿ ಅವರೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಲಿ ಎಂದು ಹೆಚ್.ಡಿ.ರೇವಣ್ಣ ಪುತ್ರ MLC ಡಾ.ಸೂರಜ್ ಹೇಳಿದರು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ. ನಾನೇನು ಭವಾನಿಗೆ ಟಿಕೆಟ್ ಕೊಡಿ ಎಂದು ಸೂಚನೆ ಕೊಡುತ್ತಿಲ್ಲ. ನಮ್ಮ ಕುಟುಂಬದವರೇ ಅಭ್ಯರ್ಥಿಯಾದ್ರೆ ಸಂಘಟನೆಗೆ ಅನುಕೂಲ. ದೇವೇಗೌಡರು, ಹೆಚ್ಡಿಕೆ, ರೇವಣ್ಣ ಸಮ್ಮುಖದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದ್ದು, ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಯಾದಗಿರಿ: ಕೇಂದ್ರದಲ್ಲಿ ಮೋದಿ ಸುಳ್ಳು ಹೇಳಿದ್ರೆ ಇಲ್ಲಿ ಇವರು ಸುಳ್ಳು ಹೇಳ್ತಾಯಿದ್ದಾರೆ. ನಾವು ಕೊಟ್ಟಿದ್ದ 165 ಭರವಸೆಗಳನ್ನ ಈಡೇರಿಸಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈಗ ಕೊಟ್ಟ ಮಾತು ನೂರಕ್ಕೆ ನೂರು ನಡೆಸಿಕೊಡುತ್ತೇವೆ. 200 ಯೂನಿಟ್ ವಿದ್ಯುತ್ ಫ್ರೀ ಆಗಿ ಕೊಡುತ್ತೇವೆ. ಮನೆಯ ಯಜಮಾನಿಗೆ 2000 ಸಾವಿರ ರೂ. ಕೊಡುತ್ತೇವೆ. ನಾನು ಸಿಎಂ ಇದ್ದಾಗ 7 ಕೆ.ಜಿ ಅಕ್ಕಿ ಫ್ರೀ ಆಗಿ ಕೊಡುತ್ತಿದ್ದೇವು. ಮುಂದೆ ನಾವು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.
ಯಾದಗಿರಿ: ಡಿಕೆ ಶಿವಕುಮಾರ್ ಮೈಸೂರು ಭಾಗದಲ್ಲಿ ಯಾತ್ರೆ ಮಾಡುತ್ತಾರೆ. ಯಾತ್ರೆ ಮಾಡಿ ಜನರಿಗೆ ಬಿಜೆಪಿ ಸರ್ಕಾರದ ಕರ್ಮಕಾಂಡ ತಿಳಿಸುತ್ತೆವೆ. ನಮ್ಮ ಪಕ್ಷದಿಂದ ಚಾರ್ಜ್ ಶೀಟ್ ಜನರ ಮುಂದೆ ಇಡ್ತಾಯಿದ್ದೆವೆ. ಪಾಪದ ಪುರಾಣ ಅಂತ ಚಾರ್ಜ್ ಶೀಟ್ಗೆ ಹೆಸರು ಈಡ್ತಾಯಿದ್ದವೆ. ಜನರಿಗೆ ಈ ಚಾರ್ಜ್ ಶೀಟ್ ತಲುಪಿಸುವ ಕೆಲಸ ಮಾಡುತ್ತೆವೆ ಎಂದು ಸಿದ್ಧರಾಮಯ್ಯ ಹೇಳಿದರು.
ಧಾರವಾಡ: ಜಿಲ್ಲೆಯ ಕುಂದಗೋಳ ಪಟ್ಟಣದ ಕೆರೆ ಅಂಗಳದಿಂದ ಅಮಿತ್ ಶಾ ರೋಡ್ಶೋ ಆರಂಭ.
ಮೈಸೂರು: ಕಾಂಗ್ರೆಸ್ನವರು ಖಾಲಿಯಾಗಿದ್ದಾರೆ, ಅವರಿಗೆ ಹೇಳಲು ಏನೂ ಇಲ್ಲ. ಅದಕ್ಕಾಗಿ ಸುಖಾಸುಮ್ಮನೇ ಮಾತನಾಡುತ್ತಿದ್ದಾರೆ ಎಂದು ಡಾ.ಅಶ್ವತ್ಥ್ ಹೇಳಿದರು. ಜನಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ವಿಪಕ್ಷಗಳ ಕ್ಯಾತೆ ಇದ್ದೇ ಇದೆ. ನಮ್ಮದು ಅಭಿವೃದ್ಧಿ ಪರ ಸರ್ಕಾರ, ಅದಕ್ಕೆ ಜನ ಬೆಂಬಲಿಸುತ್ತಿದ್ದಾರೆ. ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಿಡಿಕಾರಿದರು.
ಯಾದಗಿರಿ: ಮುಂದಿನ ಚುನಾವಣೆಯನ್ನು ಇಡೀ ದೇಶ ಕರ್ನಾಟಕದ ಕಡೆ ನೋಡ್ತಾ ಇದೆ. ಪ್ರಜಾಧ್ವನಿ ಅಂದ್ರೆ ಜನರ ಅನಿಸಿಕೆ. ಬಿಜೆಪಿ ಸರ್ಕಾರ ದುರಾಡಳಿತ, ಭ್ರಷ್ಟಾಚಾರ, ಲೂಟಿ ಮಾಡಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಿದ್ದರಾಮಯ್ಯ ಸರ್ಕಾರದ ಸಾಧನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕ.ಕರ್ನಾಟಕ ಕಾಂಗ್ರೆಸ್ನ ಭದ್ರಕೋಟೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಮಂಡ್ಯ: ಜಿಲ್ಲೆಯಲ್ಲಿ ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಅಖಾಡ ರಂಗೇರಿದೆ. ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ತಂದೆ ಸುರೇಶ್ ಗೌಡ ಪರ ಮಗಳು ಧನ್ಯತಾ ಪ್ರಚಾರಕ್ಕಿಳಿದ್ದಾರೆ. ನಮ್ಮ ತಂದೆ ವಿರುದ್ದ ಈ ಬಾರಿ ಕ್ಷೇತ್ರದಲ್ಲಿ ಮೂವರು ವಿರೋಧಿಗಳು ನಿಂತಿದ್ದಾರೆ. ಅವ್ರು ನಮ್ಮ ತಂದೆಯ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿದರು.
