Hassan Politics: ಹಾಸನ ಟಿಕೆಟ್ ದೇವೇಗೌಡರು ಡಿಸೈಡ್ ಮಾಡ್ತಾರೆ; ಎಚ್ಡಿಕೆಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ
Karnataka Politics: ಹಾಸನ ತಾಲ್ಲೂಕಿನಲ್ಲಿ ಜೆಡಿಎಸ್ ಶಾಸಕರು ಆರಿಸಿಬರಬೇಕಿದೆ. ಇದು ನಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಸೂರಜ್ ರೇವಣ್ಣ ಹೇಳಿದರು.
ಹಾಸನ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ (Karnataka Assembly Elections) ಮೂರೂ ರಾಜಕೀಯ ಪಕ್ಷಗಳು ಚುರುಕುಗೊಳಿಸಿವೆ. ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ನಲ್ಲಿ (JDS) ಟಿಕೆಟ್ ಹಂಚಿಕೆ ಗೊಂದಲಗಳು ಬಹಿರಂಗವಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗೆ ಸುರಕ್ಷಿತ ಕ್ಷೇತ್ರ ಎನಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟೆಕೆಟ್ ತನಗೇ ನೀಡಬೇಕು ಎಂದು ಭವಾನಿ ರೇವಣ್ಣ (Bhavani Revanna) ಪಟ್ಟುಹಿಡಿದಿದ್ದಾರೆ. ಆದರೆ ಭವಾನಿ ಅವರ ಬೇಡಿಕೆಯನ್ನು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಪಟ್ಟು ಬಿಡದ ಭವಾನಿ ಸಂಘಟನೆಯನ್ನು ಚುರುಕುಗೊಳಿಸಿದ್ದು, ಮಗ ಸೂರಜ್ ಹಾಗೂ ಪತಿ ರೇವಣ್ಣ ಅವರೊಂದಿಗೆ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ.
ಅರಕಲಗೂಡು ತಾಲ್ಲೂಕು ಹರದೂರು ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ತಾಯಿಗೆ ಟಿಕೆಟ್ ಕೊಡಬೇಕು ಎಂದು ಪ್ರತಿಪಾದಿಸಿದರು. ‘ಮೊದಲಿನಿಂದಲೂ ನಮ್ಮ ತಾತ (ಎಚ್.ಡಿ.ದೇವೇಗೌಡ) ಈ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಈಗ ನನ್ನ ಪರಿಸ್ಥಿತಿ ತಗೊಳಿ. ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿದ್ದವು. ಆದರೆ ದೇವೇಗೌಡರು ಸೂರಜ್‌ರೇವಣ್ಣ ಅಭ್ಯರ್ಥಿಯಾಗಬೇಕು ಎಂದು ತೀರ್ಮಾನಿಸಿದರು’ ಎಂದು ನೆನಪಿಸಿಕೊಂಡರು.
‘ಸಂಸದರ ಚುನಾವಣೆಯಲ್ಲಿ ದೇವೇಗೌಡರೇ ಸ್ಪರ್ಧಿಸಬೇಕಿತ್ತು. ಅವರೇ ಸ್ವಯಿಚ್ಛೆಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ದಾರಿ ಮಾಡಿಕೊಟ್ಟರು. ನಂತರ ಅವರು (ಪ್ರಜ್ವಲ್) ಭವಿಷ್ಯ ರೂಪಿಸಿಕೊಂಡಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವ ಬಗ್ಗೆ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.
‘ಹಾಸನ ಕ್ಷೇತ್ರದ ವಿದ್ಯಮಾನವನ್ನು ಮೊದಲು ಹೇಳ್ತೀನಿ. ಸ್ವರೂಪ್ ಅವರು ಬೇರೆ ಅಲ್ಲ, ಎಚ್.ಎಸ್.ಪ್ರಕಾಶ್ ಬೇರೆ ಅಲ್ಲ. ಆ ಕುಟುಂಬಕ್ಕೂ ನಾಲ್ಕು ಬಾರಿ ಟಿಕೆಟ್ ಕೊಟ್ಟು ಶಾಸಕ ಸ್ಥಾನ ತಂದುಕೊಟ್ಟಿದ್ದೇವೆ. ಅವರು ಅಗಲಿದ ನಂತರ ಅವರ ಮಗನನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ, ಸಂಜೀವಿನಿ ಸಹಕಾರ ಆಸ್ಪತ್ರೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಸಾಕಷ್ಟು ರೀತಿಯಲ್ಲಿ ಅಧಿಕಾರ ಕೊಟ್ಟಿದ್ದೇವೆ. ನಮ್ಮಿಂದ ಯಾರಿಗೂ ಅನ್ಯಾಯವಾಗಿಲ್ಲ. ನಾವು ಯಾರನ್ನೂ ರಾಜಕೀಯವಾಗಿ ನಿರ್ಲಕ್ಷ್ಯ ಮಾಡಿಲ್ಲ’ ಎಂದು ಪ್ರತಿಪಾದಿಸಿದರು.
