ಇಂದು ಮಣಿಪುರ ವಿಧಾನಸಭೆ ಚುನಾವಣೆ (Manipur Assembly Election) ಮೊದಲ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೂ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದರೂ, ಚುರಚಾಂದ್ಪುರ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಒಂದು ದುರ್ಘಟನೆ ನಡೆದಿದೆ. ಚುನಾವಣಾ ಕರ್ತವ್ಯದಲ್ಲಿದ್ದ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಇವರು ತಾವು ಕೈಯಲ್ಲಿ ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ತಮಗೇ ಫೈರಿಂಗ್ ಮಾಡಿಕೊಂಡು ಮೃತಪಟ್ಟಿದ್ದಾಗಿ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಮೃತ ಪೊಲೀಸ್ ಅಧಿಕಾರಿ ಕಕ್ಚಿಂಗ್ ಜಿಲ್ಲೆಯವರು ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 7ಗಂಟೆಯಿಂದ ಮಣಿಪುರದಲ್ಲಿ ಮತದಾನ ಶುರುವಾಗಿದ್ದು, ಮಧ್ಯಾಹ್ನ 3ಗಂಟೆ ಹೊತ್ತಿಗೆ 67.53ರಷ್ಟು ಮತಚಲಾವಣೆಯಾಗಿತ್ತು. ಮಾರ್ಚ್ 5ಕ್ಕೆ ಎರಡನೇ ಹಂತದ ಮತದಾನವಿದ್ದು, ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ. ಇಂದು ಬೆಳಗ್ಗೆ ಚುರ್ಚಾಂದ್ಪುರ ಜಿಲ್ಲೆಯಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದರಲ್ಲಿ ಇವಿಎಂ ಮಷಿನ್ ಧ್ವಂಸಗೊಂಡಿದೆ. ಎನ್ಪಿಪಿ ಅಭ್ಯರ್ಥಿಯ ವಾಹನಕ್ಕೆ ಹಾನಿಯಾಗಿದೆ ಎಂದೂ ವರದಿಯಾಗಿದೆ.
ಮತದಾನ ಪ್ರಾರಂಭವಾಗಿ ಅರ್ಧಗಂಟೆಯೂ ಕಳೆಯುವ ಮೊದಲೇ ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಮತ್ತು ರಾಜ್ಯಪಾಲ ಲಾ.ಗಣೇಶನ್ ತಮ್ಮ ಮತ ಚಲಾಯಿಸಿದ್ದಾರೆ. ಪಶ್ಚಿಮ ಇಂಫಾಲ್ ಜಿಲ್ಲೆಯ ಸಾಗೋಲ್ಬಾದ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದ ರಾಜ್ಯಪಾಲ ಗಣೇಶನ್, ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮತಚಲಾಯಿಸಬೇಕು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಸಂಕೇತ ಎಂದು ಹೇಳಿದರು.
ಮೊದಲ ಹಂತದಲ್ಲಿ ಚುನಾವಣೆ ಎದುರಿಸಿದ ಪ್ರಮುಖರ ಪೈಕಿ ಮಣಿಪುರ ಸಿಎಂ ಎನ್.ಬಿರೆನ್ ಸಿಂಗ್ (ಹೈಜಾಂಗ್), ವಿಧಾನಸಭೆ ಸ್ಪೀಕರ್ ವೈ. ಖೇಮ್ಚಾಂದ್ ಸಿಂಗ್ (ಸಿಂಗ್ಜಾಮೇಯ್) ಉಪ ಮುಖ್ಯಮಂತ್ರಿ ಯಮ್ನಮ್ ಜಾಯ್ಕುಮಾರ್ ಸಿಂಗ್ (ಉರಿಪೊಕ್), ಕಾಂಗ್ರೆಸ್ ಮಣಿಪುರ ರಾಜ್ಯ ಮುಖ್ಯಸ್ಥ ಎನ್. ಲೋಕೇಶ್ (ನಾಂಬೋಲ್) ಇದ್ದಾರೆ.