ಊರಿಗೊಬ್ಳೆ ನಾನೇ ಪದ್ಮಾವತಿ ಅಂತ ಸಿದ್ದರಾಮಯ್ಯ ತಿರುಗಾಡುತ್ತಿದ್ದರು: ಪ್ರತಾಪ್ ಸಿಂಹ

|

Updated on: Mar 26, 2023 | 12:38 PM

ಈ ಬಾರಿ ನಡೆಯುವ ಕರ್ನಾಟಕ ಚುನಾವಣೆಗೆ ಹೆಸರು ಘೋಷಣೆಯಾಗುವವರೆಗೂ ಸುರಕ್ಷಿತ ಕ್ಷೇತ್ರಕ್ಕಾಗಿ ಸುತ್ತಾಟ ನಡೆಸುತ್ತಿದ್ದರು. ಕೊನೆಗೂ ಸಿದ್ದರಾಮಯ್ಯಗೆ ಅವರ ಪುತ್ರನ ಕ್ಷೇತ್ರ ವರುಣಾ ಫೈನಲ್ ಆಗಿದೆ. ಈ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಲು ಆರಂಭಿಸಿದ್ದಾರೆ.

ಊರಿಗೊಬ್ಳೆ ನಾನೇ ಪದ್ಮಾವತಿ ಅಂತ ಸಿದ್ದರಾಮಯ್ಯ ತಿರುಗಾಡುತ್ತಿದ್ದರು: ಪ್ರತಾಪ್ ಸಿಂಹ
ಪ್ರತಾಪ್ ಸಿಂಹ ಮತ್ತು ಸಿದ್ದರಾಮಯ್ಯ
Follow us on

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karanataka Assembly Election 2023) ಸಮೀಪಿಸುತ್ತಿದ್ದು, ಸೂಕ್ತ, ಭದ್ರ ಹಾಗೂ ರಾಜಕೀಯ ಜೀವನದ ಸುರಕ್ಷಕ್ಕಾಗಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊನೆಗೂ ಅವರ ಪುತ್ರನ ಕ್ಷೇತ್ರವಾಗಿದ್ದ ವುರಣಾ ಟಿಕೆಟ್ ಘೋಷಣೆಯಾಗಿದೆ. ಈ ಬಗ್ಗೆ ಬಿಜೆಪಿ ಟೀಕೆ ಮುಂದುವರಿಸಿದೆ. ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಮುಖ್ಯಮಂತ್ರಿ ನಾನೇ ಎನ್ನುವ ಸಿದ್ದರಾಮಯ್ಯ (Siddaramaiah) ಅವರಿಗೆ ಒಂದು ಕ್ಷೇತ್ರ ಹುಡುಕಿಕೊಳ್ಳಲು ಆಗಲಿಲ್ಲ. ಊರಿಗೊಬ್ಳೇ ನಾನೇ ಪದ್ಮಾವತಿ ಅಂತಾ ಸಿದ್ದರಾಮಯ್ಯ ಓಡಾಡುತ್ತಿದ್ದರು. ಈಗ ಕೊನೆಗೆ ಹಳೆ ಗಂಡನ ಪಾದವೇ ಗತಿ ಅಂತಾ ವರುಣಾ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಮಗನ ನೆಲೆ ಕಳೆದು ವರುಣಾಗೆ ಬರುವ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂತು. ಸಿದ್ದರಾಮಯ್ಯ ಪುಕ್ಕಲತನದಿಂದ ವರುಣಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ ಸಣ್ಣ ಅಂತರದಿಂದ ಸಿದ್ದರಾಮಯ್ಯ ಎಸ್ಕೇಪ್ (ಬಾದಾಮಿಯಲ್ಲಿ ಅಲ್ಪ ಮತಗಳಿಂದ ಗೆಲುವು) ಆಗಿಬಿಟ್ಟಿದ್ದರು. ಈ ಬಾರಿ ಅವರು ಎಲ್ಲೇ ನಿಂತರು ಸೋಲುತ್ತಾರೆ ಎಂದು ಹೇಳಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅವರು ನಿಲ್ಲಲ್ಲ. ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಅಂತಾ ಸಿದ್ದರಾಮಯ್ಯ ಹೇಳುತ್ತಾರೆ. ಕ್ಷೇತ್ರ ಕೊಡಲು ಹೈಕಮಾಂಡ್ ರೆಡಿ ಇಲ್ಲ ಅಂದ ಮೇಲೆ ಯಾವ ಧೈರ್ಯದ ಮೇಲೆ ಮುಂದಿನ ಮುಖ್ಯಮಂತ್ರಿ ನಾನೇ ಎನ್ನುತ್ತಾರೆ? ಟಿಕೆಟ್ ಕೊಡದೆ ಇದ್ದ ಪಕ್ಷ ಅವರಿಗೆ ಸಿಎಂ ಸ್ಥಾನ ಕೊಡುತ್ತಾ? ಸಿದ್ದರಾಮಯ್ಯ ಅವರ ರಾಜಕೀಯ ಜೀವನ 2018 ರಲ್ಲೇ ಮುಗಿದು ಹೋಗಿದೆ ಎಂದರು.

ಇದನ್ನೂ ಓದಿ: Rahul Gandhi Case; ರಾಜಕೀಯವಾಗಿ ಎಷ್ಟೇ ಬದ್ಧ ವೈರತ್ವವಿದ್ದರೂ, ಕುಟುಂಬ ಮತ್ತು ಮನೆತನಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಬಾರದು: ಪ್ರತಾಪ್ ಸಿಂಹ

ಕ್ಷೇತ್ರ ಹುಡುಕಾಟದ ನಡುವೆ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬಂತಾಗಿತ್ತು. ಎರಡು ಮೂರು ಸುತ್ತಿನ ಸರ್ವೆ ಕೂಡ ಸಿದ್ದರಾಮಯ್ಯ ಅವರ ಬೆಂಬಲಿಗರು ನಡೆಸಿದ್ದರು. ಆದರೆ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೇಳಿಕೊಂಡೇ ಬಂದಿತ್ತು. ಒಂದು ಹೆಜ್ಜೆ ಮುಂದೆ ಹೋಗಿ ಭವಿಷ್ಯ ನುಡಿದಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ಅವರು ಮೈಸೂರು ಕಡೆಗೆ ಹೋಗುತ್ತಾರೆ ಎಂದಿದ್ದರು. ಅದರಂತೆ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ವಿಧಾನಸಭೆಗೆ ಪ್ರತಾಪ್ ಸಿಂಹ ಸ್ಪರ್ಧಿಸುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, 2029 ರವರೆಗೂ ಮೋದಿ ಅವರ ಆಡಳಿತದಲ್ಲಿ ಸಂಸದನಾಗಿ ಕೆಲಸ ಮಾಡುತ್ತೇನೆ. 8 ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸದನ ಸ್ಥಾನ ಬಿಟ್ಟು ಒಂದು ವಿಧಾನಸಭಾ ಕ್ಷೇತ್ರ ಹುಡುಕಿಕೊಳ್ಳುವಷ್ಟು ದಡ್ಡ ನಾನಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Sun, 26 March 23