ರಾಯಚೂರು: ಸಿದ್ದರಾಮಯ್ಯ ಅವರಿಗೆ ತಾಕತ್ ಇದ್ದರೇ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆದ್ದುಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಕುಮಾರಸ್ವಾಮಿಯವರಿಗೆ ಹೊಂದಿಕೆಯಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು ಈ ಪಕ್ಷದಿಂದ ಬೆಳೆದು ಹೋದೋರು ಅವರು. ನಾವೆಲ್ಲಾ ಇದ್ದಾಗ 50 ಸೀಟು ಗೆದ್ದಿದ್ದು ಅಂತಾರೆ. ನೀವೇಲ್ಲಾ ಬಿಟ್ಟು ಹೋದ ಮೇಲೆ 40 ಸೀಟು ಏಕಾಂಗಿಯಾಗಿ ಗೆದ್ದಿದ್ದೀನಿ. ಅವರದ್ದಷ್ಟೇ ಅಲ್ಲ ನಮ್ಮ ಪರಿಶ್ರಮ ಇದೆ ಎಂದು ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಂಪಿ ಪ್ರಕಾಶ್, ಸಿಂಧ್ಯ ಇದ್ದರು. ಅವರೆಲ್ಲಾ ಈಗ ಬಿಟ್ಟು ಹೋಗಿದ್ದಾರೆ. ಅದಕ್ಕೆ ಹೇಳಿದ್ದು ಸವಾಲು ಸ್ವೀಕಾರ ಮಾಡಿದ್ದೀನಿ. ಕಾಂಗ್ರೆಸ್ ಪಕ್ಷ ಮುಗಿದು ಹೋಗಿದೆ. ಬಿಜೆಪಿಗೆ ಇಲ್ಲಿ ಪರ್ಯಾಯ ಪಕ್ಷವಿಲ್ಲ. ಬೆಳೆಯಲು ಭಗವಂತ ನಮಗೆ ಶಕ್ತಿ ಕೊಟ್ಟಿದ್ದಾನೆ ಎಂದರು.
ಜನರ ಬದುಕನ್ನು ಸರಿಪಡಿಸುವ ಶಕ್ತಿ ನನ್ನಲ್ಲಿದೆ. ಜಯಪ್ರಕಾಶ್ ನಾರಾಯಣ್ ಎಮರ್ಜನ್ಸಿ ವಿರುದ್ಧ, ಸಂಘಟನೆ ಮಾಡಿ ಕಾಂಗ್ರೆಸ್ ವಿರುದ್ಧ ಎಲ್ಲರನ್ನ ಒಟ್ಟುಗೂಡಿಸಿ ಜನತಾ ಪಾರ್ಟಿ ಕಟ್ಟಿದ್ದಾರೆ. ಅದೇ ರೀತಿ ಕರ್ನಾಟಕದಿಂದ ಈ ಚುನಾವಣೆ ನಂತರ ಜೆಡಿಎಸ್ ಮೂರು ಜಿಲ್ಲೆಯಲ್ಲ, ರಾಜ್ಯಾದ್ಯಂತ ಅಲ್ಲ, ಇಡೀ ದೇಶದಲ್ಲೇ ಬೆಳಗುತ್ತೆ ಎಂದು ಸಿದ್ಧರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ಗೆ ಹೆಚ್.ಡಿ ಕುಮಾರಸದವಾಮಿ ಎಚ್ಚರಿಕೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೆಡಿಎಸ್ ವಿಸರ್ಜನೆಯ ಕನಸು ಕಂಡಿದ್ದಾರಾ? ಡಿಕೆ ಶಿವಕುಮಾರ ಆ ಕನಸು ಕಂಡರೇ ಕಾಣಲಿ ಬಿಡಿ, ಜನರಿಗೆ ಏನೂ ಅರ್ಥ ಆಗಲ್ವಾ? ಪಂಚರತ್ನ ಯೋಜನೆ ಜಾರಿ ಮಾಡದಿದ್ದರೇ ಜೆಡಿಎಸ್ ವಿಸರ್ಜನೆ ಎಂದಿದ್ದು ಎಂದು ‘ಜೆಡಿಎಸ್ ವಿಸರ್ಜನೆ ಮಾಡ್ತಾರೆ, ಕಾರ್ಯಕರ್ತರು ಕಾಂಗ್ರೆಸ್ಗೆ ಬರಲಿ’ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜನ ಅಧಿಕಾರ ಕೊಡೋದು, ವಿಸರ್ಜನೆ ಮಾಡಲಿಕ್ಕೆ ಏನು? ಈ ಪಕ್ಷನ ದೇಶಕ್ಕೆ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಜನ ಅಧಿಕಾರ ಕೊಡುತ್ತಾರೆ. ಸಿದ್ಧಾಂತದ ಮೇಲೆ ಹೋಗುತ್ತೇನೆ ಅಂತ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾವ ಸಿದ್ದಾಂತ, ಯಾವ ಸಿದ್ದಾಂತದ ಮೇಲೆ ಹೋಗುತ್ತಾರೆ. ಎಲ್ಲಿದೆ ಅವರಿಗೆ ಸಿದ್ದಾಂತ ಎಂದು ಪ್ರಶ್ನಿಸಿದರು.
