ಚಿರಾಗ್ ನನ್ನ ಮಗನಿದ್ದಂತೆ, ಆತನೇ ಬಿಹಾರದ ಭವಿಷ್ಯ; ಪ್ರಚಾರದ ವೇಳೆ ಪ್ರಧಾನಿ ಮೋದಿ ಮೆಚ್ಚುಗೆ

|

Updated on: May 13, 2024 | 4:42 PM

ಇಂಡಿಯಾ ಒಕ್ಕೂಟ ಪಾಕಿಸ್ತಾನಕ್ಕೆ ಹೆದರುವ ಮತ್ತು ಅದರ ಪರಮಾಣು ಶಕ್ತಿಯ ದುಃಸ್ವಪ್ನಗಳನ್ನು ಹೊಂದಿರುವ ನಾಯಕರನ್ನು ಹೊಂದಿರುವಂತಿದೆ ಎಂದು ಪ್ರಧಾನಿ ಮೋದಿ ಬಿಹಾರದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.

ಚಿರಾಗ್ ನನ್ನ ಮಗನಿದ್ದಂತೆ, ಆತನೇ ಬಿಹಾರದ ಭವಿಷ್ಯ; ಪ್ರಚಾರದ ವೇಳೆ ಪ್ರಧಾನಿ ಮೋದಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ- ಚಿರಾಗ್ ಪಾಸ್ವಾನ್
Follow us on

ನವದೆಹಲಿ: ಬಿಹಾರದ ಹಾಜಿಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕ ಜನತಾ ಪಕ್ಷದ (LJP) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಅವರನ್ನು ಹಾಡಿ ಹೊಗಳಿದ್ದಾರೆ. ತಮ್ಮ ಮಾಜಿ ಕ್ಯಾಬಿನೆಟ್ ಸಹೋದ್ಯೋಗಿಯಾಗಿದ್ದ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಹಾಜಿಪುರದಿಂದ ಸ್ಪರ್ಧಿಸುತ್ತಿರುವುದನ್ನು ಪ್ರೀತಿಯಿಂದ ನೆನಪಿಸಿಕೊಂಡ ಪಿಎಂ ಮೋದಿ, ಈ ಯುವ ನಾಯಕನಿಗೆ ಮತ ಚಲಾಯಿಸಿ ಮತ್ತು ಅವರ ತಂದೆಯ ದಾಖಲೆಯ ಗೆಲುವನ್ನು ಕೂಡ ಮುರಿಯುವಂತೆ ಈತನನ್ನು ಆಶೀರ್ವದಿಸಿ ಎಂದಿದ್ದಾರೆ.

ಸಂಸದರಾಗಿ ಹೊಸ ವಿಷಯಗಳನ್ನು ಕಲಿಯಲು ಚಿರಾಗ್ ಪಾಸ್ವಾನ್ ಅವರ ಸಮರ್ಪಣೆಯನ್ನು ಶ್ಲಾಘಿಸಿದ ಪಿಎಂ ನರೇಂದ್ರ ಮೋದಿ, ಚಿರಾಗ್ ಪಾಸ್ವಾನ್ ಯಾವುದೇ ವಿರಾಮವಿಲ್ಲದೆ ಸಂಸತ್ತಿನ ಎಲ್ಲಾ ಅಧಿವೇಶನಗಳಿಗೆ ಹಾಜರಾಗುತ್ತಿದ್ದರು. ಚಿರಾಗ್ ಸಂಸದರಾಗಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಚಿರಾಗ್ ಬಿಹಾರದ ನಿಜವಾದ ಪ್ರತಿನಿಧಿ, ಬಿಹಾರದ ಭವಿಷ್ಯ. ಆದ್ದರಿಂದ, ನೀವು ಚಿರಾಗ್‌ಗೆ ಮತ ಹಾಕಿದಾಗ ಅದು ನೇರವಾಗಿ ಮೋದಿ ಖಾತೆಗೆ ಹೋಗುತ್ತದೆ. ಚಿರಾಗ್ ನನ್ನ ಮಗನಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಬಳೆ ತೊಟ್ಟುಕೊಂಡಿಲ್ಲ ಅಂದ್ರೆ ನಾವು ತೊಡಿಸ್ತೇವೆ: ಬಿಹಾರದಲ್ಲಿ ಪ್ರಧಾನಿ ಮೋದಿ

ತಮ್ಮ ಭಾಷಣದ ಸಮಯದಲ್ಲಿ ಪಿಎಂ ಮೋದಿ ಅವರು ಪ್ರತಿಪಕ್ಷ ಇಂಡಿಯಾ ಬಣವನ್ನು ಟೀಕಿಸಿದರು. ಅದರ ನಾಯಕರನ್ನು ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುವವರು, ಹೇಡಿಗಳು ಎಂದು ಕರೆದಿದ್ದಾರೆ. ಬಿಹಾರದ ಮುಜಾಫರ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಹೆಸರನ್ನು ಉಲ್ಲೇಖಿಸದೆ ಅವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

ಇಂಡಿಯಾ ಬಣವು ಪಾಕಿಸ್ತಾನಕ್ಕೆ ಹೆದರುವ ಮತ್ತು ಅದರ ಪರಮಾಣು ಶಕ್ತಿಯ ದುಃಸ್ವಪ್ನಗಳನ್ನು ಹೊಂದಿರುವ ನಾಯಕರನ್ನು ಹೊಂದಿರುವಂತೆ ತೋರುತ್ತಿದೆ ಎಂದು ಮೋದಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಅಣುಬಾಂಬ್‌ಗಳಿವೆ, ನಾವು ಬಳೆಗಳನ್ನು ಧರಿಸಿಲ್ಲ ಎಂಬ ಅಬ್ದುಲ್ಲಾ ಅವರ ಹೇಳಿಕೆಗೆ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೋಮುವಾದಿ ಭಾಷಣದ ಆರೋಪ; ಮೋದಿ ವಿರುದ್ಧ ಸಲ್ಲಿಸಿದ ಮನವಿ ತಿರಸ್ಕರಿಸಿದ ಹೈಕೋರ್ಟ್

ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಧರಿಸುವಂತೆ ಮಾಡುತ್ತೇವೆ. ಅವರ ಬಳಿ ಆಹಾರಧಾನ್ಯಗಳಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಬಳಿ ಸಾಕಷ್ಟು ಬಳೆಗಳು ಕೂಡ ಇಲ್ಲ ಎಂದು ಈಗ ನನಗೆ ತಿಳಿದು ಬಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