ಬೆಂಗಳೂರು, ಮೇ 6: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ (Lok Sabha elections Phase 3 polling) ಮೇ 7ರಂದು ನಡೆಯಲಿದೆ. ಕರ್ನಾಟಕವೂ ಸೇರಿದಂತೆ 12 ರಾಜ್ಯಗಳಲ್ಲಿ ಶುಕ್ರವಾರ ಮತದಾರರು ಮತ ಚಲಾಯಿಸಲಿದ್ದಾರೆ. 94 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ. ಈ 94 ಕ್ಷೇತ್ರಗಳಲ್ಲಿ ಕರ್ನಾಟಕದ 14 ಕ್ಷೇತ್ರಗಳಿವೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 26ರಂದು ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಚುನಾವಣೆ ಆಗಿತ್ತು. ಈಗ ಇನ್ನುಳಿದ 14 ಕ್ಷೇತ್ರಗಳಿಗೆ ಚುನಾವಣೆ ಇದೆ. ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರ್ಗಿ, ಹಾವೇರಿ, ಶಿವಮೊಗ್ಗ ಮೊದಲಾದ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನವಾಗಲಿದೆ.
ಅಗತ್ಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮೇ 7, ಮಂಗಳವಾರ ರಜೆ ಇರುತ್ತದೆ.
ಏಪ್ರಿಲ್ 26ರಂದು ನಡೆದ ಚುನಾವಣೆಯ ದಿನದಂದು ಬೆಂಗಳೂರಿನ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೋಟ್ ಹಾಕಲು ಅನುಕೂಲವಾಗುವಂತೆ ರಜೆ ನೀಡಿದ್ದವು. ಬೆಳಗಾವಿ, ಧಾರವಾಡ ಮೊದಲಾದ ಕಡೆ ಖಾಸಗಿ ಕಂಪನಿಗಳು ರಜೆ ನೀಡಬಹುದು.
ನಿನ್ನೆ ಮೇ 5 ಸಂಜೆ 5 ಗಂಟೆಯಿಂದ ಮೇ 7ರ ಮಧ್ಯರಾತ್ರಿ 12ರವರೆಗೂ ಮದ್ಯ ಮಾರಾಟ, ವಿತರಣೆ, ಸಾಗಣೆ, ಸಂಗ್ರಹಣೆಯನ್ನು ನಿಷೇಧಿಸಲಾಗಿದೆ. ಕೆಲ ಸೂಕ್ಷ್ಮ ಮತಗಟ್ಟೆಗಳ ಬಳಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮೆಜೆಸ್ಟಿಕ್ ಸೇರಿ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ ಸಾಧ್ಯತೆ
ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೇ 7ರ ಬಳಿಕ ಇನ್ನೂ ನಾಲ್ಕು ಹಂತಗಳ ಚುನಾವಣೆ ಬಾಕಿ ಇರುತ್ತದೆ. ಜೂನ್ 4ಕ್ಕೆ ಮತ ಎಣಿಕೆ ಇದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