ಮೈಸೂರು: ಸಿದ್ದರಾಮಯ್ಯ 200 ಯುನಿಟ್ ಉಚಿತ ವಿದ್ಯುತ್ ನೀಡಲ್ಲ. ಬರೀ ಸಾಲದ ಹೊರೆ ಕೊಡುವಂತಹವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಈ ಹಿಂದೆಯೇ ರಾಜಕೀಯ ನಿವೃತ್ತಿ ಘೋಷಿಸಿದ್ದರು. 70ನೇ ವರ್ಷಕ್ಕೆ ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಆದರೆ ನಿವೃತ್ತಿ ಆಗಿಲ್ಲ, ಅಂದ್ರೆ ಸಿದ್ದರಾಮಯ್ಯಗೆ ಅಧಿಕಾರದ ದಾಹ ಇದೆ ಎಂದು ಉಚಿತ ವಿದ್ಯುತ್ ನೀಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ವಾಗ್ದಾಳಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯಗೆ ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಅಧಿಕಾರಕ್ಕೆ ಬರಬೇಕೆಂಬ ಅವರ ಪ್ರಯತ್ನ ಯಶಸ್ವಿ ಆಗಲ್ಲ. ಕೋವಿಡ್‌ನಲ್ಲಿ ಜನರ ಹತ್ತಿರ ಬರದಿದ್ದರೆ ಸಾಕು ಅಂತ ಮನೆಯಲ್ಲಿ ಉಳಿದಿದ್ದರು. ಉತ್ತಮ ಕೆಲಸ ಮಾಡಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಶಾಸಕರನ್ನ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮೈಸೂರಿನಲ್ಲಿ ಏನಾದ್ರು ಬಂದು ಕೆಲಸ ಮಾಡಿದ್ದಾರಾ? ಅವರ ಪಕ್ಷದವರು ಯಾರಾದರು ಒಬ್ಬರಿಗೆ ಲಸಿಕೆ, ಆಶ್ರಯ ಕೊಡಿಸಿದ್ದಾರಾ ? ಕಾಂಗ್ರೆಸ್ ಪಕ್ಷ ಲಸಿಕೆ ಕೊಡಬಾರದು ಅಂತ ರಾಜಕೀಯ ಮಾಡಿತ್ತು. ಅಂತಹ ಪಕ್ಷದಿಂದ ಏನು ಬಯಸಲು ಸಾಧ್ಯ ಎಂದು ಟೀಕೆ ಮಾಡಿದರು.
ಮಂಡ್ಯ ಜಿಲ್ಲೆಗೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಉಸ್ತುವಾರಿಯಾಗಿ ನಿಯೋಜಿಸಿದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ಪ್ರತಿ ಪಕ್ಷದವರು ಮಾಡಿರುವ ಕೆಲಸ ಇದು ಎಂದು ಹೇಳಿದರು.
ನಕಲಿ ಅಂಕಪಟ್ಟಿ ಪತ್ತೆ ವಿಚಾರವಾಗಿ ಮಾತನಾಡಿದ ಅವರು ಇದು ಯಾವುದೇ ವಿಶ್ವವಿದ್ಯಾಲಯ ಕೊಟ್ಟಿರುವುದಲ್ಲ. ಖಾಸಗಿ ವ್ಯಕ್ತಿಗಳು ಮಾಡಿರುವುದು. ಸಮಾಜಘಾತಕ ಶಕ್ತಿಗಳ ಕೆಲಸ ಆಗಿದೆ. ಆದರೆ ಅಂಕಪಟ್ಟಿಗಳ ಡಿಜಿಟಲೀಕರಣ ಆಗಿದೆ. 45 ವರ್ಷಗಳಿಂದ ಪಾಸಾದವರು ನಿಖರ ಮಾಹಿತಿ ಅದರಲ್ಲಿ ಪಡೆಯಬಹುದು ಎಂದರು.
ಕಲಬುರಗಿ: ಪ್ರಜಾಧ್ವನಿ ಯಾತ್ರೆ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ. ಹಾಗಾಗಿ ಮೋದಿ, ಅಮಿತ್ ಶಾರನ್ನು ವಾರಕ್ಕೊಮ್ಮೆ ಕರೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಭ್ರಷ್ಟಾಚಾರ, ಜನವಿರೋಧಿ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಹೀಗಾಗಿ ಬಿಜೆಪಿಯವರಿಗೆ ಆತಂಕ ಎಂದು ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೆಚ್ .ಡಿ.ಕುಮಾರಸ್ವಾಮಿ ಬರೀ ಸುಳ್ಳುಗಳನ್ನೇ ಹೇಳುವುದು ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಟೀಕೆ ವಿಚಾರವಾಗಿ ಕಿಡಿ ಕಾರಿದರು.