‘ಈಗ ಇಲ್ಲಿನ ರಾಜಕೀಯ ಸನ್ನಿವೇಶ ಬದಲಾಗಿದೆ. ಹಾಲಿ ಶಾಸಕರು ನಮ್ಮ ಕಾರ್ಯಕರ್ತರಿಗೆ ತೊಂದರೆ ಮಾಡುತ್ತಿದ್ದಾರೆ. ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಹಾಸನ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಶಾಸಕರು ಆರಿಸಿಬರಬೇಕಿದೆ. ಇದು ನಿಮ್ಮ (ರೇವಣ್ಣ) ಕುಟುಂಬದಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರು, ಜನರ ಅಪೇಕ್ಷೆಪಟ್ಟಿದ್ದಾರೆ. ನಮ್ಮವರ ವಿರುದ್ಧ ನಮ್ಮ ಸ್ಪರ್ಧೆಯಿಲ್ಲ’ ಎಂದು ಅವರು ತಿಳಿಸಿದರು.
ಹಾಸನ ತಾಲ್ಲೂಕನ್ನು 2018ರಲ್ಲಿ ಕಳೆದುಕೊಂಡಿದ್ದೇವೆ. ಅದನ್ನು 2023ರಲ್ಲಿ ಮರುಗಳಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಹಾಲಿ ಶಾಸಕರು ಏನು ಬೇಕಾದರೂ ಸವಾಲು ಹಾಕಿಕೊಳ್ಳಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು. ಪಕ್ಷವನ್ನು ಸದೃಢವಾಗಿ ಕಟ್ಟಬೇಕು. ಸಂಘಟನೆ ಮಾಡಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಇವತ್ತಿನ ಲೆಕ್ಕಾಚಾರ ನೋಡಿದರೆ ಭವಾನಿ ರೇವಣ್ಣ ಅಭ್ಯರ್ಥಿ ಆದರೆ ಗೆಲುವು ಖಚಿತ. ಇದನ್ನು ಬರೆದಿಟ್ಟುಕೊಳ್ಳಿ ಬೇಕಾದರೆ. ಇದನ್ನು ಬಿಟ್ಟು ಬೇರೆ ಜನಸಾಮಾನ್ಯರನ್ನು, ಕಾರ್ಯಕರ್ತರನ್ನು ನಿಲ್ಲಿಸುತ್ತೇವೆ ಎನ್ನುವ ಹೇಳಿಕೆಗಳನ್ನು ಬಿಟ್ಟುಬಿಡಬೇಕು. ರೇವಣ್ಣ ಸಾಹೇಬರಂತೆ ಹಾಸನ ಜಿಲ್ಲೆಯನ್ನು ಅರಿತಿರುವ ಮತ್ತೊಬ್ಬ ವ್ಯಕ್ತಿ ಈ ಭೂಮಿಯಲ್ಲಿ ಇಲ್ಲವೇ ಇಲ್ಲ. ಅವರು ಇಡೀ ಜಿಲ್ಲೆಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹದಿನೈದು ವರ್ಷದಿಂದ ಸತತವಾಗಿ ಆರರಿಂದ ಏಳು ಜನ ಶಾಸಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಇದು ರೇವಣ್ಣ ಅವರ ಸ್ವಂತ ಪ್ರಯತ್ನ. ಅವರನ್ನು ಬಿಟ್ಟರೆ ಇನ್ಯಾರಿಗೂ ಈ ಜಿಲ್ಲೆಯಲ್ಲಿ ಟಿಕೆಟ್ ಬಗ್ಗೆ ಮಾತನಾಡಲು ಅವಕಾಶವಿಲ್ಲ’ ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದರು.
