ಬೆಂಗಳೂರು ಗ್ರಾಮಾಂತರ, ಜೂನ್.04: ಏಪ್ರಿಲ್ 26 ರಂದು ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನ ಪ್ರಕ್ರಿಯೆ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾನ ನಡೆದಿತ್ತು (Bengaluru Rural Lok Sabha Constituency). ಇಂದು ಲೋಕಸಭಾ ಚುನಾವಣೆ 2024ರ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿಯಿಂದ ಡಾ. ಸಿ ಎನ್ ಮಂಜುನಾಥ್ (CN Manjunath) ಮತ್ತು ಕಾಂಗ್ರೆಸ್ನಿಂದ ಡಿಕೆ ಸುರೇಶ್ (DK Suresh) ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಸದ್ಯ ಡಾ. ಸಿ ಎನ್ ಮಂಜುನಾಥ್ ಪ್ರಥಮ ಬಾರಿಗೆ ಸ್ಪರ್ಧಿಸಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ. ಮಂಜುನಾಥ್ ಅವರು 10,38,964 ಮತಗಳಿಸಿದ್ದು ಡಿಕೆ ಸುರೇಶ್ 7,82,779 ಮತ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ 2,56,185 ಅಂತರದಲ್ಲಿ ಗೆದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಭಾರೀ ಸಂಚಲನ ಮೂಡಿಸಿತ್ತು. ಯಾಕಂದ್ರೆ 2013ರ ಉಪಚುನಾವಣೆಯಿಂದ ಹಿಡಿದು 2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆದ್ದು ಸತತವಾಗಿ, 3 ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ವಿರುದ್ಧ ಜೆಡಿಎಸ್ ವರಿಷ್ಠ, ಹೆಚ್.ಡಿ. ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನೇ ಮೊದಲ ಬಾರಿಗೆ ಕಣಕ್ಕೆ ಇಳಿಸಲಾಗಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಡಾ. ಮಂಜುನಾಥ್ ಅವರು ನಿವೃತ್ತಿ ಪಡೆದು ರಾಜಕೀಯಕ್ಕೆ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಶೇ 68.30 ರಷ್ಟು ಮತದಾನ ನಡೆದಿದೆ. ಸದ್ಯ ಅಚ್ಚರಿಯ ಫಲಿತಾಂಶ ಹೊರ ಬಿದ್ದಿದ್ದು ಮೂರು ಬಾರಿ ಗೆದ್ದು ಬೀಗಿದ್ದ ಡಿಕೆ ಸುರೇಶ್ನನ್ನೇ ಡಾ.ಮಂಜುನಾಥ್ ಸೋಲಿಸಿದ್ದಾರೆ.
ಕರ್ನಾಟಕದ ಹಳೆಯ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಕೂಡ ಒಂದು. ಈ ಕ್ಷೇತ್ರವನ್ನು ಮೊದಲು ಕನಕಪುರ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಈಗ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯನ್ವಯ ಈ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಕರೆಯಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ವಿಧಾನಸಭಾ ಕ್ಷೇತ್ರ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರ, ಮಾಗಡಿ ವಿಧಾನಸಭಾ ಕ್ಷೇತ್ರ, ರಾಮನಗರ ವಿಧಾನಸಭಾ ಕ್ಷೇತ್ರ, ಕನಕಪುರ ವಿಧಾನಸಭಾ ಕ್ಷೇತ್ರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ.
ಪಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Mon, 3 June 24