ಹುಬ್ಬಳ್ಳಿ: ಯಾರು ಸಾಹಸದಿಂದ ಮುನ್ನುಗುತ್ತಾರೆ, ಅವರಿಗೆ ವಿಜಯ ಲಕ್ಷ್ಮೀ ಒಲಿಯುತ್ತಾಳೆ. ಯುವಕರು ಎಲ್ಲ ಕ್ಷೇತ್ರಗಳಲ್ಲಿ ಸಾಹಸದಿಂದ ಮುನ್ನುಗ್ಗಬೇಕು ಎಂದು ಕೇಂದ್ರ ಸಚಿವ ಅಮಿತ ಶಾ ಯುವಕರಿಗೆ ಕಿವಿ ಮಾತು ಹೇಳಿದರು. 2014ರಲ್ಲಿ ದೇಶದಲ್ಲಿ ಮಹತ್ವದ ಪರಿವರ್ತನೆ ಆಯ್ತು. ಕೇವಲ 8 ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಇಂದು ದೇಶದಲ್ಲಿ 17,000 ಸ್ಟಾರ್ಟ್ಪ್ಗಳು ಸ್ಥಾಪನೆಗೊಂಡಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲೇ ಬಹುತೇಕ ವಸ್ತುಗಳು ಉತ್ಪಾದನೆಯಾಗುತ್ತಿವೆ. 2015ರಲ್ಲಿ ಮೋದಿಯವರು ಮೇಕ್ ಇನ್ ಇಂಡಿಯಾ ಘೋಷಿಸಿದ್ದರು. ಡಿಜಿಟಲ್ ಇಂಡಿಯಾ ಮಿಷನ್ ಯೋಜನೆಯಡಿ ಅಗಾಧ ಬದಲಾವಣೆಯಾಗಿದೆ. ಮೋದಿ ಸರ್ಕಾರ ಬಂದ ಮೇಲೆ 41,000 ಹೊಸ ಕಾಲೇಜುಗಳ ಸ್ಥಾಪನೆಯಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲಕ್ಕಾಗಿ ಎಫ್ಎಸ್ಎಲ್ ಸ್ಥಾಪನೆ ಮಾಡುತ್ತಿದ್ದೇವೆ. ಎಫ್ಎಸ್ಎಲ್ ಕ್ಯಾಂಪಸ್ಗೆ ಶಂಕುಸ್ಥಾಪನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ಲಾಲ್, ಬಾಲ್, ಪಾಲ್ ಮೂವರು ಯುವಕರು ಹೋರಾಡಿದ್ದರು. ಇಂದು ಲಾಲ್ ಲಜಪತರಾಯ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನ. ನಾವೆಲ್ಲ ಆಜಾದಿ ಕಾ ಅಮೃತ್ ಮಹೋತ್ಸವ ಕಾಲ ಘಟ್ಟದಲ್ಲಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಕನಸು ನಾವೆಲ್ಲ ನನಸು ಮಾಡಬೇಕಿದೆ. ದೇಶಕ್ಕಾಗಿ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮೊದಲ ಸ್ಥಾನಕ್ಕೆ ತಲುಪುವ ಸಂಕಲ್ಪವಾಗಬೇಕೆಂದು ಎಂದು ಸಂಕಲ್ಪ ತೊಟ್ಟರು.
ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಇಡೀ ವಿಶ್ವಕ್ಕೆ ಭಾರತದ ಶಕ್ತಿಯನ್ನು ತೋರಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ. ಕೆಎಲ್ಇ ಶಿಕ್ಷಣ ಸಂಸ್ಥೆಯನ್ನು ನಿಸ್ವಾರ್ಥತೆಯಿಂದ ಸ್ಥಾಪಿಸಲಾಗಿದೆ. ಕೇವಲ 5 ಶಿಕ್ಷಕರು ಕೆಎಲ್ಇ ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ. ಶಿಕ್ಷಣ ವ್ಯಾಪಾರೀಕರಣ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಸೇವೆ ಮಾಡುತ್ತಿದೆ. ಕೆಎಲ್ಇ ಸಂಸ್ಥೆ ಸಾವಿರಾರು ಯುವಕರಿಗೆ ವಿದ್ಯೆ ನೀಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಆರ್ಟಿಕಲ್ 370ಯನ್ನು ಕೇಂದ್ರ ಸಚಿವ ಅಮಿತ ಶಾ ರದ್ದು ಮಾಡಿ ಸರ್ದಾರ್ ಪಟೇಲರ ನಂತರ ತಾಕತ್ತು ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ಕೆಎಲ್ಇ ಸಂಸ್ಥೆ ಹಲವಾರು ರೀತಿಯ ಬದಲಾವಣೆಯನ್ನು ತಂದಿದೆ. ಉಗ್ರರಿಗೆ ಬಲವಾದ ಪೆಟ್ಟು ಕೊಟ್ಟಿದ್ದು ಅಮಿತ್ ಶಾ. ದೇಶದ ಸುರಕ್ಷತೆಗಾಗಿ ಪ್ರಧಾನಿ ಮೋದಿ, ಅಮಿತ್ ಶಾ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಹಿಂದಿಕ್ಕಿ ನಾವು ಐದನೇ ಸ್ಥಾನದಲ್ಲಿದ್ದೇವೆ. ಜಗತ್ತಿಗೆ ಭಾರತದ ಮೇಲೆ ಅನೇಕ ನೀರಿಕ್ಷೆ ಇದೆ. ಸುಮಾರು 300 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳು ಹುಬ್ಬಳ್ಳಿಯಲ್ಲಿ ಆರಂಭವಾಗಿವೆ. ಜಗತ್ತಿನಲ್ಲಿ ಅತ್ಯಂತ ಯುವ ದೇಶ ಭಾರತ. ಜಗತ್ತಿನ ಅವಶ್ಯಕತೆ ನಿಗಿಸುವ ದೇಶ ಭಾರತ. ಆರ್ಟಿಕಲ್ 37೦ ರದ್ದಾಗಲ್ಲ ಎಂದಿದ್ದರು. ಉಗ್ರರಿಗೆ ಬಲವಾದ ಪೆಟ್ಟು ಕೊಟ್ಟಿದ್ದು ಅಮಿತ್ ಶಾ. ದೇಶದಲ್ಲಿ ಸುರಕ್ಷತೆ ತಂದ ಮೋದಿ ಹಾಗೂ ಅದನ್ನು ಜಾರಿಗೆ ತರಲು ಶ್ರಮಿಸಿದ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿದರು.
