ಬೆಂಗಳೂರು, ಏಪ್ರಿಲ್ 24: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದ (Karnataka) 14 ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ (Voting) ನಡೆಯಲಿದೆ. ಈ ಬಾರಿ ಚುನಾವಣೆಯ ಸಂದರ್ಭ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವಾಗ ಎಚ್ಚರದಿಂದಿರಿ. ಏಕೆಂದರೆ, ಬೂತ್‌ಗಳ ಆವರಣದಲ್ಲಿ ಅವುಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್‌ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್‌ಗಳನ್ನು ಇಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜನರು ನಿಯಮಗಳನ್ನು ಪಾಲಿಸದ ನಿದರ್ಶನಗಳಿವೆ. ಮತದಾನ ಮಾಡುವಾಗ ಛಾಯಾಚಿತ್ರ ತೆಗೆಯುವ ಅಥವಾ ವೀಡಿಯೋ ಮಾಡಿ ಸಿಕ್ಕಿಬಿದ್ದ ನಿದರ್ಶನಗಳೂ ಇವೆ. ಹಾಗಾಗಿ ಮೊಬೈಲ್ ಫೋನ್‌ಗಳನ್ನು ಇಡಲು ಪ್ರಿಸೈಡಿಂಗ್ ಆಫೀಸರ್ ಬಳಿ ಟ್ರೇ ಇಡಲು ನಿರ್ಧರಿಸಲಾಗಿದೆ. ಆ ಟ್ರೇಯನ್ನು ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತದಾನ ಮಾಡುವಾಗ ಫೋನ್‌ಗಳನ್ನು ಟ್ರೇನಲ್ಲಿ ಇಡಲು ಸೂಚಿಸಬೇಕೇ ಅಥವಾ ಅವುಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇಡುವಂತೆ ಹೇಳಬೇಕೇ ಎಂಬ ನಿರ್ಧಾರ ಕೈಗೊಳ್ಳುವುದನ್ನು ಪ್ರಿಸೈಡಿಂಗ್ ಆಫೀಸರ್ ವಿವೇಚನೆಗೆ ಬಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್‌ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ. ಇದು ಕೆಲವೇ ಸೆಕೆಂಡುಗಳ ವಿಷಯವಷ್ಟೆ. ಮತದಾನದ ಸಮಯದಲ್ಲಿ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಏಪ್ರಿಲ್ 26ಕ್ಕೆ 2ನೇ ಹಂತದ ಮತದಾನ, ಕರ್ನಾಟಕದ ಯಾವ ಕ್ಷೇತ್ರಗಳಿಗೆ ವೋಟಿಂಗ್? ಇಲ್ಲಿದೆ ವಿವರ
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಮಾಡಲಾಗಿತ್ತು. ಆದಾಗ್ಯೂ ಜನರು ವಿವಿಧ ಕಾರಣಗಳಿಗಾಗಿ ಫೋನ್‌ಗಳನ್ನು ಬಳಸಲು ಪ್ರಯತ್ನಿಸಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಬೂತ್‌ಗಳಿಗೆ ಫೋನ್ ತೆಗೆದುಕೊಂಡು ಹೋಗಬೇಡಿ ಎಂದು ನಾವು ಹೇಳುತ್ತಿಲ್ಲ. ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಸಿಇಒ, ಜಿಲ್ಲಾಧಿಕಾರಿಗಳು ಮತ್ತು ಇತರ ಚುನಾವಣಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