ಅಶೋಕ್‌ಗೆ ಮಂಡ್ಯ ಉಸ್ತುವಾರಿ..ಲೋಕಲ್ ನಲ್ಲಿ ‘ಉರಿ’: ಬಿಜೆಪಿ ಮಿಷನ್ ಮಂಡ್ಯ ಟಾರ್ಗೆಟ್‌ಗೆ ಜೆಡಿಎಸ್ ಕೌಂಟರ್

ರಣತಂತ್ರ ಹೆಣೆಯೋ ಮುನ್ನವೇ ವಿಘ್ನ.. ದಕ್ಷಿಣ ದಂಡಯಾತ್ರೆಗೂ ಮೊದಲೇ ದಂಗಲ್.. ಅಶೋಕ್ ಎಂಟ್ರಿಯಾಗ್ತಿದ್ದಂತೆ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಇನ್ನು ಬಿಜೆಪಿ ತಂತ್ರಕ್ಕೆ ಜೆಡಿಎಸ್ ಪ್ರತಿತಂತ್ರ ಹೆಣೆದಿದೆ.

ಅಶೋಕ್‌ಗೆ ಮಂಡ್ಯ ಉಸ್ತುವಾರಿ..ಲೋಕಲ್ ನಲ್ಲಿ ‘ಉರಿ’: ಬಿಜೆಪಿ ಮಿಷನ್ ಮಂಡ್ಯ ಟಾರ್ಗೆಟ್‌ಗೆ ಜೆಡಿಎಸ್ ಕೌಂಟರ್
ಹೆಚ್​ಡಿ ಕುಮಾರಸ್ವಾಮಿ, ಆರ್. ಅಶೋಕ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 28, 2023 | 7:30 PM

ಮಂಡ್ಯ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಹಣಾಹಣಿಯಲ್ಲಿ ಮಂಡ್ಯದಲ್ಲಿ (Mandya) ದೊಡ್ಡ ಯುದ್ದವೇ ನಡೆದಿತ್ತು. ಮಂಡ್ಯ ಲೋಕಸಭೆ ಚುನಾವಣೆ ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿತ್ತು. ಇದೀಗ ಆ ಯುದ್ಧವನ್ನೇ ಮೀರಿಸೋವಂತ ಸಮರಕ್ಕೆ ಮಂಡ್ಯ ವೇದಿಕೆ ಸಜ್ಜಾಗಿದೆ.  ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಮಿಷನ್ ದಕ್ಷಿಣ್ ಅಜೆಂಡಾದೊಂದಿಗೆ ಹಳೇ ಮೈಸೂರು ಭಾಗದ ಮಂಡ್ಯವನ್ನೇ ಟಾರ್ಗೆಟ್ ಮಾಡಿದ್ದಾರೆ. ಇದಕ್ಕಾಗಿ ಗೌಡ ಅಸ್ತ್ರ ಪ್ರಯೋಗಿಸಿರುವ ಅಮಿತ್ ಶಾ, ಸಕ್ಕರೆ ನಾಡಿನ ಯುದ್ಧಭೂಮಿಗೆ ಬೆಂಗಳೂರು ಗೌಡ ಆರ್‌.ಅಶೋಕ್ ಅವರನ್ನ ಇಳಿಸಿದ್ದಾರೆ. ಆದ್ರೆ, ರಣತಂತ್ರ ಹೆಣೆಯೋ ಮುನ್ನವೇ ವಿಘ್ನ ಎದುರಾಗಿದೆ. ಅಶೋಕ್ ಎಂಟ್ರಿಯಾಗ್ತಿದ್ದಂತೆ ಮಂಡ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಗೋ ಬ್ಯಾಕ್ ಅನ್ನೋ ಪೋಸ್ಟರ್‌ಗಳು ರಾರಾಜಿಸಿವೆ. ಮಂಡ್ಯ ಉಸ್ತುವಾರಿ ಗೋಪಾಲಯ್ಯರ ಸ್ಥಾನಕ್ಕೆ ಆರ್‌.ಅಶೋಕ್‌ರನ್ನ ತಂದು ಕೂರಿಸಿರುವುದಕ್ಕೆ ಜಿಲ್ಲಾ ಬಿಜೆಪಿ ಮುಖಂಡರು ಉರಿದುರಿದು ಬಿದ್ದಿದ್ದಾರೆ.

ಇದನ್ನೂ ಓದಿ: ಮಂಡ್ಯ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ; ‘ಗೋ ಬ್ಯಾಕ್​ ಆರ್​.ಅಶೋಕ್’​ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ

ಜೆಡಿಎಸ್ ಮಣಿಸಲು ಗೋಪಾಲಯ್ಯ ಬೆಸ್ಟ್ ಎಂದ ಬಿಜೆಪಿಗರು

ಹೌದು.. ಮಂಡ್ಯ ಹೇಳಿ ಕೇಳಿ ದಳಪತಿಗಳ ಕೋಟೆ. ಜೆಡಿಎಸ್ ಪವರ್ ಫುಲ್ ಪಾರ್ಟಿ. ಕುಮಾರಸ್ವಾಮಿಯೇ ಮಂಡ್ಯ ಅಖಾಡದಲ್ಲಿ ಸ್ಪರ್ಧಿಸ್ತಾರೆಂಬ ಚರ್ಚೆಯೂ ನಡೀತಿದೆ. ಹೀಗಿರುವಾಗ, ಪ್ರಬಲ ಜೆಡಿಎಸ್ ಮಣಿಸಲು ಅಶೋಕ್ ಗೆ ಸಾಧ್ಯವಿಲ್ಲ ಅನ್ನೋದು ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡರ ವಾದವಾಗಿದೆ. ಮಂಡ್ಯ ರಾಜಕಾರಣದ ಬಗ್ಗೆ ಅಶೋಕ್ ಗೆ ಮಾಹಿತಿ ಇಲ್ಲ. ಜೆಡಿಎಸ್‌ ಮಣಿಸಲು ಗೋಪಾಲಯ್ಯ ಅವರೇ ಬೆಸ್ಟ್, ಹೀಗಾಗಿ, ಮಂಡ್ಯಕ್ಕೆ ಅಶೋಕ್ ಉಸ್ತುವಾರಿ ಬೇಡ ಎಂದು ಪಟ್ಟು ಹಿಡಿದಿದ್ದಾರಂತೆ. ಆದ್ರೆ, ಮಂಡ್ಯದಲ್ಲಿ ಇದೆ ಎನ್ನಲಾದ ಅಸಮಾಧಾನವನ್ನ ತಳ್ಳಿ ಹಾಕಿರೋ ಸಿಎಂ, ಆ ರೀತಿ ಏನಿಲ್ಲ. ಅಶೋಕ್ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದಿದ್ದಾರೆ.

ಬಿಜೆಪಿ ಮಿಷನ್ ಮಂಡ್ಯ ಟಾರ್ಗೆಟ್‌ಗೆ ಜೆಡಿಎಸ್ ಕೌಂಟರ್

ಜೆಡಿಎಸ್ ಹಣಿಯಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದ್ದರೆ, ಇತ್ತ ಬಿಜೆಪಿಗೆ ಪ್ಲ್ಯಾನ್‌ಗೆ ಬಿಸಿನೀರು ಸುರಿಯಲು ಜೆಡಿಎಸ್ ಕೌಂಟರ್ ಪ್ಲ್ಯಾನ್ ಮಾಡುತ್ತಿದೆ. ಮಂಡ್ಯ ಅಖಾಡದಿಂದ ಕುಮಾರಸ್ವಾಮಿಯವರನ್ನೇ ಇಳಿಸಲು ಒತ್ತಾಯ ಮಾಡುತ್ತಿದೆ. ಮಂಡ್ಯದಲ್ಲಿ ಹೆಚ್​ಡಿಕೆ ಸ್ಪರ್ಧೆ ಮಾಡಿದ್ರೆ ಜಿಲ್ಲೆಗೆ ಪೂರಕ. ಬಿಜೆಪಿ ಮತ್ತು ಕಾಂಗ್ರೆಸ್​ಗೆ ಟಕ್ಕರ್ ಕೊಡಬಹುದೆಂಬ ತಂತ್ರ ಹೂಡಿದ್ದು, ಕುಮಾರಸ್ವಾಮಿ ಅವರಿಗೂ ಸ್ಥಳೀಯ ಜೆಡಿಎಸ್ ನಾಯಕರು ಮಾಹಿತಿ ಕೊಟ್ಟಿದ್ದಾರಂತೆ. ಈ ಮೂಲಕ ಬಿಜೆಪಿ ಲೆಕ್ಕಾಚಾರ ಉಲ್ಟಾ ಮಾಡಲು ಸ್ಕೆಚ್ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Mandya Politics: ಸಕ್ಕರೆ ನಾಡು ಕಬ್ಜಾಕ್ಕೆ ಬಿಜೆಪಿಯಿಂದ ಬ್ಲೂ ಪ್ರಿಂಟ್: ಅಖಾಡಕ್ಕೆ ತ್ರಿಮೂರ್ತಿಗಳು

ಅಂದಹಾಗೆ ಸಂಘಟನಾ ಚತುರ ಬಿ.ಎಲ್ ಸಂತೋಷ್ ಮಂಡ್ಯಕ್ಕೆ ಬಂದು ಹೋದ್ಮೇಲೆ ಚಿತ್ರಣವೇ ಬದಲಾಗಿದೆ. ಹೆಚ್‌ಡಿಕೆ ಸ್ಪರ್ಧೆ ಬಗ್ಗೆ ಚರ್ಚೆ ಇರೋದ್ರಿಂದಾನೇ ಮಂಡ್ಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಗೋಪಾಲಯ್ಯ ಬಳಿ ಇದ್ದ ಉಸ್ತುವಾರಿಯನ್ನ ಆರ್‌.ಅಶೋಕ್‌ಗೆ ನೀಡಿದೆ. ಫ್ಲೆಕ್ಸ್‌ನಲ್ಲಿ ಸುಮಲತಾ ಫೋಟೋ ಕಂಡುಬಂದಿರುವುದು ಸುಮಲತಾ ಬಿಜೆಪಿಗೆ ಬರ್ತಾರಾ? ಹೆಚ್‌ಡಿಕೆ ವಿರುದ್ಧ ಕಣಕ್ಕಿಳಿತಾರಾ ಅನ್ನೋ ಚರ್ಚೆ ಮಂಡ್ಯದ ಗಲ್ಲಿ ಗಲ್ಲಿಯಲ್ಲಿಯೂ ನಡೀತಿದೆ. ಸುಮಲತಾರನ್ನ ಬಿಜೆಪಿಗೆ ಕರೆತರುವ ಜವಾಬ್ದಾರಿ ಅಶೋಕ್ ಮೇಲಿದೆ. ಇದಕ್ಕಾಗಿ ಆರ್‌.ಅಶೋಕ್ ರಣತಂತ್ರ ರೂಪಿಸುತ್ತಿದ್ದು, ಅಶೋಕರನ್ನ ಮಂಡ್ಯ ಗೌಡ್ರು ಒಪ್ಪುತ್ತಾರಾ ಎನ್ನುವುದನ್ನು ಕಾದುನೋಡ್ಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