ಮಣಿಪುರದಲ್ಲಿ ಚುನಾವಣೆಗೂ ಪೂರ್ವ ಬಿಜೆಪಿಗೆ ಜಾಕ್ಪಾಟ್; 40 ಸಹಕಲಾವಿದರೊಂದಿಗೆ ಕಮಲ ಪಕ್ಷಕ್ಕೆ ಸೇರ್ಪಡೆಯಾದ ಖ್ಯಾತ ನಟ
40 ವರ್ಷದ ಆರ್.ಕೆ.ಸೊಮೆಂದ್ರೋ ಸಿಂಗ್ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಕೂಡ ಅದಕ್ಕೂ ಮೊದಲು ರಾಮ್ ವಿಲಾಸ್ ಪಾಸ್ವಾನ್ರ ಲೋಕ ಜನಶಕ್ತಿ ಪಾರ್ಟಿಯ ಮಣಿಪುರ ಘಟಕದ ಅಧ್ಯಕ್ಷರಾಗಿದ್ದರು.
ಮಣಿಪುರದಲ್ಲಿ ವಿಧಾನಸಭೆ ಚುನಾವಣೆ (Manipur Assembly Election 2022) ಕೆಲವೇ ದಿನ ಬಾಕಿ ಇರುವಾಗ ಬಿಜೆಪಿಗೆ ಭರ್ಜರಿ ಜಾಕ್ಪಾಟ್ ಹೊಡೆದಿದೆ. ಅಲ್ಲಿನ ಖ್ಯಾತ ಸಿನಿಮಾ ನಟ ಆರ್. ಕೆ.ಸೊಮೆಂದ್ರೋ ಸಿಂಗ್ (RK Somendro Singh) ಅವರು 40 ಸಹನಟರೊಂದಿಗೆ ಬಿಜೆಪಿ ಸೇರಿದ್ದಾರೆ. ಇವರು ಕೈಕು ಎಂದೇ ಹೆಸರಾದವರು. 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ 40 ಸಹಕಲಾವಿದರೊಟ್ಟಿಗೆ ಇಂಫಾಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಮಣಿಪುರ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಅವರು ಎಲ್ಲರನ್ನೂ ಸ್ವಾಗತಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಣಿಪುರ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರಾ, ರಾಜ್ಯಾಧ್ಯಕ್ಷೆ ಎ.ಶಾರದಾ ದೇವಿ ಇತರರು ಭಾಗವಹಿಸಿದ್ದರು.
ಮಣಿಪುರಿ ಖ್ಯಾತ ನಟ ಆರ್.ಕೆ.ಸೊಮೆಂದ್ರೋ ಸಿಂಗ್ ಅವರು ಇನ್ನಿತರ ಕಲಾವಿದರೊಂದಿಗೆ ಬಿಜೆಪಿಗೆ ಸೇರಿದರು. ಈ ಸಮಾರಂಭ ತಂಬಲ್ ಶಾಂಗ್ಲೆನ್ನಲ್ಲಿ ನಡೆದಿತ್ತು ಮತ್ತು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎನ್.ಬಿರೆನ್ ಸಿಂಗ್ ಪಾಲ್ಗೊಂಡಿದ್ದರು ಎಂದು ಶಾರದಾ ದೇವಿ ಟ್ವೀಟ್ ಮಾಡಿಕೊಂಡಿದ್ದಾರೆ.
I welcome noted Manipuri actor Shri RK Somendro Singh (Kaiku) and other leading artists to the @BJP4Manipur family. The joining programme at Thambal Shanglen was attended by CM Shri @NBirenSingh , State Prabhari @sambitswaraj ji and office bearers.#BJP4Manipur #BJP4India pic.twitter.com/iXMfwWUHdH
— Adhikarimayum Sharda Devi (@AShardaDevi) February 3, 2022
40 ವರ್ಷದ ಆರ್.ಕೆ.ಸೊಮೆಂದ್ರೋ ಸಿಂಗ್ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಕೂಡ ಅದಕ್ಕೂ ಮೊದಲು ರಾಮ್ ವಿಲಾಸ್ ಪಾಸ್ವಾನ್ರ ಲೋಕ ಜನಶಕ್ತಿ ಪಾರ್ಟಿಯ ಮಣಿಪುರ ಘಟಕದ ಅಧ್ಯಕ್ಷರಾಗಿದ್ದರು. ಹೀಗೆ ಹಲವು ಹೊಸ ಮುಖಗಳ ಸೇರ್ಪಡೆಯೊಂದಿಗೆ ಮಣಿಪುರ ವಿಧಾನಸಭೆ ಚುನಾವಣೆ ಕುತೂಹಲ ಮೂಡಿಸಿದೆ. ಬಿಜೆಪಿ ಭಾನುವಾರ 60 ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ತುಂಬ ನಿರೀಕ್ಷೆ ಇಟ್ಟುಕೊಂಡಿದ್ದ ಕೆಲವರು ತಮಗೆ ಟಿಕೆಟ್ ಸಿಗಲಿಲ್ಲ ಎಂದು ಅಸಮಾಧಾನಗೊಂಡು ರಾಜೀನಾಮೆ ಕೂಡ ನೀಡಿದ್ದಾರೆ.
ಮಣಿಪುರದಲ್ಲಿ 2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 28 ಸೀಟುಗಳನ್ನು ಗೆದ್ದಿತ್ತು. ಸರ್ಕಾರ ರಚಿಸಲು ಬಹುಮತ ಪಡೆದಿದ್ದರೂ, ಚುನಾವಣೆ ಬಳಿಕ ಗೆದ್ದ ನಾಯಕರು ಪಕ್ಷ ತೊರೆದಿದ್ದರು. ಅದಾದ ಬಳಿಕ ಬಿಜೆಪಿ ನಾಗಾ ಪೀಪಲ್ಸ್ ಫ್ರಂಟ್ (NPF), ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP), ಲೋಕ ಜನಶಕ್ತಿ ಪಾರ್ಟಿ (LJP) ಮತ್ತು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಿತ್ತು. ಈ ಬಾರಿ ಮಣಿಪುರ ವಿಧಾನಸಭೆ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಫೆ.27 ಮತ್ತು ಮಾರ್ಚ್ 3ರಂದು ಮತದಾನ ಇದ್ದು, ಮಾರ್ಚ್ 10ಕ್ಕೆ ಮತಎಣಿಕೆ ನಡೆಯಲಿದೆ.
ಇದನ್ನೂ ಓದಿ: (viral video) ತನ್ನ ಪ್ರಾಣವನ್ನೇ ಪಣಕಿಟ್ಟು ಬಾವಿಯಲ್ಲಿ ಬಿದಿದ್ದ ನಾಯಿಯನ್ನು ರಕ್ಷಿಸಿದ ಮಂಗಳೂರಿನ ಮಹಿಳೆ
Published On - 9:48 am, Fri, 4 February 22