ಕಾರ್ಯಕರ್ತರ ಪ್ರತಿಭಟನೆ
ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಟಿಕೆಟ್ ಆಗ್ರಹಿಸಿ ಸಂಸದ ಪ್ರಜ್ವಲ್ ನಿವಾಸಕ್ಕೆ ಮುತ್ತಿಗೆ ಹಾಕಲು ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡರು. ಸಂಸದರ ನಿವಾಸದ ಎದುರು ಪ್ರತಿಭಟನೆಗೆ ವೇದಿಕೆ ಸಿದ್ದಪಡಿಸುತ್ತಿರುವ ಕಾರ್ಯಕರ್ತರು ಶಾಮಿಯಾನ ಹಾಕಿ ಸತ್ಯಾಗ್ರಹಕ್ಕೆ ಕೂರಲು ಮುಂದಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ಸಂಸದರ ನಿವಾಸಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಆಕಾಂಕ್ಷಿ ಭವಾನಿ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಆಗಮಿಸುವ ನಿರೀಕ್ಷೆಯಿದೆ.
ರೇವಣ್ಣ ಕುಟುಂಬದಿಂದ ಮುಂದುವರಿದ ದೇಗುಲ ಭೇಟಿ
ಹಾಸನದ ವಿವಿಧ ದೇಗುಲಗಳಿಗೆ ಇಂದೂ ಸಹ ರೇವಣ್ಣ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿತು. ಅರಕಲಗೂಡು ತಾಲ್ಲೂಕಿನ ಹರದೂರು ರಂಗನಾಥ ಸ್ಚಾಮಿ ದೇಗುಲದಲ್ಲಿ ಕುಟುಂಬ ಸಹಿತ ಪ್ರಾರ್ಥನೆ ಸಲ್ಲಿಸಲಾಯಿತು. ಜಾತ್ರೆ ಹಿನ್ನೆಲೆಯಲ್ಲಿ ಕುಟುಂಬ ದೇಗುಲಕ್ಕೆ ಭೇಟಿ ನೀಡಿತ್ತು. ಶಾಸಕ ಎ.ಟಿ.ರಾಮಸ್ವಾಮಿ, ಮಾಜಿ ಸಚಿವ ಎ.ಮಂಜು ಸಹ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಭವಾನಿ ಈಡುಗಾಯಿ ಒಡೆದು ಪ್ರಾರ್ಥಿಸಿದರು.
ಹಾಸನ ಕ್ಷೇತ್ರದಲ್ಲಿ ಭವಾನಿ ಚುರುಕಾಗಿ ಓಡಾಡುತ್ತಿದ್ದರು. ಇಂದು (ಜ 28) ಆಟೋ ಚಾಲಕರ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭವಾನಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಮಜ್ದೂರ್ ಆಟೋ ಚಾಲಕರ ಸಂಘ ಈ ಕಾರ್ಯಕ್ರಮ ಆಯೋಜಿಸಿದೆ. ನಿನ್ನೆ ಹಾಸನ ಹೊರವಲಯದ ಬುಸ್ತೇನಹಳ್ಳಿ ದೇಗುಲದ ಉದ್ಘಾಟನೆ ಕಾರ್ಯಕ್ರಮಕ್ಕೆ ಭವಾನಿ ಬಂದಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದೇಪದೆ ಭವಾನಿಗೆ ಟಿಕೇಟ್ ಇಲ್ಲ ಎಂಬ ಸಂದೇಶ ನೀಡಿದರೂ ಭವಾನಿ ಹಿಂದೆ ಸರಿಯುತ್ತಿಲ್ಲ. ಮೌನವಾಗಿಯೇ ತಮ್ಮ ಹಕ್ಕು ಮಂಡಿಸುತ್ತಿದ್ದಾರೆ. ಭವಾನಿ ರೇವಣ್ಣ ಬೆನ್ನಿಗೆ ನಿಂತು ಪುತ್ರರಾದ ಸಂಸದ ಪ್ರಜ್ವಲ್ ಹಾಗು ಪರಿಷತ್ ಸದಸ್ಯ ಸೂರಜ್ ರೇವಣ್ಣ ಓಡಾಡುತ್ತಿದ್ದಾರೆ.
ಇದನ್ನೂ ಓದಿ: Karnataka Politics: ಭವಾನಿ ರೇವಣ್ಣಗೆ ಹಾಸನ ಟಿಕೆಟ್ ವಿಚಾರ: ಕುಮಾರಸ್ವಾಮಿ ವ್ಯಂಗ್ಯದ ಪ್ರತಿಕ್ರಿಯೆ
ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