ಹುಬ್ಬಳ್ಳಿ: ಅಮೃತ ಮಹೋತ್ಸವಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಬಂದಿದ್ದಕ್ಕೆ ಖುಷಿಯಾಗುತ್ತಿದೆ. ನಾನು ಕೂಡ ಇದೇ ಭೂಮರೆಡ್ಡಿ ಕಾಲೇಜಿನಲ್ಲಿ ಓದಿದ್ದೇನೆ. ನವ ಭಾರತ ನಿರ್ಮಾಣದಲ್ಲಿ KLE ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಡಬಲ್ ಇಂಜಿನ್ ಸರ್ಕಾರ ದೇಶ ಹಾಗೂ ನಾಡು ಕಟ್ಟಲು ಶ್ರಮಿಸುತ್ತಿದೆ. ಗೃಹ ಇಲಾಖೆಯಲ್ಲಿ ಅಮಿತ್ ಶಾ ಅಗಾಧ ಬದಲಾವಣೆ ತಂದಿದ್ದಾರೆ. ಮೋದಿ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯ ಜಾರಿಗೆ ತಂದಿದೆ. ಇವತ್ತು ಕರ್ನಾಟಕಕ್ಕೆ ವಿಧಿ ವಿಜ್ಞಾನ ಕ್ಯಾಂಪಸ್ ಕೊಟ್ಟಿದ್ದು ಅಮಿತ್ ಶಾ. ಇದು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ. ಹೆಣ್ಣು ಮಕ್ಜಳಿಗಾಗಿ 700 ಕೋಟಿ ಹಣ ಕೊಟ್ಟಿದ್ದಾರೆ. ಅಮಿತ್ ಶಾ ಸಹಕಾರಿ ಸಚಿವರು, ಬರುವ ದಿನದಲ್ಲಿ ಸಹಕಾರ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಕೆಎಲ್ಇ ಸಂಸ್ಥೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದೆ. ಮತ್ತೆ ಸೆಂಚೂರಿ ಸಂಭ್ರಮದಲ್ಲಿ ಭಾಗಿಯಾಗೋಣ. ಕೆಎಲ್ಇ ಸಂಸ್ಥೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಭಿನಂದಿಸಿದರು.
ಭಾರತವನ್ನು ನಕ್ಸಲೈಟ್ ಮುಕ್ತ, ಟೆರರಿಸ್ಟ್ ಮುಕ್ತ ಮಾಡಿದ್ದು ಅಮಿತ್ ಶಾ. ಅಮಿತ್ ಶಾ ಉಕ್ಕಿನ ಮನುಷ್ಯ. ನಿಮ್ಮನ್ನ ನೋಡಿದರೆ ಹೊಟ್ಟೆ ಕಿಚ್ಚು ಆಗತ್ತೆ. ನಾನು ವೇದಿಕೆ ಮೇಲೆ ಕೂರುವ ಬದಲು, ವೇದಿಕೆ ಮುಂಬಾಗ ಕೂರಬೇಕಿತ್ತು. ಅಲ್ಲಿ ಕೂರುವ ಮಜಾ ಇಲ್ಲಿ ಬರಲ್ಲ. ಕ್ಯಾಂಪಸ್ ನೋಡಿದರೆ ನಾವ ಇವಾಗ ಇಲ್ಲಿ ವಿದ್ಯಾರ್ಥಿಗಳು ಆಗಬೇಕುತ್ತು ಎಂದು ಅನಿಸುತ್ತಿದೆ. ನಾವು ಕಲಿಯುವಾಗ ಕಾಲೇಜ್ನಲ್ಲಿ, ಸಿವಿಲ್, ಮೆಕ್ಯಾನಿಕಲ್ ಬಿಟ್ಟರೇ ಏನೂ ಇರಲಿಲ್ಲ. ಕ್ಯಾಂಟಿನ್ ನಮ್ಮ ಫೇವರೇಟ್ ಪ್ಲೇಸ್ ಎಂದು ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕಿದರು.
ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗುವ ಹಿನ್ನೆಲೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯಾಹ್ನ 3.45ರಿಂದ ಸಂಜೆ 4.15ರವರೆಗೂ ವಾಹನ ಸಂಚಾರ ಬಂದ ಆಗಲಿದೆ. ಸಮಾವೇಶದ ಭದ್ರತೆಗೆ ಕೆಎಸ್ ಆರ್ಪಿ, ಡಿಇಆರ್ ತುಕಡಿ ಸೇರಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ, ಆಯೋಜಕರು ಬರುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಹುಬ್ಬಳ್ಳಿ: ಕುಂದಗೋಳ ಪಟ್ಟಣದಲ್ಲಿ ಮೊದಲೇ ನಿಗದಿಯಾಗಿದ್ದ ಮಠಗಳಿಗೆ ಭೇಟಿ ಮತ್ತು ಶಂಭುಲಿಂಗೇಶ್ವರ ದೇವಸ್ಥಾನ ಭೇಟಿ ರದ್ದಾಗಿದೆ. ಭದ್ರತಾ ದೃಷ್ಟಿಯಿಂದ ದೇವಸ್ಥಾನ, ಮಠ ಭೇಟಿ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಕುಂದಗೋಳದ ಬಸವಣ್ಣಜ್ಜನವರ ಕಲ್ಯಾಣಪುರದ ಮಠ ಹಾಗೂ ಶಂಬುಲಿಂಗೇಶ್ವರ ದೇಗುಲಕ್ಕೆ ಅಮಿತ್ ಶಾ ಭೇಟಿ ನೀಡಬೇಕಿತ್ತು.
ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಬಿವ್ಹಿಬಿ ಕಾಲೇಜ್ನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಲೇಜ್ನಲ್ಲಿ ಒಳಾಗಂಣ ಕ್ರೀಡಾಂಗಣವನ್ನು ಉದ್ಘಾಟಿಸಿದ್ದಾರೆ. ಅಮಿತ್ ಶಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಮುರಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೋಪ್ಪ ಸಾಥ್ ನೀಡಿದ್ದಾರೆ. ಈ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.
ಬಾಗಲಕೋಟೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಾದಾಮಿ ದೂರವಾದರೆ ಚಾಮುಂಡಿ ಕ್ಷೇತ್ರಕ್ಕೆ ನಿಲ್ಲಬೇಕಿತ್ತು. ಬಾದಾಮಿ, ಚಾಮುಂಡಿ ಬಿಟ್ಟು ಕೋಲಾರಕ್ಕೆ ಹೋಗಿದ್ದ್ಯಾಕೆ? ಬಾದಾಮಿಗೆ ಮೋಸ ಮಾಡಿದ್ದೇಕೆ? ಅಂತ ಸಿದ್ದರಾಮಯ್ಯ ಹೇಳಬೇಕು. ಬಾದಾಮಿ ಮತದಾರರಿಗೆ ಸಿದ್ದರಾಮಯ್ಯ ಮಾಡ್ತಾ ಇರೋ ದ್ರೋಹ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಈ ಮೊದಲು ಬಾಗಲಕೋಟೆಯಲ್ಲೆ ಹೇಳಿದ್ದೆ, ಸಿದ್ದರಾಮಯ್ಯ ಯಾವ ಕಾರಣಕ್ಕೂ ಮತ್ತೆ ಬಾದಾಮಿಗೆ ಬರಲ್ಲ ಅಂತ ಎಂದು ಹೇಳಿದರು.
ಯಾವ ಮತದಾರರು ನಿನ್ನ ತೀರಸ್ಕಾರ ಮಾಡಿದ್ದಾರೋ, ಅದೇ ಕ್ಷೇತ್ರಕ್ಕೆ ಹೋಗಿ ಜನರಿಗೆ ಅಭಿವೃದ್ದಿ ಕೆಲಸ ಮಾಡುತ್ತೇನೆ ಅಂತ ಹೇಳಿ ಅಲ್ಲೆ ಸ್ಪರ್ಧೆ ಮಾಡುವುನು ನಿಜಾವಾದ ರಾಜಕಾರಣಿ. ಇದೆಲ್ಲ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಿ ಆಸೆ ಆಮಿಶ ತೋರಿಸಿ ಜಾತಿ ಹೆಸರಿನಲ್ಲಿ ಗೆಲ್ಲೋದು, 224 ಕ್ಷೇತ್ರ ಓಡಾಡೋದು ರಾಜಕಾರಣನಾ? ಈಗ ಯಾಕೆ ಬಾದಾಮಿ, ಚಾಮುಂಡಿಯಲ್ಲಿ ನಿಲ್ಲಲ್ಲ ಅಂತ ಹೇಳಿ ಎಂದು ಒತ್ತಾಯಿಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ಕೊಡಬೇಕು ಎನ್ನುವುದು ಬಿಜೆಪಿ ಯೋಚನೆ ಮಾಡುತ್ತಿದೆ. ಇದೇ ಕಾರಣಕ್ಕೆ ನಮ್ಮಲ್ಲಿ ಇನ್ನು ಪಟ್ಟಿ ಬಿಡುಗಡೆ ಮಾಡಿಲ್ಲ. ಜೆಡಿಎಸ್ನಲ್ಲಿ ತಮ್ಮಮ್ಮ ಹೆಸರು ಘೋಷಣೆ ಮಾಡುತ್ತಿದ್ದಾರೆ. ನನ್ನ ಅಪೇಕ್ಷೆ ಸಿದ್ದರಾಮಯ್ಯ ಅವರು ಚಾಮುಂಡಿಯಲ್ಲಿ ನಿಲ್ಲೋದು ಗೌರವ. ಬದಾಮಿ ಬಿಟ್ಟು ಹೋಗುತ್ತಿರುವುದು ಮತದಾರರಿಗೆ ಮಾಡುತ್ತಿರುವುದು ದ್ರೋಹ. ಇದೇ ತರಹ ಮಾಡಿದರೇ 10 ಕ್ಷೇತ್ರದಲ್ಲಿ ನಿಂತರೂ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.
ಸಮ್ಮಿಶ್ರ ಸರ್ಕಾರ ಬೀಳಿಸಿದ ಬಗ್ಗೆ ಸಿದ್ದರಾಮಯ್ಯ-ಹೆಚ್ ಡಿ ಕುಮಾರಸ್ವಾಮಿ ವಾಕ್ಸಮರದ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗಲೇ ಗೊತ್ತಿತ್ತು ಇದು ಬಹಳ ದಿನ ಇರಲ್ಲ ಅಂತ. ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ ಎರಡು ದಿಕ್ಕಿನವರೆ. ಅವರು ಕುರುಬರು ಅಂತಾ ಹೊರಟವರು, ಇವರು ಒಕ್ಕಲಿಗರು ಅಂತಾ ಹೊರಟವರು. ಅವರಿಬ್ಬರಲ್ಲಿ ರಾಷ್ಟ್ರೀಯ ಚಿಂತನೆ, ರಾಜ್ಯ ಚಿಂತನೆ, ಸೈದ್ಧಾಂತಿಕ ವಾಗಿ, ಅಭಿವೃದ್ಧಿ ಬಗ್ಗೆ ವಿಚಾರವಿಲ್ಲ. ಖಂಡಿತವಾಗಿ ಇಬ್ಬರೂ ಒಟ್ಟಿಗೆ ಇರಲ್ಲ ಅದು ಕೂಡ ನನಗೆ ಗೊತ್ತಿತ್ತು. ಆದರೂ ಪ್ರಯತ್ನ ನಡೆಸಿ ಒಂದಿಷ್ಟು ದಿನ ಆಟ ಆಡಿದರು ಎಂದು ಹೇಳಿದರು.
ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಂದಾಯ ಸಚಿವ ಆರ್ ಅಶೋಕ ಅವರನ್ನು ಸರ್ಕಾರ ನೇಮಿಸಿದ ನಂತರ ಬಿಜೆಪಿ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನ ಪ್ರಾರಂಭವಾಗಿದೆ. ಈ ಅಭಿಯಾನ ಇಂದು (ಜ.28) ಕೂಡ ಮುಂದುವರೆದಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ಫ್ಲೈಓವರ್ ಕೆಳಗೆ ಗೋಬ್ಯಾಕ್ ಅಶೋಕ್ ಎಂದು ಅಪರಿಚಿತರು ಬರೆದಿದ್ದಾರೆ. ಈ ಮೂಲಕ ಮಂಡ್ಯ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡುವಂತೆ ಒತ್ತಡ ಹೆಚ್ಚಿದೆ.
ಬೆಂಗಳೂರು: ಸರ್ಕಾರದ ವಿರುದ್ಧ ನಾವೇನು ಅಸ್ತ್ರ ಮಾಡುವ ಅವಶ್ಯಕತೆ ಇಲ್ಲ. ಜನ ಸರ್ಕಾರವನ್ನು ತೆಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ. ದಿನ ಜಾಹೀರಾತು ನೀಡುತ್ತಿದ್ದಾರೆ. ಕಳೆದ ಬಾರಿಯ ಬಜೆಟ್ ಜಾರಿಗೆ ಬಂದಿದ್ಯಾ,ಯಾವುದಾದ್ರು ಈಡೇರಿಸಿದ್ದಾರಾ? ಹಿಂದೆ ಕೊಟ್ಟ ಮಾತು ಈಡೇರಿದ್ಯಾ, ಜನಕ್ಕೆ ಮುಟ್ಟಿದ್ಯಾ? ಬರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು, ಸಿಕ್ಕಿಂ ವಿವಿಯಲ್ಲಿ ಏನಾಗುತ್ತಿದೆ? ರಸ್ತೆಯಲ್ಲಿ 30 ರಿಂದ 50 ಸಾವಿರ ಅಥವಾ ಲಕ್ಷಕ್ಕೆ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ. ಕಷ್ಟ ಪಟ್ಟು ಓದಿದ ಮಕ್ಕಳ ಪರಿಸ್ಥಿತಿ ಏನಾಗಬೇಕು? ಇದೇನು ಸರ್ಕಾರನಾ ? ಮೈಸೂರಿನಲ್ಲಿ ಏನೇನಾಗಿದೆ, ಯಾವಾವ ಕೇಸ್ ಹೇಗೆ ವರ್ಗಾವಣೆ ಮಾಡಿದರು ಇದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಆ ಬಗ್ಗೆ ಆಮೇಲೆ ಮಾತಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಬಗ್ಗೆ ಫ್ಟ್ ಕಾರ್ನರ್ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್ ಹೇ ನಾನೇನು ಕುಸ್ತಿ ಆಡ್ಲಾ? ನಾನು ನೀತಿ ಮೇಲೆ ಹೋಗುತ್ತೇನೆ. ಯಾರ ಮೇಲೂ ವೈಯಕ್ತಿಕ ವಿಚಾರ ಇಲ್ಲ.ಜೆಡಿಎಸ್ನವರು ನಮ್ಮ ಪಾರ್ಟಿಗೆ ಸೇರುತ್ತಿದ್ದಾರೆ. ಮಂಡ್ಯ, ಕನಕಪುರದಲ್ಲಿ ಸೇರುತ್ತಿದ್ದಾರೆ. ಜೆಡಿಎಸ್ನವರಿಗೆ ನಾವು ಹೇಳ್ತಾ ಇದ್ದೇವೆ. ನೋಡ್ರಪ್ಪ ಕುಮಾರಣ್ಣ ವಿಸರ್ಜನೆ ಮಾಡುತ್ತೇನೆ ಎಂದು ಹೇಳ್ತಾ ಇದ್ದಾರೆ. ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳುತ್ತಾ ಇದ್ದೇನೆ ಎಂದರು.
ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿ, ಕುಂದಗೋಳ ಮತ್ತು ಬೆಳಗಾವಿಗೆ ಭೇಟಿ ನೀಡಲಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅಮಿತ್ ಶಾ ಆಗಮನದಿಂದ ಕಿತ್ತೂರು ಕರ್ನಾಟಕದಲ್ಲಿ ಸಂಚಲನ ಮೂಡಲಿದೆ. ಮುಂದಿನ ತಿಂಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದಾರೆ.
ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ನಡುವಿನ ಬಣ ರಾಜಕೀಯ ವಿಚಾರವಾಗಿ ಮಾತನಾಡಿದ ಅವರು ನಮ್ಮ ಬಿಜೆಪಿ ನಾಯಕರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷದ ಬೆಳವಣಿಗೆಯಿಂದ ಎಲ್ಲರೂ ಒಂದಾಗಿ ಮುನ್ನಡೆಯುತ್ತೇವೆ ಎಂದು ಸಮರ್ಥಿಸಿಕೊಂಡರು.
ಹುಬ್ಬಳ್ಳಿ/ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಬಿಜೆಪಿ ಹೈಕಮಾಂಡ್ ರಾಜ್ಯ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆ ಇಂದು (ಜ.28) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹುಬ್ಬಳ್ಳಿ (Hubli) ಮತ್ತು ಬೆಳಗಾವಿ (Belagavi) ಪ್ರವಾಸ ಕೈಗೊಳ್ಳಲಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಮಧ್ಯರಾತ್ರಿ ಹುಬ್ಬಳ್ಳಿಗೆ ಬಂದಿಳಿದಿದ್ದು, ಅಕ್ಷಯಪಾರ್ಕನಲ್ಲಿರುವ ಡೆನಿಸನ್ಸ್ ಹೊಟೇಲ್ನಲ್ಲಿ ತಂಗಿದ್ದಾರೆ. ಬೆಳಿಗ್ಗೆ 11.45ಕ್ಕೆ ರಸ್ತೆ ಮಾರ್ಗವಾಗಿ ಕೆಎಲ್ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಲಿದ್ದಾರೆ. 11.50ಕ್ಕೆ ಕೆಎಲ್ಇ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಚಾಲನೆ ನೀಡಿ, 11.55ಕ್ಕೆ ಕೆಎಲ್ಇ ಹೆಲಿಪಾಡ್ನಿಂದ ಹೆಲಿಕಾಪ್ಟರ್ ಮೂಲಕ ಧಾರವಾಡಕ್ಕೆ ಪ್ರಯಾಣ ಬೆಳಸಲಿದ್ದಾರೆ.
ಮಧ್ಯಾಹ್ನ 12.10ಕ್ಕೆ ಧಾರವಾಡ ಎತ್ತಿನಗುಡ್ಡದ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಿ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕೃಷಿ ವಿವಿ ಆವರಣದಲ್ಲಿ 12.20ಕ್ಕೆ ಫೊರೆನ್ಸಿಕ್ ವಿಶ್ವ ವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. 12.20 ರಿಂದ 1.10ರವರೆಗೆ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಬಳಿಕ ಅಲ್ಲಿಂದ 1.10ಕ್ಕೆ ರಸ್ತೆ ಮೂಲಕ ಧಾರವಾಡದ ಎತ್ತಿನಗುಡ್ಡ ಹೆಲಿಪ್ಯಾಡ್‌ನತ್ತ ತೆರಳುತ್ತಾರೆ.
ಆ ನಂತರ 1.20ಕ್ಕೆ ಎತ್ತಿನಗುಡ್ಡ ಹೆಲಿಪ್ಯಾಡನಿಂದ ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಹೋಗುತ್ತಾರೆ. 1.40ಕ್ಕೆ ಕುಂದಗೋಳ ಶಿವಾನಂದ ಮಠದ ಶಾಲೆ ಮೈದಾನದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹ್ಯಾಲಿಪ್ಯಾಡ್ನಲ್ಲಿ ಇಳಿದು, ಅಲ್ಲಿಂದ ರಸ್ತೆ ಮಾರ್ಗದ ಮೂಲಕ 1.50ಕ್ಕೆ ಶಂಭುಲಿಂಗ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ತಾನದಿಂದ ರಸ್ತೆ ಮಾರ್ಗವಾಗಿ 2.20ರವರೆಗೆ ವಾರ್ಡ್ 7ರಿಂದ ಬಸವದೇವರ ಮಠದವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಸಲಿದ್ದಾರೆ. ಬಳಿಕ 2.45ರವರೆಗೆ ಐತಿಹಾಸಿಕ ಶ್ರೀ ಶಂಭುಲಿಂಗ ದೇವಸ್ಥಾನ ಹಾಗೂ ಬಸವಣ್ಣಮಠದ ದರ್ಶನ ಪಡೆದು 2.45ರಿಂದ 3.25ರವರೆಗೆ ಶ್ರೀ ಬಸವಣ್ಣ ದೇವರಮಠದಿಂದ ಗಾಳಿ ಮರಿಯಮ್ಮ ದೇವಸ್ಥಾನದವರೆಗೆ ರೋಡ್ ಶೋ ನಡೆಸಲಿದ್ದಾರೆ. 3.30ಕ್ಕೆ ಗಾಳಿ ಮರಿಯಮ್ಮ ದೇವಸ್ಥಾನದಿಂದ ಶಿವಾನಂದ ಶಾಲೆ ಮೈದಾನದತ್ತ ಪ್ರಯಾಣ ಮಾಡಿ ಕುಂದಗೋಳದಿಂದ 3.35ಕ್ಕೆ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ತೆರಳುತ್ತಾರೆ.
ಕುಂದುಗೋಳ ನಂತರ ಅಮಿತ್ ಶಾ ಬೆಳಗಾವಿಯ ಎಂ.ಕೆ ಹುಬ್ಬಳ್ಳಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.35ಕ್ಕೆ ಹೆಲಿಕಾಪ್ಟರ್ ಮೂಲಕ ಕುಂದಗೋಳದಿಂದ ಹೊರಟು, 3.45ಕ್ಕೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. 3.50ಕ್ಕೆ ಜನ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸುತ್ತಾರೆ. 5.15ಕ್ಕೆ ಎಂ.ಕೆ ಹುಬ್ಬಳ್ಳಿಯಲ್ಲಿರುವ ಹೆಲಿಪ್ಯಾಡ್ನಿಂದ 5.35ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುತ್ತಾರೆ.
ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಆಗಮಿಸಿ, ಸಂಜೆ 6ಗಂಟೆಗೆ ಬೆಳಗಾವಿ ನಗರದ ಖಾಸಗಿ ಹೊಟೆಲ್ನಲ್ಲಿ ಸಂಘಟನಾತ್ಮಕ ಸಭೆ ನಡೆಸಲಿದ್ದಾರೆ. 7ಗಂಟೆಗೆ ಬಿಜೆಪಿ ಪದಾಧಿಕಾರಿಗಳು, ಮುಖಂಡರ ಜತೆಗೆ ಸಭೆ ನಡೆಸುತ್ತಾರೆ. ಸಭೆಗಳ ಬಳಿಕ ಹೊಟೆಲ್ದಿಂದ ರಸ್ತೆ ಮಾರ್ಗವಾಗಿ 9.45ಕ್ಕೆ ಸಾಂಬ್ರಾ ಏರ್ಪೋರ್ಟ್ ತಲುಪಲಿದ್ದಾರೆ. 10ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗುತ್ತಾರೆ.
Published On - 9:25 am, Sat, 28 January 23